ಅಥವಾ

ಒಟ್ಟು 92 ಕಡೆಗಳಲ್ಲಿ , 27 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು, ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು, ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ. ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ? ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ? ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ? ಅಂತರಂಗ ಬಹಿರಂಗ ಆತ್ಮಸಂಗ_ಈ ತ್ರಿವಿಧದ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ನಮ್ಮ ಆದಿಪುರಾತನರು ಪ್ರಸಾದಕ್ಕೆ ತಪ್ಪದೆ ನಡೆದರು, ನಡೆ ತಪ್ಪದೆ ನುಡಿದರು. ಇಂತಪ್ಪ ಪುರಾತನರ ವಚನಂಗಳ ಎರಡಿಲ್ಲದೆ ಕೊಂಡಾಡಿ ತನು ಮನ ಧನವ ಎರಡಿಲ್ಲದೆ ಸಮರ್ಪಿಸುವ, ಭಕ್ತರ ಭಕ್ತ ನಾನು, ಆಳಿನಾಳಯ್ಯಾ ನಾನು, ಕೂಡಲಚೆನ್ನಸಂಗನ ಶರಣರು ಸಾಕ್ಷಿಯಾಗಿ
--------------
ಚನ್ನಬಸವಣ್ಣ
ತನುವ ಮರೆಯಬೇಕೆಂದು ಗುರುವ ತೋರಿ, ಮನವ ಮರೆಯಬೇಕೆಂದು ಲಿಂಗವ ತೋರಿ, ಧನವ ಮರೆಯಬೇಕೆಂದು ಜಂಗಮವ ತೋರಿ, ಲೇಸ ಮರೆದು ಕಷ್ಟಕ್ಕೆ ಕಡಿದಾಡುವ ಭಾಷೆಹೀನರ ಕಂಡು ನಾಚಿಕೆಯಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಗುರುವಿನೊಡನೆ ಸಹಭೋಜನ ಮಾಡಬೇಕಾದಡೆ, ಚತುರ್ವಿಧಭಕ್ತಿಯಿಂದೆ ಗುರುವಿನೊಳಗೆ ತನುವಡಗಿರಬೇಕು. ಲಿಂಗದೊಡನೆ ಸಹಭೋಜನ ಮಾಡಬೇಕಾದಡೆ, ಸಂಕಲ್ಪ ವಿಕಲ್ಪ ಸೂತಕ ಪಾತಂಕಗಳಳಿದು ಲಿಂಗದೊಳಗೆ ಮನವಡಗಿರಬೇಕು. ಜಂಗಮದೊಡನೆ ಸಹಭೋಜನ ಮಾಡಬೇಕಾದಡೆ, ಮಜ್ಜನ ಭೋಜನ ಕುಸುಮ ಗಂಧಾನುಲೇಪನ ಅನ್ನ ವಸ್ತ್ರ ಮಣಿ ರತ್ನಾಭರಣ ಗೀತ ವಾದ್ಯ ನೃತ್ಯ ಹಾಸುಮಂಚ ಸ್ತ್ರೀಭೋಗ ಮೊದಲಾದ ಅನೇಕ ಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು. ಇಂತೀ ತ್ರಿವಿಧ ಭಕ್ತಿಯ ನಿರ್ಣಯವನರಿಯದೆ, ತನು ಮನ ಧನಂಗಳ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ನೀತಿಹೀನರು ಸಹಭೋಜನ ಕವಳ ಪ್ರಸಾದವ ಕೊಟ್ಟು ಕೊಂಡಡೆ ಹುಳುವಿನ ಕೊಂಡದಲ್ಲಿ ಮುಳುಗಿಸಿಬಿಡುವನು ನೋಡಾ ನಮ್ಮ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ ನಿಮ್ಮ ಶರಣಂಗೆ. ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ ಘನಮಹಿಮ, ನಿಮ್ಮ ಪಾದದಾಣೆ. ಮನ ವಚನ ಕಾಯದಲ್ಲಿ ನೀವಲ್ಲದೆ ಮತ್ತೊಂದನರಿದಡೆ ಕೂಡಲಸಂಗಮದೇವಾ, ಭವ ಘೋರದಲ್ಲಿಕ್ಕಯ್ಯಾ.
--------------
ಬಸವಣ್ಣ
ಅಯ್ಯಾ, ನಾ ಕಾಬುದಕ್ಕೆ ನನ್ನ ಶಕ್ತಿಯಲ್ಲ ನಿಮ್ಮಿಂದವೆ ಕಂಡೆನಯ್ಯಾ. ಅದೇನು ಕಾರಣವೆಂದಡೆ; ತನುವ ತೋರಿದಿರಿ, ಮನವ ತೋರಿದಿರಿ, ಘನವ ತೋರಿದಿರಿ. ತನುವ ಗುರುವಿಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು, ಇವೆಲ್ಲವು ನಿಮ್ಮೊಡನೆ ಎಂದು ನಿಮಗಿತ್ತು. ತಳ್ಳಿಬಳ್ಳಿಯನೆ ಹರಿದು ನಿಮ್ಮಲ್ಲಿಯೆ ನೆಲೆಗೊಂಡ ಕಾರಣ, ಚೆನ್ನಮಲ್ಲೇಶ್ವರನ ಪಾದದಲ್ಲಿ ನಿರ್ಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ತನುವಬೇಡಿದಡೆ ತನುವಕೊಟ್ಟು ಶುದ್ಧವಪ್ಪೆ. ಮನವ ಬೇಡಿದಡೆ ಮನವಕೊಟ್ಟು ಶುದ್ಧವಪ್ಪೆ. ಧನವ ಬೇಡಿದಡೆ ಧನವ ಕೊಟ್ಟು ಶುದ್ಧವಪ್ಪೆ. ನೀನಾವುದ ಬೇಡಿದಡೂ ಓಸರಿಸಿದಡೆ, ಕೈವಾರಿಸಿದಡೆ ಹಿಡಿದು ಮೂಗ ಕೊಯಿ. ಎನ್ನ ಕಲಿತನದ ಬಿನ್ನಪವ ಕಡೆತನಕ ನಡೆಸದಿರ್ದಡೆ ತಲೆದಂಡ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿಮ್ಮ ಭಕ್ತಂಗೆ ಮಲತ್ರಯವಿಲ್ಲ; ಅದೇನು ಕಾರಣವೆಂದಡೆ; ತನುವ ಸದಾಚಾರಕ್ಕರ್ಪಿಸಿ, ಮನವ ಮಹಾಲಿಂಗಭಾವದಲಿರಿಸಿ, ಧನವ ನಿಮ್ಮ ಶರಣರ ದಾಸೋಹಕ್ಕೆ ಸವೆಯಬಲ್ಲವನಾಗಿ_ ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟಬಳಿಕ ಆ ಭಕ್ತನ ತನು ನಿರ್ಮಲ, ಆ ಭಕ್ತನ ಮನ ನಿಶ್ಚಿಂತ, ಆ ಭಕ್ತನ ಧನ ನಿರ್ವಾಣ. ಇಂತಪ್ಪ ಭಕ್ತ ಪ್ರಸಾದಕಾಯನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಧನವ ಪಡೆದು ವಿಭೋಗವನರಿಯದ ಲೋಬ್ಥಿಗೆ ಸಿರಿಯೇಕೆ ಬಯಸುವಂತೆ ? ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ, ಕನ್ನೆ ಅಳಿಯಳು, ಕನ್ನೆ ಉಳಿಯಳು. ಜವ್ವನ ತವಕದಿಂದ ಅವಳು ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ, ಅದೆಂತು ಸೈರಿಸುವೆ ? ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ? ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು, ಸಕಳೇಶ್ವರದೇವ ನಗುವ.
--------------
ಸಕಳೇಶ ಮಾದರಸ
ಕಾಯಕ್ಲೇಶದಿಂದ ತನುಮನ ಬಳಲಿ ಧನವ ಗಳಿಸಿ ಗುರುಲಿಂಗಜಂಗಮಕ್ಕೆ ವೆಚ್ಚಿಸಿ ದಾಸೋಹವ ಮಾಡುವ ಭಕ್ತನ ಪಾದವ ತೋರಯ್ಯಾ, ನಿಮ್ಮ ಧರ್ಮ. ಅದೇಕೆಂದಡೆ; ಆತನ ತನು ಶುದ್ಧ ಆತನ ಮನ ಶುದ್ಧ. ಆತನ ನಡೆ ನುಡಿ ಪಾವನ. ಆತಂಗೆ ಉಪದೇಶವ ಮಾಡಿದ ಗುರು ನಿರಂಜನ ನಿರಾಮಯ. ಅಂತಹ ಭಕ್ತನ ಕಾಯವೆ ಕೈಲಾಸವೆಂದು ಹೊಕ್ಕು ಲಿಂಗಾರ್ಚನೆಯ ಕಾಡುವ ಜಂಗಮ ಜಗತ್ಪಾವನ. ಇಂತಿವರಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯ
--------------
ಚನ್ನಬಸವಣ್ಣ
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ತನುವ ಪಡದು, ಧನವ ಗಳಿಸಬೇಕೆಂದು ಮನುಜರ ಮನೆಯ ಬಾಗಿಲಿಗೆ ಹೋಗಿ, ಮನಬಂದ ಪರಿಯಲ್ಲಿ ನುಡಿಸಿಕೊಂಡು, ಮನನೊಂದು ಬೆಂದು ಮರುಗುತ್ತಿರಲಾರೆ. ಸಕಳೇಶ್ವರದೇವಾ, ನೀ ಕರುಣಿಸಿ ಇದ ಠಾವಿನಲ್ಲಿ ಇಹಂಥಾ ಪರಮಸುಖ ಎಂದು ದೊರಕೊಂಬುದೊ ?
--------------
ಸಕಳೇಶ ಮಾದರಸ
ಎಂದಿದ್ದು ಶರೀರ ಹುಸಿಯೆಂಬುದನರಿದ ಮತ್ತೆ, ತ್ರಿವಿಧಕ್ಕೆ ಕೊಂಡಾಡಲೇತಕ್ಕೆ? ಇದಿರಿಟ್ಟು ಮಾಡುವ ಮಾಟದಲ್ಲಿ ಶ್ರುತ ದೃಷ್ಟ ಅನುಮಾನದಲ್ಲಿ ಅರಿದ ಮತ್ತೆ ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನವ ಕೊಟ್ಟು ನಿರ್ಮುಕ್ತನಾಗಿರ್ಪ ಭಕ್ತನೆ ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ತನುವ ಗುರುವಿಂಗೆ ಕೊಟ್ಟು ಗುರುಭಕ್ತನಾಗಬೇಕು. ಮನವ ಲಿಂಗಕ್ಕೆ ಕೊಟ್ಟು ಲಿಂಗಭಕ್ತನಾಗಬೇಕು. ಧನವ ಜಂಗಮಕ್ಕೆ ಕೊಟ್ಟು ಜಂಗಮಭಕ್ತನಾಗಬೇಕು. ಇಂತೀ ತ್ರಿವಿಧಭಕ್ತಿಯ ವರ್ಮವನರಿಯದವರ ಮೆಚ್ಚ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->