ಅಥವಾ

ಒಟ್ಟು 12 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಶ್ಚಯಿಸಿಕೊಂಡಲ್ಲಿಯೆ ನಿಜತತ್ವ. ಉತ್ತರ ಪೂರ್ವ ಉಭಯದ ಕಕ್ಷೆಯ ಬಿಟ್ಟಲ್ಲಿಯೆ ನಿತ್ಯತ್ವ. ಅನಿತ್ಯತ್ವವೆಂಬ ಗೊತ್ತ ಮರೆದಲ್ಲಿಯೆ, ಕಾಮಧೂಮ ಧೂಳೇಶ್ವರನು ಸಚ್ಚಿದಾನಂದ.
--------------
ಮಾದಾರ ಧೂಳಯ್ಯ
ನುಡಿದಡೆ ಮಿಥ್ಯ, ಸುಮ್ಮನಿದ್ದಡೆ ತಥ್ಯವಲ್ಲ. ಈ ಉಭಯದ ಹೆಚ್ಚು ಕುಂದ ಹೊತ್ತುಹೋರಿಯಾಡುತ್ತ, ಮತ್ತೆ ನಿಶ್ಚಯವಂತ ನಾನೆಂದು, ಹೆಚ್ಚು ಕುಂದಿನೊಳಗೆ ಬೇವುತ್ತ, ಮತ್ತೆ ನಿಶ್ಚಯಕ್ಕೆ ದೃಷ್ಟವ ಕೇಳಲಿಲ್ಲ. ಕಾಮಧೂಮ ಧೂಳೇಶ್ವರನು ನಿತ್ಯಾನಿತ್ಯದವನಲ್ಲ.
--------------
ಮಾದಾರ ಧೂಳಯ್ಯ
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ವೇದಕ್ಕೆ ಉತ್ತರದವನಲ್ಲ, ಶಾಸ್ತ್ರಕ್ಕೆ ಸಂತೆಯವನಲ್ಲ. ಪುಣ್ಯಕ್ಕೆ ಪುಣ್ಯವಂತನಲ್ಲ, ವಚನದ ರಚನೆಗೆ ನಿಲ್ಲ. ವಾಙ್ಮನ ಅಗೋಚರಕ್ಕೆ ಸಲ್ಲ, ಪ್ರಮಾಣು ಅಪ್ರಮಾಣುವೆಂಬುದಕ್ಕೆ ನಿಲ್ಲ. ಇಂತೀ ಭೇದ ಅಭೇದ್ಯಂಗಳಲ್ಲಿ ವೇದ್ಯವಿಲ್ಲ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ. ಸರ್ವೇಂದ್ರಿಯಂಗಳ ಸಂಚವ ಬಿಟ್ಟು, ಏಕೇಂದ್ರಿಯದಲ್ಲಿ ವಸ್ತುವ ಆಚರಿಸಬೇಕೆಂಬುದು ಅದೇನು ಹೇಳಾ. ಅಲ್ಲ ಅಹುದು, ಉಂಟು ಇಲ್ಲ ಎಂಬುದು ಗೆಲ್ಲ ಸೋಲಕ್ಕೆ ಹೋರುವುದು ಅದೇನು ಹೇಳಾ. ಅದು ಪಂಚಲೋಹದ ಸಂಚದಂತೆ ಹಿಂಚು ಮುಂಚಿನ ಭೇದ. ಅರಿದೆ ಮರೆದೆನೆಂಬುದು ಪರಿಭ್ರಮಣದ ಭೇದ. ಅರಿಯಲಿಲ್ಲ ಮರೆಯಲಿಲ್ಲ ಎಂಬುದು ಅದು ಪರತತ್ವದ ಭೇದ. ಇಂತೀ ಗುಣ ಭಾವಂಗಳ ಲಕ್ಷಿಸಿ, ದೃಷ್ಟಿ ಉಂಟೆಂದಲ್ಲಿ ಆತ್ಮ, ದೃಷ್ಟ ನಷ್ಟವಾಯಿತ್ತೆಂಬಲ್ಲಿಯೆ ಪರಮ. ಉಭಯದ ತೊಟ್ಟು ಬಿಟ್ಟಲ್ಲಿ, ನಿಜ ನಿಶ್ಚಯ ಅದೆಂತು ತಾನಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಸುಳಿವ ಅನಿಲಂಗೆ ಮೈಯೆಲ್ಲ ಕೈ. ಸುಡುವ ಅನಲಂಗೆ ಭಾವವೆಲ್ಲ ಬಾಯಿ. ಹಲಿವ ನೀರಿಂಗೆ ತನ್ಮಯವೆಲ್ಲ ಅಡಿ. ಅರಿಯದೆ ಮರೆಯದೆ ಮುಟ್ಟಿಹಂಗೆ ಕಡೆ ನಡು ಮೊದಲೆಂದು ಅರ್ಪಿತವಿಲ್ಲ. ಇಲ್ಲಾ ಎಂಬ ಸೂತಕಕ್ಕೆ ಮುನ್ನವೆ ಇಲ್ಲ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಬಯಲು ಬಯಕೆಗೆ ಒಳಗಾದಲ್ಲಿ ಇಕ್ಕುವರಿನ್ನಾರೊ ? ಅರಿವ ಆತ್ಮ ಪ್ರಕೃತಿ ರೂಪಾದಲ್ಲಿ ಬೇಡಾ ಎಂದು ಬಿಡಿಸುವರಾರೊ ? ದೀಪವೊಂದರಲ್ಲಿ ಉದಿಸಿ, ಹಲವು ಜ್ಯೋತಿಯ ಕುರುಹಿಟ್ಟಂತೆ, ಆತ್ಮವೊಂದರಲ್ಲಿ [ಉದಿಸಿ] ಹಲವು ಇಂದ್ರಿಯಂಗಳಾದ ಸಂದನರಿಯದೆ, ಅವ ಬಂದಬಂದಂತೆ ಆಡುವ ಸಂದೇಹಿಗಳಿಗುಂಟೆ, ನಿಜಾಂಗದ ನಿಜ ? ಈ ದ್ವಂದ್ವವನಳಿದು ಒಂದೆಂದಲ್ಲಿ, ಅದು ನಿಜದ ಸಂಗ. ಆ ಸಂಗವ ಹಿಂಗಿದಲ್ಲಿ, ಕಾಮಧೂಮ ಧೂಳೇಶ್ವರನು ಒಂದರವನೂ ಅಲ್ಲ.
--------------
ಮಾದಾರ ಧೂಳಯ್ಯ
ಆತ್ಮಕ್ಕೂ ಇಂದ್ರಿಯಕ್ಕೂ ಭಿನ್ನ ಉಂಟು, ಇಲ್ಲಾ ಎಂಬಲ್ಲಿ ಆ ಆತ್ಮಂಗೆ ಇಂದ್ರಿಯಂಗಳು ತುಷಕಂಬು ತಂಡುಲದಂತೆ. ಆತ್ಮದ ಇಂದ್ರಿಯದಲ್ಲಿ, ಹೊರೆ ಹೊರೆಯಲ್ಲಿ, ನಿಂದು ನೋಡಲಿಕ್ಕೆ ಆತ್ಮ ಎಂದಿನ ನಿಜ ? ತಾ ಬಂದ ಸ್ವಯದಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಷಡುವರ್ಣ ದಶವಾಯು ಚತುಷ್ಟಯಂಗಳು ಪಂಚೇಂದ್ರಿಯ ಅಷ್ಟಮದಂಗಳೆಂದು, ಷೋಡಶಕಳೆಗಳೆಂದು, ತ್ರಿವಿಧ ಶಕ್ತಿಯೆಂದು, ತ್ರಿವಿಧ ಆತ್ಮನೆಂದು, ತ್ರಿವಿಧ, ಭೂತಿಕವೆಂದು, ಪಂಚವಿಂಶತಿತತ್ವಂಗಳೆಂದು, ಪಿಂಡಪಿಂಡಭಾವವೆಂದು, ಜ್ಞಾನಜ್ಞಾನ ಸಂಬಂಧವೆಂದು ಇಂತೀ ಭೇದಂಗಳ ಸಂಕಲ್ಪಿಸಿ ನುಡಿವುದು ಅದೇನು ಹೇಳಾ. ಅದು ಅರಿವಿನ ಮರವೆಯೋ ? ಮರೆದು ಅರಿದ ಎಚ್ಚರಿಕೆಯೋ ? ಇಂತೀ ಭೇದವ ತೆರೆದು ಕಂಡೆನೆಂಬ ಸೂತಕವ ಮರೆದಲ್ಲಿ, ಆ ಗುಣ ಎಂತೆಯಿದ್ದಿತ್ತು ಅಂತೆ ವಸ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಇಂದ್ರಿಯಂಗಳ ಹಿಂಗಿ ನೋಡಿಹೆನೆಂಬ ಎಡೆಯಲ್ಲಿ, ಇಂದ್ರಿಯಂಗಳ ಕೂಡಿ, ಸನ್ಮತನಾಗಿ ನಿಂದು ನೋಡಿಹೆನೆಂದಡೆ, ತಿಲ ತೈಲದಂತೆ ಅಂಗವಳಿದು, ಆ ತಿಲದ ಬಿಂದು ದ್ವಂದ್ವವಳಿದು, ಈಚೆಯಲ್ಲಿ ಬಂದು ನಿಂದಲ್ಲಿ, ಅಂಗದ ಕರ್ಮ, ಇಂದ್ರಿಯಂಗಳ ಸಂದು, ಆತ್ಮನ ಸಂದೇಹದ ಗುಣವೆಂಬೀ ಭೇದವ ತಿಳಿದಲ್ಲಿ, ಕಾಮಧೂಮ ಧೂಳೇಶ್ವರನು ನಿರಂಗದ ಭಾವ.
--------------
ಮಾದಾರ ಧೂಳಯ್ಯ
ಜಾಗ್ರದಲ್ಲಿ ವ್ಯಾಪಾರ, ಸ್ವಪ್ನದಲ್ಲಿ ಕೂಟಸ್ಥ, ಸುಷುಪ್ತಿಯಲ್ಲಿ ಮಗ್ನತೆ ಆಯಿತ್ತೆಂಬುದು ಅದೇನು ಹೇಳಾ. ಸ್ಥೂಲತನುವಿನಲ್ಲಿ ಕೂಟಸ್ಥ, ಸೂಕ್ಷ್ಮತನುವಿನಲ್ಲಿ ಏಕಾರ್ಥ, ಕಾರಣತನುವಿನಲ್ಲಿ ಲೇಪವಾಯಿತ್ತೆಂಬ ಭಾವವದೇನು ನೋಡಾ. ಇಂತೀ ಜೀವಾತ್ಮ ಭಾವಾತ್ಮ ಪರಮಾತ್ಮ. ಇಂತೀ ತ್ರಿವಿಧಾತ್ಮದಲ್ಲಿ ತಿರುಗುವ ಆತ್ಮ ಅದೇನು ಹೇಳಾ. ಮೂರೆಂಬುದು, ಬೇರೊಂದು ಭಾವವೆಂಬುದು, ಅವ ಕೂಡಿ ನಿರ್ಭಾವವೆಂಬುದು, ಆ ಗುಣ ಇದಿರದೋ, ತನ್ನದೋ ? ಎಂಬುದನರಿದು ಮರೆದಲ್ಲಿ, ಕಾಮಧೂಮ ಧೂಳೇಶ್ವರನು ಭಿನ್ನರೂಪನಲ್ಲ.
--------------
ಮಾದಾರ ಧೂಳಯ್ಯ
ನಾನಾ ಜೀವದ ನೋವು ಒಂದೆಂದಲ್ಲಿ, ಮರಣಕ್ಕೆ ನಾನಾ ಭೇದಂಗಳುಂಟು. ಯೋನಿಯ ಕೂಟದ ಸುಖವೊಂದೆಂದಲ್ಲಿ, ಯೋಗ ನಾನಾ ಭೇದಂಗಳುಂಟು. ನಾನಾ ಸ್ಥಳಂಗಳ ಭೇದಿಸಿ, ವೇಧಿಸಿ, ಮೆಟ್ಟಿ ನೋಡಲಿಕ್ಕೆ ಇಂದ್ರಿಯಂಗಳಿಗೆ ಭಿನ್ನರೂಪಾಗಿ ತೋರುತ್ತಿಹವು. ಅದೇತರ ಗುಣವೆಂದು ನಿರಾಕರಿಸಿ ನೋಡಲಿಕ್ಕೆ ಅದಂತೆ ಇದ್ದಿತ್ತು. ಅಂತೆಯಿದ್ದ ಮೇಲೆ ಅಂತೆಯಿಂತೆಯೆನಲಿಲ್ಲ ಆ ಗುಣ ಚಿಂತನೆಗೆ ಹೊರಗು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
-->