ಅಥವಾ

ಒಟ್ಟು 12 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ನಂದಿ ದೇವಂಗೆ, ಖಳ ಸಿರಿಯಾಳಂಗೆ, ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ, ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ? ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಪಣ, ಒಬ್ಬಂಗೆ ತನು ಮನ ಧನದ ರಪಣ. ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಗುರುವಿಂಗೆ ತನುವನರ್ಪಿಸಿದಲ್ಲದೆ ತನುವಿನ ವಾಸನೆ ಹರಿಯದು. ಲಿಂಗಕ್ಕೆ ಮನವನರ್ಪಿಸಿದಲ್ಲದೆ ಮನದ ವಾಸನೆ ಹರಿಯದು. ಜಂಗಮಕ್ಕೆ ಧನವನರ್ಪಿಸಿದಲ್ಲದೆ ಧನದ ವಾಸನೆ ಹರಿಯದು. ಇದು ಕಾರಣ ತ್ರಿವಿಧಕ್ಕೆ ತ್ರಿವಿಧವನರ್ಪಿಸಿ ತ್ರಿವಿಧ ವಾಸನೆಯ ಹರಿದು, ತ್ರಿವಿಧವು ಒಂದಾದ ಘನವನೊಡಗೂಡಬಲ್ಲಡೆ ಸದ್ಭಕ್ತನೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನು ಮನ ಧನದ ಲೋಭ ಎನಗೇಕೋ? ಅರ್ಥಪ್ರಾಣ ಅಭಿಮಾನಂಗಳ ತಾತ್ಪರ್ಯ ಎನಗೇಕೋ? ಪುತ್ರ ಮಿತ್ರ ಕಳತ್ರ ಭೃತ್ಯ ಭ್ರಾತಾದಿಗಳ ಹಂಗು ಎನಗೇಕೋ? ಸೌರಾಷ್ಟ್ರ ಸೋಮೇಶ್ವರಾ, ನಿನಗೆ ಎನ್ನ ಹಂಗಿಲ್ಲವಾಗಿ, ಎನಗಿವರ ಹಂಗಿಲ್ಲ.
--------------
ಆದಯ್ಯ
ಕೊಲುವಂಗೆ ಜೀವದ ದಯವಿಲ್ಲ. ಪರಾಂಗನೆಯ ಬೆರಸುವಂಗೆ ಪರಮೇಶ್ವರನ ಒಲವರವಿಲ್ಲ. ಪರರುವ ಬಂಧಿಸಿ ಬೇಡುವಂಗೆ ಧನದ ಒಲವರವಿಲ್ಲ. ಪ್ರಾಣತ್ಯಾಗಿಗೆ ಕಾಣಿಯಾಚಿಯ ಕೇಣಸರವಿಲ್ಲ. ಅಘಹರನ ಶರಣನಾಗಿ, ಜಗವ ಬೋಧಿಸದೆ ಜಗಭರಿತನಾಗಿ ಇರಬೇಕು. ಆತ ಅಘಹರಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನೆ.
--------------
ಮನುಮುನಿ ಗುಮ್ಮಟದೇವ
ಲಿಂಗವಂತನು ಕೇವಲ ಲಿಂಗಮೂರ್ತಿ. ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದವ ಧರಿಸಿ, ಲಿಂಗವಂತರಲ್ಲಿ ವರ್ತಿಸಿ, ಸರ್ವವೂ ಲಿಂಗಕ್ರೀಯಾಗಿದ್ದು ಲಿಂಗವಿಲ್ಲದವರಲ್ಲಿ ಧನದ ಕೊಳುಕೊಡೆ ಮನದ ಕೊಳುಕೊಡೆ ತನುವಿನ ಕೊಳುಕೊಡೆಯನೂ ಮಾಡಿದಡೆ ನಾಚದೆ ಶಿವಾಚಾರ? ನಾಚದೇ ಪ್ರಸಾದ? ನಾಚರೆ ಲಿಂಗವಂತರು. ಸುಡು, ಸುಡು, ಕಡು ಕಷ್ಟ, ಅವರನು ಬಿಡು ಬಿಡು. ಆ ತನುವನು ಲಿಂಗವಂತರಲ್ಲಿಯೇ ಸರ್ವಕ್ರೀಯ ಅರ್ತಿಸುವುದು. ತನಗೆ ಇಚ್ಛೈಸಿತ್ತ ಕೊಂಡು ಕೊಂಬುದು, ಅವರು ಇಚ್ಛೈಸಿತ್ತ ಕೊಡುವುದು, ಅವರಲ್ಲಿಯೆ ಅನುಭವವನಾಸೆಗೈವುದು. ಅ[ನ್ಯ]ರ ವಿಚಾರದಲ್ಲಿ ನಡೆದು ನರಕಕ್ಕಿಳಿಯಲಾಗದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬಟ್ಟೆಯ ಬಡಿವ ಕಳ್ಳಂಗೆ, ಬೇಹು ಸಂದು ಕಳವು ದೊರಕಿದಂತಾಯಿತ್ತು. ಕುರುಡನು ಎಡಹುತ್ತ ತಡಹಿ ಹಿಡಿದು ಕಂಡಂತಾಯಿತ್ತು. ನಿರ್ಧನಿಕ ಧನದ ಬಯಕೆಯಲ್ಲಿ ನಡೆವುತ್ತ ಎಡಹಿದ ಕಲ್ಲು ಪರುಷವಾದಂತಾಯಿತ್ತು. ಅರಸುವಂಗೆ ಅರಿಕೆ ತಾನಾದಂತಾಯಿತ್ತು. ಎಲೆ ಗುಹೇಶ್ವರಾ ನೀನು ಎನಗೆ ದೊರಕುವುದೆಂಬುದು, ನಾ ಮುನ್ನ ಮಾಡಿದ ಸುಕೃತದ ಫಲ ! ಏನ ಬಣ್ಣಿಪೆ ಹೇಳಾ ?
--------------
ಅಲ್ಲಮಪ್ರಭುದೇವರು
ಮನದ ಮತ್ಸರವ ಕಳೆದು, ಮನದ ಮೇಲೆ ಲಿಂಗವ ಕುಳ್ಳಿರಿಸಬೇಕಯ್ಯಾ. ಧನದ ಲೋಭವ ಕಳೆದು, ಧನದ ಮೇಲೆ ಜಂಗಮವ ಕುಳ್ಳಿರಿಸಬೇಕಯ್ಯಾ. ಕಾಯಗುಣಂಗಳ ಕಳೆದು ಕಾಯವ ಪ್ರಸಾದವ ಮಾಡಬೇಕಯ್ಯಾ. ಈ ಎಲ್ಲಾ ಗುಣಂಗಳನತಿಗಳೆದು ತ್ರಿವಿಧದಲ್ಲಿ ದಾಸೋಹಿಯಾಗಿರಬೇಕು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ ಆಗು_ಚೇಗೆಯ ರಾಗ_ದ್ವೇಷ, ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ. ಅಲ್ಪಭೂಮಿ ಅಲ್ಪಂಗಲ್ಲದೆ ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ ಅಂತಹ ಬ್ರಹ್ಮಾಂಡವನೇಕವನೂ ಆಭರಣವ ಮಾಡಿಯಿಟ್ಟುಕೊಂಡಿಪ್ಪ, ಅಂತಹ ಆಭರಣದಿಂದ ಪೂಜೆಗೊಂಡಿಪ್ಪ, ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ. ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ, ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ? ಉತ್ತಮ ಮಧ್ಯಮ ಕನಿಷ* ನಿಕೃಷ್ಟ ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ; ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ? ವೇದಶಾಸ್ತ್ರ ಪುರಾಣಾಗಮಾದಿಯಾಗಿ ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ? ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗುಮಾಡಬಂದವರಲ್ಲ. ಮನದ ಮೇಲೆ ಬಂದು ನಿಂದು ಜರೆದು ನುಡಿದು ಪಥವ ತೋರಬಲ್ಲಡಾತನೆ ಸಂಬಂಧಿ. ಹಾಗಲ್ಲದೆ ಅವರಿಚ್ಚೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮಚ್ಚುವನೆ ಚೆನ್ನಮಲ್ಲಿಕಾರ್ಜುನ ?
--------------
ಅಕ್ಕಮಹಾದೇವಿ
ನೋಟಕ್ಕೆಯೂ ಕೂಟಕ್ಕೆಯೂ ಕಣ್ಣು ಮನವೆರಸವವ್ವಾ. ಅವ್ವಾ, ಕಂಗಳು ತಪ್ಪಿ ನೋಡಲಮ್ಮೇ; ಅಮ್ಮೆ ಕೇಳೆಲೆಯವ್ವಾ. ಅವ್ವಾ, ಕಿವಿಗಳ ತಪ್ಪಿ ಕೇಳಲಮ್ಮೆ; ಆಮ್ಮೆ ಕೇಳೆಲೆಯವ್ವಾ. ಅವ್ವಾ, ಕಲಿಗಳಾಗದಲ್ಲಿ ಸೋತಂತೆ. ತನು ಮನ ಧನದ ಭಂಗವಳಿದು ನೆರೆಯನವ್ವಾ ಮಹಾಲಿಂಗ ಗಜೇಶ್ವರನವ್ವಾ.
--------------
ಗಜೇಶ ಮಸಣಯ್ಯ
-->