ಅಥವಾ

ಒಟ್ಟು 203 ಕಡೆಗಳಲ್ಲಿ , 49 ವಚನಕಾರರು , 191 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಲಿಂಗಜಂಗಮವೆಂದು ನುಡಿವ ಬಹುವಾಕ್ಯರು ನೀವು ಕೇಳಿರೊ. ಗುರುವಾವುದು? ಲಿಂಗವಾವುದು? ಜಂಗಮವಾವುದು? ಲಿಂಗವೆಂದವರ ಕರಸ್ಥಲದಲ್ಲಿ ಜಂಗಮವೊಂದೆಂದರಿಯದಿರದೆ ಚರಿಸಿದ ಗುರುಸ್ಥಲದ ಹೊಲಬನರಿಯದೆ ಗುರುಭಕ್ತರೆನ್ನಿಸುವ ಗುರುದ್ರೋಹಿಗಳ ಮಾತ ಕೇಳಲಾಗದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ ? ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ, ಜ್ಞಾನಿಗಳೆಂದರಿಯದೆ, ಬಾಯಿಗೆ ಬಂದಂತೆ ನುಡಿವ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮರನನೇರಿ ಹಣ್ಣನರಸಹೋದಡೆ ಮರ ಮುರಿದುಬಿದ್ದ ಮರುಳುಮಾನವನಂತೆ, ಕೆಸರಿನೊಳಗಣ ಹುಲ್ಲ ಮೇಯಹೋದ ಪಶುವಿನಂತೆ, ಕೊಂಬೆ ಕೊಂಬೆಗೆ ಹಾರುವ ಕೋಡಗನಂತೆ, ಉಂಡ ಮನೆಯ ದೂರುವ ಒಡೆಕಾರನಂತೆ, ಹಳ್ಳ ಹಳ್ಳ ತಿಬ್ಬಳಿ ತಿರುಗುವ ಬಳ್ಳುವಿನಂತೆ, ಮಾತಿನಲ್ಲಿ ಬ್ರಹ್ಮವ ನುಡಿವ ವೇಷಧಾರಿಗಳ ಲಿಂಗಾಂಗಿಗಳೆಂದಡೆ ಮಾರಿಗೆತಂದ ಹಂದಿಯ ನಾಯಿ ನರಿ ತಿಂಬಂತೆ ಕಾಣಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ ನೀವು ಶಿವಪ್ರಸಾದಿಗಳೆಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಶಿವಪ್ರಸಾದದ ಕಲೆನೆಲೆಯ ಕೇಳಿರಣ್ಣ. ಗುರುಲಿಂಗಜಂಗಮದಿಂದ ವೇಧಾಮಂತ್ರಕ್ರಿಯಾದೀಕ್ಷೆಯ ಬೆಸಗೊಂಡು, ತನುಮನಪ್ರಾಣಂಗಳ ಇಷ್ಟಪ್ರಾಣಭಾವಲಿಂಗಂಗಳಿಗೆ ಮೀಸಲ ಮಾಡಿ, ನಿರ್ವಂಚಕತ್ವದಿಂದ ಸಮರ್ಪಿಸಿ, ಭೇದಭಾವವನಳಿದು, ಕ್ಷೀರಕ್ಷೀರ ಬೆರೆದಂತೆ, ಗುರುಮಾರ್ಗಾಚಾರದಲ್ಲಿ ಆಚರಿಸಬಲ್ಲಾತನೆ ಶಿವಪ್ರಸಾದಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
`ಶಂಕರ ಶಂಕರ' ಎಂದು ಸಹಜವರಿಯದೆ ನುಡಿವ ಶ್ವಾನನ ಮಾತ ಕೇಳಲಾಗದು, ಶಂಕರವಾವುದೆಂದರಿಯರಾಗಿ. ಲಿಂಗ ಶಂಕರವೊ ? ಜಂಗಮ ಶಂಕರವೊ ? ಪ್ರಸಾದ ಶಂಕರವೊ ? ತ್ರಿವಿಧದಲ್ಲಿ ಹೊರಗಿಲ್ಲ. ಆವ ಶಂಕರದಲ್ಲಿ ಆವುದು ಚೇಗೆ ? ಬಲ್ಲಡೆ ಹೇಳಿರಿ. ಬರುಮಾತಿನ ಬಳಕೆಯ ಬಳಸಿ ಹಿರಿಯರಾದೆವೆಂಬ ಮೂಕೊರೆಯರನೇನೆಂಬೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ ಕರ್ಮಿಗಳಮುಖವ ನೋಡಲಾಗದು. ಜಂಗಮವಾಗಿ ಜಗದಿಚ್ಫೆಯ ನುಡಿವ ಜಂಗುಳಿಗಳಮುಖವ ನೋಡಲಾಗದು. ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ. ಪರಸ್ತ್ರೀಗೆ ಚಕ್ಷುದಗ್ಧವಾಗಿರಬೇಕು ಕೇಳಿರಣ್ಣಾ . ಪರಾರ್ಥಕ್ಕೆ ಹಸ್ತದಗ್ಧವಾಗಿರಬೇಕು ಕೇಳಿರಣ್ಣಾ . ಪರಾನ್ನಕ್ಕೆ ಜಿಹ್ವೆದಗ್ಧವಾಗಿರಬೇಕು ಕೇಳಿರಣ್ಣಾ . ನಿಂದೆಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ . ಬಯಲಬ್ರಹ್ಮವ ನುಡಿವ ತರ್ಕಿಗಳ ಕಂಡಡೆ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣನು ಕೇಳಿರಣ್ಣಾ , ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಯತ ಸ್ವಾಯತ ಸನ್ನಿಹಿತವೆಂದು ನುಡಿವ ಅನಾಯತದ ಹೇಸಿಕೆಯನೇನಂಬೆನಯ್ಯಾ? ತನುಗುಣಂಗಳನೊರಸದೆ, ಭೋಗಭೂಷಣಂಗಳನತಿಗಳೆಯದೆ, ಅನೃತ ಅಸತ್ಯ ಅಸಹ್ಯ ಋಣಸಂಚವಂಚನೆ ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ? ಆಯತವು ಮನೋವಿಕಾರವಳಿದು, ಸರ್ವೇಂದ್ರಿಯಂಗಳಲ್ಲಿ ಸಾವಧಾನಿಯಾಗಿ ಅನ್ಯವಿಷಯ ಬ್ಥಿನ್ನರುಚಿಯ ಮರೆದು ಸಕಲಭ್ರಮೆ ನಷ್ಟವಾದ ಸ್ವಾಯತ ಮನಕ್ಕಿಲ್ಲ. ಮತ್ತೆಂತಯ್ಯಾ ಸ್ವಾಯತವು? ತನ್ನರಿವಿನ ಕುರುಹನರಿತು ನಿಜಸಾಧ್ಯವಾದ ಸನ್ನಹಿತ, ಸದ್ಭಾವದಲ್ಲಿ ಅಳವಟ್ಟುದಿಲ್ಲದೆ ಭಾಜನಕ್ಕೆ ಬರಿಯ ಮುಸುಕಿಟ್ಟು ಆಯತವೆಂದು ನುಡಿವ ಅನಾಯತದ ನಾಚಿಕೆಯನೇನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ?
--------------
ಆದಯ್ಯ
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು. ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು ಕಣ್ಣು ಕಾಣದೇ ಕಾಡಬಿದ್ದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದ ಅಂಧಕರೆಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ಶಿವಲಿಂಗವ ನೋಡುವ ಕಣ್ಣಲ್ಲಿ ಪರಸ್ತ್ರೀಯ ನೋಡಿದಡೆ ಅಲ್ಲಿ ಲಿಂಗವಿಲ್ಲ. ಪರಬ್ರಹ್ಮವ ನುಡಿವ ಜಿಹ್ವೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ಕುಚವ ಮುಟ್ಟಿದಡೆ, ತಾ ಮಾಡಿದ ಪೂಜೆ ನಿಷ್ಫಲ. ಇದನರಿಯದಿರ್ದಡೆ ಬಳ್ಳದಲ್ಲಿ ಸುರೆಯ ತುಂಬಿ ಮೇಲೆ ಬೂದಿಯ ಹೂಸಿದಂತಾಯಿತ್ತು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇನ್ನಷ್ಟು ... -->