ಅಥವಾ

ಒಟ್ಟು 857 ಕಡೆಗಳಲ್ಲಿ , 20 ವಚನಕಾರರು , 855 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುವ ಹಿಡಿದು, ದಂಡವ ಕೊಂಡು, ಸಾವರ ಹಿಡಿದು, ಸಂಕಲೆಯನಿಕ್ಕಿ, ಈ ವಿದ್ಥಿಯಲ್ಲಿ ಸಯಸಗೊಳ್ಳದೆ, ಭಾವವಾಡಿದಂತೆ ಭ್ರಮೆಗೊಳಗಾಗದೆ, ಮತ್ತಿವನೇನನೂ ಎನ್ನದಿರ್ಪುದೆ, ಸರ್ವಜ್ಞಾನದೊಳಗು. ಆ ನಿಜವಸ್ತು, ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯ, ನಿರಾಲಂಬ ನಿಃಕಳಂಕ ನಿಃಪ್ರಪಂಚತ್ವದಿಂದ ನಾಲ್ವತ್ತೆಂಟು ಪ್ರಣಮಸ್ಮರಣೆಯಿಂದ ಏಕಾದಶಲಿಂಗಂಗಳಿಗೆ ಏಕಾದಶಪ್ರಸಾದವ ಸಮರ್ಪಿಸಿ, ತಾನಾ ಸಂತೃಪ್ತಿಮಹಾಪ್ರಸಾದದಲ್ಲಿ ಲೋಲುಪ್ತನಾದಡೆ ನಿಜಪ್ರಸಾದಿಯೆಂಬೆ ನೋಡ. ಅದರ ವಿಚಾರವೆಂತೆಂದಡೆ : ನಾಲ್ವತ್ತೆಂಟು ಪ್ರಣವದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಆಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದವ ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ ಸುಚಿತ್ತ, ಸುಬುದ್ಧಿ, ನಿರುಪಾದ್ಥಿಕಹಸ್ತದಿಂದ ಸಮರ್ಪಿಸಿ, ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ ಅನಾದಿನಿಃಕಳಂಕ ಗುರುಬಸವರಾಜನೆಂಬೆ ನೋಡ. ಛತ್ತೀಶಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಪಂಚೇಂದ್ರಿಯವಿರಹಿತಪ್ರಸಾದ, ಕರಣಚತುಷ್ಟಯವಿರಹಿತಪ್ರಸಾದ, ಲಿಂಗಪ್ರಸಾದವ ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ ನಿರಹಂಕಾರ, ಸುಮನ, ನಿರಾಲಂಬಹಸ್ತದಿಂದ ಸಮರ್ಪಿಸಿ, ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ ಅನಾದಿ ನಿಃಕಾಮ ಶೂನ್ಯಲಿಂಗಸ್ವರೂಪ ಚೆನ್ನಬಸವರಾಜನೆಂಬೆ ನೋಡ ! ಇಪ್ಪತ್ತುನಾಲ್ಕು ಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಸಮತಾಪ್ರಸಾದ-ಪ್ರಸಾದಿಯಪ್ರಸಾದ-ಜಂಗಮಪ್ರಸಾದವ ಪ್ರಸಾದಲಿಂಗ-ಮಹಾಲಿಂಗ-ಭಾವಲಿಂಗದೇವಂಗೆ ಸುಜಾÕನ, ಸದ್ಭಾವ, ನಿಃಪ್ರಪಂಚಹಸ್ತದಿಂದ ಸಮರ್ಪಿಸಿ, ಆ ಪರಿಣಾಮಲೋಲುಪ್ತಿಯಲ್ಲಿ ತಾನಾದಡೆ ಅನಾದಿ ನಿರಂಜನ ಜಂಗಮ ಸ್ವರೂಪ ಪ್ರಭುದೇವರೆಂಬೆ ನೋಡ. ಇನ್ನು ಉಳಿದ ದ್ವಾದಶಪ್ರಣಮಸ್ಮರಣೆಯಿಂದ ಸದ್ಭಾವಪ್ರಸಾದ-ಜಾÕನಪ್ರಸಾದವ ಇಂತು ನವಲಿಂಗಪ್ರಸಾದ ಪಾದೋದಕಂಗಳ ಸಂತೃಪ್ತಿಯಲ್ಲಿ ಸಾಕಾರ ನಿರಾಕಾರನಾದ ಪರತತ್ವಜ್ಯೋತಿರ್ಮಯಲಿಂಗದೇವಂಗೆ ನಿಜಾನಂದಹಸ್ತದಿಂದ ಸಮರ್ಪಿಸಿ, ಮತ್ತಾ ಅನಾದಿಕುಳಸನ್ಮತನಾದ ದಶವಿಧಪಾದೋದಕ, ಏಕಾದಶಪ್ರಸಾದದಲ್ಲಿ ಕೂಡಿ, ಘನಸಾರದಂತಾದಡೆ ಅನಾದಿಪೂರ್ಣಮಯ ನಿಜವಸ್ತು ತಾನೆ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ವಾರಿದ್ಥಿಯ ಹೊಯ್ದು ಬೇರ್ಪಡಿಸಬಹುದೆ ? ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ? ಮಹಾಘನವನರಿವುದಕ್ಕೆ ಮೊದಲೆ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ? ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ? ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರಾಡಿದಂತಾಡದಿರ್ದಡೆ ದೂರಿಹರೆನ್ನನು. ನಾಡಾಡಿದಂತಾಡದಿರ್ದಡೆ ಬೈದಹರೆನ್ನನು. ಕೆಸರೊಳಗೆ ಮುಳುಗಿ ಹೊಸಸೀರೆಯೆಂದಡೆ, ಅದರ [ಪಾಶ] ಕುಸುಕಿರಿ [ಯದೆ] ಮಾಣ್ಬುದೆ? ಈ ದೂಷಣೆ ಇನ್ನೇಸು ಕಾಲ? ಭವಪಾಶರಹಿತ ಓಸರಿಸುವಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ ಎಂಬರು, ಅದು ಹುಸಿ, ನಿಲ್ಲು. ಇಹದಲ್ಲಿ ದುಃಖಿ, ಪರದಲ್ಲಿ ಪ್ರಕೃತಿಯೆಂದೆ. ಇಂತೀ ಇಹಪರವೆಂಬೆರಡು. ಲಕ್ಷ್ಮಿಯ ಮನೆಯ ತೊತ್ತಿನ ತೊತ್ತಾದವರಿಗೆ ಇನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಲಮಣಿಯ ಬೆಗಡವನಿಕ್ಕಬಹುದೆ ? ಬಯಲ ಬಂದ್ಥಿಸಬಹುದೆ ? ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ? ಇದು ಸುಲಲಿತ, ಇದರ ಒಲುಮೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ, ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ. ಮತ್ರ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿಪ್ಪುದು. ಹಿಂದೆ ನಿನ್ನಂತೆ ನಾ ಬಂದು ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದ, ನಾ ತಂದ ಪದಾರ್ಥವೆಲ್ಲವ ನಿಮಗಿತ್ತೆ. ನಾನಿನ್ನಂಜುವೆ ಗುರುಲಿಂಗಜಂಗಮದಲ್ಲಿ ಪ್ರತ್ಯುತ್ತರಕ್ಕೆ. ಎನಗೆ ಮತ್ರ್ಯದ ಮಣಿಹ, ಕೃತ್ಯವಿನ್ನೆಷ್ಟು ದಿನ ಹೇಳಾ. ಅಂದು ನೀವು ಕೊಟ್ಟ ಒಪ್ಪದ ಚೀಟನೊಪ್ಪಿಸಿದೆ. ಮತ್ತೆ ಇನ್ನು ಸಂದೇಹವೆ, ಹೇಳಾ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ವಸ್ತುವ. ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು. ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ ? ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು, ಹೊಡೆವಡೆ ಕೈಯೊಳಗಲ್ಲ. ಇದರ ಕೂಟದ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ. ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ, ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ, ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ, ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ? ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ, ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ? ಇವರೆಲ್ಲರನೊಲ್ಲೆನೆಂದೆ, ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲಪ್ರಪಂಚು. ಈ ಮೂರರೊಳಗೆ ಒಂದ ಬಿಟ್ಟೊಂದ ಹಿಡಿದೆಹೆನೆಂದಡೆ, ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀರ ನೆಳಲ ಮಧ್ಯದಲ್ಲಿ ಹಾರುವ ಭ್ರಮರನ ಗರಿಯ ಗಾಳಿಯಲ್ಲಿ ಮೂರುಲೋಕವೆಲ್ಲ ತಲೆಕೆಳಗಾದುದ ಕಂಡೆ. ನೀರನೆಳಲಂ ಕಡಿದು ಹಾರುವ ಭ್ರಮರನ ಗರಿಯ ಮುರಿದಲ್ಲದೆ ನಿರ್ಮನ ನಿರ್ಮಳ ನಿಶ್ಚಿಂತ ನಿಃಶಂಕ ನಿಃಕಳಂಕ ಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ನಾನೆಲ್ಲವನರಿದೆನೆಂದು ಸೊಲ್ಲು ಸೊಲ್ಲಿಗೆ ಹೋರಲೇಕೆ ? ನಾನೆಲ್ಲವ ಕಳೆದುಳಿದೆನೆಂದು ಅಲ್ಲಲ್ಲಿಗೆ ಹೊಕ್ಕು, ಬಲ್ಲೆನೆಂದು ಕಲ್ಲಿಗೆ ಸನ್ನೆಯ ಕೊಡುವನಲ್ಲಿರುವನಂತೆ, ಇಂತಿವರ ಬಲ್ಲತನ ಬರುಸೂರೆಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀರು ಪ್ರಳಯವಾದಲ್ಲಿ ತೋಡಲುಂಟೆ ಬಾವಿಯ ? ಆರನರಿತು, ಮೂರ ತಿಳಿದು, ಬೇರೊಂದು ಇದೆಯೆಂದು ಲಕ್ಷಿಸಿದಲ್ಲಿ, ಆ ಲಕ್ಷ ನಿರ್ಲಕ್ಷ್ಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->