ಅಥವಾ

ಒಟ್ಟು 17 ಕಡೆಗಳಲ್ಲಿ , 8 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತೆ ರುದ್ರಾಕ್ಷಿಯ ಹೊತ್ತು ವ್ಯವಹರಿಸಿದಲ್ಲಿ ಮೋಕ್ಷವಾಯಿತು. ಬೇಂಟೆಗಾರನು ಶುನಿಗಳ ಕೂಡಿಕೊಂಡು ಅರಣ್ಯದಲ್ಲಿ ಬೇಂಟೆಯನಾಡುವ ಸಮಯದಲ್ಲಿ ಒಂದು ರುದ್ರಾಕ್ಷಿಯ ಕಂಡು ತನ್ನ ಶುನಿಗಳಿಗೆ ಗಾದಿಯ ಮಣಿಗಳೆಂದು ಕಟ್ಟಿಬಿಡಲು, ಆ ಶುನಿಗಳು ಹೋಗಿ ಹಂದಿಯ ಹಿಡಿಯಲು ಆ ಹಂದಿಗೂ ಆ ಶುನಿಗೂ ಮೋಕ್ಷವಾಯಿತು. ವೇಶ್ಯಾಂಗನೆಯು ತನ್ನ ವಿನೋದಕ್ಕೆ ಮರ್ಕಟ ಕುಕ್ಕುಟಂಗೆ ರುದ್ರಾಕ್ಷಿ ಧರಿಸಲು ಅವಕ್ಕೆ ಮುಂದೆ ಅಂತ್ಯಕಾಲಕ್ಕೆ ಮೋಕ್ಷವಾಯಿತೆಂದು ವೇದ, ಶ್ರುತಿ, ಪ್ರಮಾಣಗಳಿಂದ ಕೇಳಿ ಜೀವಾತ್ಮರು ರುದ್ರಾಕ್ಷಿಯ ಧರಿಸುತ್ತಿರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಲನ ಸುಟ್ಟ ಭಸಿತವಲ್ಲ. ಕ್ರಮದಿಂದ ಕಾವನ ಸುಟ್ಟ ಭಸಿತವಲ್ಲ. ತ್ರಿಶೂಲಧರ ತ್ರಿಪುರವ ಸುಟ್ಟ ಭಸಿತವಲ್ಲ. ತ್ರಿಜಗವ ನಿರ್ಮಿಸಿದ ಭಸಿತವ ತಿಳಿದು ಲಲಾಟಕ್ಕೆ ಧರಿಸಲು ತ್ರಿಯಂಬಕ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶ್ರೀ ವಿಭೂತಿಯನೊಲಿದು ಧರಿಸಲು, ಸಕಲದುರಿತವ ನಿವಾರಣವ ಮಾಡಿ, ಘನಸುಖವ ಕೊಡುವುದು ನೋಡಾ. ಪ್ರಣವದ ಬೆಳಗು, ಪಂಚಾಕ್ಷರಿಯ ಕಳೆ, ಪರಮನಂಗಚ್ಛವಿ ಶ್ರೀವಿಭೂತಿ ನೋಡಾ. ಶಾಂತಿಯ ನೆಲೆವನೆ, ಸರ್ವರಕ್ಷೆಯ ತವರೆನಿಸಿ, ಸಮಸ್ತ ಕಾಮಿತ ಸುಖವೀವುದು ಶ್ರೀವಿಭೂತಿ ನೋಡಾ. ಭೂತ ಪ್ರೇತ ಪಿಶಾಚ ಬ್ರಹ್ಮರಾಕ್ಷಸ ಅಪಸ್ಮಾರ ಬಾಧೆಯ ಬಿಡಿಸಿ ನಿಜಸುಖವಿತ್ತು ಸಲಹುವುದು ಶ್ರೀ ವಿಭೂತಿ ನೋಡಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದ, ವಿಭೂತಿ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಆದಿ ಆಧಾರದಲ್ಲಿ ವೇಧಿಸಿದ ಚಿದ್ಭಸ್ಮವ ಭೇದಿಸಿ ಬಹಿಷ್ಕರಿಸಿ ಸರ್ವಾಂಗದಲ್ಲಿ ಧರಿಸಲು ಭವಬಂಧನ ದುರಿತದೋಷಂಗಳು ಪರಿಹರವಪ್ಪುದು ತಪ್ಪದು ನೋಡಾ. ಇದು ಕಾರಣ ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸಿ ಮಲತ್ರಯಂಗಳ ತೊಳೆದೆನು ನೋಡಾ. ಮಲತ್ರಂಯಗಳು ಪರಿಹರವಾಗದ ಮುನ್ನ ಭವಬಂಧನದ ಬೇರುಗಳ ಸಂಹರಿಸಿ ಜನನ ಮರಣಂಗಳ ಒತ್ತಿ ಒರಸುವುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಷ*ದಲ್ಲಿ ಅಗ್ನಿ ಉಂಟೆಂದಡೆ, ಆ ಕಾಷ*ದ ರೂಪ ಸುಡಲರಿಯದು ನೋಡಾ ! ದೇಹಮಧ್ಯದಲ್ಲಿ ಪರವಸ್ತು ಉಂಟೆಂದಡೆ, ಹರಿಯದು ನೋಡಾ ಆ ದೇಹದ ಜಡಭಾವ ! ಅದೆಂತೆಂದೊಡೆ : ಕಾಷ*ದ ಮಧ್ಯದಲ್ಲಿ ಅಡಗಿರ್ದ ಮಂದಾಗ್ನಿ ಮಥನದಿಂದೆ ಬಹಿಷ್ಕರಿಸಿ ಆ ಕಾಷ*ವ ಸುಡುವಂತೆ, ದೇಹದ ಮಧ್ಯದಲ್ಲಿ ಅಡಗಿರ್ದ ಪರವಸ್ತುವನು ಶ್ರೀಗುರುಸ್ವಾಮಿ ತನ್ನ ಕ್ರಿಯಾಶಕ್ತಿಯ ಮಥನದಿಂದೆ ಬಹಿಷ್ಕರಿಸಿ ಬಹಿರಂಗದ ಮೇಲೆ ಇಷ್ಟಲಿಂಗವಾಗಿ ಧರಿಸಲು, ಆ ಲಿಂಗದ ಸತ್‍ಕ್ರಿಯಾ ಪೂಜೆಯಿಂದೆ ಸ್ಥೂಲಾಂಗದ ಕಾಷ*ಗುಣಧರ್ಮಂಗಳೆಲ್ಲ ನಷ್ಟವಾಗಿ ಆ ಲಿಂಗದ ಚಿತ್ಕಳೆಯು ಸರ್ವಾಂಗಕ್ಕೆ ವೇಧಿಸಿ ಅಂತರಂಗ ಬಹಿರಂಗವೊಂದಾಗಿ ಆತ್ಮನ ಅಹಂಮಮತೆ ಕೆಟ್ಟು, ಶಿಖಿಕರ್ಪುರ ಸಂಯೋಗದಂತೆ ಪರತತ್ವವನೊಡಗೂಡಿದ ಮಹಾತ್ಮನ ಕಾಯ ನಿರವಯಲಪ್ಪುದಲ್ಲದೆ ಬರಿಯ ಒಣ ವಾಗದ್ವೈತದಿಂದೆ ಅಹಂ ಬ್ರಹ್ಮವೆಂದು ನುಡಿದು ದೇಹ ಪ್ರಾಣಂಗಳ ಪ್ರಕೃತಿವರ್ತನೆಯಲ್ಲಿ ನಡೆದು ನಿತ್ಯರಾದೇವೆಂಬುವರೆಲ್ಲ ಭವಾಂಬುಧಿಯಲ್ಲಿ ಬಿದ್ದು ಮುಳುಗುತ್ತೇಳುತ್ತ ತಡಿಯ ಸೇರಲರಿಯದೆ ಕೆಟ್ಟುಹೋದರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದ್ಯರ ವಚನವ ಕೇಳಿ, ವೇದಾಗಮಂಗಳ ತಿಳಿದು, ಶ್ರೀವಿಭೂತಿಯ ಧಾರಣವೆ ಮುಖ್ಯವೆಂದರಿದು ಧರಿಸಿರಣ್ಣ. ಇಂತಿದನರಿಯದೆ, ಶಿವದೀಕ್ಷೆಯ ಮಾಡಿದರೂ ದೀಕ್ಷೆಯ ಪಡೆದರೂ ಫಲವಿಲ್ಲ. ಶಿವಮಂತ್ರಸ್ಮರಣೆ ತಪಯಜ್ಞಂಗಳ ಮಾಡಿದಲ್ಲಿಯೂ ಫಲವಿಲ್ಲ. ಆತಂಗೆ ವಿದ್ಯೆಯು ದೇವತೆಗಳು ಆಗಮಜ್ಞಾನವು ಇಲ್ಲ. `ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮವರ್ಜಿತೇ' ಎಂದುದಾಗಿ: ಇದು ಕಾರಣ, ಶ್ರೀವಿಭೂತಿಯ ಮಹಾತ್ಮೆಯನರಿದು ಧರಿಸಲು, ಸರ್ವಸಿದ್ಧಿಯಪ್ಪುದು. ಬಳಿಕ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಿಪ್ಪನು.
--------------
ಸ್ವತಂತ್ರ ಸಿದ್ಧಲಿಂಗ
ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿಹ ಆಚಾರಲಿಂಗವು ಸಮಸ್ತವಾದ ತತ್ವಂಗಳ ನಿವಾಸಕ್ಕೋಸುಗ ಆಧಾರವಾದುದಾಗಿ, ಕರ್ಮರೂಪವಾದ ಕ್ರಿಯೆಯೆಂಬ ತನ್ನ ಶಕ್ತಿಯಿಂದ ಸರಿಯಿಲ್ಲದುದಾಗಿ ಚಿತ್ತದಿಂದ ಧರಿಸಲು ತಕ್ಕಂಥಾದುದಾಗಿ ಆಶ್ರಯಿಸಲು ಪಟ್ಟ ಮೋಕ್ಷಮಾರ್ಗ ಉಳ್ಳುದಾಗಿ ಇದ್ದುದು ನೋಡಾ ಆಚಾರಲಿಂಗ. ಇದಕ್ಕೆ ಮಹಾವಾತುಲಾಗಮೇ :ವಸಂತತಿಲಕವೃತ್ತ- ``ಕರ್ಮಾತ್ಮನಾ ಸಕಲತತ್ವ ನಿವಾಸಹೇತೋ ರಾಧಾರಭೂತಮತುಲಂ ಕ್ರಿಯಯಾ ಸ್ವ ಶಕ್ತ್ಯಾ | ಚಿತ್ತೇನ ಧಾರ್ಯಮತಿರೂಢ ನಿವೃತ್ತಿಮಾರ್ಗಂ ಆಚಾರಲಿಂಗಮಿತಿ ವೇದವಿದೋ ವದಂತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಿಲೆ ಮೌಕ್ತಿಕ ಪದ್ಮಾಕ್ಷಿ ಸುವರ್ಣ ಸಲೆ ಪುತ್ರಂಜಿ ಮೊದಲಾದ ಇಂತಿವರಲ್ಲಿ ಜಪವ ಮಾಡಿದರೆ ಒಂದೊಂದಕೊಂದು ಫಲವಿಹುದು. ಶ್ರೀ ರುದ್ರಾಕ್ಷಿಯ ಧರಿಸಲು ಅನಂತಫಲವೆಂದಿತ್ತು ಪೌರಾಣ. ಸಾಕ್ಷಿ : ``ಅಂಗುಲೀ ಜಪಸಂಖ್ಯಾಭಿರೇಕೈಕಾಂತು ವರಾನನೇ | ರೇಖಾಯಾಷ್ಟಗುಣಂ ಪ್ರೋಕ್ತಂ ಪುತ್ರಜೀವಿಪಲೈರ್ದಶ ||'' ಎಂದುದಾಗಿ, ``ಶಂಖೆಶ್ಶತಗುಣವಿಂದ್ಯಾತ್ಪ್ರವಾಳಸ್ತು ಸಹಸ್ರಕಂ | ಸ್ಫಟಿಕೈರ್ದಶಸಾಹಸ್ರಂ ಮೌಕ್ತಕಂ ಲಕ್ಷಮೇವ ಚ ||'' ಎಂದುದಾಗಿ, ``ಪದ್ಮಾಕ್ಷಿರ್ದಶಲಕ್ಷಂತು ಸುವರ್ಣಕೋಟಿರುಚ್ಯತೇ | ದಶಕೋಟಿ ಕುಶದ್ರಾಂತೆ ರುದ್ರಾಕ್ಷಿಯನಂತ ಫಲ ||'' (?) ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿರದೊಳು ಧರಿಸಲು ಕೋಟಿ ಫಲ ಕರ್ಣದೊಳು ಧರಿಸಲು ದಶಕೋಟಿ ಫಲ ಕೊರಳೊಳು ಧರಿಸಲು ಶತಕೋಟಿ ಫಲ. ಬಾಹುವಿನೊಳು ಧರಿಸಲು ಸಾವಿರ ಫಲವೆಂದಿಹುದು ದೃಷ್ಟ. ಸಾಕ್ಷಿ : ``ಶಿರಸಾ ಧಾರಣಾತ್ಕೋಟಿ ಕರ್ಣಯೋರ್ದಶಕೋಟಿ ಚ | ಶತಂ ಕೋಟಿ ಗಳೇ ಬದ್ಧಂ ಸಾಹಸ್ರಂ ಬಾಹುಧಾರಣಾತ್ ||'' ಎಂದುದಾಗಿ, ಹಸ್ತ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಶ್ರೀ ರುದ್ರಾಕ್ಷಿಯ ಧರಿಸಿ ನಿತ್ಯ ಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ ವಿಭೂತಿಯನು, ಭಕ್ತಿಯಿಂದೊಲಿದು ಧರಿಸಲು, ನಿತ್ಯರಪ್ಪರು ನೋಡಿರೇ. ಮುನ್ನ ಜಮದಗ್ನಿ ಕಶ್ಯಪ ಅಗಸ್ತ್ಯ ಮೊದಲಾದ ಋಷಿಗಳು, ಸಮಸ್ತ ದೇವತೆಗಳು, ಮೂರು ಮೂರು ಬಾರಿ, ಆಯುಷ್ಯವ ಪಡದೆರೆಂದು ವೇದಗಳು ಸಾರುತ್ತಿವೆ. `ತ್ರಿಯಾಯುಷಂ ಜಮದಗ್ನೇ:ಕಶ್ಯಪಸ್ಯ ತ್ರಿಯಾಯುಷಂ ಅಗಹಸ್ತ್ಯಸ್ಯ ತ್ರಿಯಾಯುಷಂ ಯುದ್ದೇವಾನಾಂ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ' ಎಂದುವು ಶ್ರುತಿಗಳು. ಇದನರಿದು ಧರಿಸಿರೇ, ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಬಲ್ಲಡೆ.
--------------
ಸ್ವತಂತ್ರ ಸಿದ್ಧಲಿಂಗ
ಸಕಲ ಕರಣಂಗಳನು ಬಕುತಿಯ ಜ್ವಾಲೆಯಲ್ಲಿ ಸುಟ್ಟು ಯುಕುತಿಯ ವಿಭೂತಿಯ ಧರಿಸಲು ಮುಕುತಿಯಹುದಕೆ ಸಂದೇಹವಿಲ್ಲ. ಇದು ಕಾರಣ ಶಿವಸಂಬಂಧವಾದ ಶ್ರೀ ವಿಭೂತಿಯನೊಲಿದು ಧರಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಂಚಲಗುಣವಳಿದು ಶ್ರೀ ವಿಭೂತಿಯ ಪಂಚಸ್ಥಾನದಲ್ಲಿ ಪಂಚಬ್ರಹ್ಮಮಂತ್ರದಿಂದೆ ಧರಿಸಲು, ಪಂಚಮಹಾಪಾತಕಂಗಳು ಪಲ್ಲಟವಪ್ಪುವು ನೋಡಾ. ಸರ್ವಾಂಗವನು ಧೂಳನವ ಮಾಡಲು ಸರ್ವವ್ಯಾಧಿಗಳು ಪರಿಹರವಪ್ಪುವು ನೋಡಾ. ಇದು ಕಾರಣ ಇಂತಪ್ಪ ಶ್ರೀ ವಿಭೂತಿಯ ಲಲಾಟಾದಿ ಮೂವತ್ತೆರಡು ಸ್ಥಾನಗಳಲ್ಲಿ ಧರಿಸಿ, ನಿತ್ಯ ಲಿಂಗಾರ್ಚನೆಯ ಮಾಡುವಾತ ಸತ್ಯಶಿವನಲ್ಲದೆ ಬೇರಲ್ಲವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬೆಟ್ಟದಷ್ಟು ಕರ್ಮವುಳ್ಳರೆ ಬೊಟ್ಟಿನಷ್ಟು ಶ್ರೀವಿಭೂತಿಯ ಧರಿಸಲು ಬಟ್ಟಬಯಲಾಗಿ ದುರಿತನ್ಯಾಯ ದೆಸೆಗೆಟ್ಟು ಓಡುವವು. ನೈಷೆ*ಯುಳ್ಳ ಶ್ರೀವಿಭೂತಿ ಧರಿಸಿಪ್ಪ ಸದ್ಭಕ್ತಂಗೆ ಕಾಲಮೃತ್ಯು, ಅಪಮೃತ್ಯು, ಮಾರಿಗಳೆಂಬವು ಮುಟ್ಟಲಮ್ಮವು. ಬ್ರಹ್ಮರಾಕ್ಷಸ ಪ್ರೇತ ಪಿಶಾಚಿಗಳು ಬಿಟ್ಟೋಡುವವು ಶ್ರೀವಿಭೂತಿಯ ಕಾಣುತ್ತಲೆ. ಮಂತ್ರ ಸರ್ವಕೆಲ್ಲ ಶ್ರೀವಿಭೂತಿಯಧಿಕ ನೋಡಾ. ಯಂತ್ರ ಸರ್ವಕೆಲ್ಲ ಶ್ರೀವಿಭೂತಿ ಅಧಿಕ ನೋಡಾ. ಸರ್ವ ಜಪತಪನೇಮ ನಿತ್ಯ ಹೋಮ ಗಂಗಾಸ್ನಾನ ಅನುಷಾ*ನವೆಲ್ಲಕೆಯಾ ಶ್ರೀವಿಭೂತಿ ಅಧಿಕ ನೋಡಾ. ಸರ್ವಕ್ರಿಯೆಗೆ ಶ್ರೀ ವಿಭೂತಿಯಧಿಕ ನೋಡಾ. ಸರ್ವವಶ್ಯಕೆ ಶ್ರೀವಿಭೂತಿಯಧಿಕ ನೋಡಾ. ಶ್ರೀ ವಿಭೂತಿಯಿಲ್ಲದಲಾವ ಕಾರ್ಯವೂ ಸಾಧ್ಯವಾಗದು. ಶ್ರೀವಿಭೂತಿ ವೃಷಭಾಕಾರ, ಶ್ರೀವಿಭೂತಿ ಚಿದಂಗ. ಸಾಕ್ಷಿ :``ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ಋಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ||'' ಎಂದೆಂಬ ಶ್ರೀವಿಭೂತಿಯ ಸಂದುಸಂದು ಅವಯವಂಗಳು ರೋಮ ರೋಮ ಅಪಾದಮಸ್ತಕ ಪರಿಯಂತರದಲ್ಲು ಧರಿಸಿ ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ :``ಅಪಾದಮಸ್ತಕಾಂತಂ ಚ ರೋಮಾದೌ ಭವತೇ ಶಿವಃ | ಸ್ವಕಾಯಮುಚ್ಯತೇ ಲಿಂಗಂ ವಿಭೂತ್ಯೂದ್ಧೂಳನಾದ್ ಭವೇತ್ ||'' ಹೀಗೆಂಬ ವಿಭೂತಿಯ ಧರಿಸಿ, ಭವಸಾಗರವ ದಾಟಿ ನಿತ್ಯನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶ್ರೀ ಗುರುವಿನ ಕೃಪಾದೃಷ್ಟಿ ತತ್‍ಶಿಷ್ಯನ ಹೃದಯದಲ್ಲಿ ಪ್ರವೇಶಿಸಿ, ಆ ತತ್ ಶಿಷ್ಯಂ ಗುರೂಪಾವಸ್ಥೆಯ ಮಾಡುತ್ತಿರಲು ಆ ಶ್ರೀ ಗುರುಸ್ವಾಮಿ ಪ್ರಸನ್ನರಾಗಿ, ಹತ್ತಿರಕ್ಕೆ ಕರೆದು, ಬತ್ತಿನಲ್ಲಿ ಕುಳ್ಳಿರಿಸಿ, ಮಸ್ತಕದ ಮೇಲೆ ಹಸ್ತವನ್ನಿರಿಸಲು ಅವಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ ಲಲಾಟದಲ್ಲಿ ವಿಭೂತಿಯ ಧರಿಸಲು ಮುಕ್ತಿರಾಜ್ಯ ಕ್ಕೊಡೆತನವನಿತ್ತಂತಾಯಿತ್ತಯ್ಯಾ ಸಂಚಿತ ಪ್ರಾರಬ್ಧ ಆಗಾಮಿ ಜಾರಿ ಹೋದವಯ್ಯಾ. ಕರ್ಣದಲ್ಲಿ ಮಂತ್ರವ ಹೇಳಲೊಡನೆ ಪಂಚಾಕ್ಷರವೆ ಸ್ಥಾಪ್ಯವಾಗಿ ಪಂಚಭೂತಂಗಳು ಬಿಟ್ಟುಹೋದವಯ್ಯಾ. ಕರಸ್ಥಲಕ್ಕೆ ಲಿಂಗವ ಕೊಡಲೊಡನೆ ಅಂಗವೆ ಲಿಂಗಾರ್ಪಣವಾಗಿ ಸರ್ವಾಂಗ ಲಿಂಗವಾಗಿ ಅಂಗಕರಣಂಗಳಲ್ಲಿ ಲಿಂಗಕಿರಣಂಗಳಾಗಿ ಆಡುವುದು ಲಿಂಗದ ಲೀಲೆ ಎಂದಂದು ಆ ತತ್‍ಶಿಷ್ಯ ತಲೆಯೆತ್ತಿ ನೋಡಿ ತಾನನಾದಿ ಶಿವತತ್ವವಲ್ಲದಿದ್ದರೆ ಆ ಪರಶಿವನಪ್ಪ ಗುರುವೆ ಪ್ರಸನ್ನರಪ್ಪರೆ ಎಂದರಿದು, ಪಾದದ ಮೇಲೆ ಬಿದ್ದು ಬೇರಾಗದಿರಲು ಆತನು ಗುರುವ ಸೋಂಕಿ ಕಿಂಕುರ್ವಾಣ ಭಯಭಕ್ತಿಯಿಂದ ಅಹಂಕಾರವಳಿದು ಭಕ್ತನಾದ. ಮನ ಲಿಂಗವ ಸೋಂಕಿ ಭಯ ಭಕ್ತಿಯಿಂದ ಚಿತ್ತಗುಣವಳಿಸು ಮಹೇಶ್ವರನಾದ, ಧನ ಜಂಗಮವ ಸೋಂಕಿ ಪ್ರಕೃತಿಯಳಿದು, ಪರಮಾನಂದರಸಭರಿತನಾಗಿ ಮನ ಮನನ ಲೀಯವಾಗಿ ಪ್ರಾಣಲಿಂಗಿಯಾದ. ಭಾವ ಪ್ರಸಾದವ ಸೋಂಕಿಯೆ ಭ್ರಮೆಯಳಿದು ನಿರ್ಭಾವಿಯಾಗಿ ಜೀವಗುಣವಳಿದು ಶರಣನಾದ. ಅರಿವು ತನುಕರಣ ಮನ ಇಂದ್ರಿಯನವಗಿವಿಸಿ ಸರ್ವಾಂಗಲಿಂಗವಾಗಿ ಅರಿವಡಗಿ ಮರಹು ನಷ್ಟವಾಗಿ ತೆರಹಿಲ್ಲದ ಬಯಲಿನೊಳಗೆ ಕುರುಹಳಿದುನಿಂತ ಬಸವಪ್ರಿಯ ಕೂಡಲಸಂಗಮದೇವನೆಂಬ ಶ್ರೀಗುರುವಿನ ಚರಣಕ್ಕೆ ನಮೋ ನಮೋ ಎನುತಿರ್ದೆನು.
--------------
ಹಡಪದ ಅಪ್ಪಣ್ಣ
-->