ಅಥವಾ

ಒಟ್ಟು 361 ಕಡೆಗಳಲ್ಲಿ , 28 ವಚನಕಾರರು , 258 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರಿಯೆಯದು ಚೆನ್ನಬಸವಣ್ಣನ ಎಡಪಾದ, ಜಾÕನವದು ಚೆನ್ನಬಸವಣ್ಣನ ಬಲಪಾದ, ನಾನವರ ಚಮ್ಮಾವುಗೆ, ನೀನವರ ಮನೆದಾಸ, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಹುಸಿಯಿಂದ ಶಿವನ ಮುಕುಟವ ಕಂಡೆನೆಂದು ಹುಸಿಯಂ ನುಡಿದು ಬ್ರಹ್ಮ ಭ್ರಷ್ಟನಾದ. ಮುಳ್ಳಿನಲ್ಲಿ ತೊನಚಿಯನಿದು ಜೀವಹಿಂಸೆಯ ಮಾಡಿದ ಮಾಂಡವ್ಯ ಶೂಲಕ್ಕೆ ಗುರಿಯಾದ. ಸೋಮಸುತನ ಮಗ ಶೂದ್ರಕವೀರಂಗೆ ಕಳವು ಹೊದ್ದಿ, ಶಿರಹರಿದು ಕಾಂಚಿಯಾಲದಲ್ಲಿ ಮೆರಯಿತ್ತು. ಅಕ್ಷಿಪಾದನಸ್ತ್ರೀ ಅಹಲ್ಯಾದೇವಿಗೆ ಅಳುಪಿದ ಶಕ್ರನ ಅಂಗ ಅನಂಗಮುದ್ರೆಯಾಯಿತ್ತು. ಕಾಂಕ್ಷೆ ಮಾಡಿದ ನಾಗಾರ್ಜುನ ಚಕ್ರದಲ್ಲಿ ಹತವಾದ. ಇಂತಿವರನಂತರು ಕೆಟ್ಟರು ನೋಡಯ್ಯಾ. ಸೌರಾಷ್ಟ್ರ ಸೋಮೇಶ್ವರನ ಶರಣರು ದೋಷವಿರಹಿತರಾಗಿ ಸ್ವರ್ಗ ಅಪವರ್ಗವ ಮೀರಿ ಲಿಂಗದಲ್ಲಿ ಐಕ್ಯರಾದರು.
--------------
ಆದಯ್ಯ
ಪುಣ್ಯವೆಂದರಿಯೆ, ಪಾಪವೆಂದರಿಯೆ, ಸ್ವರ್ಗವೆಂದರಿಯೆ ನರಕವೆಂದರಿಯೆ, ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ, ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ. ಕೂಡಲಸಂಗಮದೇವಯ್ಯಾ, ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.
--------------
ಬಸವಣ್ಣ
ಅಯ್ಯಾ, ನೀವೆನ್ನ ಬಲ್ಲಿರಲ್ಲದೆ ನಾ ನಿಮ್ಮ ಬಲ್ಲೆನೆ ನಿಮ್ಮ ನಿಲವ ನೋಡಿಹೆನೆಂದಡೆ ನಿಮ್ಮ ಘನವೆನ್ನ ಮನಕ್ಕೆ ಸಾಧ್ಯವಾಗದ ಕಾರಣ, ಅಂತಿಂತೆಂದುಪಮಿಸಲಮ್ಮದೆ ಇದ್ದೆ ನೋಡಯ್ಯಾ, ನಿತ್ಯತೃಪ್ತಮಹಿಮಾ, ನಿಮಗೆಂದಳವಡಿಸಿದ ಪದಾರ್ಥವ ಸುಚಿತ್ತದಿಂದವಧರಿಸಿ ಸಲಹಯ್ಯಾ ಪ್ರಭುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ತೋರಬಾರದ ಘನವ ಹೇಳಲೆಂದೇನಯ್ಯಾ ? ಹೇಳಬಾರದ ಘನವ ತೋರಲೆಂದೇನಯ್ಯಾ ? ಶರಸಂಧಾನದ ಪರಿಯಲ್ಲ ನೋಡಾ ! ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ ನೋಡ ಬಂದವರನುವನವರೆತ್ತ ಬಲ್ಲರಯ್ಯಾ? ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿ ಗುರುನಿರಂಜನ ಚನ್ನ ಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾಗ್ರದಲ್ಲಿಹ ಮನುಷ್ಯಂಗೆ ಸ್ವಪ್ನ ಸುಷುಪ್ತಿ ಮಿಥ್ಯವೆಂಬುದು ಪ್ರಸಿದ್ಧ. ಸ್ವಪ್ನದಲ್ಲಿಹ ಮನುಷ್ಯಂಗೆ [ಜಾಗ್ರ] ಸುಷುಪ್ತಿ ಎಂಬುದು ತೋರಬಾರದು, ಸುಷುಪ್ತಿಯಲ್ಲಿ ಜಾಗ್ರ ಸ್ವಪ್ನವೆಂಬುದು ತಿಲಮಾತ್ರ ತಿಳಿಯಬಾರದು, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ, ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ? ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ, ಪಂಜರದಲ್ಲಿ ಹಾರದು ನೋಡಯ್ಯಾ. ನಮ್ಮ ಕಪಿಲಸಿದ್ಧಮಲ್ಲೇಶನನರಿವವರು ಜಾÐನದ ಮೇಲೆ ಹಾರುವರಲ್ಲದೆ ಅಜಾÐನದಲ್ಲಿ ಹಾರರು.
--------------
ಸಿದ್ಧರಾಮೇಶ್ವರ
ನಿಮ್ಮ ಶ್ರೀಪಾದವ ಮುಟ್ಟಿ ಕರ್ಮ ಹರಿಯಿತ್ತು. ನಿಮ್ಮ ಪ್ರಸಾದದಿಂದ ಭವಗೆಟ್ಟೆ ನೋಡಯ್ಯಾ ! ಮನಪರುಷ, ದೃಷ್ಟಿಪರುಷ, ಭಾವಪರುಷ; ಲಿಂಗಗಣಂಗಳು. ಕೂಡಲಸಂಗಮದೇವಾ, ನಿಮ್ಮ ಶರಣರ ಅನುಭಾವದಿಂದ ಸುಖಿಯಾದೆನು.
--------------
ಬಸವಣ್ಣ
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ. ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ, ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ. ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಬ್ಥೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಒಕ್ಕಲಿಗ ಮುದ್ದಣ್ಣ
ಬಡವರ ಭೋಜನ ಭೋಗಿಸಿದವ ಭವಾನೀಪುತ್ರ ನೋಡಯ್ಯಾ. ಕಡವರನ ಎಡೆಗೊಂಡವ ವಿಷ್ಣುವಿನ ವಂಶದವ ನೋಡಯ್ಯಾ. ಬಡವರ ಭೋಜನ ಅಮೃತ ಸೇವನೆ; ಕಡವರನಮೃತ ಸುರಾಪಾನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ಸ್ತೋತ್ರವೆಂಬುದು ನೀನು ಮಾಡಲಾದವು ಕಂಡಯ್ಯಾ. ಮೂರ್ತಿಯೆಂಬುದು ನೀನು ನೆನೆಡಾದುದು ಕಂಡಯ್ಯಾ. ಆ ಮೂರ್ತಿಯೆಂಬುದು ನಿನ್ನ ಸ್ವಭಾವವು ಕಂದಯ್ಯಾ. ಎನ್ನ ಹೃತ್ಕಮಲದೊಳಗೆ ಹುಟ್ಟುವ ಸ್ಮರಣೆ ನಿನ್ನ ಗತಿ ನೋಡಯ್ಯಾ. ಕಪಿಲಸಿದ್ಧಮಲ್ಲನಾಥಯ್ಯಾ, ಬಾಣ ಮಯೂರ ಹಲಾಯುಧರಿಗೆಂತೊಲಿದೆ ಹೇಳಯ್ಯಾ.
--------------
ಸಿದ್ಧರಾಮೇಶ್ವರ
ಮನ ಮುಂದಿಟ್ಟು ಮಹಾದೇವಾ ಒಲಿದನೆಂಬುದು ಪುಸಿಯಯ್ಯಾ. ಮನವಿಲ್ಲದಿರೆ ಮಹಿಮನ ಒಲುಮೆ ನೋಡಯ್ಯಾ. ಮನದ್ಲಹ ಮಹಾದೇವನ ಮುಂಟ್ಟು ತೋರುವ ಉಭಯಭ್ರಷ್ಟರ ಮೆಚ್ಚುವನೆ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ? ಅದು ಉಪಮಾತೀತ ! ಭಕ್ತನೊಳಗೆ ಜಂಗಮವಡಗಿದಡೆ ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು
--------------
ಚನ್ನಬಸವಣ್ಣ
ಇನ್ನಷ್ಟು ... -->