ಅಥವಾ

ಒಟ್ಟು 155 ಕಡೆಗಳಲ್ಲಿ , 27 ವಚನಕಾರರು , 130 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು. ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು. ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೀವು ನಿಮ್ಮ ಸ್ವಲೀಲೆಯಿಂದೆ ಜಗದಲೀಲಾ ವೈಭವಂಗಳ ನಟಿಸಬೇಕೆಂದು ನಿಮ್ಮಲ್ಲಿ ನೆನಹುದೋರಲು, ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗವೇ ಪಂಚಮುಖವನೈದಿಹ ಸದಾಶಿವನೆಂದೆನಿಸಿತ್ತು. ಆ ಸದಾಶಿವನಿಂದೆ ಬ್ರಹ್ಮ-ವಿಷ್ಣು-ರುದ್ರರೆಂಬ ತ್ರೈಮೂರ್ತಿಗಳುದಿಸಿದರು. ಆ ತ್ರೈಮೂರ್ತಿಗಳಿಂದೆ ಸ್ವರ್ಗ-ಮತ್ರ್ಯ-ಪಾತಾಳಂಗಳೆಂಬ ತ್ರೈಲೋಕಂಗಳು ಜನಿಸಿದವು. ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣುಗಂಡು ನಾಮ ರೂಪ ಕ್ರಿಯಾದಿ ಸಕಲ ವಿಸ್ತಾರವಾಯಿತ್ತು. ಇಂತಿವೆಲ್ಲವೂ ನಿಮ್ಮ ನೆನಹುಮಾತ್ರದಿಂದಾದವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ! ಹೋ! ಹೋ! ಬಾಲಭಾಷೆಯ ಕೇಳಲಾಗದು. ಅಲ್ಲಲ್ಲ, ಮಾಡಬಹುದು. ಅದೇನು ಕಾರಣ? ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು. ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ, ಮಾಡಬಹುದು, ಮಾಡಬಹುದು. ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ! ಇದು ಕಾರಣ, ಮಹಾಘನಸೋಮೇಶ್ವರಾ, ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ, ಎನ್ನನದ್ದಿ ನೀನೆದ್ದು ಹೋಗಯ್ಯಾ?
--------------
ಅಜಗಣ್ಣ ತಂದೆ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ ನೋಡ ಬಂದವರನುವನವರೆತ್ತ ಬಲ್ಲರಯ್ಯಾ? ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿ ಗುರುನಿರಂಜನ ಚನ್ನ ಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಟವಿಲ್ಲದ ಕೂಟವದೇಕೋಳ ಕೂಟವಿಲ್ಲದ ಮಾಟವದೇಕೋ? ಮಾಟಕೂಟವೆರಡರನುವರಿಯಬೇಕು. ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಬೇಕು. ಕೂಟಮಾಟವೆರಡರ ಅನುಮತದಿಂದವೆ ಭಕ್ತಿ. ಇದೇ [ಕೂಟ] ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ.
--------------
ಚನ್ನಬಸವಣ್ಣ
ಭಾವಿಸಿ ದೃಷ್ಟಿನಟ್ಟು ಸೈವೆರಗಾಗಿದ್ದುದ ಕಂಡೆ, ಕಲ್ಪಿಸಿ ದೃಷ್ಟಿನಟ್ಟು ಸೈವೆರಗಾಯಿತ್ತಯ್ಯಾ. ಗುಹೇಶ್ವರಾ, ನಿಮ್ಮಲ್ಲಿ ಸರ್ವನಿರ್ವಾಣಿ ಸಂಗನಬಸವಣ್ಣ. ಎನ್ನ ಪ್ರಾಣಲಿಂಗವೆಂದರಿದು ಕಂಡೆನಿಂದು.
--------------
ಅಲ್ಲಮಪ್ರಭುದೇವರು
ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ. ಅಯ್ಯಾ ಎನ್ನೊಳಗೆ ಇನಿತಿರ್ದು ಮೈದೋರದ ಭೇದವ ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ತನುವಿಂಗೆ ತನುರೂಪಾಗಿ ತನುವಿಂಗಾಧಾರವಾದೆ. ಮನಕ್ಕೆ ಮನರೂಪಾಗಿ ಮನಕ್ಕೆ ನೆನಹಿನ ಶಕ್ತಿಯನಿತ್ತು ಮನಕ್ಕಾಧಾರವಾದೆ. ಪ್ರಾಣಕ್ಕೆ ಪ್ರಾಣರೂಪಾಗಿ. ಪ್ರಾಣಕ್ಕಾಧಾರವಾದೆ. ಎನ್ನಂಗೆ ಮನ ಪ್ರಾಣದಲ್ಲಿ ನೀವೆ ನಿಂದು, ಸರ್ವಕರಣಂಗಳ ನಿಮ್ಮವ ಮಾಡಿಕೊಂಡ ಕಾರಣ ಎನ್ನ ಪ್ರಾಣ ನಿಮ್ಮಲ್ಲಿ ಆಡಗಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಆಯತಲಿಂಗದಲ್ಲಿ ಆಚಾರವರತು, ಸ್ವಾಯತಲಿಂಗದಲ್ಲಿ ವಿಚಾರವರತು, ಸನ್ನಹಿತಲಿಂಗದಲ್ಲಿ ಅನುಭಾವವರತು, ಈ ತ್ರಿವಿಧದಲ್ಲಿ ತ್ರಿವಿಧವರತಡೆ ಒಂದಲ್ಲದೆರಡುಂಟೆ ಕೂಡಲಚೆನ್ನಸಂಗಾ ನಿಮ್ಮಲ್ಲಿ ?
--------------
ಚನ್ನಬಸವಣ್ಣ
ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ. ನೋಟವೇ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಆರತುದಯ್ಯಾ. ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರಾ ನಿರಾಳವಯ್ಯಾ !
--------------
ಅಲ್ಲಮಪ್ರಭುದೇವರು
ಪುಣ್ಯಪಾಪಂಗಳನರಿಯದ ಮುನ್ನ ಅನೇಕ ಭವಂಗಳಲ್ಲಿ ಬಂದು ನಿಮ್ಮ ನಿಲುವನರಿಯದೆ ಕೆಟ್ಟನಯ್ಯಾ. ಇನ್ನು ನಿಮ್ಮ ಶರಣುವೊಕ್ಕೆನಾಗಿ, ನಾ ನಿಮ್ಮನೆಂದೂ ಅಗಲದಂತೆ ಮಾಡಾ ಅಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ! ನಿಮ್ಮಲ್ಲಿ ಒಂದು ಬೇಡುವೆ; ಎನ್ನ ಕರ್ಮಬಂಧನ ಬಿಡಿವಂತೆ ಮಾಡಾ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮಹಾಜ್ಞಾನಿ ಜಂಗಮಲಿಂಗ ತಾನು ಲೋಕಪಾವನವಾಗಿ ನಡೆನುಡಿಗಳರಿದಾಚರಿಸುವಲ್ಲಿ, ಜಿಹ್ವೆಯಲ್ಲಿ ಹುಸಿನುಡಿಯಿಲ್ಲದೆ ತನ್ನ ತಾ ನುಡಿಯುತಿರ್ದ ಕಾಣಾ. ಕಂಗಳಲ್ಲಿ ಬ್ಥಿನ್ನದೃಷ್ಟಿಯಿಲ್ಲದೆ ತನ್ನ ತಾ ನೋಡುತಿರ್ದ ಕಾಣಾ. ಶ್ರೋತ್ರದಲ್ಲಿ ಬ್ಥಿನ್ನಶಬ್ದವಿಲ್ಲದೆ ತನ್ನ ತಾ ಕೇಳುತಿರ್ದ ಕಾಣಾ. ತ್ವಕ್ಕಿನಲ್ಲಿ ಬ್ಥಿನ್ನ ಸೋಂಕಿಲ್ಲದೆ ತನ್ನ ತಾ ಸೋಂಕುತಿರ್ದ ಕಾಣಾ. ಘ್ರಾಣದಲ್ಲಿ ಬ್ಥಿನ್ನವಾಸನೆಯಿಲ್ಲದೆ ತನ್ನ ತಾನ್ವಾಸಿಸುತಿರ್ದ ಕಾಣಾ. ಹೃದಯದಲ್ಲಿ ಮಾಯಾಸುಖವಿಲ್ಲದೆ ತನ್ನ ತಾ ಸುಖದಲ್ಲಿರ್ದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ಮತ್ತೆ ಮರಣವಿಲ್ಲದೆ ನಿಮ್ಮಲ್ಲಿ ತನ್ನೊಳೈಕ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನಲ್ಲಿ ನಾನು ದೃಷ್ಟವೆಂದಡೆ ನಿಮ್ಮಲ್ಲಿ ನೀವು ಮೆಚ್ಚುವಿರೆ ? ಸಂದೇಹದಿಂದ ಸವೆಯಿತ್ತು ಲೋಕವು. ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು, ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->