ಅಥವಾ

ಒಟ್ಟು 27 ಕಡೆಗಳಲ್ಲಿ , 13 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಲ್ಲಿ ಒಬ್ಬ ದೇವನು ಮೂವರ ಕೂಡಿಕೊಂಡು ಆರು ಕೇರಿಗಳ ಪೊಕ್ಕು ನೋಡಲು ಆ ಕೇರಿಗಳಲ್ಲಿ ಆರು ಶಕ್ತಿಯರು ನಿಶಿಧ್ಯಾನವ ಮಾಡಿ ಒಳಹೊರಗೆ ಪರಿಪೂರ್ಣವಾಗಿಹರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು, ಎರಡು, ಮೂರು, ನಾಲಕ್ಕು, ಅಯಿದು, ಆರು, ಏಳು, ಎಂಟು ಒಂಬತ್ತು, ಹತ್ತು, ಹನ್ನೊಂದು ಹನ್ನೆರಡು, ಹದಿಮೂರು, ಹದಿನಾಲಕ್ಕು, ಹದಿನೈದು, ಹದಿನಾರು, ಹದಿನೇಳು, ಹದಿನೆಂಟು, ಹತ್ತೊಂ¨ತ್ತು, ಇಪ್ಪತ್ತು, ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತಮೂರು, ಇಪ್ಪತ್ತನಾಲಕ್ಕು. ಇಪ್ಪತ್ತನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತನಾಲಕ್ಕು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯುದಿಷ್ಠಿರೋ ವಿಕ್ರ[ಮೋ]ಶಾಲಿವಾಹನ[ಃ] ತ[ಪಸಾ] ಧ್ರುವಶ್ಚ [ದಿವಿ]ಜರಾಜನಂದನಃ ನಾಗಾಂತಕೋ ಭೂಪತಿ [ಷಷ್ಠಮಃ] ಕಲಿಯುಗೇ ಷಟ್‍ಚಕ್ರವರ್ತಿ[ನಃ] ಈ ಆರು ಮಂದಿ ಕಲಿಯುಗದ ಚಕ್ರವರ್ತಿಗಳು. ಇಪ್ಪತ್ತಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತಮೂರು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಯಯಾತಿ ನಹುಷ[ಶ್ಶಂತನುಃ] ಚಿತ್ರವೀರ್ಯಶ್ಚ ಪಾಂಡವಃ ರಾಜಾ ದುರ್ಯೋಧನ[ಶ್ಚೈ]ವ ದ್ವಾಪರೇ ಷ[ಟ್] ಚಕ್ರವರ್ತಿ[ನಃ] ಆ ಆರು ಮಂದಿ ದ್ವಾಪರದ ಚಕ್ರವರ್ತಿಗಳು. ಇಪ್ಪತ್ತೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತೆರಡು ಎಂದರೆ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ವೈವ[ಸ್ವ]ತೋ ದಿಲೀಪಶ್ಚ ರಘು ಚಕ್ರೇಶ್ವರೋ ಅ[ಜಃ] ದಶರಥೋ ರಾಮಚಂದ್ರ[ಶ್ಚ] ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ತ್ರೇತಾಯುಗದ ಚಕ್ರವರ್ತಿಗಳು. ಅದು ಎಂತೆಂದಡೆ: ಗ್ರಂಥ || ಹರಿಶ್ಚಂ[ದ್ರೋ] ನ[ಳ]ರಾಜ[ಃ] ಪುರುಕು[ತ್ಸ]ಶ್ಚ ಪುರೂರವಃ ಸಗರಃ ಕಾರ್ತವೀರ್ಯಶ್ಚ ಷಡೈತೇ ಚಕ್ರವರ್ತಿ[ನಃ] ಈ ಆರು ಮಂದಿ ಕೃತಯುಗದ ಚಕ್ರವರ್ತಿಗಳು. ಅಂತೂ ಇಪ್ಪತ್ತನಾಲ್ಕು ಮಂದಿ ಚಕ್ರವರ್ತಿಗಳು. ಇಪ್ಪತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಇಪ್ಪತ್ತು ಎಂದರೆ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಅದು ಎಂತೆಂದಡೆ: ಆಂಗೀರಸ, ಪುಲಸ್ತ್ಯ, ಪುಲಹ, ಶಾಂತ, ದಕ್ಷ, ವಸಿಷ್ಠ, ವಾಮದೇವ, ನವಬ್ರಹ್ಮ, ಕೌಶಿಕ, ಶೌನಕ, ಸ್ವಯಂಭು, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷಷ, ವೈವಸ್ವತ, ಸೂರ್ಯಸಾವರ್ಣಿ, ಚಂದ್ರಸಾವರ್ಣಿ, ಬ್ರಹ್ಮಸಾವರ್ಣಿ, ಇಂದ್ರ ಸಾವರ್ಣಿ ಇವರು ಇಪ್ಪತ್ತು ಮಂದಿ ಪ್ರಪಂಚ ನಿರ್ಮಾಣ ಸಹಾಯ[ದ]ವರು. ಹತ್ತೊಂಬತ್ತು ಎಂದರೆ ಪುಣ್ಯನದಿಗಳು. ಅದು ಎಂತೆಂದಡೆ: ಗ್ರಂಥ || ಗಂಗಾ ಪುಷ್ಕ[ರಿಣೀ] ನರ್ಮದಾ ಚ ಯಮುನಾ ಗೋದಾವರೀ ಗೋಮತೀ ಗಂಗಾದ್ವಾರ ಗಯಾ ಪ್ರಯಾಗ ಬದರೀ ವಾರಾಣಸೀ ಸೈಯಿಂಧವೀ ಇವು ಹತ್ತೊಂಬತ್ತು ಪುಣ್ಯನದಿಗಳು. ಹದಿನೆಂಟು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೆಂಟು ಎಂದರೆ.......... ಅದು ಎಂತೆಂದಡೆ: ........................... ಹದಿನೇಳು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೇಳು ಎಂದರೆ................. ಅದು ಎಂತೆಂದಡೆ: .................... ಹದಿನಾರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾರು ಎಂದರೆ [ಅ]ರಸುಗಳು ಅದು ಎಂತೆಂದಡೆ: ಗ್ರಂಥ || ಗಯಾಂಬರೀ[ಷ] ಶ[ಶ]ಬಿಂದುರಂಗದೋ ಪೃಥು[ರ್ಮ]ರು[ತ್] ಭರತ[ಸ್ಸು]ಹೋತ್ರಃ ರಾಮೋ ದಿಲೀಪೋ ಸಗರ ರಂತಿ ರಾಮ[ಃ] ಯಯಾತಿ ಮಾಂಧಾತ ಭಗೀರಥ[ಶ್ಚ] ಎಂದುದಾಗಿ, ಗಯ, ಅಂಬರೀಷ, ಶಶಬಿಂದು, ಪೃಥು, ಮರುತ್, ಭರತ, ಸುಹೋತ್ರ, ಪರಶುರಾಮ, ದಿಲೀಪ, ಸಗರ, ರಂತಿ, ರಾಮಚಂದ್ರ, ಯಯಾತಿ, ಮಾಂಧಾತ, ಭಗೀರಥ, ಅ[ಂಗದ] ಇವರು ಹದಿನಾರು ಮಂದಿ ಅರಸುಗಳು. ಹದಿನೈದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನೈದು ಎಂದರೆ ತಿಥಿಗಳು. ಅದು ಎಂತೆಂದಡೆ: ಪಾಡ್ಯ, ಬಿದಿಗೆ, ತದಿಗೆ, ಚವುತಿ, [ಪಂಚಮಿ], ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಅಮಾವಾಸ್ಯೆ ಇವು ಹದಿನೈದು ತಿಥಿಗಳು. ಹದಿನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹದಿನಾಲಕ್ಕು ಎಂದರೆ ಲೋಕಂಗಳು. ಅದು ಎಂತೆಂದಡೆ: ಅತಲ ವಿತಲ ಸುತಲ ತಲಾತಲ ಮಹಾತಲ ರಸಾತಲ ಪಾತಾಳ ಭೂಲೋಕ ಭುವರ್ಲೋಕ ಸುರ್ವರ್ಲೋಕ ಮಹರ್ಲೋಕ ತಪೋಲೋಕ ಜನೋಲೋಕ ಸತ್ಯಲೋಕ ಇವು ಹದಿನಾಲ್ಕು ಲೋಕಂಗಳು. ಹದಿಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೆನಪ್ಪ ? ಹದಿಮೂರು ಎಂದರೆ ಚಕ್ರಂಗಳು. ಅದು ಎಂತೆಂದಡೆ, ಆಧಾರಚಕ್ರ, ಸ್ವಾಷ್ಠಾನಚಕ್ರ, ಮಣಿಪೂರಕಚಕ್ರ, ಅನಾಹಚಕ್ರ, ವಿಶುದ್ಧಿಚಕ್ರ, ಆಜ್ಞಾಚಕ್ರ, ಶಿಖಾಚಕ್ರ, ಬ್ರಹ್ಮಚಕ್ರ, ಘಟಚಕ್ರ, ಕಾಲಚಕ್ರ, ಮೇಘಚಕ್ರ, ಭೂಚಕ್ರ, ಅವಗಡಚಕ್ರ ಇವು ಹದಿಮೂರು ಚಕ್ರಂಗಳು. ಹನ್ನೆರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹನ್ನೆರಡು ಎಂದರೆ ಮಾಸಂಗಳು. ಅದು ಎಂತೆಂದರೆ, ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತೀಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಇವು ಹನ್ನೆರಡು ಮಾಸಂಗಳು. ಹನ್ನೊಂದು ಎಂದರೆ ನೋಡಿದ್ದೇನಪ್ಪ ? ಕೇಳಿದ್ದೇನಪ್ಪ ? ಹನ್ನೊಂದು ಎಂದರೆ ಭಾರತಂಗಳು. ಅದು ಎಂತೆಂದಡೆ: ಆದಿಭಾರತ, ಕೈಲಾಸಭಾರತ, ಶ್ರೀರುದ್ರಭಾರತ, ನಂದಿಭಾರತ, ನಾರ[ದ]ಭಾರ[ತ], ಭೃಗುಭಾರತ, ಮನುಭಾರತ, ಉಮಾಭಾರತ, ಪ್ರಸಿದ್ಧಭಾರತ, ಸಿದ್ಧೋರಗಭಾರತ, ಶ್ರೀರಂಗಭಾರತ ಇವು ಹನ್ನೊಂದು ಭಾರತಂಗಳು. ಹತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಹತ್ತು ಎಂದರೆ, ದಶಾವತಾರಂಗಳು. ಅದು ಎಂತೆಂದರೆ, ಗ್ರಂಥ || ಮತ್ಸ್ಯಃ ಕೂರ್ಮಃ ವರಾಹಶ್ಚ ನಾರಸಿಂಹಶ್ಚ ವಾಮನಃ ರಾಮೋ ರಾಮಶ್ಚ [ಕೃಷ್ಣ]ಶ್ಚ ಬೌದ್ಧಃ ಕಲ್ಕಿ[ರೇ]ವ ಚ ಎಂದುದಾಗಿ, ಈ ದಶಾವತಾರಂಗಳಲ್ಲಿ ಯಾರಾರು ಸಂಹಾರ ಎಂದರೆ, ಮತ್ಯ್ಸಾವತಾರದಲ್ಲಿ ಅಮೃತಮಥನೇ ಸೋಮಕಾಸುರನ ಸಂಹಾರ. ಕೂರ್ಮಾವತಾರದಲ್ಲಿ ಮಂದರಪರ್ವತಕ್ಕೆ ಆಧಾರ. ವರಾಹಾವತಾರದಲ್ಲಿ ಹಿರಣ್ಯಾಕ್ಷನ ಸಂಹಾರ. ನರಸಿಂಹಾವತಾರದಲ್ಲಿ ಹಿರಣ್ಯಕಶ್ಯಪ ಸಂಹಾರ. ವಾಮನಾವತಾರದಲ್ಲಿ ಪಂಚಮೇಢ್ರಾಸುರ ಎಂಬ ರಾಕ್ಷಸನ ಸಂಹಾರ. ಪರಶುರಾಮಾವತಾರದಲ್ಲಿ ಕಾರ್ತವೀರ್ಯರ ಸಂಹಾರ. ರಫ್ಸುರಾಮಾವತಾರದಲ್ಲಿ ರಾವಣಕುಂಭಕರ್ಣರ ಸಂಹಾರ. 1ಬಲಭದ್ರ1 ನವತಾರದಲ್ಲಿ ಪ್ರಲಂಬಕವಾದ ಅಸುರರ ಸಂಹಾರ. ಬೌದ್ಧಾವತಾರದಲ್ಲಿ ತ್ರಿಪುರದಾನವಸತಿಯರ ಕೆಡಿಸಿದ. ಕಲ್ಕ್ಯವತಾರದಲ್ಲಿ 2ಕಂಸಾಸುರ, ನರಕಾಸುರ, ಬಾಣಾಸುರರ2 ಸಂಹಾರ, ಇವು ಹತ್ತು ದಶಾವತಾರಗಳು. ಒಂಬತ್ತು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಒಂಬತ್ತು ಎಂದರೆ ನವಗ್ರಹಂಗಳು. ಅದು ಎಂತೆಂದರೆ: ಆದಿತ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ, ರಾಹು, ಕೇತು- ಇವು ಒಂಬತ್ತು ನವಗ್ರಹಂಗಳು. ಎಂಟು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಎಂಟು ಎಂದರೆ ಅಷ್ಟದಿಕ್ಪಾಲಕರು. ಅದು ಎಂತೆಂದರೆ: ಇಂದ್ರ, ಅಗ್ನಿ, ಯಮ, ನೈರುತಿ, ವರುಣ, ವಾಯುವ್ಯ, ಕುಬೇರ, ಈಶಾನ್ಯ- ಎಂಟು ಮಂದಿ ಅಷ್ಟದಿಕ್ಪಾಲಕರು. ಏಳು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಏಳು ಎಂದರೆ ಸಪ್ತಋಷಿಗಳು. ಅದು ಎಂತೆಂದರೆ: ಗ್ರಂಥ || ಕಶ್ಯಪಾತ್ರಿ ಭರದ್ವಾಜ[ಃ] ವಿಶ್ವಾಮಿ[ತ್ರಶ್ಚ] ಗೌತಮ[ಃ] ಜಮದಗ್ನಿ[ಃ] ವಸಿಷ್ಠ[ಶ್ಚ] ಸಪ್ತೈತೇ ಋಷಯ[ಃ ಸ್ಮøತಾಃ] ಎಂದುದಾಗಿ, ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ- ಇವರು ಏಳುಮಂದಿ ಸಪ್ತ ಋಷಿಗಳು. ಆರು ಎಂದರೆ ನೋಡಿದ್ದೇನಪ್ಪ ಕೇಳಿದ್ದೇನಪ್ಪ ? ಆರು ಎಂದರೆ ಶಾಸತ್ತ್ರಂಗಳು. ಅದು ಎಂತೆಂದರೆ: ಶಿಲ್ಪಶಾಸ್ತ್ರ, ಭರತಶಾಸ್ತ್ರ, ತರ್ಕಶಾಸ್ತ್ರ, ಶಬ್ದಶಾಸ್ತ್ರ, ಆ[ನ್ವೀಕ್ಷಕೀ]ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ- ಇವು ಆರು ಶಾಸ್ತ್ರಂಗಳು. ಐದು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಐದು ಎಂದರೆ ಈಶ್ವರನ ಪಂಚ ಮುಖಂಗಳು ಅದು ಎಂತೆಂದರೆ, ಗ್ರಂಥ || ಸದ್ಯೋಜಾ[ತೋ]ದ್ಭವೋರ್ಭೂಮಿಃ] ವಾಮದೇವೋದ್ಭ[ವಂ ಜಲಂ] ಅಫ್ಸೋ[ರಾದ್ವಹ್ನಿ]ರು[ದ್ಭೂತಂ] ತತ್ಪರು[ಷಾದ್ವಾಯುರ್ಭವೇತ್ ಈಶಾನಾದ್ಗಗನಂ ಜಾತಂ] ಎಂದುದಾಗಿ, ಸದ್ಯೋಜಾತಮುಖ, ವಾಮದೇವಮುಖ, ಅಘೋರಮುಖ, ತತ್ಪುರುಷಮುಖ, ಈಶಾನ್ಯಮುಖ- ಇವು ಐದು ಪಂಚಮುಖಂಗಳು. ನಾಲಕ್ಕು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ನಾಲಕ್ಕು ಎಂದರೆ ವೇದಂಗಳು. ಅದು ಎಂತೆಂದರೆ: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ- ಇವು ನಾಲ್ಕು ವೇದಂಗಳು. ಮೂರು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಮೂರು ಎಂದರೆ ತ್ರಿಮೂರ್ತಿಗಳು. ಅದು ಎಂತೆಂದರೆ: ಬ್ರಹ್ಮ, ವಿಷ್ಣು, ಈಶ್ವರ- ಇವರು ಮೂವರು ತ್ರಿಮೂರ್ತಿಗಳು. ಎರಡು ಎಂದರೆ ನೋಡಿದ್ದೇನಪ್ಪ, ಕೇಳಿದ್ದೇನಪ್ಪ ? ಎರಡು ಎಂದರೆ ಭಾನು ಶಶಿ. ಅದು ಎಂತೆಂದರೆ: ಸೂರ್ಯ, ಚಂದ್ರ- ಇವರಿಬ್ಬರು ಸೂರ್ಯಚಂದ್ರಾದಿಗಳು. ಒಂದು ಎಂದರೆ ನೋಡಿದ್ದೆನಪ್ಪ ಕೇಳಿದ್ದೇನಪ್ಪ ? ಒಂದು ಎಂದರೆ ಏಕೋ[ಏವ]ದೇವಃ ಅದು ಎಂತೆಂದರೆ: ದೇವನು ಒಬ್ಬನೇ. ದೇವನು] ಒಬ್ಬನೇ ಅಲ್ಲದೆ ಇಬ್ಬರೆಂದು ಬಗುಳುವನ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಇದಿರಿಂಗೆ ಕಿಂಕರನಾಗಿ ತನ್ನ ದೇಹಗುಣವಡಗಬಲ್ಲಡೆ, ಅಲ್ಲಿರ್ಪ ಆ ಮಹಾಮಹಿಮನ ನಿಜವ ಕೂಡಿ ಗಡಣದಲ್ಲಿರ್ಪಾತ್ಮನ ಕೂಡೆ ಆಡುತಿಪ್ಪನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವನು ಭಕ್ತದೇಹಿಕನಾಗಿ.
--------------
ಸಿದ್ಧರಾಮೇಶ್ವರ
ಭಕ್ತದೇಹಿಕನಪ್ಪ ದೇವನು ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ, ಆಳ್ದನು ಬರಲಾಳು ಮಂಚದ ಮೇಲಿಪ್ಪುದು ಗುಣವೇ ಹೇಳಾ. ಕೂಡಲಸಂಗಮದೇವಾ, ಜಂಗಮರೂಪಾಗಿ ಸಂಗಯ್ಯ ಬಂದಾನೆಂದು ಎಂದೆಂದೂ ನಾನು ಮಂಚವನೇರದ ಭಾಷೆ. 396
--------------
ಬಸವಣ್ಣ
ಆದಿಯಲ್ಲಿ ಉದಯವಾದ ದೇವನು, ಮೂರಾರು ದೇಶವ ನೋಡಿ, ಆರು ದೇಶದಲ್ಲಿ ಅಂಗವ ಸಂಬಂಧಿಸಿ, ಮೂರು ದೇಶದಲ್ಲಿ ಲಿಂಗವ ಸಂಬಂಧಿಸಿ, ಅಂಗಲಿಂಗಸಂಬಂಧವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆಪರವನೈದ ಮಹಾಬ್ರಹ್ಮವೆನಿಸಿದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕೊಡುವಾತ ನಾನಲ್ಲ. ಕೊಡುವಾತನೂ ಕೊಂಬಾತನೂ ಶಿವನೆಂದರಿದು, ಜಂಗಮಮುಖದಲ್ಲಿ ಲಿಂಗಾರ್ಪಿತವಹುದೆಂದು, ಕೊಟ್ಟ ಭಕ್ತನೊಳಗೆ ಜಂಗಮವಡಗಿ, ಭಕ್ತಜಂಗಮ ಒಂದಾದ ಮಾಟ ಭವದೋಟ ಲಿಂಗದ ಕೂಟ. ಈ ತೆರನನರಿದು ಮಾಡುವ ಭಕ್ತನೇ ದೇವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವನೆ ಜಗತ್ರಯಕ್ಕೊಡೆಯನೆಂದುದು ವೇದ, ಉತ್ಪತ್ತಿ ಸ್ಥಿತಿ ಲಯಕಾರಣನೆಂದುದು ವೇದ, `ಈಶಃ ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್' ಎಂದುದು ಶ್ರುತಿ ಇದು ಕಾರಣ, ಕೂಡಲಸಂಗಮದೇವನೊಬ್ಬನೆ ದೇವನು.
--------------
ಬಸವಣ್ಣ
ಎನ್ನ ನಾನರಿಯದೆ ಪುರಾಕೃತ ಕರ್ಮಫಲದಿಂ ಕರ್ಮವಶನಾಗಿ ಅಜ್ಞಾನಿಯಾಗಿ ಮಹಾದೀನನಾಗಿದ್ದಲ್ಲಿ ಪಾಪಪುಣ್ಯ ಸುಖದುಃಖಾದಿಕ್ರಿಯಾಕರ್ಮವೆಲ್ಲವು ಎನ್ನದು, ನಾನೇ ಸಂಸಾರಿ. ಎನ್ನ ಸಂಸಾರವ ಕೆಡಿಸಿ, ಘೃಣಾಮೂರ್ತಿ ಸದ್ಗುರು ಕೃಪೆಮಾಡಿ ಪೂರ್ವಜಾತವ ಕಳೆದು ಪುನರ್ಜಾತನ ಮಾಡಿ ಶಿವಜ್ಞಾನಸಂಪನ್ನನ ಮಾಡೆ ಬದುಕಿದೆನು. ಎನ್ನ ನಿಜವನರಿದೆನು ನಾನೇ ಗುರುಪುತ್ರನು. ಕಾಯವು ಪ್ರಸಾದಕಾಯ, ಭಕ್ತಾಕಾಯನಾಗಿ ಕಾಯಲಿಂಗ ಪ್ರಾಣವು ಲಿಂಗಪ್ರಾಣವಾಗಿ ಪ್ರಾಣಲಿಂಗವು ಎನ್ನ ಶ್ರೀಗುರುಲಿಂಗ ಎನ್ನ ಜಂಗಮಲಿಂಗವು ಪ್ರಸಾದ ಲಿಂಗವು ಮಂತ್ರಲಿಂಗವು ಶ್ರೀವಿಭೂತಿ ಲಿಂಗವು ಮಹಾಜ್ಞಾನ ತಾನೆ ಲಿಂಗವು. ಸಂಸಾರದಲ್ಲಿ ಕೆಡುವ ಪ್ರಾಣಿಗಳ ಕೆಡದಂತೆ ಮಾಡಿದನು ಬೇಡಿತ್ತ ಕೊಡುವ ಲಿಂಗವನು ಬೇಡಿಕೊಳ್ಳಿರೆ. ಅನಾಥನಾಥನು ಅನಾಥಬಂಧುವು ವರದಮೂರ್ತಿಯು ದಾನಗುಣಶೀಲನು ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕೆಸರಿಲ್ಲದ ಭೂಮಿಯಲ್ಲಿ ಎಸಳಿಲ್ಲದ ಏಕೋವರ್ಣದ ತಾವರೆ ಹುಟ್ಟಿತ್ತು ನೋಡಾ. ಆ ಭಾವತಾವರೆಯಿಂದ ಪೂಜೆಯ ಮಾಡುವ ಶರಣನೇ ದೇವನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಂದಿಗೆಂತು ನಾಳಿಂಗೆಂತೆಂದು, ಬೆಂದ ಒಡಲಿಗೆ ಚಿಂತಿಸಿ, ಭ್ರಮೆಗೊಂಡು ಬಳಲಬೇಡ ಮರುಳೇ. ಎಂಬತ್ತುನಾಲ್ಕುಲಕ್ಷ ಯೋನಿಯೊಳಗಾದ ಸಮಸ್ತ ಜೀವರಿಗೆ, ಭೋಗವನೂ, ಭೋಗವಿಷಯಜ್ಞಾನವನೂ, ಕೊಟ್ಟು ಸಲಹುವ ದೇವನು, ತನ್ನ ಸಲಹಲಾರನೆ? ಇದನರಿದು ಮತ್ತೇಕೆ ಚಿಂತಿಸುವೆ ಮರುಳೇ? ಹುಟ್ಟಿಸಿದ ದೇವನು ರಕ್ಷಿಸುವನಲ್ಲದೆ ಮಾಣನೆಂಬುದನರಿಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಕರುಣಿ ಕೃಪಾಳುವೆಂಬುದನರಿಯ ಮರುಳೇ.
--------------
ಸ್ವತಂತ್ರ ಸಿದ್ಧಲಿಂಗ
ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು ಎನ್ನ ಕೈವಿಡಿದು ತಲೆದಡಹಿ ವರದಭಯಹಸ್ತವ ಕೊಟ್ಟು ಮತ್ರ್ಯಲೋಕಕ್ಕೆ ಎನ್ನ ಕಳುಹಿದಿರಾಗಿ, ನೀನೇ ಕರ್ತನು ನಾನೇ ಭೃತ್ಯನು ; ನೀನೇ ಒಡೆಯನು ನಾನೇ ಬಂಟನು ; ನೀನೇ ಆಳ್ದನು ನಾನೇ ಆಳು ; ನೀನೇ ದೇವನು ನಾನೇ ಭಕ್ತನಾಗಿ, ನೀನು ಮಾಡೆಂದ ಮಣಿಹವ ಮಾಡುತಿರ್ಪೆನು ; ನೀನು ಬೇಡೆಂದ ಮಣಿಹವ ಬಿಡುತಿರ್ಪೆನು; ನೀನು ಹೇಳಿದ ತೊತ್ತು ಸೇವೆಯ ಮಾಡುತಿಪ್ಪೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭುವನಸ್ಯ ಪಿತರಂಗರ್ಭೇ ರಾಭೇ ರುದ್ರಂ ಧೀವಾರ್ದಯಾ ರುದ್ರವುವುಕಾರ ಬ್ರಹ್ಮಂ ತದೃಷ್ಟಮಜರಂ ಸುಷುಮ್ನ ದ್ರುಗ್ಯವೇಮಕಮಪಿವಾಸಃ|| ಎಂಬ ಶ್ರುತಿಯ ವಿಚಾರಿಸಲರಿಯದೆ, ಒಲಿದಂತೆ ನುಡಿವುತಿಪ್ಪರು ನೋಡಯ್ಯಾ. `ಮಾತೃದೇವೋ ಭವ, ಪಿತೃದೇವೋ ಭವ' ಎಂಬ ಶ್ರುತಿ, ದೇವಿ ದೇವನು ತಾಯಿತಂದೆಯೆಂದು ಹೇಳಿತ್ತು. `ಆಚಾರ್ಯದೇವೋ ಭವ' ಎಂಬ ಶ್ರುತಿ, ತನಗೆ ಶುದ್ಧಶೈವವನನುಗ್ರಹವ ಮಾಡಿದ ಗುರುವೇ ದೈವವೆಂದು ಹೇಳಿತ್ತು. `ಅತಿಥಿದೇವೋ ಭವ' ಎಂಬ ಶ್ರುತಿ, ತನ್ನ ಮನೆಗೆ ಬಂದ ಭಕ್ತನೇ ದೈವವೆಂದು ಹೇಳಿತ್ತು. ಇದಲ್ಲದೆ ಸಾವುತ್ತ, ಹುಟ್ಟುತ್ತಿಪ್ಪ ತಂದೆ ತಾಯಿ ದೈವವೆಂದ ಲಜ್ಜೆ ನಾಚಿಕೆ ಬೇಡ. ಚಂಡೇಶ್ವರಪಿಳ್ಳೆ ಶಿವನು ತಂದೆಯೆಂದರಿದು, ವಾಯದ ತಂದೆಯ ಕೊಂದುದನರಿಯಾ ? ಎಂದೆಂದಿಗೆ ಕೇಡಿಲ್ಲದ ತಾಯಿತಂದೆ ಬಸವಪ್ರಿಯ ಕೂಡಲಚೆನ್ನಸಂಗಮದೇವನೆಂದು ವೇದಂಗಳು ಸಾರುತ್ತವೆ.
--------------
ಸಂಗಮೇಶ್ವರದ ಅಪ್ಪಣ್ಣ
ನಾನಾವಿಧದ ಪೂಜೆಗಳ ಪೂಜಿಸಿದವರೆಲ್ಲಾ ಭಕ್ತರೆ, ಹೇಳಿರಣ್ಣಾ. ವಿಷ್ಣು ಮೊದಲಾದ ದೇವಜಾತಿಗಳು ತಾರಕ ರಾವಣಾದಿ ದೇವ ದಾನವ ಮಾನವರನೇಕರು ಮಹಾದೇವನ ಪೂಜಿಸಿ ಫಲದಾಯಕರಾಗಿ ಪದಂಗಳ ಪಡೆದರು. ಈ ಫಲದಾಯಕರೆಲ್ಲರೂ ಸದ್ಭಕ್ತರಪ್ಪರೆ? ಅಲ್ಲ, ಅವರೆಲ್ಲರೂ ಉಪಾಧಿಕರು. ಪರಧನ ಪರಸ್ತ್ರೀ ಪರದೈವವ ಬಿಟ್ಟು ಪಂಚೇಂದ್ರಿಯ ಷಡ್ವರ್ಗಂಗಳ ಬಿಟ್ಟು ನಿರುಪಾಧಿಕರಾಗಿ ನಿರಂತರ ಪೂಜಿಸಿದಡೆ, ಆತನೇ ಸದ್ಭಕ್ತನು, ಆತನೇ ಮಹಾಮಹಿಮನು, ಆತನೇ ಮಹಾದೇವನಯ್ಯಾ. ಆ ಭಕ್ತಂಗೆ ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಚೆಲುವನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಗುರುವನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಹರಿಯನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ಪುರುಷನು. ಶಿವಶಿವಾ ಮಹಾದೇವಾ, ಉರಿಲಿಂಗದೇವನೆ ದೇವನು.
--------------
ಉರಿಲಿಂಗದೇವ
ಶಿವ ಜಗವಾಗಲ್ಲ, ಶಿವ ಜಗವಾಗದಿರಲೂ ಬಲ್ಲ. ಶಿವ ರೂಪಾಗಬಲ್ಲ, ಶಿವ ರೂಪಾಗದಿರಲೂ ಬಲ್ಲ. ಶಿವ ಅಜಾಂಡಕೋಟಿಗಳ ಮಾಡಬಲ್ಲ, ಮಾಡದಿರಲೂ ಬಲ್ಲ. ಶಿವ ಕೆಡಿಸಬಲ್ಲ, ಕೆಡಿಸದಿರಲೂ ಬಲ್ಲ. ಶಿವ ಜಂಗಮವಾಗಿ ಪೂಜಿಸಬಲ್ಲ. ಶಿವ ಲಿಂಗವಾಗಿ ತಾನೇ ಪೂಜೆಯ ಕೊಳಲೂ ಬಲ್ಲ. ಶಿವ ಹೊರಗಾಗಿ ಮತ್ತನ್ಯವಿಲ್ಲವೆಂಬ ವೇದ ಉಂಟೇ ? ಎಂದೆಡೆ ಉಂಟು. ಅಥರ್ವವೇದ: `ಶಿವೋ ಉಮಾ ಪಿತರೌ ಎಂದುದಾಗಿ ದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು, ನಮಗೆಲ್ಲ ಮಾತಾಪಿತನು.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->