ಅಥವಾ

ಒಟ್ಟು 22 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲಮದ ಪೊತ್ತಲ್ಲಿ ಚಂಡಾಲಗಿತ್ತಿಯಾಗಿ ಕೆಡಿಸಿತ್ತು ಮಾಯೆ, ಮಯೂರನೃಪಗೆ. ಛಲಮದ ಪೊತ್ತಲ್ಲಿ ಮಾಂಸ ಭೋಗಿಸಿತ್ತು ಮಾಯೆ, ವೀರ ವಿಕ್ರಮಗೆ. ಧನಮದ ಪೊತ್ತಲ್ಲಿ ದರಿದ್ರವಾಗಿ ಕಾಡಿತ್ತು ಮಾಯೆ, ಹರಿಶ್ಚಂದ್ರಂಗೆ, ರೂಪಮದ ಪೊತ್ತಲ್ಲಿ ಕುರೂಪನ ಮಾಡಿತ್ತು ಮಾಯೆ, ನಳಂಗೆ. ಯೌವನಮದ ಪೊತ್ತಲ್ಲಿ ಹಿಡಿಂಬಿಯಾಗಿ ಕಾಡಿತ್ತು ಮಾಯೆ, ಬ್ಥೀಮಂಗೆ. ವಿದ್ಯಾಮದ ಪೊತ್ತಲ್ಲಿ ಅಜ್ಞಾನವಾಗಿ ಕಾಡಿತ್ತು ಮಾಯೆ, ಅಂದು ಪರ್ವತದಲ್ಲಿ ಕವಿ ವಾದಿಶೇಖರಂಗೆ. ರಾಜಮದ ಪೊತ್ತಲ್ಲಿ ರಾಕ್ಷಸನ ಮಾಡಿತ್ತು ಮಾಯೆ, ಮುಮ್ಮಡಿ ಸಿಂಗನೃಪಂಗೆ. ತಪೋಮದ ಪೊತ್ತಲ್ಲಿ ಹಲವು ಆಗಿ ಕಾಡಿತ್ತು ಮಾಯೆ, ವಿಶ್ವಾಮಿತ್ರಂಗೆ. ಇಂತೀ ಅಷ್ಟಮದವಳಿದು ಅಷ್ಟಾವರಣ ಧರಿಸಿಪ್ಪ ಮಹಾಗಣಂಗಳು ಲಯವಿಲ್ಲದ ರಾಜಯೋಗವ ಪಡೆದಿಹರಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಯ್ಯ ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ, ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ, ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ. ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ತನ್ನ ನಿರಂಜನ ಶಕ್ತಿಯ ನಸುನೆನಹಿಂದ ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ ಮೊಳೆದೋರಿತ್ತಯ್ಯ. ಆ ಶುದ್ಧ ಪ್ರಸಾದವೆಂಬ ಮೊಳೆ ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ ಕಲಾಪುಂಜರಂಜಿತವಪ್ಪ ಹನ್ನೊಂದನೂರುದಳದ ಪತ್ರದಲ್ಲಿ ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ. ಆ ಸಿದ್ಧಪ್ರಸಾದವೆಂಬ ಎಳವೆರೆ ತನ್ನ ಶಾಂತಶಕ್ತಿಯ ಚಲನೆಯಿಂದ ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ. ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು. ಆ ಹೂಗಳ ಮಹಾಕೂಟದಿಂದ ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು. ಆ ಹಣ್ಣುಗಳ ಆದ್ಯಂತಮಂ ಪಿಡಿದು ಸದ್ಯೋನ್ಮುಕ್ತಿಯಾಗಬೇಕೆಂದು ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು ತಿಳಿದು ನೋಡಿ ಕಂಡು ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ ಜ್ಞಾನ ಕ್ರೀಗಳೆಂಬ ದೃಢದಿಂದೇರಿ ನಾಲ್ಕೆಲೆಯ ಪೀತವರ್ಣದ ಹಣ್ಣ ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು ಆರೆಲೆಯ ನೀಲವರ್ಣದ ಹಣ್ಣ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು ಹತ್ತೆಲೆಯ ಸ್ಫಟಿಕವರ್ಣದ ಹಣ್ಣ ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ ಸುಮನನೆಂಬ ಹಸ್ತದಲ್ಲಿ ಪಿಡಿದು ಹದಿನಾರೆಲೆಯ ಮಿಂಚುವರ್ಣದ ಹಣ್ಣ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಆಸನಸ್ಥಿರವಾಗಿ ಕಣ್ಮುಚ್ಚಿ ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ರೇಚಕ ಪೂರಕ ಕುಂಭಕಂಗೈದು ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ ಸಿಂಹನಾದಂಗಳಂ ಕೇಳಿ ಹರುಷಂಗೊಂಡು ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ ದಶವಾಯುಗಳ ಹೆಸಗೆಡಿಸಿ ಅಷ್ಟಮದಂಗಳ ಹಿಟ್ಟುಗುಟ್ಟಿ ಅಂತಃಕರಣಂಗಳ ಚಿಂತೆಗೊಳಗುಮಾಡಿ ಮೂಲಹಂಕಾರವ ಮುಂದುಗೆಡಿಸಿ ಸಪ್ತವ್ಯಸನಂಗಳ ತೊತ್ತಳದುಳಿದು ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ ಕರ್ಮೇಂದ್ರಿಯಂಗಳ ಕಾಲಮುರಿದು ತನ್ಮಾತ್ರೆಯಂಗಳ ತೋಳಕೊಯ್ದು, ಅರಿಷಡ್ವರ್ಗಂಗಳ ಕೊರಳನರಿದು ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ- ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಓಂಕಾರವೆಂಬ ಮಂತ್ರದಿಂದ ಸಂತೈಸಿ ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ ಆ ಪರಬ್ರಹ್ಮವೆ ತಾನೆಯಾಗಿ ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ ನಿರ್ಭಾವವೆಂಬ ಹಸ್ತದಿಂ ಪಿಡಿದು ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ ಆ ನಿಷ್ಕಲಬ್ರಹ್ಮವೇ ತಾನೆಯಾಗಿ ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ ಶೂನ್ಯಬ್ರಹ್ಮದ ಶೂನ್ಯಪಾದಮಂ ನಿಷ್ಕಲವೆಂಬ ಹಸ್ತದಿಂ ಪಿಡಿದು ಕ್ಷಕಾರವೆಂಬ ಮಂತ್ರದಿಂ ಸಂತೈಸಿ ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ ಆ ಶೂನ್ಯಬ್ರಹ್ಮವೇ ತಾನೆಯಾಗಿ- `ನಿಶಬ್ದಂ ಬ್ರಹ್ಮ ಉಚ್ಯತೇ' ಎಂಬ ಒಂಬತ್ತು ನೆಲೆಯ ಮಂಟಪದೊಳಿಪ್ಪ ನಿರಂಜನಬ್ರಹ್ಮದ ನಿರಂಜನಪಾದಮಂ ಶೂನ್ಯವೆಂಬ ಹಸ್ತದಿಂ ಪಿಡಿದು ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ ಬಯಲ ಬಯಲು ಬೆರಸಿದಂತೆ ನಿರಂಜನಬ್ರಹ್ಮವೇ ತಾನೆಯಾಗಿ- ಮಹಾಗುರು ಸಿದ್ಧಲಿಂಗಪ್ರಭುವಿನ ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು. ಎನ್ನ ಹೃದಯಕಮಲೆಂಟು ಮಂಟಪದ ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ ಎನ್ನ ತಂದೆ ಸುಸ್ಥಿರವಾಗಿ ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ- ಭಕ್ತಿ ಜ್ಞಾನ ವೈರಾಗ್ಯವೆಂಬ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ. ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು ಮೀಟು ಜವ್ವನೆಯಾದೆನಯ್ಯ ನಾನು. ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ. ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ ಪರಂಜ್ಯೋತಿಲಿಂಗವೆ ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ ಕಂಠಮಾಲೆಯಂ ಧರಿಸು. ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು. ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ ರತ್ನದ ಕರ್ಣಾಭರಣಂಗಳಂ ತೊಡಿಸು. ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು. ಕ್ರೀಯಲ್ಲದೆ ನಿಷ್ಕಿ ್ರೀಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು. ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ ಕನಕಲತೆಯ ಬಾಸಿಂಗಮಂ ಕಟ್ಟು. ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ ನವ್ಯದುಕೂಲವನುಡಿಸು. ಲಿಂಗಾಣತಿಯಿಂದ ಬಂದುದನಲ್ಲದೆ ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ ರತ್ನದ ಕಂಕಣವಂ ಕಟ್ಟು. ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ ಪರಿಮಳವಂ ಲೇಪಿಸು. ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ ಹಾಲು ತುಪ್ಪಮಂ ಕುಡಿಸು. ಪ್ರಸಾದವಲ್ಲದೆ ಬ್ಥಿನ್ನರುಚಿಯಂ ನೆನೆಯೆನೆಂಬ ತಾಂಬೂಲವನಿತ್ತು ಸಿಂಗರಂಗೆಯ್ಯ. ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ ಪ್ರಮಥಗಣಂಗಳ ಮಧ್ಯದಲ್ಲಿ ಎನ್ನ ಮದುವೆಯಾಗಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡಲಿಂಗವನು ಧರಿಸಿಪ್ಪ ಇಂದ್ರಿಯಾನಂದ ಪ್ರಾಣಾನಂದ ಜ್ಞಾನಾನಂದ ಭಾವಾನಂದ ತೂರ್ಯಾನಂದ ಮಹದಾನಂದಸ್ವರೂಪವಾದ ಶರಣನು, ಕಾರಣಕ್ಕೆ ಕಾರ್ಯನಾಗಿ ಲೋಕೋಪಕಾರ ಚರಿಸುವನಲ್ಲದೆ ಪಂಚಭೂತಕಾಯದ ಪಂಚೇಂದ್ರಿಯವಿಷಯಪ್ರಕೃತಿಯೊಳು ಮುಕ್ತನಾಗಿ ಕಾಮಾದಿ ಷಡ್ವರ್ಗಂಗಳಂತರಂಗದಲ್ಲಿ ಮಡಗಿ, ಕೊಟ್ಟವರ ಹೊಗಳಿ, ಕೊಡದವರ ಬೊಗಳಿ, ತಟ್ಟಿ ಬಾಗಿಲಲರಸುವ ತುಡುಗ ಶುನಕನಂತೆ ಧನವನಿತೆಯರಾಸೆ ತಲೆಗೇರಿ ಮನೆಮನೆ ಪಳ್ಳಿ ಪಟ್ಟಣವ ಹುಡುಕುತ್ತ, ಒಡಲ ಹೊರೆದು ಗುಡಿ ಮಳಿಗೆ ಮಠವ ಸೇರಿ ಸತ್ತು ಹೋಗಬಂದ ಮಿಥ್ಯವೇಷಧಾರಿಗಳಂತಲ್ಲ ನೋಡಾ ನಿಮ್ಮ ಶರಣ. ಗುರುನಿರಂಜನ ಚನ್ನಬಸವಲಿಂಗದ ಅಬ್ಥಿಮಾನಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವ ಹಿಡಿದ ಹಸ್ತವೆ ಲಿಂಗಕ್ಕೆ ಪೀಠ ಕಾಣಿರೊ. ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೊ. ಲಿಂಗವ ಧರಿಸಿಪ್ಪ ಅಂಗವೆ ಲಿಂಗದಂಗ ತಾನೆ ನೋಡಾ. ಲಿಂಗಪ್ರಸಾದವ ಕೊಂಬ ಪ್ರಾಣಲಿಂಗ ತಾನೆ ನೋಡಾ. ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ ಕರ್ಮವ ಕಲ್ಪಿಸಿ ನುಡಿವ ಅಬದ್ಧರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ, ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ. ಭಕ್ತನಲ್ಲಿಯೂ ಭಕ್ತಜಂಗಮವೆರಡೂ ಸನ್ನಹಿತ, ಜಂಗಮದಲ್ಲಿಯೂ ಜಂಗಮಭಕ್ತವೆರಡೂ ಸನ್ನಹಿತ, ಜಂಗಮಕ್ಕಾದಡೂ ಭಕ್ತಿಯೆ ಬೇಕು, ಭಕ್ತಂಗೆ ಭಕ್ತಿಸ್ಥಲವೆ ಬೇಕು. ಭಕ್ತನ ಅರ್ಥಪ್ರಾಣಾಬ್ಥಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು, ತನುಮನಧನಂಗಳೆಲ್ಲವನೊಳಕೊಂಡು, ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ. ಆ ಜಂಗಮದ ಗಳಗರ್ಜನೆಗೆ ಸೈರಿಸಿ, ಮುಡುಹಿಂಗ ಮುನ್ನೂರು ಪಟ್ಟವ ಕಟ್ಟಿದಡೆ ಆತ ಭಕ್ತನೆಂಬೆ. ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ ಕೂಡಲಸಂಗನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
--------------
ಬಸವಣ್ಣ
ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಪಂಚಬ್ರಹ್ಮವೇ ಮೊದಲಾದ ಪಂಚಮುಖದ ರುದ್ರಾಕ್ಷಿ. ಆ ರುದ್ರಾಕ್ಷಿಯ ಹಸ್ತ ತೋಳು ಕರ್ಣ ಕಂಠ ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೇ ರುದ್ರನು. ಆತನ ದರ್ಶನದಿಂದ ಭವರೋಗ ದುರಿತ ಇರಲಮ್ಮವು ನೋಡಾ. `ಓಂ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ' ಎಂದುದಾಗಿ ರುದ್ರಪದವಿಯನೀವ ರುದ್ರಾಕ್ಷಿಯಂ ಧರಿಸಿಪ್ಪ ಭಕ್ತರಿಗೆ ಶರಣೆಂಬೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರ್ಚಿಸಲರಿಯೆ, ಪೂಜಿಸಲರಿಯೆ, ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ. ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ. ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ, ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ, ಕೂಡಲಸಂಗಮದೇವಾ ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ. 342
--------------
ಬಸವಣ್ಣ
ಇನ್ನು ರುದ್ರಾಕ್ಷಿಸ್ಥಲವೆಂತೆಂದಡೆ : ಬ್ರಹ್ಮ ವಿಷ್ಮು ರುದ್ರ ಮೊದಲಾದ ಸಮಸ್ತ ದೇವರ್ಕಳು ತ್ರಿಪುರದ ರಾಕ್ಷಸರ ಉಪದ್ರಕ್ಕೆ ಭೀತರಾಗಿ ರುದ್ರಲೋಕದ ಮಹಾರುದ್ರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ ಚಿಂತಾಕ್ರಾಂತರಾಗಿ ನಿಲಲು, ಆ ರುದ್ರಲೋಕದ ಮಹಾರುದ್ರನು ತ್ರಿಪುರವಧಾರ್ಥ ಸರ್ವದೇವಮಯ ದಿವ್ಯ ಅನಂತತೇಜ ಅನಂತಪ್ರಚಯ ಅನಂತಜ್ವಾಲಾಮಯವಾಗಿಹ ಅಘೋರರೂಪ ತಾಳಿ ಉತ್ತಮವಾದ ಅಘೋರಾಸ್ತ್ರಮಂ ಚಿಂತಿಸಿ, ತ್ರಿಪುರದ ಕೀಲ ದಿವ್ಯಸಹಸ್ರವರ್ಷ ನೋಡಲು ಆ ರುದ್ರನ ಅಕ್ಷಿಯಲ್ಲಿ ರಕ್ತಾಶ್ರುಜಲಬಿಂದುಗಳು ಜನಿಸಿ ಭೂಮಿಯ ಮೇಲೆ ಬೀಳಲು ಮಹಾರುದ್ರಾಕ್ಷ ವೃಕ್ಷವಾಗಿ ತ್ರೈಲೋಕ್ಯಾನುಗ್ರಹ ಕಾರಣವಾಯಿತ್ತು ನೋಡಾ. ಆ ರುದ್ರಾಕ್ಷಿಯ ದರುಶನದ ಫಲ ಲಿಂಗದರುಷನದ ಫಲ, ರುದ್ರಾಕ್ಷಿಯ ದರುಶನ ಸ್ಪರ್ಶನದಿಂದ ಸರ್ವಪಾಪಂಗಳು ಹೋಹವು ನೋಡಾ. ಇದಕ್ಕೆ ಈಶ್ವರೋsವಾಚ : ``ಶ್ರುಣು ಷಣ್ಮುಖ ಯತ್ನೇನ ಕಥಯಾಮಿ ಸಮಾಸತಃ | ತ್ರಿಪುರೋ ನಾಮ ದೈತ್ಯಸ್ತು ಪುರಶ್ಚಿತ್ತು ಸುರರ್ಜಯಃ || ಚಿತ್ತಾಪ್ತೇವ ಸುರಾಸ್ಸರ್ವೇ ಬ್ರಹ್ಮ ವಿಷ್ಣೇಂದ್ರದೇವತಾಃ ಚಿಂತಿತಂ ಚ ಮಯಾ ಪುತ್ರ ಅಘೋರಾಸ್ತ್ರಮನುತ್ತಮಂ|| ಸರ್ವದೇವಮಯಂ ದಿವ್ಯಂ ಜ್ವಲಿತಂ ಘೋರರೂಪಕಂ | ತ್ರಿಪುರಸ್ಯ ವಧಾರ್ಥಾಯ ದೇವಾನಾಂ ಪ್ರಾಣವಾಯು ಚ || ಸರ್ವವಿಘ್ನಪ್ರಶಮನಂ ಅಘೋರಾಸ್ತ್ರಂತು ಚಿಂತಿತಂ | ದಿವ್ಯವರ್ಷಸಹಸ್ರಾಣಿ ಚಕ್ಷುರುನ್ಮೀಲಿತಂ ಮಯಾ || ಘಟೇಭ್ಯಾಂ ಚ ಕುಲಾಕ್ಷಿಭ್ಯಾಂ ಪತಿತಾ ಜಲಬಿಂದವಃ | ರಕ್ತಾಶ್ರುಬಿಂದವೋ ಜಾತಾಃ ಮಹಾರುದ್ರಾಕ್ಷವೃಕ್ಷಕಾಃ || ಸ್ಥಾವರತ್ವಮನುಪ್ರಾಪ್ಯ ಮತ್ರ್ಯಾನುಗ್ರಹಕಾರಣಾತ್ | ರುದ್ರಾಕ್ಷಾಣಾಂ ಫಲಂ ಧೃತ್ವಾ ತ್ರಿಷು ಲೋಕೇಷು ವಿಶ್ರುತಂ || ಲಿಂಗಸ್ಯ ದರ್ಶನೇ ಪುಣ್ಯಂ ಭವೇತ್‍ರುದ್ರಾಕ್ಷದರ್ಶನಾತ್ | ಭಕ್ತ್ಯ ರಾತ್ರೋ ದಿವಾಪಾಪಂ ದಿವಾರಾತ್ರಿ ಕೃತಂ ಹರೇತ್ || ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನೇ ಭವೇತ್ | ತತ್ಕೋಟಿ ಶತಂ ಪುಣ್ಯಂ ಲಭತೇ ಧಾರಣಾನ್ನರಃ || ಲಕ್ಷಕೋಟಿ ಸಹಸ್ರಾಣಿ ಲಕ್ಷಕೋಟಿ ಶತಾನಿ ಚ | ತಜ್ಜಪಾಲ್ಲಭತೇ ಪುಣ್ಯಂ ನಾತ್ರ ಕಾರ್ಯಂ ವಿಚಾರಣಾತ್ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋoವಾಚ : ``ಶಿರೋಮಾಲಾ ಚ ಷಟ್ತ್ರಿಂಶದ್ವಾತ್ರಿಂಶತ್ಕಂಠಮಾಲಿಕಾ | ಕೂರ್ಪರೇ ಷೋಡಶ ಪ್ರೋಕ್ತಾ ದ್ವಾದಶಂ ಮಣಿಬಂಧಯೋಃ || ಉರೋಮೂಲಾಚ ಪಂಚಾಶತಷ್ಟೋತ್ತರಶತಂ ತಥಾ | ಶಿರಸಾ ಧಾರಯತ್ಕೋಟಿ ಕರ್ಣಾಭ್ಯಾಂ ದಶಕೋಟಿಯಃ || ಗಳೇ ಬಂಧಂ ಶತಂ ಕೋಟಿ ಮೂಧ್ರ್ನಿ ಕೋಟಿಸಹಸ್ರಕಂ | ಆಯುಕಂಠೋಪವಿತ್ತಂ ಚ ಲಕ್ಷಮಾವೇ ಮಣಿಬಂಧಯೋರ್ಣ ವಕ್ತ್ರಾಣಿ | ದ್ವಾದಶಾದಿತ್ಯಾದಿ ಪಾಯು ಶ್ರೀಮಹಾದೇವಾಯ ನಮಃ || ಅಷ್ಟೋತ್ತರಶತಂ ಸೋಪವಿ ತ್ತಂ ಚತುರ್ದಶ ವಕ್ತ್ರಾಣಿ | ಶತರುದ್ರಾತ್ಮಾಕಾಯ ಶ್ರೀ ವಿಶ್ವೇಶ್ವರಾಯ ನಮಃ ಇತಿ ||'' ಇಂತೆಂದುದಾಗಿ, ಇದಕ್ಕೆ ಬೋಧಾಯನಶಾಖಾಯಾಂ : ``ತಾನಿ ಹವಾಏತಾನಿ ರುದ್ರಾಕ್ಷಾಣಿ ಯತ್ರ ಯೋ ಯೇ ಧಾರಯಂತಿ ಕಸ್ಮಾದೇವ ಧಾರಯಂತಿ ಸ್ನಾತ್ತ್ವಾನಿ ಧಾರಯನ್ ಗರ್ಭೇ ತಿಷ್ಟನ್ ಸ್ವಪನ್ ಖಾದನ್ ಉನ್ಮಿಷನ್ ಅಪಿ ಸರ್ವಾಣೈವಾನಿ ಚರತಿ ಮದ್ರಿ ಭೂತ್ವಾ ರುದ್ರೋ ಭವತಿ ಯೋಯೇನ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋಯತಿರ್ವಾ ಧಾರಯೇತ್ ಪದೇ ಪದೇ ಯಶ್ವಮೇಧಫಲಂ ಪ್ರಾಪ್ನೋತಿ ||'' ಇಂತೆಂದುದು ಶ್ರುತಿ. ಇದಕ್ಕೆ ಲೈಂಗ್ಯಪುರಾಣೇ : ``ರುದ್ರಾಕ್ಷಂ ಧಾರಯೇದ್ವಿಪ್ರಃ ಸಂಧ್ಯಾದಿಷು ಚ ಕರ್ಮಸು | ತತ್ಸರ್ವಂ ಸಮವಾಪ್ನೋತಿ ಕೋಟಿ ಕೋಟಿ ಗುಣಂ ಸದಾ || ಸ್ನಾನೇ ದಾನೇ ಜಪೇ ಹೋಮೇ ವೈಶ್ಯದೇವೇಷುರರ್ಚನೆ | ಪ್ರಾಯಶ್ಚಿತ್ತೇ ಕಥಾ ಶ್ರಾದ್ಧೇ ದೀಕ್ಷಾಕಾಲೇ ವಿಶೇಷತಃ || ರುದ್ರಾಕ್ಷಧರೋ ಭೂತ್ವಾ ಯತ್ಕಿಂಚಿತ್ಕರ್ಮವೈದಿಕಂ | ಕುರ್ಯಾದ್ವಿಪ್ರಸ್ತು ಯೋ ಮೋಹ ವಂಶಾವಪ್ನೋತಿ ತತ್ಫಲಂ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾಲ್ಲಭತೇ ವರಂ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಹಸ್ತೇಚೋರಸಿ ಕಂಠೇ ವಾ ಮಸ್ತಕೇ ವಾsಪಿ ಧಾರಯೇತ್ | ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಶಿಖಾಯಾಂ ಧಾರಯೇದೇಕಂ ಷಟ್ತ್ರಿಂಶನ್ಮಸ್ತಕೇ ತಥಾ| ದ್ವಾತ್ರಿಂಶತ್ಕಂಠದೇಶೇಚ ಪಂಚಾಷಣ್ಮಾಲಿಕಾ ಹೃದಿ || ಷೋಡಶಂ ಬಾಹುಮೂಲಯೋಃ ದ್ವಾದಶಂ ಮಣಿಬಂಧಕೇ | ಕರ್ಣಯೇಕೀಕಮೇಶುಸ್ಯಾ ದುಪವಿತೇ ಶತಾಷ್ಟಕಂ || ಶತಾಷ್ಟಮಕ್ಷಮಾಲಾಂತು ನಿತ್ಯಂ ಧಾರಯೇತೇ ವರಃ | ಪದೇ ಪದೇsಶ್ವಮೇಧಸ್ಯ ಫಲಂ ಪ್ರಾಪ್ನೋತಿ ನ ಸಂಶಯಃ || ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ರುದ್ರಾಕ್ಷ ಶತಕಂಠೋ ಯಃ ಗೃಹೇ ತಿಷ*ತಿ ಯೋ ವರಃ | ಕುಲೈಕವಿಂಶಮುಕ್ತಾರ್ಯ ಶಿವಲೋಕೇ ಕೋಟಿಭುಜದ್ವಯಂ | ಅಪ್ರಮೇಯ ಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಅವದ್ಯಃ ಸರ್ವಭೂತಾನಾಂ ರುದ್ರವದ್ವಿಚರೇತ್ ಭುವಿ | ಸುರಾಣಾಮಸುರಾಣಾಂ ಚ ವಂದನೀಯೋ ಯಥಾ ಶಿವಃ || ರುದ್ರಾಕ್ಷರಧಾರಶೋ ನಿತ್ಯಂ ವಂದನೀಯೋ ನರೈರಿಹ | ಉಚ್ಛಿಷ್ಟೋ ವಾ ವಿಕರ್ಮಸ್ತೋ ಯುಕ್ತೋ ವಾ ಸರ್ವಪಾಪಕೈಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಇಂತೆಂದುದಾಗಿ ಇದಕ್ಕೆ ಕಾತ್ಯಾಯನಶಾಖಾಯಾಂ : ``ಅಥೈವ ಭಗವಂತಂ ರುದ್ರಕುಮಾರಃ ಪಪ್ರಚ್ಛಾರಣೇನ ದಶಶತ ಗೋದಾನಫಲಂ || ದರ್ಶನಸ್ಪರ್ಶನಾಭ್ಯಾಂ ದ್ವಿಗುಣಂ ತ್ರಿಗುಣಂ ಫಲಂ ಭವತಿ, ಅತ ಊಧ್ರ್ವಂ ವಕ್ತುಂ ನ ಶಕ್ನೋಮಿ ತತೋಂ ಜಪ ಸಮಂತ್ರಕಂ ಧಾರಣೇ ವಿಧಿಂ ಕಥಯಾಮಿ || ಸ್ನಾನ ವಿಧಿನಾ ಸ್ನಾತೇಷು ಖೇರಾಜ್ಞೇಯ ಸ್ನಾನಂ ತ್ರಿಪುಂಡ್ರಧಾರಣಂ ಕೃತ್ವಾ ಏಕಾಶ್ಯಾದಿರುದ್ರ ಶಾಂತಾನಾಂ || ಸೃಷ್ಟಿಕ್ರಮೇಣಂ ಮಂತ್ರಾಸ್ಯಂ `ಓಂ ಹೂಂ ಚಂ ಖಂ ಹೂಂ ಕ್ಲಿಂ ಮಾಂ ದ್ರಾಂ ದ್ರಿಂ ಹ್ರುಂ ಕ್ರೂಂ ಕ್ಷಾಂ ಕ್ಷಿಂ ಕ್ಷುಂ' ನವಮಿತೀಷುರುವೋಕ್ತ ಂ ಮಂತ್ರಾನನಂತಾ ಶೋಕ್ತ್ವಾನ್ವಾ ಜಪೇದಿಮಾನ್ ಪಾಣಾನಾಯಮ್ಯ ಸಮಸ್ತಪಾಪಕ್ಷಯಾರ್ಥಂ ಶಿವಜ್ಞಾನಾ ವಸ್ಯಾರ್ಥ ಸಮಸ್ತ ಮಂತ್ರಸ್ಸಹಧಾರಣಂ ಕರಿಷ್ಯಾಮಿತಿ ಸಂಕಲ್ಪ್ಯ ಶಿಖಾಯಾಮೇಕಮೇಕಸ್ಯಂ ಶ್ರೀ ಸದಾಶಿವಾಯ ನಮಃ ಇತಿ ||'' ``ದ್ವಿ ತ್ರಿ ದ್ವಾದಶವಕ್ತ್ರಾಣಿ ಶಿರಸಿ ತ್ರೀಣಿ ಧಾರಯೇತ್ | ವಹ್ನಿ ಸೂರ್ಯಸೋಮಾಧಿಪಾಯ ಶಿವಾಯ ನಮಃ ಇತಿ || ಏಕಾದಶ ವಕ್ತ್ರಂ ಷಟ್ತ್ರಿಂಶನ್ಮೂಧ್ರ್ನಿ ಷಟ್ತ್ರಿಂಶತ್ತತ್ವಾತ್ಮಕಾಯ | ನಮ ಇತಿ ಪಂಚದಶ ವಕ್ತ್ರಾಣಿ ಕರ್ಣಯೋರೇಕಮೇಕಂ || ಸೋಮಾಯ ನಮಃ ಇತಿ, ಯೇದಷ್ಟವಕ್ತ್ರಾಣಿ ಕಂಠೇ ದ್ವಾತ್ರಿಂಶತ್ | ತ್ರ್ಯಂಬಕಕಲಾತ್ಮನೇ ಶ್ರೀಕಂಠಾಯ ನಮಃ ಇತಿ || ಚತುರ್ವಕ್ತ್ರಂ ಪಂಚಷಣ್ಮಾಲಿಕಾಮುರಸಿ ಶ್ರೀಕಂಠಾದಿ | ಮೂತ್ರ್ಯಾಯಸ್ಥಿಕಾಯ ಶ್ರೀ ಸರ್ವಜ್ಞಾಯ ನಮಃ ಇತಿ || ಬಾಹೋ ತ್ರಯೋದಶವಕ್ತ್ರಾಣಿ ಷೋಡಶಸುಖಾಸನಾದಿ | ಷೋಡಶಮೂತ್ರ್ಯಾತ್ಮಕಾಯ ಶ್ರೀಕಂಠಾಯ ನಮಃ ಇತಿ || ದಕ್ಷೇರ್ಣವ ವಕ್ತ್ರಾಣಿ ಶ್ರೀ ವ್ಯೋಮಕಳಾತ್ಮಕಾಯ ಉಪಮಾಪತಯೇ ನಮಃ ಇತಿ ಉಪಾಯತೇ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ರುದ್ರಾಕ್ಷಮಾಲಯಾ ಶುಭ್ರೋ ಜಟಾಜೂಟವಿರಾಜಿತಃ | ಭಸ್ಮಾವಲಿಪ್ತಸರ್ವಾಂಗಃ ಕಮಂಡಲುಕರಾನ್ವಿತಃ || ಕೃಷ್ಮಾಜಿನೋ ಪವಿತ್ರಾಂಗಃ ಆಶಾಹೆ ಪುಣ್ಯಕೀರ್ತನಃ | ಶಿವಃ ತಸ್ಮೆ ೈಃ ಮಹಾದೇವಂ ಯೋಗಿನಾಂ ಹೃದಯಾಲಯಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಧಾರಣಾಸ್ಸರ್ವೇ ಜಟಾಮಂಡಲಧಾರಣಾತ್ | ಅಕ್ಷಮಾಲಾರ್ಪಿತಕರಂ ತ್ರಿಪುಂಡ್ರಾಪಲಿಯುಕ್ತಾಂಗಂ | ಆಷೇಡೇವ ವಿರಾಜಿತಂ ಋಗ್ಯಜುಃಸಾಮರೂಪೇಣ | ಸೇವತೇಸ್ಮೈ ಮಹೇಶ್ವರಃ ಸಂಸ್ಥಾಯಮನೋದಿಷ್ಟಾಂಗೈ || ದೇವೈರ್ಮುನಿಗಣೈಸ್ತಥಾಮೃತ ತ್ರಿಪುಂಡ್ರಕೋ ದಿವ್ಯೇ | ರುದ್ರಾಕ್ಷೇಶ್ವ ವಿಭಾಷಿತಃ ಶುಭೇ ಸತತಂ ವಿಷ್ಟು| ಭಸ್ಮದಿಗ್ಧತಮೂಲತಃ ತ್ರಿಪುಂಡ್ರಾಂಕಿತ ಸರ್ವಾಂಗೋ | ಜಟಾಮಂಡಲಮಂಡನ ಭೂತಿ ತ್ರಿಪುಂಡ್ರರುದ್ರಾಕ್ಷಂ | ಅಕ್ಷರ ಮಾಲಾರ್ಪಿತಕರಃ ಕುರ್ವಕ್ತ್ರಃ ಪಿತಾಮಹಾ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋವಾಚ : ``ಭಾಲೇ ತ್ರಿಪುಂಡ್ರಕಂ ಚೈವ ಗಳೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರೀ ಮಂತ್ರೋ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಮಾಲಿಕಾ ಕಂಠೇ ಧಾರಸ್ತದ್ಭಕ್ತಿವರ್ಜಿತಃ | ಪಾಪಕರ್ಮಾಪಿ ಯೋ ನಿತ್ಯಂ ರುದ್ರಲೋಕೇ ಮಹೀಯತೇ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ರುದ್ರಾಕ್ಷಂ ಕಂಠಮಾಶ್ರಿತ್ಯ ಶ್ವಾನೋsಪಿ ಮಿೃಯತೇ ಯದಿ | ಸೋsಪಿ ರುದ್ರಂ ಸಮಾಪ್ನೋತಿ ಕಿಂ ಪುನರ್ಮಾನುಷಾದಯಃ || ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜೇಷ್ವಪಿ | ಸದ್ಯೋ ಭವತಿ ಪೂತಾತ್ಮಾ ರುದ್ರಾಕ್ಷೌ ಶಿರಸಿ ಸ್ಥಿತೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಶುಚಿರ್ವಾಪ್ಯಶುಚಿರ್ವಾಪಿ ಅಭಕ್ಷಸ್ಯ ಚ ಭಕ್ಷಣಾತ್ | ಅಗಮ್ಯಾಗಮನಂ ಚೈವ ಬ್ರಹ್ಮಹಾ ಗುರುತಲ್ಪಕಃ || ಮ್ಲೇಚ್ಛೋ ವಾಪ್ಯಥ ಚಾಂಡಾಲೋ ಯುಕ್ತೋ ವಾ ಪ್ಯಥ ಪಾತಕೈಃ | ರುದ್ರಾಕ್ಷಧಾರಣಾದ್ಯಸ್ತು ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಧ್ಯಾನಧಾರಣಹೀನೋsಪಿ ರುದ್ರಾಕ್ಷಂ ಯೋ ಹಿ ಧಾರಯೇತ್ | ಸರ್ವಪಾಪವಿನಿರ್ಮುಕ್ತಃ ಸಯಾತಿ ಪರಮಾಂ ಗತಿಂ||'' ಇಂತೆಂದುದಾಗಿ, ಇದಕ್ಕೆ ಮಾನವಪುರಾಣೇ : ``ಮೃಣ್ಮಯಂ ವಾಪಿ ರುದ್ರಾಕ್ಷಂ ಕೃತ್ವಾ ಯಸ್ತು ಧಾರಯೇತ್ | ಅಪಿ ದುಃಕೃತಕರ್ಮೋsಪಿ ಸ ಯಾತಿ ಪರಮಾಂ ಗತಿಂ ||'' ಇಂತೆಂದುದಾಗಿ, ಇದಕ್ಕೆ ಶಿವಲಿಂಗಾಗಮೇ : ``ರುದ್ರಾಕ್ಷಮಾಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಇಂತೆಂದುದಾಗಿ, ``ರುದ್ರಾಕ್ಷಿಯ ಧರಿಸಿಪ್ಪಾತನೆ ರುದ್ರನು. ಆತನ ಭವರೋಗಂಗಳು ಹೊದ್ದಲಮ್ಮವು ನೋಡಾ. `ಏವಂ ರುದ್ರಾಕ್ಷಧಾರಣಾದ್ ರುದ್ರಾ' ಎಂದುದು ಶ್ರುತಿ. ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮನೆಯ ಮರೆಯಲ್ಲಿ ಇದ್ದ ಸತಿಗೆ ಪತಿ ಕೂಟವುಂಟೆ ? ಕಣ್ಣಿಗೆ ಮರೆಯಾದ ಹೊನ್ನ ಚೆನ್ನಾಗಿ ನೋಡಬಹುದೆ ? ಕಂಗಾಣದವ ಪ್ರತಿ ಶೃಂಗಾರವ ಮಾಡಿದಡೆ, ತನ್ನ ಅಂಗದ ಕೈಯಲ್ಲದೆ ಕಂಗಳಿಗಿಲ್ಲ, ಸುಸಂಗಹೀನನ ಮಂಗಳಮಯದಂತೆ. ಅಂಗದ ಮೇಲೆ ಶಿವಲಿಂಗ ರುದ್ರಾಕ್ಷಿ ಭಸ್ಮಂಗಳ ಧರಿಸಿಪ್ಪ ಕಳ್ಳನ ಕಾಟಕಾರದೆ ಕಲ್ಲಿನೊಳಗಾದನು. ಅಲೇಖನಾದ ಶೂನ್ಯ, ಕಾಡದಿರು ಎನ್ನುವ.
--------------
ವಚನಭಂಡಾರಿ ಶಾಂತರಸ
ಅಂಗದ ಮೇಲಕ್ಕೆ ಬಂದ ಆಚಾರಲಿಂಗದ ಹೊಲಬನರಿಯದೆ ಕೈಲಾಸದ ಮೇಲಿಪ್ಪ ಬಾಲಕೋಟಿಸೂರ್ಯಪ್ರಕಾಶವನುಳ್ಳ ಶಿವನನೊಲಿಸಬೇಕೆಂದು ಒಂದು ವಸ್ತುವ ಎರಡಿಟ್ಟು ನುಡಿವ ಮಂದಮತಿಗಳು ನೀವು ಕೇಳಿರೇ. ಮಹಾಮೇರುಪರ್ವತವೇ ಶರಣ. ಆ ಶರಣನ ಸ್ಥೂಲತನುವೇ ರಜತಾದ್ರಿ. ಸೂಕ್ಷ ್ಮತನುವೇ ಹೇಮಾದ್ರಿ. ಕಾರಣತನುವೇ ಮಂದರಾದ್ರಿ. ಈ ಮೂರುಪರ್ವತಂಗಳ ಅರಮನೆಗಳಲ್ಲಿ ನೆಲಸಿಪ್ಪ ಶಿವನಾರೆಂದರೆ ನಿರಾಕಾರ ಶೂನ್ಯಬ್ರಹ್ಮವೇ. ಶರಣನ ಕುರಿತು ಪಂಚಸಾದಾಖ್ಯಂಗಳನೊಳಕೊಂಡು ಸಾಕಾರವಾಗಿ ಬಂದ ಇಷ್ಟಲಿಂಗವೇ[ಆ] ಶಿವನು. ಗ್ರಂಥ : `ಜ್ವಲತ್ ಕಾಲಾನಲಾಭಾಸಾ ತಟಿತ್ ಕೋಟಿ ಸಮಪ್ರಭಾ| ತಸ್ಯೋಧ್ರ್ವಾ ಚ ಶಿಖಾ ಸೂಕ್ಷ ್ಮ ಚಿದ್ರೂಪಾ ಪರಮಾ ಕಲಾ| ಏವಂ ವೇದ ಕಲಾ ದೇವಿ ಸದ್ಗುರೋಶ್ಯಿಷ್ಯಮಸ್ತಕೇ ಹಸ್ತಾಬ್ಜಮಥನಾದ್ ಗ್ರಾಹ್ಯಾ ತಸ್ಯ ಭಾವ ಕರೋದಿತಾ ವಪುರೇವಂ ಸಮುತ್ಪನ್ನಂ ತತ್ ಪ್ರಾಣಂ ಮಿಶ್ರಿತಂ ಭವೇತ್ ಯಥಾ ಗುರುಕರೇ ಜಾತಾ ಲಿಂಗ ಭಕ್ತಿದ್ರ್ವಿಭೇದಕಾ' ಇಂತೆಂದುದಾಗಿ ಆ ನಿರಾಕಾರಬ್ರಹ್ಮನೇ ಶಿವನು. ಆ ಶಿವನ ಧರಿಸಿಪ್ಪ ಶರಣನ ಕಾಯವೇ ಕೈಲಾಸ. ಇದಲ್ಲದೆ ಮತ್ತೊಂದು ಕೈಲಾಸ ಬೇರೊಬ್ಬ ಶಿವನುಂಟೆಂದು ಭ್ರಮೆಗೊಂಡು ಮನವನೆರಡು ಮಾಡಿಕೊಂಬುದು ಅಜ್ಞಾನ ನೋಡಾ. ಉರದ ಮಧ್ಯದಲ್ಲಿ ಒರಗಿಪ್ಪ ಗಂಡನಂ ಬಿಟ್ಟು ಇನ್ನು ನೆರೆಮನೆಯ ಗಂಡರಿಗೆ ಮನವನಿಕ್ಕುವ ಹಾದರಗಿತ್ತಿಗೆ ಪತಿಭಕ್ತಿಯೆಲ್ಲಿಯದೋ?. ಶ್ರೀಗುರು ಕರುಣಿಸಿಕೊಟ್ಟ ಕ್ರಿಯಾಲಿಂಗವನು ಅರ್ಚನೆ ಪೂಜನೆಯಿಂದ ಅರ್ಪಿತಾವಧಾನದಿಂದ ಧ್ಯಾನ ಧಾರಣದಿಂದ ಸಮತೆ ಸಮಾಧಾನದಿಂದ ಧ್ಯಾನ ಮೌನ ಉಪಾವಸ್ಥೆಯಿಂದ ಮುನಿಸು ಮೂದಲೆಯಿಂದ ಕಾಮಿಸಿ ಕಂಬನಿದುಂಬಿ ಕರಸ್ಥಲದಲಿಪ್ಪ ಪ್ರಾಣೇಶ್ವರನ ಶ್ರೀ ಚರಣಕ್ಕೆ ಲಲಾಟ ಪೂಜೆಯ ಮಾಡಿ ಒಲಿಸಿ ಒಡಗೂಡಿ ನಿಜಮುಕ್ತಿವಡೆಯದೆ ಆಕಾರವಂ ಮರೆದು ನಿರಾಕಾರವಂ ಕೂಡಿಹೆನೆಂಬ ಲೋಕದ ಕಾಕುಮಾನವರೆಲ್ಲಾ ಕಾಲ ಕಾಮರಿಗೆ ತುತ್ತಾಗಿ ಕಾಲಾಗ್ನಿರುದ್ರನ ಹೊಡೆಗಿಚ್ಚಿಗೊಳಗಾದರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶುದ್ಧಶೈವದ ನಿರ್ಧರವನರಿವ ಬುದ್ಧಿಯನನುಕರಿ[ಸೆ] ಆ ಶುದ್ಧಶೈವದ ಪರಿಯೆಂತೆಂದಡೆ: ಏಕಮೇವನದ್ವಿತೀಯಂ ಬ್ರಹ್ಮವೆಂಬು[ದ] ಶ್ರುತಿಪ್ರಮಾಣಿಂದರಿದು ಅಂತಪ್ಪ ಶಿವನಲ್ಲಿ ಏಕನಿಷೆ*ಯ ಪಡೆದು ಆ ಶಿವಂಗೆ ಅರ್ಚನೆ ಪೂಜನೆಯಂ ಮಾಡುವಲ್ಲಿ ದುರ್ಗಿ, ವಿನಾಯಕ, ಭೈರವ ಮೊದಲಾದ ಪರಿವಾರ ದೇವತೆಗಳನ್ನು ಏಕಪೀಠದಲ್ಲಿ ಪೂಜೆಯಂ ಮಾಡುವಾತನು ಅವಿವೇಕದ ಅಪರಾಧಿಯಲ್ಲದೆ ವಿವೇಕವನುಳ್ಳ ಶೈವಸಂಪನ್ನನಲ್ಲ. ಅದಕ್ಕೆ ದೃಷ್ಟಾಂತವೆಂತೆಂದಡೆ: ಅರಸು ಕುಳ್ಳಿರುವ ಸಿಂಹಾಸನದಲ್ಲಿ ಪ್ರಧಾನ ಮೊದಲಾದ ಪರಿವಾರ ಕುಳ್ಳಿರಬಹುದೆ ? ಬಾರದಾಗಿ, ಪರಿವಾರ ದೇವತೆಗಳಿಗೆ ಏಕ ಪೀಠ ಸಲ್ಲದು. ಮುನ್ನ ಅರುವತ್ತುಮೂವರು ಮೊದಲಾದ ಅಸಂಖ್ಯಾತರೆನಿಪ ಭಕ್ತರುಗಳು ಶುದ್ಧಶೈವ ವೀರಶೈವದಲ್ಲಿ ನಿಷೆ*ಯ ಆಚರಿಸುವಲ್ಲಿ ಏಕಲಿಂಗದಲ್ಲಿ ನಿಷೆ*, ಶಿವಭಕ್ತರಲ್ಲಿ ಪ್ರೇಮ, ಶಿವಲಾಂಛನವ ಧರಿಸಿಪ್ಪ ಜಂಗಮವನು ಶಿವನೆಂದು ಕಂಡು ಅವರಿಗೆ ತೃಪ್ತಿಪಡಿಸಿದವರಾಗಿ ಚತುರ್ವಿಧವನೆಯ್ದಿದರು. ಅದೆಂತೆಂದಡೆ: ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ ಮಮ ತೃಪ್ತಿರುಮಾದೇವಿ ಜಂಗಮಸ್ಯಾನನಾದ್ಭವಃ ಅಸ್ಯಾರ್ಥ, ಮರಕ್ಕೆ ಬೇರು ಬಾಯಿ ಹೇಗೆಯಾಯಿತ್ತು ಹಾಂಗೆ ಲಿಂಗಕ್ಕೆ ಜಂಗಮವೆ ಬಾಯಿಯೆಂದು ಆವನಾನೊರ್ವನು ಜಂಗಮಕ್ಕೆ ತೃಪ್ತಿಪಡಿಸುತ್ತಂ ಇದ್ದಾನು, ನಾನು ತೃಪ್ತನು ಕಾಣಾ ಉಮಾದೇವಿ ಎಂದು ಶಿವನು ಹೇಳಿದನಾಗಿ ಮತ್ತಂ, ಶಿವಯೋಗಿಮುಖೇನೈವ ಸಾಕ್ಷಾದ್ಭುಂಕ್ತೇ ಸದಾಶಿವಃ ಶಿವಯೋಗಿಶರೀರಾನ್ತೇ ನಿತ್ಯಂ ಸನ್ನಿಹಿತಃ ಶಿವಃ ಆವನೊರ್ವ ಶಿವಯೋಗಿಗೆ ಆವನೊರ್ವ ಭಕ್ತನು ತೃಪ್ತಿ ಪಡಿಸುತ್ತಂ ಇದ್ದಾನು, ಅದೇ ಶಿವನ ತೃಪ್ತಿಯೆಂದು ಅರಿವುದು. ಅದು ಹೇಗೆಂದಡೆ: ಶಿವಯೋಗಿಯ ಹೃದಯಕಮಲಮಧ್ಯದಲ್ಲಿ ಶಿವನು ಆವಾಗಲೂ ತೊಲಗದಿಹನಾಗಿ, ಮತ್ತಾ ಶಿವಂಗೆ ಲಿಂಗ ಒಂದು ಮುಖ, ಜಂಗಮ ಒಂದು ಮುಖ. ಅದಕ್ಕೆ ಈಶ್ವರ ವಾಕ್ಯ: ಯಥಾ ಭೇರುಂಡಪಕ್ಷೀ ತು ದ್ವಿಮುಖಾತ್ ಪರಿಭುಂಜತೇ ತಥಾ ಭುಂಜಾಮಿ ದ್ವಿಮುಖಾಲ್ಲಿಂಗಜಂಗಮಯೋರಹಂ ಅಸ್ಯಾರ್ಥ, ಆವುದಾನೊಂದು ಭೇರುಂಡ ಪಕ್ಷಿ ಎರಡು ಮುಖದಲ್ಲಿ ಹಾರವ ಕೊಳಲು ಒಂದೇ ದೇಹಕ್ಕೆ ತೃಪ್ತಿಯಹ ಹಾಂಗೆ ಎನಗುಳ್ಳವು ಲಿಂಗ ಜಂಗಮವೆರಡು ಮುಖ. ಆ ಎರಡು ಮುಖಕ್ಕೆ ಆವನಾನೊರ್ವನು ನೈವೇದ್ಯವ ನೀಡುತ್ತಂ ಇದ್ದಾನು, ಅದು ಎನ್ನ ತೃಪ್ತಿಯೆಂದು ಶಿವನು ದೇವಿಯರಿಗೆ ಹೇಳಿದನಾಗಿ ಇಂತಪ್ಪ ಲಿಂಗಜಂಗಮವೆರಡು ಮುಖವೆ ಶಿವನ ತೃಪ್ತಿಗೆ ಕಾರಣವೆಂದರಿದು ಆಚರಿಸಿದರಾಗಿ ವೀರಶೈವಸಂಪನ್ನರುಮಪ್ಪ ಅರುವತ್ತುಮೂವರು ಅಸಂಖ್ಯಾತರು ಶಿವನಲ್ಲಿ ಚತುರ್ವಿಧ ಪದವಿಯನೆಯ್ದಿ ಸುಖಿಯಾದರು. ಇದೀಗ ಶುದ್ಧಶೈವದ ಮಾರ್ಗ. ಈ ಶೈವಸಂಪತ್ತನರಿದಾಚರಿಸಿದವರೆ ಮುಕ್ತರು ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮಹಾವಿಂಧ್ಯಪರ್ವತದಲ್ಲಿ ಜ್ಯ್ಕೋರ್ಮಯವೆಂಬ ಪ್ರಜ್ವಲ ಸ್ಫಟಿಕ ಘಟದಲ್ಲಿ ಒಪ್ಪಿ ತೋರುವ ಜ್ಯೋತಿರ್ಮಯ ಲಿಂಗವೇ ನೀನು, ಸೂಕ್ಷ ್ಮವೇ ನೀನು. ಉರುತರ ಸಕಲ ಬ್ರಹ್ಮಾಂಡಂಗಳೆಲ್ಲ ನಿನ್ನ ರೋಮಕೂಪದ ಕೊನೆಯ ಮೊನೆಯ ಮೇಲೆ. ಸಕಲ ವ್ಯಾಪಿಯಡಗಿಪ್ಪಂಥ ಬ್ರಹ್ಮಾಂಡಂಗಳನ್ನು ಧರಿಸಿಪ್ಪ ನಿನ್ನ ಅನಂತ ವೇದಂಗಳೆಲ್ಲವು ನಿನ್ನೊಳಗೆ. ನೀನು ಸರ್ವವ್ಯಾಪ್ತಿಗೆ ಒಳಗಾದುದಿಲ್ಲ. ನಿನ್ನ ಮೀರಿದ ಆಧಿಕ್ಯ ಒಂದೂ ಇಲ್ಲ. ಘನತರಲಿಂಗವೆ ಗುರುಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಸೂಕ್ಷ ್ಮವಾದೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ ರುದ್ರಾಕ್ಷಿಯ ಧರಿಸಿಪ್ಪ ಸದ್ಭಕ್ತನೆ ರುದ್ರನು ನೋಡಾ. ಅದೆಂತೆಂದಡೆ; ಹಸ್ತೇ ಚೋರಸಿ ಕಂಠೇ ವಾ ಮಸ್ತಕೇ ವಾಪಿ ಧಾರಯೇತ್ ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರ ಸಂಶಯಃ ಇಂತೆಂದುದಾಗಿ, ಸಮಸ್ತ ಪಾಪಂಗಳ ಕಳೆದು, ಕೂಡಲಸಂಗಯ್ಯ ತನ್ನಂತೆ ಮಾಡುವನು
--------------
ಬಸವಣ್ಣ
ಅರಸನ ಹೆಸರಿಟ್ಟ ಅನಾಮಿಕನಂತೆ ನಾಮಕ್ಕರುಹರಲ್ಲದೆ ಪಟ್ಟಕ್ಕರುಹರಪ್ಪರೆ ? ಲಿಂಗ ಜಂಗಮ ಪ್ರಸಾದದ ಅನುಭಾವದ ಹೆಸರ ಹೇಳಿಕೊಂಡು ಬದುಕುವರಲ್ಲದೆ, ವೇಷವ ಧರಿಸಿಪ್ಪ ಆಶ್ರಿತರೆಲ್ಲರೂ, ಸಜ್ಜನ ಸಂಬಂಧ ಗುಣಾದಿಗುಣಂಗಳಿಗೆ ಯೋಗ್ಯರೆ ? ಕೂಡಲಚೆನ್ನಸಂಗಯ್ಯಾ ಸಹಜ ಸಮ್ಯಕ್ಕರಲ್ಲದವರಂತಿರಲಿ.
--------------
ಚನ್ನಬಸವಣ್ಣ
ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು ಶ್ರೀವಿಭೂತಿಯ ಧರಿಸಲು ಬಟ್ಟಬಯಲಾಗಿ ದುರಿತನ್ಯಾಯ ದೆಸೆಗೆಟ್ಟು ಓಡುವವು. ನೈಷೆ*ಯುಳ್ಳ ಶ್ರೀವಿಭೂತಿ ಧರಿಸಿಪ್ಪ ಸದ್ಭಕ್ತಂಗೆ ಕಾಲಮೃತ್ಯು, ಅಪಮೃತ್ಯು, ಮಾರಿಗಳೆಂಬವು ಮುಟ್ಟಲಮ್ಮವು. ಬ್ರಹ್ಮರಾಕ್ಷಸ ಪ್ರೇತ ಪಿಶಾಚಿಗಳು ಬಿಟ್ಟೋಡುವವು ಶ್ರೀವಿಭೂತಿಯ ಕಾಣುತ್ತಲೆ. ಮಂತ್ರ ಸರ್ವಕೆಲ್ಲ ಶ್ರೀವಿಭೂತಿಯಧಿಕ ನೋಡಾ. ಯಂತ್ರ ಸರ್ವಕೆಲ್ಲ ಶ್ರೀವಿಭೂತಿ ಅಧಿಕ ನೋಡಾ. ಸರ್ವ ಜಪತಪನೇಮ ನಿತ್ಯ ಹೋಮ ಗಂಗಾಸ್ನಾನ ಅನುಷಾ*ನವೆಲ್ಲಕೆಯಾ ಶ್ರೀವಿಭೂತಿ ಅಧಿಕ ನೋಡಾ. ಸರ್ವಕ್ರಿಯೆಗೆ ಶ್ರೀ ವಿಭೂತಿಯಧಿಕ ನೋಡಾ. ಸರ್ವವಶ್ಯಕೆ ಶ್ರೀವಿಭೂತಿಯಧಿಕ ನೋಡಾ. ಶ್ರೀ ವಿಭೂತಿಯಿಲ್ಲದಲಾವ ಕಾರ್ಯವೂ ಸಾಧ್ಯವಾಗದು. ಶ್ರೀವಿಭೂತಿ ವೃಷಭಾಕಾರ, ಶ್ರೀವಿಭೂತಿ ಚಿದಂಗ. ಸಾಕ್ಷಿ :``ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ಋಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ||'' ಎಂದೆಂಬ ಶ್ರೀವಿಭೂತಿಯ ಸಂದುಸಂದು ಅವಯವಂಗಳು ರೋಮ ರೋಮ ಅಪಾದಮಸ್ತಕ ಪರಿಯಂತರದಲ್ಲು ಧರಿಸಿ ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ :``ಅಪಾದಮಸ್ತಕಾಂತಂ ಚ ರೋಮಾದೌ ಭವತೇ ಶಿವಃ | ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯೂದ್ಧೂಳನಾದ್ ಭವೇತ್ ||'' ಹೀಗೆಂಬ ವಿಭೂತಿಯ ಧರಿಸಿ, ಭವಸಾಗರವ ದಾಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->