ಅಥವಾ

ಒಟ್ಟು 600 ಕಡೆಗಳಲ್ಲಿ , 78 ವಚನಕಾರರು , 456 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಮ್ಮನರಿವರನರಿವೆನಯ್ಯಾ. ನಿಮ್ಮ ಮರೆವರ ಮರೆವೆನಯ್ಯಾ. ಮಾಯಿದೇವಿಗೆ ಮತವ ಕೊಟ್ಟು ಎಲ್ಲ ಹಿರಿಯರ ಜರಿವೆಯಯ್ಯಾ. ಇವೆಲ್ಲವ ತೋರಿ ನೀ ಗೆಲುವೆಯಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಸಿಂಬೆಗೆ ರಂಭೆತನವುಂಟೆ ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ, ನೀ ಬಂದೆಯಲ್ಲಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಮರುಳಶಂಕರದೇವ
ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಈಶ್ವರನ ಕಾಬುದೊಂದಾಸೆಯುಳ್ಳೊಡೆ ಪರದೇಶಕ್ಕೆ ಹೋಗಿ ಬಳಲದಿರು, ಕಾಶಿಯಲ್ಲಿ ಕಾಯವ ವಿನಾಶವ ಮಾಡಲುಬೇಡ. ನಿನ್ನಲ್ಲಿ ನೀ ತಿಳಿದು ನೋಡಾ, ಸರ್ವೇಶ ಮುಳ್ಳಗುತ್ತ ತೆರಹಿಲ್ಲೆಂದಡೆ, ಒಂದು ಗೋಂಟ ಸಾರಿರ್ದನೆ ? ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಹರತೇರು ಬಿತ್ತಿದ ಗಿಡವಿನ ಹೂವ್ವ ಕೊಯ್ದು ಊರೆಲ್ಲ ಕಟ್ಟಿದ ಕೆರೆ ನೀರ ತಂದು ನಾಡೆಲ್ಲ ನೋಡಿರಿಯೆಂದು ಪೂಜಿಸುವ ಪುಣ್ಯ ನೀರಿಗೊ ಹುವ್ವಿಗೊ ನಾಡೆಲ್ಲಕ್ಕೊ ಪೂಜಿಸಿದಾತಗೊ ಇದ ನಾನರಿಯೆ ನೀ ಹೇಳೆಂದಾತ ನಮ್ಮ ದಿಟ್ಟ ವೀರಾದ್ಥಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಚಂದ್ರಕಾಂತದ ಶಿಲೆಗೆ ಒಂದು ಗಜ ಹೋರುವಂತೆ ತನ್ನ ನೆಳಲಿಂಗೆ ತಾನೆ ಹೋರಿ ಸಾವಂತೆ ಆನೆಯ ಗತಿ ಆನೆಯ ಮತಿ. ಆನೆಯಹುದು, ಆನೆಯಲ್ಲ, ಅದನೇನೆಂಬೆ ? ನೀನೆನ್ನ ಕರಸ್ಥಲದಲ್ಲಿ ಸಿಲ್ಕಿದೆಯಾಗಿ ನೀ ನಾನೆಂಬ ಭ್ರಾಂತೇಕೆ ? ನಾನು ನೀನಲ್ಲದ ತೆರಹಿಲ್ಲ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುಟ್ಟು ಹೊಂದುಗಳರಿಯದೆ ನೆಟ್ಟನೆ ಹುಟ್ಟಿ ಬಂದವನೆಂದು ಕಾರ್ಯದಲ್ಲಿ ಕರಿದು ಬಿಳಿದು ಕೂಡಿ ಮಾಡಿಕೊಂಡೆನೆಂದರೆ ನಿಜವಾಗಲರಿಯದು. ಭೂಪ ಧನಿಕರು ಕೊಲ್ಲಿಸಿ ಹಾಕುವರು ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸೀಮೆಯ ಮೀರಿದ ಸಂಬಂಧನೆ, ಸಂಬಂಧದಲ್ಲಿ ಸಮನಿಸದ ಸಂಯೋಗನೆ, ಎನ್ನ ಸಲಹುವ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದಕ್ಕೆ ಅರ್ಹನ ಮಾಡಿದೆ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಬಸವನಾಗಿ ಬಂದು ನಿನ್ನವರಿಗೆ ಯೋಗ್ಯನ ಮಾಡಿ, ಭವವ ತಪ್ಪಿಸಿದೆ.
--------------
ಸಿದ್ಧರಾಮೇಶ್ವರ
ಸರ್ವಾಂಗಲಿಂಗಿಯಾದ ಶರಣನ ಲಿಂಗ ಬ್ಥಿನ್ನವಾಗಿ ಹೋಗಲು ಆ ಲಿಂಗದೊಡನೆ ತನ್ನ ಪ್ರಾಣವ ಬಿಡುವದು. ಇದಲ್ಲದೆ ಜೀವಕಾಸೆ ಮಾಡಿ ಪುನಃ ಲಿಂಗವ ಧರಿಸಿದನಾದಡೆ ಶುನಿಯ ಬಸುರಲ್ಲಿ ಬಂದು ಅನೇಕಕಾಲ ನಾಯಕನರಕದಲ್ಲಿರ್ಪನಯ್ಯಾ ನೀ ಸಾಕ್ಷಿಯಾಗಿ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ಸರ್ವಮಯ ನಿನ್ನ ಬಿಂದುವಾದಲ್ಲಿ ಆವುದನಹುದೆಂಬೆ, ಆವುದನಲ್ಲಾಯೆಂಬೆ? ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ? ತರುಲತೆ ಸ್ಥಾವರ ಜೀವಂಗಳೆಲ್ಲಾ ನಿನ್ನ ಕಾರುಣ್ಯದಿಂದೊಗೆದವು. ಆರ ಹರಿದು ಇನ್ನಾರಿಗೆ ಅರ್ಪಿಸುವೆ? ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ ದಸರೇಶ್ವರನೆಂದು.
--------------
ದಸರಯ್ಯ
ಶಶಿಮುಖಿಯರ ಸಂಗಕ್ಕೆ ಎಣಿಸುವ ಪಶುಪ್ರಾಣಿಗಳು ಪಶುಪತಿಯ ಸಂಗಸುಖಕ್ಕೆ ಯಾಕೆ ಎಣಿಸಲೊಲ್ಲರಯ್ಯ? ಶಿವ ಶಿವಾ! ನೀ ಮಾಡಿದ ವಿಷಯದ ವಿದ್ಥಿ, ಈರೇಳುಲೋಕವನಂಡಲೆವುತ್ತಿದೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->