ಅಥವಾ

ಒಟ್ಟು 786 ಕಡೆಗಳಲ್ಲಿ , 2 ವಚನಕಾರರು , 786 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ, ಭಾವಕೆ ಸಂಬಂಧವಾಯಿತ್ತು ನೋಡಾ. ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ, ಭಾವಕ್ಕೆ ಬೆರಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ ? ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ, ಜ್ಞಾನಿಗಳೆಂದರಿಯದೆ, ಬಾಯಿಗೆ ಬಂದಂತೆ ನುಡಿವ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರಂಜನಸ್ಥಲದಲ್ಲಿ ನಿರಾವರಣವಾದ ಶರಣನು ನಿರಾಕುಳ ನಿರಾಮಯ ನಿಃಶೂನ್ಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುಲಿಂಗಜಂಗಮವೆಂಬ ತ್ರಿವಿಧಭೇದವನು ಏಕಾಗ್ರದಲ್ಲಿ ನೋಡಿ, ಪರಕೆಪರವನಾಚರಿಸಿ, ನಿರ್ಮುಕ್ತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ. ಆ ಕೋಗಿಲೆಯ ಇರುವೆ ನುಂಗಿ, ಆ ಇರುವೆಯ ನಿರ್ವಯಲು ನುಂಗಿ, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಟಿಲತಟದಲ್ಲಿ ಮಠವ ಮಾಡಿಕೊಂಡು, ಘಟವ ಸಟೆಮಾಡಿ, ದಿಟವ ಪಿಡಿದು ನಟಿಸಿ ನಿರಂಜನಲಿಂಗದಲ್ಲಿ ಘಟೋತ್ತರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮವೆಂಬ ಕತ್ತಲೆಯಲ್ಲಿ ಒಬ್ಬ ಮಾನವನು ವರ್ಮಗೆಟ್ಟು ಬಿದ್ದಿರುವುದ ಕಂಡೆನಯ್ಯ. ಧರ್ಮವೆಂಬ ಗುರುವು ನಿರ್ಮಳವೆಂಬ ಚಬಕ ಹಾಕಲು, ಕರ್ಮವೆಂಬ ಕತ್ತಲೆ ಹರಿದು, ವರ್ಮವೆಂಬ ದಾರಿಯನೇರಿ, ಧರ್ಮವೆಂಬ ಗುರುವ ಕೂಡಿ ನಿರವಯವೆಂಬ ಕರಸ್ಥಲದಲ್ಲಿ ನಿಂದಿರುವ ಬೆಡಗ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು, ಬಹಿರಂಗದಲ್ಲಿ ಹಳಿದಾಡುವರೇನಯ್ಯ ? ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು ಅಂತರಂಗದಲ್ಲಿ ಹಳಿದಾಡುವರೇನಯ್ಯ ? ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಇಷ್ಟಲಿಂಗಕ್ಕೆ ಅರ್ಪಿಸಿ, ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ. ಅಂತರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ. ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತ ಮಹೇಶ್ವರರು ಆರಾದರೂ ಆಗಲಿ ಶಿವಗಣಂಗಳಲ್ಲಿ ಕುಲವನರಸಿದರೆ ಅವರು ಕುಲಸೂತಕರೆಂದು ಶಿವನು ಯಮನ ಕೈಯಲ್ಲಿ ಕೊಟ್ಟು ಅಘೋರ ನರಕದೊಳು ಹಾಕೆಂದನು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು ಕಂಡಕಂಡವರ ಹಾಸ್ಯ ಮಾಡುತಿಪ್ಪ ನೋಡಾ. ಇದು ಕಾರಣ ಹೆತ್ತ ತಾಯ ಶಿಶುವು ನುಂಗಿ ಆ ಭಾಷೆಗಳ್ಳನ ಕೊಂದು, ದೇಶಕ್ಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತುಮಥನಗಳಿಲ್ಲದೆ, ಜಾತಿಸೂತಕವಿಲ್ಲದೆ, ಶಿವಾತ್ಮಜ್ಞಾನದಿಂದ ಪಂಚಮುಖವನರಿತು ಪರಬ್ರಹ್ಮಲಿಂಗವನಾಚರಿಸಿ, ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ ಮಹಾಲಿಂಗದ ಧ್ಯಾನವಂ ಮಾಡಿ, ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಗ್ನಿಗಿರಿಯ ಪಟ್ಟಣದ ಚಂದ್ರಗಿರಿಯ ಪಟ್ಟಣದ ನಡುವೆ ಎರಡೆಸಳ ಸ್ಥಾವರ ಗದ್ದುಗೆಯ ಕಂಡೆನಯ್ಯ. ಆ ಗದ್ದುಗೆಯ ಮೇಲೆ ಸ್ಫಟಿಕವರ್ಣದ ಮೂರ್ತಿ ನೆಲೆಯಂಗೊಂಡಿರ್ಪನು ನೋಡಾ. ಆ ಸ್ಫಟಿಕವರ್ಣದಮೂರ್ತಿಯ ಕೂಡಿ ಅಗ್ನಿಗಿರಿಯ ಪಟ್ಟಣಮಂ ಹೊಗಲು, ಅಲ್ಲಿ ಆಚಾರಲಿಂಗದೇವರು, ಗುರುಲಿಂಗದೇವರು, ಶಿವಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಗೆ ಸೂಚನೆಯ ಮುಟ್ಟಿಸಲು ಆಚಾರಲಿಂಗದೇವರು ನಾಶಿಕಾಗ್ರದಲ್ಲಿ ನೆಲೆಯಂಗೊಂಡರು. ಗುರುಲಿಂಗದೇವರು ಜಿಹ್ವಾಗ್ರದಲ್ಲಿ ನೆಲೆಯಂಗೊಂಡರು. ಶಿವಲಿಂಗದೇವರು ನೇತ್ರಸ್ವಯದಲ್ಲಿ ನೆಲೆಯಂಗೊಂಡರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ ಚಂದ್ರಗಿರಿಯ ಪಟ್ಟಣಮಂ ಪೊಗಲು ಅಲ್ಲಿ ಜಂಗಮಲಿಂಗದೇವರು, ಪ್ರಸಾದಲಿಂಗದೇವರು, ಮಹಾಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಂಗೆ ಸೂಚನೆಯಂ ಮುಟ್ಟಿಸಲು, ಜಂಗಮಲಿಂಗದೇವರು ತ್ವಕ್ಕಿನ ಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಪ್ರಸಾದಲಿಂಗದೇವರು ಶ್ರೋತ್ರಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಮಹಾಲಿಂಗದೇವರು ಭಾವಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ, ಅಗ್ನಿಗಿರಿಯಪಟ್ಟಣ ಚಂದ್ರಗಿರಿಯ ಪಟ್ಟಣದ ಮುಂದಳ ದಿಕ್ಕಿನಲ್ಲಿ ಸಾವಿರೆಸಳಮಂಟಪ ಕಂಡೆನಯ್ಯ. ಆ ಮಂಟಪದೊಳಗೆ ಮಹಾಜ್ಞಾನಪ್ರಕಾಶವು ಹೊಳೆವುತಿರ್ಪುದು ನೋಡಾ. ಆ ಬೆಳಗಿನೊಳು ಕೂಡಿ ತಾನುತಾನಾಗಿರ್ಪನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.
--------------
ಜಕ್ಕಣಯ್ಯ
ಇನ್ನಷ್ಟು ... -->