ಅಥವಾ

ಒಟ್ಟು 16 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ ಮಹಾಲಿಂಗದ ಧ್ಯಾನವಂ ಮಾಡಿ, ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ವೇದಾಂತವಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ಸಿದ್ಧಾಂತವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲವ ಬಲ್ಲಾತನೆ ವೇದ ಶಾಸ್ತ್ರ ಪುರಾಣ ಆಗಮವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಧ್ಯಾನವ ಧ್ಯಾನಿಸಲರಿಯದೆ ವೇದಾಗಮವನೋದುತ್ತಿದ್ದೆವೆಂಬ ಪಿಸುಣರ ಓದೆಲ್ಲ ಕುಂಬಿಯ ಮೇಲೆ ಕುಳಿತು ಒದರುವ ವಾಯಸನಸರಿಯೆಂಬೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ದೇವ ದಾನವ ಮಾನವ ಋಷಿಜಂಗಳೆಲ್ಲರನು ಮಹಾಲಿಂಗವ ಕಂಡೆಹೆವೆಂದು ಅನೇಕಕಾಲಂಗಳಲ್ಲಿ ತಪವ ಮಾಡಿ, ಧ್ಯಾನವ ಮಾಡಿ, ಜಪವ ಮಾಡಿಯೂ ಕಾಣಲರಿಯದೆ ಬಳಲುತ್ತೈದಾರೆ. ಅವರಲ್ಲಿ ಸಮರ್ಥಪುರುಷರು ಕಂಡಡೆಯೂ ಕಂಡರೇನು ಫಲ? ಲಿಂಗಕ್ಕೆ ಒಲಿಯರು, ಲಿಂಗವನೊಲಿಸಿಕೊಳಲರಿಯರು, ಕೂಡಲರಿಯರು. ಅಲ್ಪಭೋಗಂಗಳನಿಚ್ಛೈಸಿ, ಆ ಭೋಗಪದವ ಪಡೆದು, ಪುಣ್ಯಪಾಪಂಗಳ ಬಲೆಯೊಳು ಬೀಳುತ್ತಿಹರು. ಅವರುಗಳ ಪರಿಯಿಲ್ಲ, ಎನಗೆ. ಶಿವ ಶಿವಾ ಮಹಾದೇವ, ಮಹಾಲಿಂಗನ ಕರುಣವನು ಏನೆಂದುಪಮಿಸಬಹುದು ಶ್ರೀಗುರುವಾಗಿ ಕರುಣಿಸಿ ಶ್ರೀಹಸ್ತದಿಂದೆನಗೆ ಜನನವ ಮಾಡಿ ಮಾತಾಪಿತನು ತಾನೆಯಾದನು. ಮಹಾದೀಕ್ಷೆಯ ಮಾಡಿ ಶ್ರೀಗುರು ತಾನೆಯಾದನು. ಮಹಾಮಂತ್ರೋಪದೇಶವ ಮಾಡಿ ಮಂತ್ರರೂಪಾಗಿ ಕರ್ಣದಲ್ಲಿ ಭರಿತವಾದನು, ಪ್ರಸಾದರೂಪಾಗಿ ಜಿಹ್ವೆಯಲ್ಲಿ ಭರಿತವಾದನು, ಮಹಾವಿಭೂತಿಯಾಗಿ ಬಾಳದಲ್ಲಿ ಭರಿತವಾದನು, ಸರ್ವಾಂಗಭರಿತವಾದನು. ಮತ್ತೆ ಮತ್ತೆ ಮಹಾಚೋದ್ಯ, ಶ್ರೀಗುರು ಲಿಂಗಮೂರ್ತಿಯನು ಪ್ರಾಣವನೇಕೀಭವಿಸಿ ಪ್ರಾಣಲಿಂಗವಾದನಾಗಿ ಅಂಗದ ಮೇಲೆ ಬಿಜಯಂಗೈದು ಅಂಗಲಿಂಗವಾದನು. ಮಹಾಲಿಂಗವಾಗಿ ಕರಸ್ಥಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದನು, ಇದೂ ವಿದಿತ. ಸುಜ್ಞಾನವನೂ ಪ್ರಸಾದವನೂ ಕರುಣಿಸಲೆಂದು ಶರಣಭರಿತನಾಗಿ ಬಂದು ಕರುಣಿಸಿದನು. ಇಂತು, ಶ್ರೀಗುರು ಲಿಂಗಜಂಗಮರೂಪಾಗಿ ಕರುಣಿಸಿ, ಪ್ರಸನ್ನನಾಗಿ ಮಹಾಪ್ರಸಾದವ ಕರುಣಿಸಿ, ಪ್ರಸಾದರೂಪವಾಗಿ ಸಲುಹಿದನು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಚತುರ್ವಿಧಪದಕ್ಕೆ ಘನಪದದಾಸೋಹದಲ್ಲಿರಿಸಿದನು. ಸರ್ವಪದ ಮಹಾಪದಕ್ಕೆ ವಿಶೇಷ ಲಿಂಗಪದದಲ್ಲಿರಿಸಿದೆನು. ಶಿವ ಶಿವಾ ಮಹಾಪದವ ನಾನೇನೆಂದುಪಮಿಸಲರಿಯೆ. ಸದ್ಗುರುಕೃಪೆ, ವಾಙ್ಮನೋತೀತ. ಮಹಾಘನಪರಿಣಾಮಸುಖವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ತಾನೆ ಬಲ್ಲ.
--------------
ಉರಿಲಿಂಗಪೆದ್ದಿ
ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ ಸ್ಥಿರ ಚರ ಪ್ರಾಣಿಗಳ ಲಯವ ನೋಡಿ ಚಿಂತೆಯೊಳಗಾಗಿ, ಕಂತುಹರನ ಧ್ಯಾನವ ಮಾಡಲು, ಆ ಹರ ಗುರುರೂಪವ ತಾಳ್ದು ಬಂದು, ತನ್ನ ಚಿಂತಿಸಿದ ಸುಜ್ಞಾನಿಗಳಿಗೆ, ಮನವನೊಬ್ಬುಳಿಗೊಳಿಸುವುದಕ್ಕೆ ಕಾರಣವೆಂದು ಹೇಳಿದ ಷಣ್ಮುಖ, ಶಾಂಭವಿ, ಖೇಚರಿ, ಭೂಚರಿ, ಸಾಚರಿ, ಕುರಂಗ, ಪಾಲೋತಕ, ಹಠ, ಲಯ, ಲಂಬಿಕ, ಮೊದಲಾದ ಅನಂತ ಮುದ್ರೆಗಳ ಸಾಧಿಸಿ, ಆ ಮುದ್ರೆ ಸಾಧನದಲ್ಲಿ ಕಂಡ, ಮಾಯ, ಛಾಯ, ಅಭ್ರಛಾಯ, ಪುರುಷಛಾಯ, ಮಿಂಚಿನ ಛಾಯ, ಬಳ್ಳಿಮಿರುಪಿನ ಛಾಯ, ಆರು ವರ್ಣದ ಛಾಯ, ಮೃತ್ಯುವಿನ ಛಾಯ, ಜೀವ ಜಪ ಮರಣ ಚಿನ್ನ ಕನಸಸಂಭ್ರಮ, ಕುಂಡಲಿನೋಟ, ಘೋಷಲಂಪಟ, ಮಾನಸಪೂಜೆ, ಬೈಲವಾಣಿ, ಪಶ್ಚಿಮಕೋಣೆ, ಆತ್ಮಭೆಟ್ಟಿ, ಮಂತ್ರಪಾಠ, ಒಳಬೆಳಗು, ಹೊರಬೆಳಗು ಪರಿಪರಿಯ ಬೆರಗುಗಳ ತಿಳಿದು, ಇದೇ ನಿಜಬ್ರಹ್ಮವೆಂದು ಹೆಮ್ಮೆ ೈಸಿ, ಆಸೆವೊಡಿಯದೆ, ಕ್ಲೇಶ ಕಡಿಯದೆ, ಘಾಶಿಯಾಗಿ ಹೇಸಕಿಯೊಳಗೆ ಮುಳಿಗಿ ಮುಂದುಗಾಣದೇ ಹೋದರು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಪರಮನ ಕಂಡೆನಯ್ಯ. ಊರೊಳಗಣ ನಾರಿ ಆರು ಸೋಪಾನಂಗಳನೇರಿ, ಮೂರು ಬಾಗಿಲ ಪೊಕ್ಕು, ಆ ಪರಮನ ಧ್ಯಾನವ ಮಾಡುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ? ನೀನು ಬಹಿರಂಗವ್ಯವಹಾರದೂರಸ್ಥನು. ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ? ನೀನು ವಾಙ್ಮನಕ್ಕತೀತನು. ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ? ನೀನು ನಾದಾತೀತನು. ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ? ನೀನು ಮತಿಗತೀತನು. ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ? ನೀನು ಸರ್ವಾಂಗ ಪರಿಪೂರ್ಣನು. ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಅಕ್ಕಮಹಾದೇವಿ
ಶರಣ ತನ್ನ ಪ್ರಾಣಲಿಂಗಪೂಜೆಯ ಮಾಡುವಲ್ಲಿ ತನು ಮನ ಪ್ರಾಣ ನಷ್ಟವಾಗಲೆಂದು ಕಷ್ಟಬಟ್ಟವನಲ್ಲ. ಇಂದ್ರಿಯವಿಷಯನಳಿಯಬೇಕೆಂದು ಕಳೆಗುಂದಿ ಬಳಲುವನಲ್ಲ. ವಾಗ್ಜಾಲವುಡುಗಲೆಂದು, ದುರ್ಭೂತಪ್ರವೇಶ ಮೌನಿಯಲ್ಲ. ಕಣ್ಣು ಮುಚ್ಚಿ ಧ್ಯಾನವ ಮಾಡುವನಲ್ಲ. ಸಂಕಲ್ಪ ಕಳವಳವ ಕಳೆದುಳಿದ ನಿಃಸಂಕಲ್ಪ ನಿರ್ವಾಣಿ ನೋಡಾ. ಸತ್ಕ್ರಿಯಾ ಸುಜ್ಞಾನ ಸಮರಸಪ್ರಕಾಶ ಪರಿಪೂರ್ಣ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಶಕ್ತಿ ಶಾಂತಿಯೆನಲು ಪರಶಿವಶಕ್ತಿಯ ನಾಮವೀಗ. ನಾದ ಬಿಂದು ಕಳೆ ಕಳಾನ್ವಿತ ಈ ನಾಲ್ಕು ನಿಃಕಲತತ್ವಯೋಗಿಗಳ ಧ್ಯಾನ, ಭಕ್ತರ ಪೂಜೆ, ವೇದಾಗಮಂಗಳ ಶ್ರುತಕ್ಕೆ ಅತೀತವಾಗಿ, ವಾಙ್ಮನಾತೀತವಾಗಿ, ಆ ವಾಙ್ಮನಕ್ಕಗೋಚರವಾದ ನಿಃಕಲತತ್ವವೇ ಸಕಲ ನಿಃಕಲವಾಗಿ ತೋರಿತ್ತದೆಂತೆಂದೊಡೆ ಸದಾಶಿವತತ್ವ, ಈಶ್ವರತತ್ವ, ಮಹೇಶ್ವರತತ್ವ ಈ ಮೂರು ಸಕಲ ನಿಃಕಲತತ್ವಯೋಗಿಗಳ ಧ್ಯಾನವ ಕೈಕೊಂಡು, ಭಕ್ತರ ಪೂಜೆಯ ಕೈಕೊಂಡು, ಜಪ ತಪ, ನೇಮ ನಿತ್ಯ, ವೇದಾಗಮಂಗಳ ಸ್ತುತಿಯನು ಕೈಕೊಂಡು, ಜಗದುತ್ಪತ್ತಿಕಾರಣ ಪರಶಿವನ ಸಂಕಲ್ಪದಿಂದ, ನಾದ ಬಿಂದು ಕಳೆ ಸಮೇತವಾಗಿ ಲಿಂಗವೆನಿಸಿತ್ತು. ಅದಕ್ಕೆ ಕರ ಚರಣಾದ್ಯವಯವಂಗಳಿಲ್ಲ. ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಸ್ವರೂಪನುಳ್ಳದು. ವ್ಯಕ್ತ ಅವ್ಯಕ್ತ ಆನಂದ ಸುಖಮಯವಾಗಿದ್ದಂತಾದು. ಅನಂತಕೋಟಿ ಬ್ರಹ್ಮಾಂಡಗಳ ತನ್ನಲ್ಲಿ ಗರ್ಭೀಕರಿಸಿಕೊಂಡು, ಅನಂತಕೋಟಿ ಸೋಮ ಸೂರ್ಯಪ್ರಕಾಶವನುಳ್ಳ ಪರಂಜ್ಯೋತಿರ್ಲಿಂಗವು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾತನಾಡುವ ಪಂಜರದ ವಿಂಹಗನ ಕೊಂದು, ಕೋಡಗ ನುಂಗಿತ್ತು. ನುಂಗಿದ ಕೋಡಗವ ಮಂಜರಿ ತಿಂದಿತ್ತು. ತಿಂದ ಮಂಜರಿಯ ಅಂಧಕ ಕಂಡ. ಆ ಅಂಧಕ ಪಂಗುಳಗೆ ಹೇಳಲಾಗಿ, ಪಂಗುಳ ಹರಿದು ಮಂಜರಿಯ ಕೊಂದ. ಪಂಜರದ ಗಿಳಿಯ, ಮಂಜರಿಯ ಲಾಗ, ಅಂಧಕನ ಧ್ಯಾನವ, ಪಂಗುಳನ ಹರಿತವ, ಈ ದ್ವಂದ್ವಗಳನೊಂದುಮಾಡಿ, ಈ ಚತುರ್ವಿಧದಂಗವ ತಿಳಿದಲ್ಲಿ, ಪ್ರಾಣಲಿಂಗಸಂಬಂಧ. ಸಂಬಂಧವೆಂಬ ಸಮಯ ಹಿಂಗಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಾಣವಾಯು ನೇತ್ರನಾಳ, ಅಪಾನವಾಯು ಜಿಹ್ವಾನಾಳ, ವ್ಯಾನವಾಯು ಅಧಮನಾಳ, ಉದಾನವಾಯು ಕಮಲನಾಳ, ಸಮಾನವಾಯು ಮುಖನಾಳ, ನಾಗವಾಯು ಶ್ರೋತ್ರನಾಳ, ಕೂರ್ಮವಾಯು ಕಂಠನಾಳ, ಕೃಕರವಾಯು ಚಂದ್ರನಾಳ, ದೇವದತ್ತವಾಯು ಸೂರ್ಯನಾಳ, ಧನಂಜಯವಾಯು ಬ್ರಹ್ಮನಾಳ, ಇಂತು ದಶವಾಯುಗಳ ಸ್ಥಾನ. ಪ್ರಾಣವಾಯು ಹರಿದಲ್ಲಿ ಲಿಂಗಪ್ರಾಣವಂ ಮರೆದು ತನುಮನಧನವೆ ಪ್ರಾಣವಾಗಿಹ. ಅಪಾನವಾಯು ಹರಿದಲ್ಲಿ ಲಿಂಗಬಯಕೆಯ ಮರೆದು ಷಡುರಸಾನ್ನದ ಬಯಕೆಯಾಗಿಹ. ವ್ಯಾನವಾಯು ಹರಿದಲ್ಲಿ [ಲಿಂಗ] ಧ್ಯಾನವಂ ಮರೆದು ಚತುರ್ವಿಧಪದವೇದ್ಯವಾಗಿಹ. ಉದಾನವಾಯು ಹರಿದಲ್ಲಿ ಲಿಂಗಗಮನವ ಬಿಟ್ಟು ಉದ್ದೇಶ ಗಮನಿಯಾಗಿಹ. ಸಮಾನವಾಯು ಹರಿದಲ್ಲಿ ಚತುರ್ವಿಧಸಾರವಂ ಮರೆದು ಕಲ್ಲು ಮರನಾಗಿಹ. ನಾಗವಾಯು ಹರಿದಲ್ಲಿ ಸುಭಾಷಿತ ಗೋಷಿ*ಯಂ ಕೇಳಲೊಲ್ಲದೆ ಕುಭಾಷಿತ ಕುಚಿತ್ತರ ಶಬ್ದವ ಕೇಳಿಹೆನೆಂಬ. ಕೂರ್ಮವಾಯು ಹರಿದಲ್ಲಿ ಸುಜ್ಞಾನವಂ ಬಿಟ್ಟು ಅಜ್ಞಾನ ಸಂಭಾಷಣೆಯಂ ಮಾಡುವ. ಕೃಕರವಾಯು ಹರಿದಲ್ಲಿ ಸುಗುಣವಂ ಬಿಟ್ಟು ದುರ್ಗುಣಕ್ಕೆ ಬೀರಿ ಬಡವಾಗುತ್ತಿಹ. ದೇವದತ್ತವಾಯು ಹರಿದಲ್ಲಿ ಆವ ವಿಚಾರವಂ ಮರೆದು ಕೋಪದಲುರಿದೇಳುತ್ತಿಹ. ಧನಂಜಯವಾಯು ಹರಿದಲ್ಲಿ ಅನೇಕಾಯಸದಿಂ ಗಳಿಸಿದಂಥ ಧನವನು ಲಿಂಗಜಂಗಮಕ್ಕೆ ವೆಚ್ಚಿಸಲೊಲ್ಲದೆ, ಅನರ್ಥವ ಮಾಡಿ ಕೆಡಿಸಿ ಕಳೆದು ಹೋಯಿತ್ತೆಂದು ಮರುಗುತ್ತಿಹ. ಇಂತೀ ದಶವಾಯುಗಳ ಭೇದವನರಿದು ಕೂಡಲಚೆನ್ನಸಂಗಯ್ಯನಲ್ಲಿ ನಿಲಿಸೂದೆ ಯೋಗ.
--------------
ಚನ್ನಬಸವಣ್ಣ
ಧ್ಯಾನವ ಮಾಡಿ ಕಾಬಲ್ಲಿ ಚಿತ್ತ ಪ್ರಕೃತಿಯ ಗೊತ್ತು. ಕುರುಹುವಿಡಿದು ಕಂಡೆಹೆನೆಂದಡೆ, ಅದು ಶಿಲೆ, ಉಳಿಯ ಹಂಗು, ಕೊಟ್ಟವನ ಹಿಡಿದಿಹೆನೆಂದಡೆ, ಗುತ್ತಗೆಯ ಕೇಣಿಕಾರ, ಮಾಡಿ ನೀಡಿ ಕಂಡೆಹೆನೆಂದಡೆ, ಎನ್ನ ಮನೆಗೆ ಬಂದವರೆಲ್ಲರು, ಉಂಡು ಉಟ್ಟು ಎನ್ನ ಹಂಗಿಗರು. ಆಗರಗಳ್ಳನ ಹಾದರಿಗ ಕಂಡಂತೆ, ಇನ್ನಾರಿಗೆ ಹೇಳುವರು ಆ ಘನವ ? ಅದು ಎನಗಾಯಿತ್ತು, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ.
--------------
ವಚನಭಂಡಾರಿ ಶಾಂತರಸ
ಉಳ್ಳುದೊಂದು ತನು, ಉಳ್ಳುದೊಂದು ಮನ. ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ ? ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ ? ಅಕಟಕಟಾ, ಕೆಟ್ಟೆ ಕೆಟ್ಟೆ ? ಸಂಸಾರಕ್ಕಲ್ಲಾ, ಪರಮಾರ್ಥಕ್ಕಲ್ಲಾ ? ಎರಡಕ್ಕೆ ಬಿಟ್ಟ ಕರುವಿನಂತೆ ? ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಧ್ಯಾನ ಮೌನವ ನುಂಗಿರ್ದುದ ಕಂಡೆನಯ್ಯ. ಮೌನ ಧ್ಯಾನವ ನುಂಗಿರ್ದುದ ಕಂಡೆನಯ್ಯ. ಧ್ಯಾನ ಮೌನಂಗಳು ಇಲ್ಲದೆ ತಾನು ತಾನೆ ನುಂಗಿರ್ದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತನಾದರೆ ಪೃಥ್ವಿಸಾರದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ. ಮಹೇಶ್ವರನಾದರೆ ಅಪ್ಪುವಿನ ಸಾರದಿಂದ ಉದಕವ ಲಿಂಗಕ್ಕೆ ಮಜ್ಜನಕ್ಕೆರೆಯದ ಭಾಷೆ. ಪ್ರಸಾದಿಯಾದರೆ ಅಗ್ನಿಯಿಂದಾದ ಕಳೆಯ ಲಿಂಗಕ್ಕೆ ವೇದಿಸದ ಭಾಷೆ. ಪ್ರಾಣಲಿಂಗಿಯಾದರೆ ವಾಯುವಿನಿಂದಾದ ಧ್ಯಾನವ ಲಿಂಗದಲ್ಲಿ ನೋಡದ ಭಾಷೆ. ಐಕ್ಯನಾದರೆ ಆತ್ಮದಿಂದಾದ ಅಹಂ ಮಮತೆಯಲಿ ಲಿಂಗವ ಭಾವಿಸದ ಭಾಷೆ. ಇಂತೀ ಆರರಿಂದ ವಿೂರಿ ತೋರುವ ಘನವು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->