ಅಥವಾ

ಒಟ್ಟು 223 ಕಡೆಗಳಲ್ಲಿ , 34 ವಚನಕಾರರು , 203 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಹರ, ಶಿವಶಿವ, ಜಯಜಯ, ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುವೆ ನಿಷ್ಕಲ ಪರಶಿವತತ್ವವಯ್ಯ. ಗುರುವೆ ಸಕಲಾಗಮಂಗಳ ಮೂರ್ತಿಯಯ್ಯ. ಗುರುವೆ ಅಜ್ಞಾನವೆಂಬ ಕಾವಳಕ್ಕೆ ಚಿತ್ಸೂರ್ಯನಯ್ಯ. ಗುರುವೆ ನಂಬಿದ ಭಕ್ತರ ವಿಷಯವೆಂಬ ವನಾಂತರಕ್ಕೆ ಚಿಚ್ಚಂದ್ರನಯ್ಯ. ಗುರುವೆ ಆಸೆಯೆಂಬ ಪಾಶವ ದಹಿಸುವುದಕ್ಕೆ ಚಿದಗ್ನಿಯಯ್ಯ. ಗುರುವೆ ಪರಾತ್ಪರಮೂರ್ತಿಯಯ್ಯ. ಗುರುವೆ ಸಕಲಾಧಾರಮೂರ್ತಿಯಯ್ಯ. ಗುರುವೆ ಸಚ್ಚಿದಾನಂದಮೂರ್ತಿಯಯ್ಯ. ಗುರುವೆ ಸರ್ವಲೋಕ ಸೂತ್ರಾಧಾರಮೂರ್ತಿಯಯ್ಯ. ಗುರುವೆ ಪರಬ್ರಹ್ಮವಸ್ತುವಯ್ಯ. ಗುರುವೆ ನಿತ್ಯನಿರುಪಮನಯ್ಯ. ಗುರುವೆ ನಿಷ್ಕಳಂಕ ನಿಷ್ಪ್ರಪಂಚನಯ್ಯ ಗುರುವೆ ನಿರುಪಾದ್ಥಿಕ ನಿಶ್ಚಿಂತನಯ್ಯ ಗುರುವೆ ಆದಿ ಅನಾದಿಯಿಂದತ್ತತ್ತಲಾದ ನಿರವಯಮೂರ್ತಿಯಯ್ಯ. ಗುರುವೆ ಶಾಂತ ಸರ್ವಜÕಸ್ವರೂಪನಯ್ಯ. ಗುರುವೆ ನಿರಾಳ ನಿಷ್ಕಾಮ ನೋಡ. ಶ್ರೀಗುರುವೆ ಸಗುಣಾನಂದಮೂರ್ತಿ ನೋಡ ! ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಬೆಡಗು : ಕೊಡಲಿ ಪಿಡಿದಲ್ಲದೇ ಕಾಡು ಕಡಿಯದು. ಆ ಕಾಡ ಕಡಿದಲ್ಲದೆ ಕಲ್ಪವೃಕ್ಷದ ವನವು ಕಾಣದು. ಆ ಕಲ್ಪವೃಕ್ಷದ ವನವ ಕಂಡಡೂ, ಆ ಕಲ್ಪವೃಕ್ಷದ ವನವನಳಿದಲ್ಲದೆ ಕದಳಿಯು ಸಿಗದು. ಆ ಕದಳಿಯ ಸುಲಿದು ಒಳಪೊಕ್ಕಲ್ಲದೆ ನಿಜವು ತಿಳಿಯದು. ಆ ನಿಜವು ತಿಳಿದಲ್ಲದೆ ನಿರ್ಬಯಲು ತಾನಾಗದು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನಿರ್ಬಯಲು ಮಹಾಬಯಲು ಚಿದ್‍ಬಯಲು ಬಯಲಾತ್ಮ ಸೂರ್ಯ ಚಂದ್ರ ತಾರಕ ಕಠೋರ ವಾಯು ಆಕಾಶ ಅಗ್ನಿ ಅಪ್ಪು ಪೃಥ್ವಿ ಬೀಜ ಅನ್ನರಸ ವೀರ್ಯ ಪಿಂಡ ಪ್ರಾಣ ಮನ ಅಸಿ ಉತ್ಪತ್ತಿ ಸ್ಥಿತಿ ಲಯ ಅಕ್ಷರ ಮೊದಲಾದ ಬ್ರಹ್ಮಾಂಡ ನೀನಾದುದಕ್ಕೆ, ನಿನ್ನ ನೀನರಿವುದಕ್ಕೆ ನೀನೇ ನಾನಾದುದೇ ಇದೇ ಆದಿಯಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು. ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ, ಆ ಮಹತ್ವವು ತನಗನ್ಯವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು ? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ? ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ? ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ? ನಿಮ್ಮ ಶಿವಾಚಾರವೇನಾಯಿತು ? ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಆದಿ ಅನಾದಿ ಸುರಾಳ ನಿರಾಳ ಶೂನ್ಯ ನಿಃಶೂನ್ಯದಿಂದತ್ತತ್ತಲಾದ ಘನಮಹಾಲಿಂಗವೆಂಬ ಪರಬ್ರಹ್ಮವು, ಗುರುಕರುಣದಿಂ ಬಹಿಷ್ಕರಿಸಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬರಲು ಆ ಲಿಂಗದಲ್ಲಿ ಕೃಷ್ಣಾ ಭಾಗೀರಥಿ ಮೊದಲಾದ ಅನೇಕ ತೀರ್ಥಂಗಳು, ಕಾಶಿರಾಮೇಶ್ವರ ಮೊದಲಾದ ಅನೇಕ ಕ್ಷೇತ್ರಂಗಳು, ಹಿಮಾಚಲ ಶ್ರೀಶೈಲಪರ್ವತ ಮೊದಲಾದ ಅನೇಕ ಪುಣ್ಯಶೈಲಂಗಳುಂಟೆಂದು, ತನ್ನ ಸ್ವಾನುಭಾವಮೂಲಜ್ಞಾನದಿಂ ತಿಳಿದು, ಸಕಲ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಮನವ ಮಹಾಘನದಲ್ಲಿರಿಸಿ ಇರಬಲ್ಲಡೆ ಆತನೇ ಅನಾದಿಸದ್ವೀರಮಹೇಶ್ವರನ ಭಕ್ತನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಸ್ತೂರಿಮೃಗವು, ಕಸ್ತೂರಿಯ ಹುಡುಕುತ್ತ ಹೋದರೆ ಕಸ್ತೂರಿಮೃಗವು ತಾನಲ್ಲದೆ ಕಸ್ತೂರಿಯು ಸಿಗಲುಂಟೆ ? ಕನ್ನಡಿಯ ಮಹಲಿನೊಳಗೆ ಕುನ್ನಿ ತಾ ಕೂತು ಸುತ್ತಲಿರ್ದ ಕನ್ನಡಿಯೊಳಗೆ ಕುನ್ನಿಗಳ ಕಂಡು ತನ್ನ ರೂಹೆಂದು ಅರಿಯದೆ ಅನ್ಯವೆಂದು ಕೂಗಲು ಆ ಕೂಗು ಎಂದಿಗೆ ಮಾಣ್ಬುದೋ ತನ್ನ ತಾ ತಿಳಿದಂದಿಗಲ್ಲದೆ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶಿವತತ್ವದ ವಾಯುವಿನ ಮೇಲೆ ನಿರಾಳ ಅನಾಹತಚಕ್ರ. ಅಲ್ಲಿಯ ಪದ್ಮ ಇನ್ನೂರಾ ಎಪ್ಪತ್ತು ದಳದ ಪದ್ಮ. ಆ ಪದ್ಮ ವರ್ಣವಿಲ್ಲದೆ ಅಪ್ರಮಾಣ ಅಗೋಚರವಾಗಿಹುದು. ಅಲ್ಲಿಯ ಅಕ್ಷರ ಇನ್ನೂರಾ ಎಪ್ಪತ್ತಕ್ಷರ ; ಆ ಅಕ್ಷರ ನಿರೂಪಾತೀತವಾಗಿಹುದು. ಅಲ್ಲಿಯ ಶಕ್ತಿ ನಿರಾಳ ಉಪಮಾಶಕ್ತಿ. ಅಮಲಾನಂದಬ್ರಹ್ಮವೇ ಅದ್ಥಿದೇವತೆ. ಅಲ್ಲಿಯ ನಾದ ಸುನಾದ. ಅಲ್ಲಿಯ ಬೀಜಾಕ್ಷರ ಆದಿಪ್ರಣವ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ನಿರಾಳ ಷಡುಚಕ್ರಂಗಳ ಮೇಲಣ ನಾಲ್ಕು ಚಕ್ರಂಗಳ ಕ್ರಮವೆಂತೆಂದಡೆ : ನಿರ್ವಾಣಲಿಂಗಚಕ್ರವೆಂದು, ಮಹಾನಿರ್ವಾಣಲಿಂಗಚಕ್ರವೆಂದು, ಅತಿಮಹಾನಿರ್ವಾಣಘನಲಿಂಗಚಕ್ರವೆಂದು, ಅತಿಮಹಾತೀತ ಮಹಾನಿರ್ವಾಣ ಘನಲಿಂಗಚಕ್ರವೆಂದು. ನಾಲ್ಕು ಚಕ್ರಕ್ಕೂ ಪದ್ಮವಿಲ್ಲ ವರ್ಣವಿಲ್ಲ, ಅಕ್ಷರಂಗಳಿಲ್ಲ, ಶಕ್ತಿಯಿಲ್ಲ, ಅದ್ಥಿದೇವತೆ ಇಲ್ಲ, ನಾದವಿಲ್ಲ, ಬೀಜಾಕ್ಷರವಿಲ್ಲದೆ ಬೆಳಗುತ್ತಿಹುದು. ಆ ಚಕ್ರಂಗಳು ವರ್ಣಕ್ಕೂ ವರ್ಣಾತೀತವಾಗಿಹುದು, ಉಪಮೆಗೆ ಉಪಮಾತೀತವಾಗಿಹುದು ಚಕ್ರಕ್ಕೂ ಚಕ್ರಾತೀತವಾಗಿಹುದೆಂದು ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಪೃಥ್ವಿ ಅಪ್ಪುಗಳಿಲ್ಲದಂದು, ತೇಜ ವಾಯುಗಳಿಲ್ಲದಂದು, ಆಕಾಶ ಆತ್ಮವಿಲ್ಲದಂದು, ರವಿ ಶಶಿಗಳಿಲ್ಲದಂದು, ಸಪ್ತೇಳುಸಾಗರವಿಲ್ಲದಂದು, ಅಷ್ಟಕುಲಪರ್ವತಂಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿಶ್ಚಿಂತ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಮಹಾಘನ ಅಪರಂಪರ ಅಗಮ್ಯ ಅಗೋಚರ ಅಪ್ರಮಾಣ ನಿಶ್ಚಿಂತ ನಿರಾಕುಳ ನಿರ್ಭರಿತ ನಿರಂಜನ ನಿರಪೇಕ್ಷ ನಿರಾಮಯ ನಿಃಶೂನ್ಯ ನಿರಾಧಾರ ನಿಷ್ಪತಿ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಂಚಾಕ್ಷರದೊಳಗೆ ಪಂಚಾಂಗವಡಗಿತ್ತಾಗಿ, ಪಂಚಾಕ್ಷರವ ತಿಳಿದೆನಾಗಿ ಎನಗೆ ಪಂಚಾಂಗ ನಾಸ್ತಿಯಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಐವರನೆತ್ತಿ ನುಂಗಿದ ಅವಿರಳ ಪರಬ್ರಹ್ಮ ನೋಡಾ. ಆ ಪರಬ್ರಹ್ಮವ ನುಂಗಿದನು ನಿರವಯ. ನಿರವಯವ ನುಂಗಿದ ನಿರಾಳ. ನಿರಾಳವ ನುಂಗಿದ ನಿತ್ಯ ನಿರಂಜನ ಪರವಸ್ತು ನೋಡಾ. ಇವರೆಲ್ಲರ ನುಂಗಿದ ಪರವಸ್ತು ಎನ್ನ ನುಂಗಿತ್ತಾಗಿ, ಆ ಪರವಸ್ತುವ ನಾನು ನುಂಗಿದೆನಾಗಿ, ನಿಃಶಬ್ದಮಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->