ಅಥವಾ

ಒಟ್ಟು 426 ಕಡೆಗಳಲ್ಲಿ , 83 ವಚನಕಾರರು , 384 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಸಚ್ಚಿದಾನಂದಸ್ವರೂಪವಾದ, ವಾಙ್ಮನಕ್ಕಗೋಚರವಾದ, ಜ್ಞಾನಕ್ರೀಯನೊಳಕೊಂಡು ನಿಂದ ಜಂಗಮವೆ ಅಂಗ ಪ್ರಾಣವಾದ, ಶರಣರನೊಳಕೊಂಡು ಚಿದ್ಘನದೊಳಗೆ ಅವಿರಳೈಕ್ಯವಾದ ಎನ್ನ ಅಜಗಣ್ಣತಂದೆಯನರಿದು ಶರಣೆಂಬಾತ ನೀನಾರು ಹೇಳಯ್ಯಾ ? || 31 ||
--------------
ಮುಕ್ತಾಯಕ್ಕ
ಪರಮಗುರು ಲಿಂಗಜಂಗಮವ ನಿಜವಿಶ್ವಾಸ ನೈಷ್ಠೆಯೊಳ್ ಮೂರ್ತಿಗೊಳಿಸಿ ಅರ್ಚಿಸುವ ಸುಚಿತ್ತಕಮಲದಳಂಗಳೆಲ್ಲ ಒಂದೊಡಲಾಗಿ, ಭಕ್ತನ ಕರಕಮಲ, ಜಂಗಮದ ಚರಣಕಮಲ, ಈ ನಾಲ್ಕರಲ್ಲಿ ಸಂಬಂಧವಾದ ಪ್ರಣಮದೊಳ್ ಕೂಡಿದ ನೇತ್ರಕಮಲ ಒಂದಾದ, ಸಮರಸೈಕ್ಯವಾಗಿ ಕೂಡಿದ ತ್ರಿಕೂಟಸಂಗಮಸ್ಥಾನವಿದೆ. ಅಷ್ಟಾಷಷ್ಟಿವರಕೋಟಿ ತೀರ್ಥಸ್ಥಾನವಿದೆ. ದೇವಗಂಗೆ ನೀಲಗಂಗೆ ಶಿವಗಂಗಾ ಸರಸ್ವತಿ ಯಮುನಾಸ್ಥಾನವಿದೆ. ಚಿತ್ಸೂರ್ಯ ಚಂದ್ರಾಗ್ನಿಮಂಡಲವಿದೆ. ಜ್ಯೋತಿರ್ಮಂಡಲ ಅಖಂಡಜ್ಯೋತಿರ್ಮಂಡಲ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲ ಸ್ಥಾನವಿದೆ. ರೋಷವೆಂಬ ಕಾಲರತಿಕ್ರೀಡಾಭ್ರಾಂತೆಂಬ ಕಾಮ ಆಸೆ ಆಮಿಷ ಲೋಭ ಮೋಹ ಮದ ಮತ್ಸರವೆಂಬ ಮಾಯಾ ಸಂಸಾರಸಂಕಲ್ಪ ವಿಕಲ್ಪಂಗಳ ಹಿಂದುಳಿದು, ಆದ್ಯರು ಭೇದ್ಯರು ವೇದ್ಯರು ಸಾಧ್ಯರುಯೆಂದವತರಿಸಿ, ಜಿಹ್ವಾತುರ ಗುಹ್ಯಾತುರ ಅರ್ಥಾತುರ ತ್ಯಾಗಾತುರ ಭೋಗಾತುರ ಯೋಗಾತುರ ಕಡೆಯಾದ ಅನಂತ ಆತುರಗಳೆಂಬ ಷಡಿಂದ್ರೀಕರಣ ವಿಷಯವ್ಯಾಪಾರಂಗಳ ಜೊಳ್ಳುಮಾಡಿ ತೂರಿ, ಜಗದಾದಿ ಗಟ್ಟಿಬೀಜವಾಗಿ, ನಿಂದ ನಿಲುಕಡೆಯ ಉಳಿದ ಉಳುವೆಯ ಮಹಾಘನದುನ್ಮನಿಸ್ಥಾನವಿದೆ. ಎನ್ನ ಭಕ್ತಿ-ಜಾÕನ-ವೈರಾಗ್ಯ-ಕ್ರಿಯಾಚಾರ ಸತ್ಯಶುದ್ಧ ನಿಜನಡೆನುಡಿಗಳ ಕರುಣಿಸಿ, ಅಂಗ-ಮನ-ಪ್ರಾಣ-ಭಾವ-ಕರಣೇಂದ್ರಿಗಳ ಪಾವನವೆನಿಸಿ ಸಲಹಿದ ಪರಮಾಮೃತಸುಧೆಯಿದೆ. ಭಕ್ತಸ್ಥಲ ವಿರಕ್ತಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ನಿಃಕಳಂಕಸ್ಥಲ ನಿರ್ಮಾಯಸ್ಥಲ ನಿರಾಲಂಬಸ್ಥಲ ನಿಃಪ್ರಪಂಚಸ್ಥಲ ನಿಜಾನಂದಸ್ಥಲ ನಿರೂಪಾದ್ಥಿಕಸ್ಥಲ ನಿರ್ನಾಮಕಸ್ಥಲ ನಿರ್ಗುಣಸ್ಥಲ ಸಗುಣಸ್ಥಲ ನಿತ್ಯತೃಪ್ತಸ್ಥಲ ಕಾಯಾರ್ಪಣಸ್ಥಲ ಕರಣಾರ್ಪಣಸ್ಥಲ ಭಾವಾರ್ಪಣಸ್ಥಲ ಪರಿಪೂರ್ಣಾರ್ಪಣಸ್ಥಲ ನಿರವಯಸ್ಥಲವೆ ಕಡೆಯಾದ ಏಕವಿಂಶತಿ ದೀಕ್ಷಾನುಭಾವ ಏಕವಿಂಶತಿ ಯುಗಂಗಳನೊಳಗೊಂಡು ಅಣುವಿಂಗೆ ಪರಮಾಣುವಾಗಿ, ಮಹತ್ತಿಂಗೆ ಘನಮಹತ್ತಾಗಿ, ಸೃಷ್ಟಿ ಸ್ಥಿತಿಲಯಂಗಳಿಗೆ ಕಾರಣಾರ್ಥ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಪರಮಾನಂದ ಪಂಚಪರುಷದ ಖಣಿಯಿದೆಯೆಂದು ಪೂರ್ಣಾನುಭಾವಭರಿತವಾದ ನಿರ್ದೇಹಿಗಳೆ ನಿರವಯಪ್ರಭು ಮಹಾಂತಘನವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಗುರುವೆಂದರಿಯರು, ಹಿರಿಯರೆಂದರಿಯರು; ದೇವರೆಂದರಿಯರು, ಭಕ್ತರೆಂದರಿಯರು. ಲಿಂಗವೆಂದರಿಯರು, ಜಂಗಮವೆಂದರಿಯರು; ಬಂದ ಬರವನರಿಯರು ನಿಂದ ನಿಲವನರಿಯರು. ಶಿವಶರಣರ ನೋಯಿಸುವ ಪಾತಕರನೇನೆಂಬೆ ? ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು.
--------------
ಅಲ್ಲಮಪ್ರಭುದೇವರು
ಕಾಮನ ಕೊಂದು ಪಟ್ಟಕ್ಕೆ ನಿಂದ ಕಾಮರಾಜರಾಜನು, ರಾಜಾದ್ಥಿರಾಜನು. ಗಂಡರನೆಲ್ಲರ ಹೆಂಡಿರ ಮಾಡಿ ನೆರೆವ ವೈಶಿಕ, ಕಾಮಿನೀ ಕೇಳಾ, ಇಂತಪ್ಪ ಕಾಮಿ ಎನಗತಿ ಕಾಮಿಸಿ ನೆರೆದು ಕಾಮಸಿದ್ಧಿಯನೀವನು ಉರಿಲಿಂಗದೇವನು.
--------------
ಉರಿಲಿಂಗದೇವ
ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ ಕೈದೇನ ಮಾಡುವುದು ? ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ ವಿಷವೇನ ಮಾಡುವುದು ? ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆ ಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ ?
--------------
ರಾಯಸದ ಮಂಚಣ್ಣ
ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ಅರ್ಪಿತದಲ್ಲಿ ಅವಧಾನವರತು, ಅನರ್ಪಿತದಲ್ಲಿ (ಅರ್ಪಿತದಲ್ಲಿ?) ಸುಯಿಧಾನವರತು. ಬಂದುದು ಬಾರದುದೆಂದರಿಯದೆ, ನಿಂದ ನಿಲವಿನ ಪರಿಣಾಮತೆಯಾಯಿತ್ತು. ರುಚಿ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ ಆದೌ ಪ್ರವರ್ತತೇ ಯಸ್ಯ ಶಿವೇನ ಸಹಮೋದತೇ ಎಂಬುದಾಗಿ, ಕೂಡಲಚೆನ್ನಸಂಗಯ್ಯಾ. ನಿಮ್ಮವರು ಶಿವಸುಖಸಂಪನ್ನರಾದರಯ್ಯಾ.
--------------
ಚನ್ನಬಸವಣ್ಣ
ಅರ್ಚಿಸಿ ಪೂಜಿಸುವುದಕ್ಕೆ ಅಂಗವಾಗಿ, ಮನ ನೆನೆವುದಕ್ಕೆ ಘನತರವಾಗಿ, ಪೂಜಿಸುವುದಕ್ಕೆ ಪುಣ್ಯಮೂರ್ತಿಯಾಗಿ, ಭಾವ ನೆನೆವುದಕ್ಕೆ ಭವಗೇಡಿಯಾಗಿ, ಉಭಯದಂಗವ ತಾಳಿ ನಿಂದ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಅಟ್ಟುದನಡಲುಂಟೆ ? ಸುಟ್ಟುದ ಸುಡಲುಂಟೆ ? ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ? ಅದೆಂತೆಂದಡೆ: ``ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ '' ಎಂದುದಾಗಿ_ ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ, ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ.
--------------
ಅಲ್ಲಮಪ್ರಭುದೇವರು
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ ನಿಂದ ಇಂಗಡಲಿನ ಅಡಿಯ ಕಂಡವರುಂಟೆ? ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ? ಅದು ಸರಿಹರಿದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 99 ||
--------------
ದಾಸೋಹದ ಸಂಗಣ್ಣ
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಇಂದುಧರ ನಿಂದ ನಿಲುಗಡೆಯ ಕಂಡು ಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟು ಶಿವಗಣರ ಶಿವಾಚಾರರ ಶಿವನಿಷ್ಠೆಯುಳ್ಳವರ ಕೂಡೆ ಕೆಣಕಿ ನಿಲುಗಡೆಯ ಕಾಣದೆ ಮಂದದೈತ್ಯರು ತಮ್ಮ ತಮ್ಮ ಸತ್ವದಿಂದ ಹೊರವಂಟು ಸೆಣಸಿ ಮಡಿದರು ಕಾಣಾ ಕುವರ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ತನ್ನನರಿದು ಹಿಡಿದು ಬಂದ ಶರಣ ಎಂಟರಲ್ಲಿ ನಿಂದು, ಏಳರಲ್ಲಿ ನಡೆದು, ಒಂದರಲ್ಲಿ ನಿಂದು, ಎಂಟರಲ್ಲಿ ನಡೆದು, ಒಂದರಲ್ಲಿ ನಿಂದು, ಆರರಲ್ಲಿ ನಡೆದು, ಒಂದರಲ್ಲಿ ನಿಂದು, ನಾಲ್ಕರಲ್ಲಿ ನಡೆದು, ಒಂದರಲ್ಲಿ ನಿಂದು ಮೂರರಲ್ಲಿ ನಡೆದು ಒಂದರಲ್ಲಿ ನಿಂದು, ಮೂರರಲ್ಲಿ ನಡೆದುಡುಗಿದ ಮತ್ತೆ ಒಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೊಂಬತ್ತರಲ್ಲಿ ತನುಮನಭಾವವೆರೆದು ಬಂದು, ಮತ್ತೆ ಮೂರರಲ್ಲಿ ತನುಮನಭಾವವೆರೆದು ನಿಂದ ಮಹಿಮಂಗೆ ಗುರುನಿರಂಜನ ಚನ್ನಬಸವಲಿಂಗ ಕರತಳಾಮಳಕ ಕಡೆಗಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->