ಅಥವಾ

ಒಟ್ಟು 26 ಕಡೆಗಳಲ್ಲಿ , 9 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ನಿಲಿಸಿದಲ್ಲಿ ನಾನಂಜೆ ನಾನಂಜೆ ನಾನಂಜೆನಯ್ಯಾ ಘನವು ಮಹಾಘನಕ್ಕೆ ಶರಣು ಹೊಕ್ಕುದಾಗಿ. ನೀ ನಿಲಿಸಿದ ಧನದಲ್ಲಿ ನಾನಂಜೆ ನಾನಂಜೆನಯ್ಯಾ, ಧನವು ಸತಿಸುತ ಮಾತಾಪಿತರಿಗೆ ಹೋಗದಾಗಿ. ನೀ ನಿಲಿಸಿದ ತನುವಿನಲ್ಲಿ ನಾನಂಜೆ ನಾನಂಜೆನಯ್ಯಾ, ತನು ಸರ್ವಾರ್ಪಿತದಲ್ಲಿ ನಿಹಿತಪ್ರಸಾದಭೋಗಿಯಾಗಿ, ಇಂತೆಲ್ಲರ ಧೀರಸಮಗ್ರನಾಗಿ, ಕೂಡಲಚೆನ್ನಸಂಗಮದೇವಾ, ನಿಮಗಾನಂಜೆನು
--------------
ಚನ್ನಬಸವಣ್ಣ
ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ ಎನ್ನ ಜ್ಞಾನಕ್ಕೆ ಸ್ವಾನುಭಾವೀಕ್ಷೆಯ ಮಾಡಿ ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದೀಕ್ಷೆಯ ಮಾಡಿ ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶವಿಮೋಚ[ನ]ನೆ, ಅನ್ವಯ ಮನದ ಸರ್ವಾಂಗಲೋಲುಪ್ತ, ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ.
--------------
ಸಿದ್ಧರಾಮೇಶ್ವರ
ಧನದಲ್ಲಿ ಮಕಾರಸ್ವರೂಪವಾದ ಸ್ವಯಂ ಜಂಗಮವನರಿದರ್ಚಿಸಬಲ್ಲಾತನೆ ಶರಣ. ಮಮಕಾರದಲ್ಲಿ ವಕಾರಸ್ವರೂಪವಾದ ಚರಜಂಗಮವನರಿದರ್ಚಿಸಬಲ್ಲಾತನೆ ಶರಣ. ಸಂಗ್ರಹದಲ್ಲಿ ಓಂಕಾರಸ್ವರೂಪವಾದ ಪರಜಂಗಮವನರಿದರ್ಚಿಸಬಲ್ಲಾತನೆ ಶರಣ. ಈ ತ್ರಿವಿಧಜಂಗಮವನರಿದರ್ಚಿಸಬಲ್ಲಾತಂಗಲ್ಲದೆ ಶರಣಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವಂತರ ಲಿಂಗವೆಂಬುದೇ ಶೀಲ, ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ, ಲಿಂಗವಂತರ ಅರ್ಥ ಪ್ರಾಣ ಅಬ್ಥಿಮಾನಕ್ಕೆ ತಪ್ಪದಿಪ್ಪುದೇ ಶೀಲ, ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ ಮಹಾಶೀಲವಯ್ಯಾ, ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ. ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು. ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವನರಿಯರು ಲಿಂಗದ ಮುಖವನರಿಯರು. ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು. ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು. ಶಿವಾಚಾರಪರಾಙ್ಮುಖರು ನೋಡಾ. ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ. ಅದನೆಂತೂ ಅರಿಯರು. ಗುರು ಲಿಂಗ ಜಂಗಮ ಒಂದೆಂಬುದನೂ ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು ಕ್ರೀಯನರಿದು ಕಾಲವನರಿದು ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ. `ನ ಗುರೋರಧಿಕಂ ನ ಗುರೋರಧಿಕಂ ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು `ಏಕ ಮೂರ್ತಿಸ್ತ್ರಧಾ ಭೇದಾಃ ಎಂಬುದನರಿದು ಕ್ರಿಯೆಯಲ್ಲಿ ಕ್ರಿಯೆಯನರಿದು ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ. ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ ಏಕೀಭವಿಸಿ ನಡೆವುದು. ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ. ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರೇ ಬಲ್ಲರು, ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].
--------------
ಉರಿಲಿಂಗಪೆದ್ದಿ
ಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ? ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ? ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ? ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ ದೇವದಾನವ ಮಾನವರೆಲ್ಲರು ನೀವೆಲ್ಲರು ಆವ ಪರಿಯಲ್ಲಿ ಗುರು ಹೇಳಿರಣ್ಣಾ? ಗುರುವಾರು ಲಘುವಾರೆಂದರಿಯರಿ, ಮನ ಬಂದಂತೆ ನುಡಿದು ಕೆಡುವಿರಾಗಿ. ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು. ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು ಮಹಾಸಂವಾದದಿಂದ ಅತಿತರ್ಕವ ಮಾಡಿ ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ, ಆ ಸಭಾಮಧ್ಯದಿ ಪರಮಾಕಾಶದಿ `ಅತ್ಯತಿಷ*ದ್ದಶಾಂಗುಲನೆನಿಪ' ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ*ದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು. ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ, `ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು `ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ ಎಂದುದಾಗಿ. `ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, `ಈಶಾನಸ್ಸರ್ವವಿದ್ಯಾನಾಂ ಎಂದುದಾಗಿ, ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ ವಿದ್ಯೆಯಲ್ಲಿ ಗುರು ಕಾಣಿರೆ, ದೀಕ್ಷೆಯಲ್ಲಿ ಗುರುವೇರಿ ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ `ಜನಿತೋಥವಿಷ್ಣೋಃ ಎಂದುದಾಗಿ, `ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ, ಮಹಾಘನತರವಪ್ಪ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು. ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ ಎಮ್ಮ ಗಣನಾಥದೇವರೇ ಗುರು ಕಾಣಿರೆ. ಇದು ಕಾರಣ, ಶರಣಮೂರ್ತಿ ಶ್ರೀಗುರು. ಶ್ರೀಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು, ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು. ತನು ಮನ ಧನವನರ್ಪಿಸುವುದು, ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ, ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವಭಕ್ತಿಯುಳ್ಳವಂಗೆ; ಕಾಮ ಬೇಡ, ಕ್ರೋಧ ಬೇಡ, ಲೋಭ ಬೇಡ; ಮೋಹ ಬೇಡ, ಮದ ಬೇಡ, ಮತ್ಸರ ಬೇಡ. ಶಿವಭಕ್ತಿಯುಳ್ಳವಂಗೆ; ಕಾಮ ಬೇಕು, ಕ್ರೋಧ ಬೇಕು, ಲೋಭ ಬೇಕು, ಮೋಹ ಬೇಕು, ಮದ ಬೇಕು, ಮತ್ಸರ ಬೇಕು. ಬೇಕೆಂಬುದಕ್ಕಾವ ಗುಣ ? ಕಾಮ ಬೇಕು ಲಿಂಗದಲ್ಲಿ, ಕ್ರೋಧ ಬೇಕು ಕರಣಂಗಳಲ್ಲಿ, ಲೋಭ ಬೇಕು ಪಾದೋದಕ ಪ್ರಸಾದದಲ್ಲಿ, ಮೋಹ ಬೇಕು ಗುರುಲಿಂಗ ಜಂಗಮದಲ್ಲಿ, ಮದ ಬೇಕು ಶಿವಚಾರದಿಂದ ಘನವಿಲ್ಲವೆಂದು, ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ_ಇಂತೀ ಷಡ್ಗುಣವಿರಬೇಕು. ಬೇಡವೆಂಬುದಕ್ಕಾವುದು ಗುಣ ? ಕಾಮ ಬೇಡ ಪರಸ್ತ್ರೀಯರಲ್ಲಿ, ಕ್ರೋಧ ಬೇಡ ಗುರುವಿನಲ್ಲಿ, ಲೋಭ ಬೇಡ ತನು ಮನ ಧನದಲ್ಲಿ, ಮೋಹ ಬೇಡ ಸಂಸಾರದಲ್ಲಿ, ಮದ ಬೇಡ ಶಿವಭಕ್ತರಲ್ಲಿ, ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ._ ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ. ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ. ಧನದಲ್ಲಿ ಜಂಗಮ ಭರಿತವಾದುದೇ ಭರಿಬೋನ. ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ. ಅಂತರಂಗ ಬಹಿರಂಗದಲ್ಲಿ ಪರಿಪೂರ್ಣವಸ್ತು ಭರಿತವಾಗಿ ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ. ಹೀಂಗಲ್ಲದೆ: ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು ಎಂಜಲುಯೆಂದು ಕಳೆದು ಬಂದ ಪದಾರ್ಥವ ಮುಟ್ಟಿ ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ. ಲಿಂಗಾರ್ಪಿತವಿಲ್ಲವಾಗಿ ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ. ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ? ಲಿಂಗಾಂಗಿಯ ಅಂಗದಲ್ಲಿ ಸಂದೇಹ ಸೂತಕ ಉಂಟೇ? ಈ ಭಂಗಿತರ ಮುಖವ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೀವಿರಿಸಿದ ಮನದಲ್ಲಿ ನಾನಂಜೆನಯ್ಯಾ, ಮನವು ಮಹಾಘನಕ್ಕೆ ಶರಣುಗತಿವೊಕ್ಕುದಾಗಿ. ನೀವಿರಿಸಿದ ಧನದಲ್ಲಿ ನಾನಂಜೆನಯ್ಯಾ, ಧನವು ಸತಿಸುತಮಾತಾಪಿತರಿಗೆ ಸವೆಯದಾಗಿ. ನೀವಿರಿಸಿದ ತನುವಿನಲ್ಲಿ ನಾನಂಜೆನಯ್ಯಾ, ತನುವು ಸರ್ವಾರ್ಪಿತದಲ್ಲಿ ನಿಯತಪ್ರಸಾದಭೋಗಿಯಾಗಿ. ಇದು ಕಾರಣ, ವೀರಧೀರಸಮಗ್ರನಾಗಿ ನಿಮಗಾನಂಜೆ, ಕೂಡಲಸಂಗಮದೇವಾ.
--------------
ಬಸವಣ್ಣ
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ; ಇದಾವಂಗಳವಡುವುದಯ್ಯಾ ನಿಧಾನ ತಪ್ಪಿಬಂದಡೆ ಒಲ್ಲೆನೆಂಬವರಿಲ್ಲ, ಪ್ರಮಾದವಶ ಬಂದಡೆ ಹುಸಿಯೆನೆಂಬವರಿಲ್ಲ, ನಿರಾಶೆ, ನಿರ್ಭಯ ಕೂಡಲಸಂಗಮದೇವಾ ನೀನೊಲಿದ ಶರಣಂಗಲ್ಲದಿಲ್ಲ.
--------------
ಬಸವಣ್ಣ
ತನುವಿನಲ್ಲಿ ತನು ಸವೆದು, ಮನದಲ್ಲಿ ಮನ ಸವೆದು, ಧನದಲ್ಲಿ ಧನ ಸವೆದು, ಲಜ್ಜೆಗೆಟ್ಟು ನಾಣುಗೆಟ್ಟು ಕಿಂಕಿಲನಾಗಿರಬೇಕು. ಲಿಂಗಜಂಗಮವನೊಲಿಸುವಂಗೆ ಇದು ಚಿಹ್ನವಯ್ಯಾ. ಪ್ರಸಾದ ಸಾಹಿತ್ಯವಾಗಿ ಉಲುಹಡಗಿರಬೇಕು, ಕೂಡಲಚೆನ್ನಸಂಗಯ್ಯನಲ್ಲಿ ಏಕಾರ್ಥವಾಗಿರಬೇಕು.
--------------
ಚನ್ನಬಸವಣ್ಣ
ಜ್ಞಾನ ಉಪಾಸ್ಥೆಪಶುಜ್ಞಾನವ ಬಲ್ಲ ಮಾತ ನುಡಿಯಲಾಗದು, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲತ್ರಯದಲ್ಲಿ ಬೀಳದೆ, ಜಾಗ್ರತ ಸ್ವಪ್ನ ಸುಷುಪ್ತಿಯೆಂಬ ವ್ಯಾಪಾರತ್ರಯದ ಅನುಮಾನವರಿತು, ಆಧ್ಯಾತ್ಮಿಕ ಆಧಿಭೌತಿಕ ಆಧಿದೈವಿಕವೆಂಬ ತಾಪತ್ರಯವಂ ಕೊಳಲಾಗದೆ, ಅರ್ಥೇಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯದ ಭ್ರಾಂತಿಯಡಗಿ, ಅಭಾವ ಸ್ವಭಾವ ನಿರ್ಭಾವದಲ್ಲಿ ಶುದ್ಧವಾಗಿ, ದೀಕ್ಷೆ ಶಿಕ್ಷೆ ಸ್ವಾನುಭಾವವೆಂಬ ದೀಕ್ಷಾತ್ರಯದಲ್ಲಿ ಅನುಮಾನವನ್ನರಿತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗವೆಂಬ ಲಿಂಗತ್ರಯದ ಭೇದವಂ ಭೇದಿಸಿ, ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವಂ ಭೇದಿಸಿ, ಸ್ವರ್ಗಮತ್ರ್ಯ ಪಾತಾಳವೆಂಬ ಲೋಕತ್ರಯವನತಿಗಳದು, ಇಹ ಪರ ಸ್ವಯವೆಂಬ ಮುಕ್ತಿತ್ರಯದ ಹಂಗು ಹಿಂಗಿ, ಮಥನ ನಿರ್ಮಥನ ಸಮ್ಮಥನವೆಂಬ ಮಥನತ್ರಯದಲ್ಲಿ ನಿರತನಾಗಿ, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯದ ಹಮ್ಮ ಬಿಟ್ಟು, ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವನೊರಸಲೀಯದೆ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಂ ನಿರ್ಮಲವಂ ಮಾಡಿ, ಗುರುನಿಂದೆ ಶಿವನಿಂದೆ ಭಕ್ತನಿಂದೆಯೆಂಬ ನಿಂದಾತ್ರಯಂಗಳಂ ಕೇಳದೆ, ಚಂದ್ರ ಸೂರ್ಯ ಅಗ್ನಿ ಎಂಬ ನೇತ್ರತ್ರಯದ ಹೊಲಬನರಿದು, ಪ್ರಾಹ್ನ ಮಧ್ಯಾಹ್ನ ಅಪರಾಹ್ನವೆಂಬ ವೇಳಾತ್ರಯವಂ ಮೀರಿ, ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಅಗ್ನಿತ್ರಯಕ್ಕೆ ಇಂಬುಗೊಡದೆ, ಅಧೋನಿರಾಳ ಮಧ್ಯನಿರಾಳ ಊಧ್ರ್ವನಿರಾಳವೆಂಬ ನಿರಾಳತ್ರಯದಲ್ಲಿ ನಿರತನಾಗಿ, ಅನುಭಾವ ಮಹಾನುಭಾವ ಸ್ವಾನುಭಾವವೆಂಬ ಅನುಭಾವತ್ರಯಂಗ?ಲ್ಲಿ ಬೀಸರಹೊಂದದೆ, ಬಾಲ್ಯ ಯೌವನ ವೃದ್ಧಾಪ್ಯವೆಂಬ ತನುತ್ರಯಂ ಮರೆದು, ತನು ಮನ ಧನದಲ್ಲಿ ಶುದ್ಧನಾಗಿ, ಆಗಮತ್ರಯದಲ್ಲಿ ಅನುವರಿತು, ಇಂತೀ ತ್ರಯ ಸಂಪಾದನೆಯಂ ಮೀರಿದ ನಿಜಶರಣನೆ ಕೂಡಲಚೆನ್ನಸಂಗಯ್ಯನೆಂದರಿದು ಸುಖಿಯಾದೆ£ಯ
--------------
ಚನ್ನಬಸವಣ್ಣ
ತನುವು ಸವೆಯದು ಮನವು ಸವೆಯದು ಪ್ರಾಣಾದಿ ದ್ರವ್ಯ ಸವೆಯದು, ಕಂಡಕಂಡಲ್ಲಿ ಕುಂಡಿಯನೆತ್ತಿ ತಲೆಯ ಚಾಚುವ ತೂಳಮೇಳದ ಸಂತೆಯ ಭಂಡರು ಶರಣರಪ್ಪರೆ ? ಮನೆಯ ನಚ್ಚು ಬಿಡದು, ಮಡದಿಯ ಮರುಳು ಬಿಡದು, ಹಣದ ರತಿಯು ಬಿಡದು. ಬಿಟ್ಟಿಯ ಭಕ್ತಿಯ ಮಾಡುವ ಕೆಟ್ಟ ನರನಿಗೆ ಶ್ರೇಷ*ಶರಣ ಭಕ್ತನಾಮ ಸಲ್ಲದು ಕಾಣಾ. ಮತ್ತೆಂತೆಂದೊಡೆ, ತನುವಿನಲ್ಲಿ ನಿರ್ವಂಚಕತ್ವ, ಮನದಲ್ಲಿ ನಿದ್ರ್ವಂದ್ವ, ಪ್ರಾಣದಲ್ಲಿ ಪ್ರೇಮರತಿಸಂಯುಕ್ತನೇ ಶರಣ. ಮನೆ ಮಡದಿ ಧನದಲ್ಲಿ ಇಲ್ಲದಿರ್ದಾತನೆ ಶರಣಭಕ್ತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಲಿದ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವಾ. ತಪ್ಪೆನ್ನದು, ತಪ್ಪೆನ್ನದು ! ತನು ಮನ ಧನದಲ್ಲಿ ಮಾಟಕೂಟವೆಂದರಿಯದ ತಪ್ಪೆನ್ನದು, ತಪ್ಪೆನ್ನದು ! ಕಡೆುಲ್ಲದ ಹುಸಿ ಎನ್ನದು, ಕೂಡಲಸಂಗಮದೇವಾ. 315
--------------
ಬಸವಣ್ಣ
ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ ಗುರುವಿಂಗೆ ತನುವ ಸವೆಸಿದಡೆ ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ ಶ್ರೀಗುರುದೇವನು ನೆಲೆಗೊಂಬನು ನೋಡಾ. ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ ಲಿಂಗಕ್ಕೆ ಮನವ ಸವೆಸಿದಡೆ ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ ಪರಶಿವಲಿಂಗವು ನೆಲೆಗೊಂಬುದು ನೋಡಾ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ ಜಂಗಮಕ್ಕೆ ಧನವ ಸವೆಸಿದಡೆ ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ ಮಹಾಘನ ಜಂಗಮವು ನೆಲೆಗೊಂಬುದು ನೋಡಾ. ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->