ಅಥವಾ

ಒಟ್ಟು 522 ಕಡೆಗಳಲ್ಲಿ , 54 ವಚನಕಾರರು , 332 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ. ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ. ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ. ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ? ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ
--------------
ಅಲ್ಲಮಪ್ರಭುದೇವರು
ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ. ಜಾÕನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ. ಸಂಗಡ ಸಹಿತ ಕರಸ್ಥಲಕ್ಕೆ ಬಂದು, ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ_ಗುಹೇಶ್ವರಾ,
--------------
ಅಲ್ಲಮಪ್ರಭುದೇವರು
ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು; ಇಂತಡಗುವರೆ ಮಹಿಮರು; ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಭವಭವದಲ್ಲಿ ಎನ್ನ ಮನವು ಸಿಲುಕದೆ ಭವಭವದಲ್ಲಿ ಎನ್ನ ಮನವು ಕಟ್ಟದೆ ಭವಸಾಗರದಲ್ಲಿ ಮುಳುಗದೆ ಭವರಾಟಳದೊಳು ತುಂಬದೆ ಕೆಡಹದೆ ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ. 68
--------------
ಬಸವಣ್ಣ
ಗುರುವೇ, ನೀನು ನನ್ನ ಲಿಂಗಕ್ಕೆ ಮಂಗಳಸೂತ್ರವಂ ಕಟ್ಟಿ ಕೊಟ್ಟಂದಿಂದ ಅನ್ಯವನರಿಯದೆ, ಆ ಲಿಂಗದಲ್ಲೇ ನಡೆವುತ್ತಿರ್ಪೆನು, ಆ ಲಿಂಗದಲ್ಲೇ ನುಡಿವುತ್ತಿರ್ಪೆನು, ಆ ಲಿಂಗದ ನಟನೆಯಂ ನೆನವುತ್ತಿರ್ಪೆನು, ಆ ಲಿಂಗದ ಮಹಿಮೆಯನೆ ಪಾಡುತ್ತಿರ್ಪೆನು, ಆ ಲಿಂಗವನೆ ಬೇಡುತ್ತಿರ್ಪೆನು, ಆ ಲಿಂಗವನೆ ಕಾಡುತ್ತಿರ್ಪೆನು, ಆ ಲಿಂಗವನೆ ಕೊಸರುತ್ತಿರ್ಪೆನು, ಆ ಲಿಂಗವನೆ ಅರಸುತ್ತಿರ್ಪೆನು, ಆ ಲಿಂಗವನೆ ಬೆರಸುತ್ತಿರ್ಪೆನು, ಆ ಲಿಂಗವಲ್ಲದೆ ಮತ್ತಾರನೂ ಕಾಣೆನು, ಮತ್ತಾರಮಾತನೂ ಕೇಳೆನು, ಮತ್ತಾರನೂ ಮುಟ್ಟೆನು, ಮತ್ತಾರನೂ ತಟ್ಟೆನು. ಲಿಂಗವು ನಾನು ಇಬ್ಬರೂ ಇಲ್ಲದ ಕಾರಣ ಎಲ್ಲವೂ ನನಗೆ ಏಕಾಂತಸ್ಥಾನವಾಯಿತ್ತು. ಎಲ್ಲೆಲ್ಲಿಯೂ ಯಾವಾಗಲೂ ಎಡೆವಿಡದೆ ಲಿಂಗದಲ್ಲೇ ರಮಿಸುತಿರ್ದೆನು. ಲಿಂಗದಲ್ಲೇ ಕಾಲವ ಕ್ರಮಿಸುತ್ತಿರ್ದೆನು ಲಿಂಗದಲ್ಲೇ ಎನ್ನಂಗಗುಣಂಗಳಂ ಕ್ಷಮಿಸುತ್ತಿರ್ದೆನು ಲಿಂಗದೊಳಗೆ ನನ್ನ, ನನ್ನೊಳು ಲಿಂಗದ ಚಲ್ಲಾಟವಲ್ಲದೆ, ಬೇರೊಂದು ವಸ್ತುವೆನಗೆ ತೋರಲಿಲ್ಲ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು. ಸಕಲ ನೀನು ನಿಷ್ಕಲ ನೀನು. ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ ? ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ ! ಅದೆಂತೆಂದಡೆ: ``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ'' _ ಇಂತೆಂದುದಾಗಿ_ನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಿಮ್ಮ ಲೀಲೆ, ನಿಮ್ಮ ವಿನೋದ, ನಿಮ್ಮ ಹರೆ, ನಿಮ್ಮ ಕೊಳಲು, ಆನಿದಕ್ಕೆ ಬೇಕೆನ್ನೆ ಬೇಡೆನ್ನೆ. ಮೇಘವಹ್ನಿ ಧರೆಗೆರಗುತ್ತ ಭೂಲೋಕವ ಬೆಸಗೊಂಡಿತ್ತೆ ? ಉದರಾಗ್ನಿ ಧರೆಗೆರಗುತ್ತ ಭೂತಂಗಳ ಬೆಸಗೊಂಡಿತ್ತೆ ? ಗುಹೇಶ್ವರ ಅಲ್ಲಮನ ನಿರುಪಮ ಮಹಿಮೆ ಎಂತಿದ್ದಿತ್ತು ಆ ಹಾಂಗೆ ನೀನು ಮಾಡುವುದಲ್ಲದೆ ನಾನಿದಕ್ಕೆ ಬೇಕೆನ್ನೆನು ಬೇಡೆನ್ನೆನು
--------------
ಅಲ್ಲಮಪ್ರಭುದೇವರು
ಕಾಯಲಿಂಗಾರ್ಪಿತವಾಯಿತ್ತಾಗಿ ಕರ್ಮ ನಿರ್ಮೂಲ್ಯವಾಗಿ ನಿರ್ಮಲಾಂಗಿಯಾದೆನು ನೋಡಾ. ಜೀವ ಲಿಂಗಾರ್ಪಿತವಾಯಿತ್ತಾಗಿ ಜೀವ ಪರಮರೆಂಬ ಉಭಯವಳಿದು ಚಿತ್ಪರಮಲಿಂಗವಾದೆನು ನೋಡಾ. ಪ್ರಾಣಲಿಂಗಾರ್ಪಿತವಾಯಿತ್ತಾಗಿ ಇಹಪರವನರಿಯೆನು ನೋಡಾ. ಪರಿಣಾಮ ಲಿಂಗಾರ್ಪಿತವಾಯಿತ್ತಾಗಿ ಶರಣ ಲಿಂಗವೆಂಬ ಕುರುಹಿಲ್ಲ ನೋಡಾ. ನಾನೆಂಬುದು ಲಿಂಗಾರ್ಪಿತವಾಯಿತ್ತಾಗಿ ನಾನು ಇಲ್ಲ, ನೀನು ಇಲ್ಲ ಏನು ಏನೂ ಇಲ್ಲದ ಅಪ್ರತಿಮ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೀನು ಸಕಲದಲ್ಲಿ ಸ್ವಾತ್ಮಿಸುವ ಭೇದವ ನೀನು ನಿಃಕಲದ್ಲ ಪ್ರವೇಶಿಸುವ ಭೇದವ ನೀನು ಸಕಲ ನಿಃಕಲಾತ್ಮಕವಾಗಿ ತೊಳಗಿ ಬೆಳಗುತಿಪ್ಪ ಭೇದವ ಅರಿಯಬಹುದೆ ಎಲ್ಲರಿಗೆ? ಆನಂದಸ್ಥಾನದಲ್ಲಿ ಬೆಳಗುತ್ತಿಪ್ಪ ಅಕ್ಷರದ್ವಯದ ಭೇದವ ಅನ್ಯರಿಗೆಂತರಿಯಬಹುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಶಿವ ಶಿವ! ಮಹಾದೇವ ಶಿವನೇ ನೀನು ಸರ್ವಜ್ಞನಾಗಿ ಎನ್ನನೂ ನೀನು ಬಲ್ಲೆ. ಈ ಪರಿಯನು ಹರಿಬ್ರಹ್ಮದೇವದಾನವಮಾನವರು ಅರಿಯದೆ ಭ್ರಮಿಸುತ್ತಮಿಪ್ಪರು. ಈ ವಿದ್ಥಿಯನು ತಾತ್ಪಯ್ರ್ಯವೆಂದರಿದೆನಾಗಿ ಸದ್ಯೋನ್ಮುಕ್ತನು, ನಿರಂತರ ಪರಿಣಾಮಿ, ಪರಮಸುಖಸ್ವರೂ[ಪಿ] ನಾನೇ ಅಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಪಾವನವಾದೆನು ಬಸವಣ್ಣಾ, ನಿಮ್ಮ ಪಾವನಮೂರ್ತಿಯ ಕಂಡು. ಪರತತ್ವವನೈದಿದೆ ಬಸವಣ್ಣಾ, ನಿಮ್ಮ ಪರಮಸೀಮೆಯ ಕಂಡು. ಪದ ನಾಲ್ಕು ಮೀರಿದೆ ಬಸವಣ್ಣಾ, ನಿಮ್ಮ ಪರುಷಪಾದವ ಕಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ; ಬಸವಣ್ಣಾ, ಬಸವಣ್ಣಾ, ಬಸವಣ್ಣಾ, ನೀನು ಗುರುವಾದೆಯಾಗಿ.
--------------
ಸಿದ್ಧರಾಮೇಶ್ವರ
ತಮತಮಗೆ ಸಮತೆಯನು ಹೇಳಬಹುದಲ್ಲದೆ, ತಮತಮಗೆ ಸಮತೆಯನು ಆಡಬಹುದಲ್ಲದೆ, ಕನಲಿಕೆಯ ಕಳೆದಿಪ್ಪವರಾರು ಹೇಳಾ? ಒಬ್ಬರೊಬ್ಬರ ಹಳಿಯದಿಯಪ್ಪವರಾರು ಹೇಳಾ ? ಮುನಿಸ ಮುಂದಿಟ್ಟಿಪ್ಪರು. ಇದು ಯೋಗಿ, ಮಹಾಯೋಗಿಗಳಿದಪ್ಪುದು ನೋಡಾ. ಸಕಳೇಶ್ವರದೇವಾ, ನೀನು ಕರುಣಿಸಿದವರಿಗಲ್ಲದೆಯಿಲ್ಲಾ.
--------------
ಸಕಳೇಶ ಮಾದರಸ
ಇನಿಯನೆನಗೆ ನೀನು, ಇನ್ನೇನನೊಂದ ನಾನರಿಯೆ. ನೀ ನುಡಿಸಲು ನುಡಿವೆನು, ನಡೆಸಲು ನಡೆವೆನು, ನೀನಲ್ಲದರಿಯೆನು, ನಲ್ಲ ನೀ ಕೇಳಾ. ನೀನೇ ಗತಿ, ನೀನೇ ಮತಿ. ನಿನ್ನಾಣೆಯಯ್ಯಾ, ಉರಿಲಿಂಗದೇವಾ.
--------------
ಉರಿಲಿಂಗದೇವ
ತನುವರ್ಪಿತವೆಂದಡೆ ಗುರುದ್ರೋಹ. ಮನವರ್ಪಿತವೆಂದಡೆ ಲಿಂಗದ್ರೋಹ. ಧನವರ್ಪಿತವೆಂದಡೆ ಜಂಗಮದ್ರೋಹ_ ಇಂತೀ ತನುಮನಧನಗಳೆಂಬ ಅನಿತ್ಯವನು ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ. ಒಡೆಯರಿಗೆ ಉಂಡೆಯ ಮುರಿದಿಕ್ಕಿ ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ? ನಮ್ಮ ಗುಹೇಶ್ವರಲಿಂಗಕ್ಕೆ, ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->