ಅಥವಾ

ಒಟ್ಟು 3735 ಕಡೆಗಳಲ್ಲಿ , 111 ವಚನಕಾರರು , 2487 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ನಿಮ್ಮನರಿವರನರಿವೆನಯ್ಯಾ. ನಿಮ್ಮ ಮರೆವರ ಮರೆವೆನಯ್ಯಾ. ಮಾಯಿದೇವಿಗೆ ಮತವ ಕೊಟ್ಟು ಎಲ್ಲ ಹಿರಿಯರ ಜರಿವೆಯಯ್ಯಾ. ಇವೆಲ್ಲವ ತೋರಿ ನೀ ಗೆಲುವೆಯಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ? ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ ? ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ ? ಕೂಡಲಚೆನ್ನಸಂಗಯ್ಯಾ, ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ ?
--------------
ಚನ್ನಬಸವಣ್ಣ
ಸಾಸಿರದಳಕಮಲವೆಂದಡೆ ಸೂಸಿಕೊಂಡಿರುವ ಮನ. ಪವನವೆಂದಡೆ ಎಲ್ಲೆಡೆಯಲ್ಲಿ ಸೂಸಿ ಆಡುವಂತಹದು. ಬಿಂದುವೆಂದಡೆ ಆಗುಮಾಡುವಂತಹದು. ಈ ಮನ ಪವನ ಬಿಂದು ಮೂರನು ಒಡಗೂಡಿ ನೋಡಲು, ಪರಂಜ್ಯೋತಿಪ್ರಕಾಶದಂತಹ ಬೆಳಗೆ ಎನ್ನ ಕಂಗಳ ಮುಂದೆ ನಿಂದಿತ್ತು. ಆ ಮಹಾಬೆಳಗನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, ಎನ್ನಂಗದ ಒಳಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ, ನಿಮ್ಮ ಪಾದಕರುಣದಿಂದ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ ತೆರಹಿಲ್ಲದ ಸಂಭಾಷಣೆ ಸುಖವು. ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು, ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ ಕೂಡಲಸಂಗಮದೇವಾ, ನಿಮ್ಮ ಶರಣಂಗೆ !
--------------
ಬಸವಣ್ಣ
ನೀವು ನಿಮ್ಮ ಸ್ವಲೀಲೆಯಿಂದೆ ಜಗದಲೀಲಾ ವೈಭವಂಗಳ ನಟಿಸಬೇಕೆಂದು ನಿಮ್ಮಲ್ಲಿ ನೆನಹುದೋರಲು, ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗವೇ ಪಂಚಮುಖವನೈದಿಹ ಸದಾಶಿವನೆಂದೆನಿಸಿತ್ತು. ಆ ಸದಾಶಿವನಿಂದೆ ಬ್ರಹ್ಮ-ವಿಷ್ಣು-ರುದ್ರರೆಂಬ ತ್ರೈಮೂರ್ತಿಗಳುದಿಸಿದರು. ಆ ತ್ರೈಮೂರ್ತಿಗಳಿಂದೆ ಸ್ವರ್ಗ-ಮತ್ರ್ಯ-ಪಾತಾಳಂಗಳೆಂಬ ತ್ರೈಲೋಕಂಗಳು ಜನಿಸಿದವು. ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣುಗಂಡು ನಾಮ ರೂಪ ಕ್ರಿಯಾದಿ ಸಕಲ ವಿಸ್ತಾರವಾಯಿತ್ತು. ಇಂತಿವೆಲ್ಲವೂ ನಿಮ್ಮ ನೆನಹುಮಾತ್ರದಿಂದಾದವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕ್ರೀವಿಡಿದು ಗುರುಸಂಬಂದ್ಥಿಯಾಗಿ, ಜಾÕನವಿಡಿದು ಲಿಂಗಸಂಬಂದ್ಥಿಯಾಗಿ. ಘನವಿಡಿದು ಮಹಾಜಾÕನಿಯಾಗಿ, ಅರಿವು ಆಚರಣೆಯ ಕಂಡು, ಜಾÕನ ಮುಕುರವೆಂಬ ಮುಂದಣ ಶ್ರೀಸಂಬಂದ್ಥಿಯಾಗಿ, ಆಚಾರದಲ್ಲಿ ಸಂಪನ್ನನಾಗಿ, ಮಹೇಶ್ವರಸ್ಥಲವನರಿದು, ಅದೇ ಜಂಗಮವಾದ ಬಳಿಕ ನಿರಾಕುಳನಾಗಿ ಆಚರಿಸಿದರೆ ಅನಾದಿ ಜಂಗಮವೆಂಬೆ. ಸಾಮವೇದೇ- ವಿವಚಾಸೋವಿಚಾ ಲಿಂಗಾಲಿಂಗಿ ಚ ಫಲಾದಿ ಬ್ರಹ್ಮರಾಕ್ಷಸ ಸೋವಿಸಂಗಶ್ಚ | ಸೂಕರ ಶತಕೋಟಿ ಜನ್ಮ ಚ ಸೋಪಿ ಕ್ರೀಡಾಲಿಂಗ ಮಲಮೂತ್ರ ಮಾಂಸ ಭುಂಜಿತಃ | ಬ್ರಹ್ಮೇನ ಕೋಟಿ ರಾಕ್ಷಸಃ ಸೋಸಂಗೇನ ಶತಕೋಟಿಗಾರ್ದಭ ಜನ್ಮ ಚ | ಅದೇ ದಾಸಿ ದಾಸೇ ಸೂಕರ ಸಂಗಶಃ ಚ ನಾಃ | ಸೋವ ಮಾತ್ರವೆಂದು ತಂದ ಸ್ತ್ರೀಗಳನು ಶಿಷ್ಯಾದಿ ಪುತ್ರರ ಕೈಯ ಗುರು ತಾಯಿ ಎಂಬ ನಾಮಕರಣಂಗಳನುಂಟುಮಾಡಿ, ತನ್ನ ಅಂಗವಿಕಾರಕ್ಕೆ ತಂದ ಸಂತೆಯ ಡೊಂಬಿತಿಯ ತಂದು, ಹಿರಿಯರಲ್ಲಿ ಸರಿಮಾಡುವ ಜಂಗಮವೆ ಗುರುವೆ? ಅಜಾÕನ ಪುರುಷನಲ್ಲ, ಅವ ಹಿರಿಯತನಕ್ಕೆ ಸಲ್ಲ, ಅವಂಗೆ ಗುರುವಿಲ್ಲ ಲಿಂಗವಿಲ್ಲ, ಜಂಗಮ ಮುನ್ನವೆಯಿಲ್ಲ. ಅವ ಘಟಾತ್ಮನು ಸೋವಿಯ ಸಂಗ ಬೇಡ ಬಿಡಿರಣ್ಣಾ, ಸೋವಿಯ ಸಂಗವ ಮಾಡಿದರೆ ಶತಕೋಟಿ ದಾಸಿಯ ಬಸುರಲ್ಲಿ ಬಂದು, ಹೇಸಿಕೆಯಿಲ್ಲದೆ ಮಲಮೂತ್ರವನು ಹೇಗೆ ಸೂಕರ ಭುಂಜಿಸುವುದೊ ಹಾಂಗೆ ಭುಂಜಿಪನು. ನಾನಾ ಯೋನಿಯ ನರಕುವದು. ಸೋವಿ ಮಾತ್ರೇಣ ಆ ಲಿಂಗನಂ ಗುರು ತಾಯ ಅಪಮಾನ ಸಾಮಾನ್ಯವೆಂದು ಸೋವಿಯ ಸಂಗವ ಮಾಡಿದಡೆ ಎಪ್ಪತ್ತೇಳುಕೋಟಿ ಶ್ವಪಚಯೋನಿ ತಪ್ಪದಯ್ಯ. ಹನ್ನೆರಡು ಕಂಬ ಸಾಕ್ಷಿಯಾಗಿ, ಕಳಕನ್ನಡಿ ಸಾಕ್ಷಿಯಾಗಿ, ತೆಳೆಮಲು ಕಟ್ಟಿ ಸಾಕ್ಷಿಯಾಗಿ, ಆಯಿರಣೆಕೋಲು ಸಾಕ್ಷಿಯಾಗಿ, ಮುತ್ತೈದೆತನದಲ್ಲಿ ಶ್ರೇಷ್ಠಯಾಗಿ, ಜಾÕನ ದೃಕ್ಕಿನಿಂ ತಿಳಿದು, ಅನುಭಾವದ ಮುಖವನರಿದಂತೆ, ಆ ಜಾÕನನೇತ್ರವ ಅರಿದು ಧಾರೆಯನೆರೆಸಿಕೊಂಡು, ಅರಿವಿನಲ್ಲಿ ಇರದೆ ಕುರಿಯ ಹೇಲ ತಿಂಬಂತೆ, ಬಾಯಿಗೆ ಬಂದಂತೆ ಸೋವಿಯ ಸಂಗವ ಮಾಡುವವರ ಸರ್ವಾಂಗವೆಲ್ಲ ಗಣಿಕೆಯ ಯೋನಿಯ ಬಸುರ ನೋಡಾ. ಧಾರೆಯನೆರೆಸಿಕೊಂಡು ಕ್ರೀವಿಡಿದು ನಡೆಯದೆ, ತೊತ್ತಿನ ಮಗನಿಗೆ ಪಟ್ಟ ಕಟ್ಟಿದರೆ ಹಾದಿಯ ಎಲುವ ಕಂಡು ಓಡಿಹೋಗಿ ಗಡಗಡನೆ ಕಡಿವಂತೆ, ಸೋವಿಯ ಎಂಜಲ ತಿಂದವಂಗೆ ಗುರುವಿಲ್ಲ. ಅವ ದೇವಲೋಕ ಮತ್ರ್ಯಲೋಕ ಎರಡಕ್ಕೆ ಸಲ್ಲ. ಆವಾಗಮದಲ್ಲಿ ಉಂಟು, ಗಳಹಿ ಹೇಳಿರೊ, ಮಕ್ಕಳಿರಾ. ನೀವು ಬಲ್ಲರೆ ಕಾಳನಾಯ ಹೇಲ ತಿಂಬಂಗೆ ಹಿರಿಯನೆಂದು, ಹೋತನಂತೆ ಗಡ್ಡವ ಬೆಳಸಿಕೊಂಡು ಗುಡರಗುಮ್ಮನಂತೆ ಸುಮ್ಮನಿರುವಿರಿ. ಗರ್ವತನಕ್ಕೆ ಬಂದು ಹಿರಿಯರೆಂದು ಆಚರಣೆ ನ್ಯಾಯವ ಬಗಳುವಿರಿ. ಸೋವಿಸಂಗದಿಂದ ಕನಿಷ್ಠ ನರಕ ಕಾಣಿರಣ್ಣಾ. ಸೋವಿಯ ಸಂಗವ ಬಿಟ್ಟು ಧಾರೆಯ ಸ್ತ್ರೀಯಳ ನೆರದರೆ, ಆಚಾರವಿಡಿದು ನಡೆದು ಆಚರಣೆಯ ನುಡಿದರೆ ಶುದ್ಧವಾಗುವದಲ್ಲದೆ ತೊತ್ತಿನ ಮಗನಾಗಿ ಎಡೆಯ ಸಮಗಡಣವ ಬೇಡುವ ಪಾತಕರ, ಅವರ ಜಂಗಮವೆಂಬೆನೆ? ಸೋವಿಯ ಸಂಗದಿಂದ ಬಂದುದು ಬ್ರಹ್ಮೇತಿ. ಅಥರ್ವಣ ಸಾಮವೇದ ಯಜುರ್ವೇದ ಋಗ್ವೇದ ಇಂತಪ್ಪ ನಾಲ್ಕು ವೇದದಲ್ಲಿ ಶ್ರುತಿ ಸ್ಮøತಿಗಳಲ್ಲಿ ಆಗಮ ಪುರಾಣಂಗಳಲ್ಲಿ ಸೋವಿಯ ವಾಚ್ಯವೆಂಬುದುಂಟೆ ಪರಮಪಾತಕರಿರಾ? ನೂತನವ ಗಂಟಿಕ್ಕಿ ಜಗಲಿಯೆನ್ನದೆ ಪಟ್ಟಶಾಲೆಯೆಂಬಿಂ ತೊಂಡರಿರಾ. ತೊತ್ತನೊಯ್ದು ತೊತ್ತೆದಾಸಿ ಬಾಯೆನ್ನದೆ ಹೋವಿಯೆಂದು ಬಗಳುವಿರಿ. ಕಲಿಯುಗದಲ್ಲಿ ನೂತನದ ಸೂಳೆಯ ಮಕ್ಕಳು ನೀವು. ಸೋವಿಯ ಸಂಗವ ಮಾಡಿದವನು ಅರಿವುಳ್ಳ ಪುರುಷನಾದರೂ ಆಗಲಿ, ಅರಿದು ಮತ್ತೆ ಅರೆಮರುಳಾದ ಹಿರಿಯರನೇನೆಂಬೆನಯ್ಯಾ. ಅವನು ಪಾತಕನಘೋರಿಗಳು. ಅವರು ಇವರುವನರಿಯದ ಅಘೋರಿಗಳೆಂಬ ಇಂತಪ್ಪ ಸೋವಿಯ ಸಂಗವ ಮಾಡುವ ಬ್ರಹ್ಮೇತಿಕಾರ ಪಂಚಮಹಾಪಾತಕರು ಇಹಪರಕ್ಕೆ ಸಲ್ಲರೆಂದುದು. ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಇಹವಿಲ್ಲ ಪರವಿಲ್ಲ, ಮುಕ್ತಿಯ ಫಲವಿಲ್ಲ, ಅಘೋರವಲ್ಲದೆ ಮತ್ತೇನೂ ಇಲ್ಲ. ನಿಮ್ಮಾಣೆ ಬ್ಥೀಮಬಂಕೇಶ್ವರಾ.
--------------
ಭೀಮಬಂಕೇಶ್ವರ
ಮರವೆಯ ತಮವ ಕಳೆಯಯ್ಯ. ಅರುಹಿನ ಜ್ಯೋತಿಯ ಬೆಳಗಯ್ಯ. ಅರುಹಿನ ಜ್ಯೋತಿಯ ಬೆಳಗಿ, ನಿಮ್ಮ ಕುರುಹ ಕಂಡು ಕೂಡುವ ತುರ್ಯಾವಸ್ಥೆಯ ಸುಖವನೆ ಕೊಡು ಕಂಡ ಮಹಾಲಿಂಗ ತಂದೆ. ಕೊಡದಿರ್ದಡೆ ನಿನಗೆ ಪ್ರಮಥರಾಣೆ, ಬಸವಣ್ಣನಾಣೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗವು ಜ್ಞಾನಸಂಸಾರಿ, ಜಂಗಮವು ವೈರಾಗ್ಯಸಂಸಾರಿ. ಈ ಸಂಸಾರದ ಸಂದನುರುಹಿ ನಿಃಸಂಸಾರಿಯಾದ ನಿರುಪಮಾನಂದೈಕ್ಯನ ಪದವ ತೋರಿಸಾ ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿಶ್ವನ ಕಾರ್ಯವ ಕೆಡಿಸಿ ಕಂಡಲ್ಲಿ ತೈಜಸನ ಕಾರ್ಯಕಳವಳ ಕಡೆಗಾಯಿತ್ತು. ಪ್ರಾಜÕನ ಪರಿಣಾಮ ನಿಜ ಪರಿಣಾಮದ ನಿಲವು ನಿಜವಾದಲ್ಲಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುತ್ತೈದೆ ಸತ್ಯಕ್ಕಗಳಿರಾ ! ನಿತ್ಯರೆನ್ನ ಮನೆಗೆ ಕರ್ತುವಾಗಿ ಬಂದರೆ ಅರ್ಥವನೀವೆ. ಅವರಿರತಕ್ಕ ಇಚ್ಫೆ ಬಾರದಮುನ್ನ ಎಚ್ಚರವನೀವುತ ಬನ್ನಿರೆ. ಪಂಚವರ್ಣದಾಭರಣವ ನಿಮ್ಮ ಕೈಯಿಂದೆ ಕೊಡಿಸುವೆ, ನಾನಚ್ಚತಗೊಂಬೆ ಎನ್ನ ಬಯಕೆಯನೊಯ್ದೊಪ್ಪಿಸಿ ಅವರ ಸಮರಸಾನಂದವೆನಗಿತ್ತಡೆ ನಿಮ್ಮ ಕೈಯಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಶೆ ಇಚ್ಛೆಗೆನ್ನ ಗಾಸಿ ಮಾಡದಿರಯ್ಯಾ, ದಾಸೋಹಿಯಾಗಿರ್ಪ ದಾಸನಾಗಿರಿಸೆನ್ನ ಕೂಡಲಸಂಗಮದೇವಾ, ನಿಮ್ಮ ಧರ್ಮ.
--------------
ಬಸವಣ್ಣ
ಪರುಷ ಮುಟ್ಟಲು ಕಬ್ಬುನ ಹೊನ್ನಾದಂತೆ ಪುಣ್ಯ ಪಾಪಗಳಿಲ್ಲ, ಸ್ವರ್ಗನರಕಗಳಿಲ್ಲಯ್ಯಾ ನಿಮ್ಮವರಿಗೆ. ಕೂಡಲಚೆನ್ನಸಂಗಾ ನಿಮ್ಮ ಶರಣ[ರು] ಭವರಹಿತರು
--------------
ಚನ್ನಬಸವಣ್ಣ
ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು ! ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು. ರಂಜನೆಗೊಳಗಪ್ಪುದೆ ? _ಆಗರದ ಸಂಚವನರಿಯರು ! ರಂಜಕನೂ ಅಲ್ಲ, ಭುಂಜಕನೂ ಅಲ್ಲ, ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು !
--------------
ಅಲ್ಲಮಪ್ರಭುದೇವರು
ಜಗವನೊಳಕೊಂಡ ಲಿಂಗವು ಸೊಗಸಿಂದೆ ಎನ್ನ ಕರಸ್ಥಲಕ್ಕೆ ಬಂದಿರಲು, ಕಂಡು ಹಗರಣವಾಯಿತ್ತೆನಗೆ. ಗುರುಲಿಂಗಜಂಗಮಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ. ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ ! ಆಹಾ ಅಖಂಡೇಶ್ವರಾ, ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->