ಅಥವಾ

ಒಟ್ಟು 50 ಕಡೆಗಳಲ್ಲಿ , 5 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ , ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಚರಿಸುವ ಜನರೆಲ್ಲ ದೇವರಲ್ಲ; ಚರಿಸಿ ಚರಿಸಿ ಭ್ರಮೆಗೊಂಡರು ಮತ್ತೆ ದೇವರು ದೇವರುಎಂದು, ನೋಡಾ. ಚರಿಸುವ ಜನರು ದೇವರು, ಚರಿಸದ ವಸ್ತು ದೇವರು, ನಾ ನೀನೆಂಬುಭಯ ದೇವರು, ಕಪಿಲಸಿದ್ಧಮಲ್ಲಿಕಾರ್ಜುನದೇವರು ದೇವರು.
--------------
ಸಿದ್ಧರಾಮೇಶ್ವರ
ಗಂಗಾಧರ ಗೌರೀಶ ದೇವರಲ್ಲ, ಶಂಕರ ಶಶಿಧರ ದೇವರಲ್ಲ, ಪಂಚಮುಖ, ದಶಭುಜವನುಳ್ಳ ನಂದಿವಾಹನರು ದೇವರಲ್ಲ, ತ್ರಿಶೂಲ ಖಟ್ವಾಂಗಧರರು ದೇವರಲ್ಲ, ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಹಿಡಿದ ಪ್ರಳಯಕಾಲರುದ್ರ ದೇವರಲ್ಲ, ನಿರಾಳಸ್ವಯಂಭುಲಿಂಗವ ತಾನೆಂದರಿದಡೆ ತಾನೆ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು. ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು. ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು. ಇಂತಿವನೆಲ್ಲವನರಿವ ಚಿತ್ತ ದೇವರಲ್ಲ. ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು. ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ, ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ, ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ, ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ, ವೀರಬೀರೇಶ್ವರಲಿಂಗದೊಳಗಾದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ. ಅಪ್ಪು ದೇವರೆಂಬೆನೆ ಅಪ್ಪು ದೇವರಲ್ಲ. ಅಗ್ನಿ ದೇವರೆಂಬೆನೆ ಅಗ್ನಿ ದೇವರಲ್ಲ. ವಾಯು ದೇವರೆಂಬೆನೆ ವಾಯು ದೇವರಲ್ಲ. ಆಕಾಶ ದೇವರೆಂಬೆನೆ ಆಕಾಶ ದೇವರಲ್ಲ. ಆತ್ಮ ದೇವರೆಂಬೆನೆ ಆತ್ಮ ದೇವರಲ್ಲ. ಸೂರ್ಯ ದೇವರೆಂಬೆನೆ ಸೂರ್ಯ ದೇವರಲ್ಲ. ಚಂದ್ರ ದೇವರೆಂಬೆನೆ ಚಂದ್ರ ದೇವರಲ್ಲ. ಅದೇನು ಕಾರಣವೆಂದೊಡೆ : ಪೃಥ್ವಿ ಶಿವನ ಸದ್ಯೋಜಾತಮುಖದಲ್ಲಿ ಪುಟ್ಟಿತ್ತು. ಅಪ್ಪು ಶಿವನ ವಾಮದೇವಮುಖದಲ್ಲಿ ಪುಟ್ಟಿತ್ತು. ತೇಜ ಶಿವನ ಅಘೋರಮುಖದಲ್ಲಿ ಪುಟ್ಟಿತ್ತು. ವಾಯು ಶಿವನ ತತ್ಪುರುಷಮುಖದಲ್ಲಿ ಪುಟ್ಟಿತ್ತು. ಆಕಾಶ ಶಿವನ ಈಶಾನ್ಯಮುಖದಲ್ಲಿ ಪುಟ್ಟಿತ್ತು. ಆತ್ಮ ಶಿವನ ಗೋಪ್ಯಮುಖದಲ್ಲಿ ಪುಟ್ಟಿತ್ತು. ಸೂರ್ಯ ಶಿವನ ನಯನದಲ್ಲಿ ಪುಟ್ಟಿತ್ತು. ಚಂದ್ರ ಶಿವನ ಮನಸ್ಸಿನಲ್ಲಿ ಪುಟ್ಟಿತ್ತು. ``ಯತ್ ದೃಷ್ಟಮ್ ತತ್ ನಷ್ಟಮ್'' ಎಂದು, ಇಂತೀ ಅಷ್ಟತನುಗಳಿಗೆ ಹುಟ್ಟು ಹೊಂದು ಉಂಟಾದ ಕಾರಣ ಇವು ಕಲ್ಪಿತವೆಂದು ಕಳೆದು ನೀನೊಬ್ಬನೆ ನಿತ್ಯ ಪರಿಪೂರ್ಣನೆಂದು ತಿಳಿದು ಉಳಿದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಪಂಚವಿಂಶತಿಗುಣಂಗಳಿಂದಾದ ದೇಹವ ದೇವರೆಂಬರು ; ಆ ದೇಹವು ದೇವರಲ್ಲ ನೋಡಾ. ಸಕಲೇಂದ್ರಿಯಕ್ಕೂ ಒಡೆಯನಾಗಿಹ ಮನವ ದೇವರೆಂಬರು ; ಆ ಮನ ದೇವರಲ್ಲ ನೋಡಾ. ಆ ಮನದಿಂದಾದ ಬುದ್ಧಿಯ ದೇವರೆಂಬರು ; ಆ ಬುದ್ಧಿ ದೇವರಲ್ಲ ನೋಡಾ. ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು ; ಆ ಚಿತ್ತ ದೇವರಲ್ಲ ನೋಡಾ. ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು ; ಆ ಅಹಂಕಾರ ದೇವರಲ್ಲ ನೋಡಾ. ಆ ಅಹಂಕಾರದಿಂದ ಜೀವನಾಗಿ ಅಳಿವ ಜೀವವ ದೇವರೆಂಬರು ; ಆ ಅಳಿವ ಜೀವ ದೇವರಲ್ಲ ನೋಡಾ. ಇವೆಲ್ಲ ಅಳಿವವಲ್ಲದೆ ಉಳಿವವಲ್ಲ ; ದೇವರಿಗೆ ಅಳುವುಂಟೆ ? ಅಳಿವಿಲ್ಲದ ಪರಶಿವತತ್ವವ ತಾನೆಂದರಿದಡೆ, ತಾನೇ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭೂಚರಿಯಮುದ್ರೆಯ ದೇವರೆಂಬರು, ಆ ಭೂಚರಿಯಮುದ್ರೆಯು ದೇವರಲ್ಲ. ಖೇಚರಿಯಮುದ್ರೆಯ ದೇವರೆಂಬರು, ಆ ಖೇಚರಿಯಮುದ್ರೆಯು ದೇವರಲ್ಲ. ಶಾಂಭವಮುದ್ರೆಯ ದೇವರೆಂಬರು, ಆ ಶಾಂಭವಮುದ್ರೆಯು ದೇವರಲ್ಲ ನೋಡಾ. ಸ್ವಸ್ಥಪದ್ಮಾಸನದಲ್ಲಿ ಕುಳ್ಳಿರ್ದು ಶ್ರೋತ್ರ ನೇತ್ರ ಜಿಹ್ವೆ ಘ್ರಾಣವೆಂಬ ಸಪ್ತದ್ವಾರಂಗಳನೊತ್ತಿ ನೋಡಲು ಆ ಒತ್ತಿದ ಪ್ರಭೆಯಿಂದ ಕುಂಬಾರನ ಚಕ್ರದ ಹಾಂಗೆ ಶ್ವೇತ ಪೀತ ಕಪೋತ ಹರಿತ ಮಾಂಜಿಷ* ವರ್ಣವಾಗಿ ತೋರುವ ಷಣ್ಮುಖೀಮುದ್ರೆಯ ದೇವರೆಂಬರು ; ಅಲ್ಲಲ್ಲ ನೋಡಾ. ಇವೆಲ್ಲಕ್ಕೂ ಉತ್ಪತ್ತಿ ಸ್ಥಿತಿ ಲಯ ಉಂಟಾಗಿ ದೇವರಲ್ಲ ನೋಡಾ. ದೇವರಿಗೆ ಉತ್ಪತ್ತಿ ಸ್ಥಿತಿ ಲಯ ಉಂಟೆ ಹೇಳಾ ? ಈ ಉತ್ಪತ್ತಿ ಸ್ಥಿತಿ ಲಯವಿಲ್ಲದ ಪರಾಪರತತ್ವ ತಾನೆಂದರಿದಡೆ, ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಿಂಗಳನಾಳದಲ್ಲಿ ಆಡುವ ಸೂರ್ಯನ ದೇವರೆಂಬರು ; ಆ ಸೂರ್ಯ ದೇವರಲ್ಲ ನೋಡಾ. ಇಡಾನಾಳದಲ್ಲಿ ಆಡುವ ಚಂದ್ರನ ದೇವರೆಂಬರು ; ಆ ಚಂದ್ರನು ದೇವರಲ್ಲ ನೋಡಾ. ಸುಷುಮ್ನನಾಳದಲ್ಲಿ ಆಡುವ ಜೀವಾತ್ಮನ ದೇವರೆಂಬರು ; ಆ ಜೀವಾತ್ಮನು ದೇವರಲ್ಲ ನೋಡಾ. ಆ ಇಡಾ ಪಿಂಗಳ ಸುಷುಮ್ನ ನಾಳದೊಳಾಡುವ ಚಂದ್ರ ಸೂರ್ಯ ಜೀವಾತ್ಮರಿಗೆ ಪರಬ್ರಹ್ಮವೇ ಜನಕನೆಂದರಿದು ಆ ಪರಬ್ರಹ್ಮವೇ ತಾನೆಂದರಿದಡೆ ತಾನೆ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೃದಯಕಮಲಮಧ್ಯದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ, ಭ್ರೂಮಧ್ಯದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ. ಬ್ರಹ್ಮರಂಧ್ರದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ. ನಾಸಿಕಾಗ್ರದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ. ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಸ್ವಯಂಭುಲಿಂಗವ ತಾನೆಂದರಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ, ಮಲತ್ರಯಯುಕ್ತವಾದ ಒಬ್ಬ ಹೊಲಸು ಪೃಷ*ದ ನರಮನುಜನ ಜಂಗಮನೆಂದು ಕರತಂದು ಗದ್ದುಗೆಯ ಮೇಲೆ ಕುಳ್ಳಿರಿಸಿ, ಅವರ ಎದುರಿಗೆ ತಪ್ಪುತಡಿಯ ಮಾಡಿದ ಪಾತಕರ ಅಡ್ಡಗೆಡವಿ ಮೂಗಿನ ದಾರಿ ತೆಗೆವರಂತೆ, ಹೊಟ್ಟೆಗಿಲ್ಲದೆ ಒಬ್ಬ ಬಡವನು ಧನಿಕನ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವಂತೆ, ಇಂತೀ ದೃಷ್ಟಾಂತದಂತೆ ಆಶೆ ಆಮಿಷ ತಾಮಸದಿಂದ ಮಗ್ನರಾದ ಭೂತದೇಹಿಗಳ ಮುಂದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಕಚ್ಚಿ, ಸಂಸಾರವಿಷಯದಲ್ಲಿ ಮಗ್ನರಾದ ಪಾತಕ ಮನುಜರು ಅಡ್ಡಬಿದ್ದು ಪಾದಪೂಜೆಯ ಮಾಡಿ ಪಾದೋದಕಪ್ರಸಾದ ಕೊಂಬುವರು. ಇವರು ಭಕ್ತರಲ್ಲ, ಅವನು ಜಂಗಮನಲ್ಲ. ಇಂತವರು ಕೊಂಬುವದು ಪಾದೋದಕಪ್ರಸಾದವಲ್ಲ. ಇಂತಪ್ಪ ದೇವಭಕ್ತರ ಆಚರಣೆ ನಡತೆಯೆಂತಾಯಿತೆಂದೊಡೆ ದೃಷ್ಟಾಂತ: ಒಬ್ಬ ಜಾರಸ್ತ್ರಿ ತನ್ನ ಉದರಪೋಷಣಕ್ಕೆ ಆಶೆಯ ಮಾಡಿ, ಒಬ್ಬ ವಿಟಪುರುಷನ ಸಂಗವಮಾಡಿದರೆ ಅವನು ಪರುಷನಾಗಲರಿಯನು, ಅವಳು ಸತಿಯಾಗಲರಿಯಳು. ಅದೇನು ಕಾರಣವೆಂದೊಡೆ ಹೊನ್ನಿಗಲ್ಲದೆ. ಮತ್ತಂ, ಆವನೊಬ್ಬ ಜಾತಿಹಾಸ್ಯಗಾರನು ರಾಜರ ಮುಂದೆ ತನ್ನ ಜಾತಿಆಟದ ಸೋಗನ್ನೆಲ್ಲ ತೋರಿ ಆ ರಾಜರ ಮುಂದೆ ನಿಂತು ಮಜುರೆಯ ಮಾಡಿ ಮಹಾರಾಜಾ ಎನ್ನೊಡೆಯ ಎನ್ನ ತಂದೆಯೇ ಎಂದು ಹೊಗಳಿ ನಿಮ್ಮ ಹೆಸರು ತಕ್ಕೊಂಡು ದೇಶದಮೇಲೆ ಕೊಂಡಾಡೇನೆಂದು ಬೇಡಿಕೊಂಡು ಹೋಗುವನಲ್ಲದೆ ಅವನು ತಂದೆಯಾಗಲರಿಯನು, ಇವನು ಮಗನಾಗಲರಿಯನು. ಅದೇನು ಕಾರಣವೆಂದೊಡೆ: ಒಡಲಕಿಚ್ಚಿಗೆ ಬೇಡಿಕೊಳ್ಳುವನಲ್ಲದೆ. ಇಂತೀ ದೃಷ್ಟಾಂತದಂತೆ ಒಡಲ ಉಪಾಧಿಗೆ ಪೂಜೆಗೊಂಬರು ವ್ರತನಿಯಮನಿತ್ಯಕ್ಕೆ ಪೂಜೆಯ ಮಾಡುವರು ಅವರು ದೇವರಲ್ಲ, ಇವರು ಭಕ್ತರಲ್ಲ. ಅದೇನು ಕಾರಣವೆಂದೊಡೆ- ಉಪಾಧಿ ನಿಮಿತ್ಯಕಲ್ಲದೆ. ಇಂತಪ್ಪ ವೇಷಧಾರಿಗಳಾದ ಭಿನ್ನ ಭಾವದ ಜೀವಾತ್ಮರ ಪ್ರಸಾದವೆಂತಾಯಿತೆಂದಡೆ ತುರುಕ ಅಂತ್ಯಜರೊಂದುಗೂಡಿ ಸರ್ವರೂ ಒಂದೇ ಆಗಿ ತೋಳ ಬೆಕ್ಕು ನಾಯಿಗಳ ತಿಂದ ಹಾಗೆ, ಸರ್ವರೂ ತಿಂದು ಹೋದಂತೆ ಆಯಿತಯ್ಯ. ಇಂತಪ್ಪವರಿಗೆ ಭವಹಿಂಗದು ಮುಕ್ತಿದೋರದು. ಮತ್ತಂ, ಅದೆಂತೆಂದೊಡೆ: ತನುವೆಂಬ ಭೂಮಿಯ ಮೇಲೆ ಮನವೆಂಬ ಕರಿಕಂಬಳಿಯ ಗದ್ದುಗೆಯ ಹಾಕಿ, ಅದರ ಮೇಲೆ ಪರಮಶಾಂತಿ ಜ್ಞಾನವೆಂಬ ಮೇಲುಗದ್ದುಗೆಯನಿಕ್ಕಿ, ಅಂತಪ್ಪ ಪರಮಶಾಂತಿಯೆಂಬ ಮೇಲುಗದ್ದಿಗೆಯ ಮೇಲೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತವಾದ ಪರಮನಿರಂಜನವೆಂಬ ಜಂಗಮವ ಮೂರ್ತವ ಮಾಡಿಸಿ, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಆತ ಆನಾದಿ ಭಕ್ತ. ಇಂತೀ ಭೇದವ ತಿಳಿದು ಕೊಡಬಲ್ಲರೆ ಆತ ಅನಾದಿ ಜಂಗಮ. ಇಂತಪ್ಪವರಿಗೆ ಭವಬಂಧನವಿಲ್ಲ, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವದು. ಇಂತಪ್ಪ ವಿಚಾರವನು ಸ್ವಾನುಭಾವಜ್ಞಾನದಿಂ ತಿಳಿಯದೆ ಅಜ್ಞಾನದಿಂದ ಮಾಡುವ ಮಾಟವೆಲ್ಲ ಜೊಳ್ಳು ಕುಟ್ಟಿ ಹೊಳ್ಳು ಗಾಳಿಗೆ ತೂರಿದಂತೆ ಆಯಿತ್ತು ನೋಡೆಂದ ನಿಮ್ಮ ಶರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೇವನಾದಡೆ ಅಗ್ನಿಯ ನುಂಗಬೇಕು. ಭಕ್ತನಾದಡೆ ಮೂರು ನುಂಗಬೇಕು. ದೇವರಿಗೆ ಎರಡಿಲ್ಲ; ಎರಡುಳ್ಳನ್ನಕ್ಕ ದೇವರಲ್ಲ. ಅಗ್ನಿಯುಳ್ಳನ್ನಕ್ಕ ದೇವರಲ್ಲ. ಕ್ರಿಯಕ್ಕೆ ಹೊರತಾದವರು ದೇವರಲ್ಲ. ಇಂತಿಲ್ಲದೆ ದೇವರೆಂಬವರ ದರುಶನಕ್ಕೆ ಭವಬಂಧನವುಂಟು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮ ದೇವರಲ್ಲ, ವಿಷ್ಣು ದೇವರಲ್ಲ, ರುದ್ರ ದೇವರಲ್ಲ, ಈಶ್ವರ ದೇವರಲ್ಲ, ಸದಾಶಿವ ದೇವರಲ್ಲ, ಸಹಸ್ರಶಿರ, ಸಹಸ್ರಾಕ್ಷ, ಸಹಸ್ರಪಾದವನುಳ್ಳ ವಿರಾಟ್ಪುರುಷ ದೇವರಲ್ಲ ; ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋಬಾಹು, ವಿಶ್ವತೋಪಾದವನುಳ್ಳ ಪರಮಪುರುಷ ದೇವರಲ್ಲ, ಸಹಜನಿರಾಲಂಬವೇ ತಾನೆಂದರಿದ ಮಹಾಶರಣ ತಾನೇ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->