ಅಥವಾ

ಒಟ್ಟು 159 ಕಡೆಗಳಲ್ಲಿ , 26 ವಚನಕಾರರು , 108 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸುವಂಗೆ ಅರಸುವಂಗೆ ಅರಕೆ ತಾನಹುದು, ದೇವಾ ! ಬಯಸುವಂಗೆ ಬಯಸುವಂಗೆ ಬಯಕೆ ತಾನಹುದು, ದೇವಾ ! ನೀವು ಭಾವಿಸಿದಂತಲ್ಲದೆ ಬೇರೊಂದಾಗಬಲ್ಲುದೆ ? ಈರೇಳು ಭುವನಸ್ಥಾಪ್ಯ ಪ್ರಾಣಿಗಳೆಲ್ಲ ನಿಮ್ಮಿಂದಲಾದವಾಗಿ. ನಿಮ್ಮಿಂದಲಹುದಾಗದೆಂಬ ಸಂದೇಹವುಂಟೆ ಬಸವಣ್ಣ ? ನಿಮ್ಮಡಿಗಳೆಂದಂತೆ, ನೆನೆದಂತೆ, ನೋಡಿದಂತೆ, ತಪ್ಪದು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಪ್ರಭುವಿನಾಣೆ ಕಟ್ಟು ಗುಡಿಯನು.
--------------
ಚನ್ನಬಸವಣ್ಣ
ಗಮನವರಿತು ಸುಳಿಯಬಲ್ಲಡೆ ಆಪ್ಯಾಯನವರಿತು ಉಣಬಲ್ಲಡೆ ಇಚ್ಛೆಯರಿತು ಬೇಡಬಲ್ಲಡೆ ಈ ತ್ರಿವಿಧ ಗುಣದ ಅನುವ ಬಲ್ಲವರು ದೇವರಿಗೆ ದೇವರಾಗಿಪ್ಪರು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ.
--------------
ಸಿದ್ಧರಾಮೇಶ್ವರ
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ, ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ, ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ, ನಮ್ಮ ಕೂಡಲಸಂಗನ ಪೂಜಿಸಿ ದೇವಾ, ಭಕ್ತರೆನಿಸಿಕೂಂಬುದ ಕಂಡೆ.
--------------
ಬಸವಣ್ಣ
ಆವಾವ ದೆಸೆಗೆ ಬಾಯ ಬಿಟ್ಟು ಅರಸಿ ಕಾಣದೆ ಕಂಗೆಡ್ಕ್ತುದ್ದೆನಯ್ಯಾ. ದೇವಾ, ಈ ಬಾಯ ಬಿಡುವುದ ಮಾಣಿಸಿ, ಎನಗೆ ಪರಮಪ್ರಸಾದವ ಕರುಣಿಸಿ ರಕ್ಷಿಸಯ್ಯಾ; ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಯ್ಯಾ.
--------------
ಸಿದ್ಧರಾಮೇಶ್ವರ
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ, ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ ? ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ, ಆ ಧಾವತಿಯಿಂದ ಮುನ್ನಿನ ವಿದ್ಥಿ[ಯೆ] ಸಾಲದೆ ? ಗುಹೇಶ್ವರಾ, ನಿಮ್ಮ ಪೂಜಿಸಿ ಸಾವಡೆ, ನಿಮ್ಮಿಂದ ಹೊರಗಣ ಜನವೆ ಸಾಲದೆ ?
--------------
ಅಲ್ಲಮಪ್ರಭುದೇವರು
ಭಕ್ತನಾದುದಕ್ಕೆ ಇದೆ ಚಿಹ್ನವು ನೋಡಾ, ಎಲೆ ದೇವಾ. ಕೈಯಲ್ಲಿರಲು ಮಾಂಸದ ಮುದ್ದೆ, ಬಾಯಲ್ಲಿರಲು ವಾರಾಂಗನೆಯ ತಾಂಬೂಲ, ಮನದಲ್ಲಿರಲು ಕ್ಕ್ರಯ ಭಾವ, ಕೊರಳಲ್ಲಿರಲು ಲಿಂಗ, ದೇಹದಲ್ಲಿರಲು ಲಿಂಗಲಾಂಛನ, ಜಂಗಮವೆಂದು ನಂಬುವುದು ಕಾಣಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಕರ್ಮಿಗಳು ಶಿವಪಥಕ್ಕೆ ಬಪ್ಪಾಗಳವರ ಕರ್ಮ ಬೆಂಬತ್ತಿ ಕಾಡುವದಯ್ಯಾ. ಲಿಂಗಾರಾಧನೆಯ ಮಾಡಲೀಯದು. ಸಂದೇಹವನೆ ತೋರಿಸಿ ಕೆಡಿಸುವದಯ್ಯಾ. ಏಕೆ? ಅವರು ಮಾಡಿದ ಕರ್ಮವನುಣಬೇಕಾಗಿ! ಇದನರಿದು ನಿಮ್ಮ ನೆರೆನಂಬಿ ಪೂಜಿಸೆ ಹರಿವುದು ಕರ್ಮ, ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವಾ.
--------------
ಸಿದ್ಧರಾಮೇಶ್ವರ
ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ ಶೂನ್ಯದಲ್ಲಿ ನಿಂದು ಸ್ವಯಂಭುವಾದಿರಲ್ಲ. ಬೀಜ ವೃಕ್ಷದಂತೆ ಸಾಕಾರ ನಿರಾಕಾರವು ನೀವೆಯಾದಿರಲ್ಲ. ಸಕಲವೆಲ್ಲಕ್ಕೆ ಮೂಲಿಗರಾದಿರಲ್ಲ. ನಿಮ್ಮ ನಿಜವ ನೀವೇ ಅರಿವುತ್ತಿರ್ದಿರಲ್ಲ. ನಿಮ್ಮ ಮಹಿಮೆಯ ನೀವೇ ಬಲ್ಲಿರಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ, ನಂಬಿ ಕರೆದಡೋ ಎಂದೆ, ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ, ಕೂಡಲಸಂಗಮದೇವಾ ಎನ್ನನೇಕೆ ಒಲ್ಲೆಯಯ್ಯಾ 518
--------------
ಬಸವಣ್ಣ
ಪಲ್ಲ :ಬಂಧನ ಸಂಸಾರದಂದುಗದ ದಾಳಿಯಲ್ಲಿ ನೊಂದು ಬೆಂದೆನೊ ಎನ್ನ ಹುಯ್ಲು ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ. ಪದ :ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. | 1 | ಸಟೆ ಠಕ್ಕು ಠೌಳಿ ಅಟಮಟದ ಬಂಧನದ ಕುಟಿಲಸಂಸಾರಸಾಗರದ ತೊರೆನೆರೆಗಳೊಳು ಪುಟನೆಗೆದು ತಲೆ ಮುಣುಗುತಲಿರುವನ ಕಂಡು ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ ತಟಕೆನ್ನನೆಳೆದು ತಗೆದೀಗ ಇನಿತಾತ್ಮ ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. | 2 | ರಸವಿಷಯ ಮೋಹನದ ಕೂಪಜಲದೊಳು ಮುಳುಗಿ ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ ಶಿಶುವ ಬೋಳೈಸುವಂದದಲೆನ್ನ ಬೋಳೈಸು ಅಸಮಾಕ್ಷ ಪರಮಗುರುವೆ.| 3 | ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. | 4 | ಮಾಯಾಸಂಸಾರಸರ್ಪನ ವಿಷವು ತಲೆಗೇರಿ ನೋಯುತಿದ್ದೆನು ಹಲವುವಿಧದಾಸೆಪಾಶದಲಿ ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ ಶವವನುಳುವಿಕೋ ಭವರೋಗವೈದ್ಯ ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. | 5 |
--------------
ಹೇಮಗಲ್ಲ ಹಂಪ
ವಿಷ ಉಂಡು ದಣಿಯಲಾರದೆ, ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ. ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ, ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ [ಈ ದೇವ] ಇದ್ದ ದೇವಾಲಯವಲ್ಲದೆ ಮತ್ತೆ ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ, ತಾನಾಖಂಡಮೂರ್ತಿಯ ರೂಪು ಧರಿಸದೆ, ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ ದೇವ, ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
``ಅತೀತಃ ಪಂಥಾನಂ ತವ ಚ ಮಹಿಮಾ ಎಂಬ ಶ್ರುತಿಗಳು ನಿಮ್ಮ ಕಾಣಲರಿಯವು ದೇವಾ. ಲಿಂಗದೇವಾ, ನಿಮ್ಮ ಮಹಿಮೆಯ ಸ್ತುತಿಯಿಸಿ ಕಾಣಲರಿಯವು ದೇವಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ ಎಂಬ ತುದಿ ಪದವು, ಕೂಡಲಚೆನ್ನಸಂಗಮದೇವಾ ಪರವಿಲ್ಲಾಗಿ.
--------------
ಚನ್ನಬಸವಣ್ಣ
ದೇವ, ದೇವಾ ಬಿನ್ನಹ ಅವಧಾರು; ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲನೊಂದೆ ಎಂಬೆ. ಹಾರುವ ಮೊದಲು, ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂಬೆ ಎಂಬೆ. ಹೀಂಗೆಂದು ನಂಬೂದೆನ್ನ ಮನ. ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ಶಿವ ಶಿವ! ಮಹಾದೇವ, ಎನ್ನ ಗುಣಾವಗುಣವರಿಯದೆ ಇದಿರ ಗುಣವ ವಿಚಾರಿಸುವೆ. ಅವರು ವಂಚಿಸಿಹರೆಂದು ಕೊಡರೆಂದು ನಿಂದಿಸಿಹರೆಂದು ಮಾತಾಪಿತ ಸತಿಸುತರುಗಳಿಗೆ ಸ್ನೇಹಿಸಿಹರೆಂದು ಶಿವ ಶಿವಾ! ಬುದ್ಧಿಯನರಿಯದೆ ನಾ ನಿಮಗೆ ವಂಚನೆಯಿಲ್ಲದೆ ಒಲಿದೆನಾದಡೆ ನೀವೆನಗೆ ಒಳ್ಳಿದರು. `ಸತ್ಯಭಾವಿ ಮಹತ್ಸತ್ಯಂ' ಎಂಬುದಾಗಿ, ನಿಮ್ಮಡಿಗಳ ಸ್ನೇಹಿತರು, ಎನಗೆ ಒಳ್ಳಿದರು. ಸ್ನೇಹ ತಾತ್ಪರ್ಯವ ಮಾಡಿ ಬೇಡಿತ್ತನಿತ್ತು ದೇವಾ ಎನುತಿಪ್ಪರು. ಒಳ್ಳಿತ್ತು ಹೊಲ್ಲೆಹ ಎನ್ನಲ್ಲಿ, ಇದಿರಿಂಗೆ ಅದು ಸ್ವಭಾವ ಗುಣ. ಎನ್ನ ದುರ್ಗುಣಂಗಳ ಕಳದು ಸದ್ಗುಣವ ಮಾಡಿ ನಿನ್ನೊಳಗು ಮಾಡಿಕೊಳ್ಳಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->