ಅಥವಾ

ಒಟ್ಟು 28 ಕಡೆಗಳಲ್ಲಿ , 15 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಾಂಭವಲೋಕದ ಕುಂಬ್ಥಿನಿಯುದರದ ಮೇಲೆ ಅಂಗನೆ ಅರುದಿಂಗಳ ಹಡೆದಳು ನೋಡಾ. ಅರುದಿಂಗಳ ಅದಾರನೂ ಅರಿಯದೆ ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು ಕುಂಬ್ಥಿನಿಯುದರದಂಗನೆ ಸತ್ತುದ ಕಂಡು ಇಹಲೋಕ ಪರಲೋಕ ಆವ ಲೋಕವ ಹೊಗದೆ ಲೋಕಶ್ರೇಷ್ಠವಲ್ಲವೆಂದು ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ. ಬ್ರಹ್ಮಾಂಡದಿಂದತ್ತತ್ತ ಮಕುಟ ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ. ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ. ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ. ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು, ಮರದೇವರು ಎಂದು ಇವನಾರಾದ್ಥಿಸಿ, ಕೆಟ್ಟರಲ್ಲಿ. ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ. ಇದು ಕಾರಣ, ಆವ ಲೋಕದವರಾದರೂ ಆಗಲಿ, ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ. ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.
--------------
ಹಡಪದ ಅಪ್ಪಣ್ಣ
ಶಿವಶಿವಾ, ಬೇಡಿಕೊಳ್ಳರೆ, ಅಮೃತಮಥನದಲ್ಲಿ ದೈನ್ಯವ ಮಾಡಿದವರನುಳುಹಿದ ದೇವನ ? ಶಿವಶಿವಾ, ಬೇಡಿಕೊಳ್ಳರೆ, ದಕ್ಷಾಧ್ವರದಲ್ಲಿ ದೈನ್ಯವ ಮಾಡಿದವನುಳುಹಿದ ದೇವನ ? ಶಿವಶಿವಾ, ಬೇಡಿಕೊಳ್ಳರೆ, ಅಜಹರಿ ಅವತಾರಂಗಳ ಸಂಹಾರ ಮಾಡಿದ ದೇವನ? ಶಿವಶಿವಾ, ಬೇಡಿಕೊಳ್ಳರೆ, ಅಖಿಳಬ್ರಹ್ಮಾಂಡಂಗಳ ಹೆತ್ತ ತಂದೆ, ನಮ್ಮ ಮಹಾದಾನಿ ಸೊಡ್ಡಳದೇವನ ?
--------------
ಸೊಡ್ಡಳ ಬಾಚರಸ
ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಕಂಗಳಿಗ ಮಂಗಳವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ತನುವಿಂಗೆ ತರಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಗಮ್ಯ ಅಗೋಚರನಾದ ಅಖಂಡೇಶ್ವರನೆಂಬ ಲಿಂಗಯ್ಯನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ಸರ್ವಬ್ರಹ್ಮಾಂಡವ ಒಬ್ಬ ದೇವ ನುಂಗಿಕೊಡಿಪ್ಪ ನೋಡಾ. ಆ ದೇವನ ನೆನಹಿನಿಂದ ಪರಶಿವನಾದ. ಆ ಪರಶಿವನ ಸಂಗದಿಂದ ಸದಾಶಿವನಾದ. ಆ ಸದಾಶಿವನ ಸಂಗದಿಂದ ಈಶ್ವರನಾದ. ಆ ಈಶ್ವರನ ಸಂಗದಿಂದ ರುದ್ರನಾದ. ಆ ರುದ್ರನ ಸಂಗದಿಂದ ವಿಷ್ಣುವಾದ. ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ ಆ ಬ್ರಹ್ಮನ ಸಂಗದಿಂದ ಸಕಲ ಜಗಂಗಳು ಉತ್ಪತ್ತಿಯಾದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗಂಡಿಂಗೆ ಹೆಣ್ಣಲ್ಲದೆ ಹೆಣ್ಣಿಂಗೆ ಹೆಣ್ಣುಂಟೆ ಲೋಕದೊಳಗೆ ಈ ಅರೆಮರುಳ ಶಿವನ ನಾನೇನೆಂಬೆನಯ್ಯ? ಅಪಮಾನವ ಅನ್ಯರಿಗೆ ಕೊಡುವ ದೇವನ ಮರುಳತನವ ನೋಡಾ. ಅದೇನು ಕಾರಣವೆಂದಡೆ: `ಪತಿರ್ಲಿಂಗಸ್ಸತೀ ಚಾಹಮಿತಿಯುಕ್ತಸ್ಸದಾ ತಥಾ ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಂ||' ಎಂದುದಾಗಿ ಮುಕ್ಕಣ್ಣಂಗೆ ನಾ ಹೆಣ್ಣಾದ ಕಾರಣ ಎನ್ನ ಕರಣೋಪಕರಣಗಳೆಲ್ಲವು ಲಿಂಗೋಪಕರಣಂಗಳಾಗಿ ನಿಮ್ಮ ಚರಣವೆ ಹರಣವಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೃದಯ ಕಮಲ ಮಧ್ಯದಲ್ಲಿಪ್ಪ ದೇವರ ದೇವನ ದೇಹಾರವ ಮಾಡಲರಿದು. ದೇಹಿ ನಿರ್ದೇಹಿಯಾಗದನ್ನಕ್ಕ ದೇಹಾರವೆಲ್ಲಿಯದೊ ? ಅನಂತಮುಖದಲ್ಲಿ ದೇಹಾರವ ಮಾಡಲು ದೇವನಲ್ಲಿಲ್ಲ ನೋಡಯ್ಯಾ. ಅಸಾಹಿತ್ಯವಿಡಿದು ಹುಸಿಯನೆ ಪೂಜಿಸಿ ಗಸಣಿಗೊಳಗಾದಿರಲ್ಲಾ. ಅನಂತವಳಿದು ನಿಜವನರಿದ ಏಕೋಗ್ರಾಹಿ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಅಜ್ಞಾನದಿಂದ ಮೋಕ್ಷಕರ್ತೃ ಇಲ್ಲವೆಂದು ಸುಜ್ಞಾನಕ್ಕೆ ಗುರುವಿನ ದಯವಾಗಿ, ಸಕೀಲವರಿಯಲಾಗಿ ಒಂಬತ್ತು ಬಾಗಿಲ ಮುಚ್ಚಿ ಒಳಯಕ್ಕೆ ಒಬ್ಬರನೂ ಬಿಡಬೇಡೆಂದು ಒಮ್ಮನ ಮಾಡು, ಸುಮ್ಮನೆ ನೀಡು, ಗಮ್ಮನೆ ಕಳುಹು ಎಂದರು. ಮುಂದೆ ನಮ್ಮ ದೇವನ ಬಳಿಯಲ್ಲಿ ಸಂಭ್ರಮದ ಪೂಜೆಯಾಗಿಟ್ಟ ಎಡಬಲನ ಮುರಿದು ಬೀಗದ ಕೈಕೊಂಡು ಕುಂಭಿನಿ ಬಾಗಿಲ ಕದವ ತೆಗೆದು, ಒಳಪೊಕ್ಕು ಒಂದಾನೊಂದು ಕಟ್ಟಳೆಯ ಮಾಡಿ ಪರತತ್ವದಲ್ಲಿ ಬೆರಸಿದ ನಿಷ*ಕ್ಕೆ ದೇವನೆಂದು ನಮೋ ನಮೋ ಎಂದು ನಂಬುವರು ಕಾಣಾ ಎಂದು ನುಡಿವ ಮದೃಷ್ಟವುಳ್ಳವರು ದೃಷ್ಟಿಯಲಿ ನೋಡಿದುದೆಲ್ಲ ಲಯದಲ್ಲಿ ಅಡಗಿತು ಕಾಣಾ. ಲಯವಾದವರಿಗೆ ಇನ್ನೆಲ್ಲಿ ಮುಕ್ತಿಯೋ ? ಲಯಭಯಕ್ಕೆ ವಿರಹಿತನಾಗಿ ವೇದಾಂತ ಮಹಾನುಭಾವದಿಂದ ತಿಳಿದು ತನ್ನ ತಾನರಿದು ತಾನಾರೆಂದು ತಿಳಿದು ತಮ್ಮುವಳಿದು ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಜಾಗ್ರಾವಸ್ಥೆಯಲ್ಲಿ ಸುಳಿಹುದೋರಿದ ಶಕ್ತಿ ಸ್ವಪ್ನಾವಸ್ಥೆಗೆ ತಲೆದೋರಿದ ಮತ್ತೆ ಬೇರೊಂದುಭಯಕ್ಕೆ ಕಟ್ಟುಂಟೆ? ಆಸೆಯೆಂಬುದೆ ಮಾರಿ, ನಿರಾಸೆಯೆಂಬುದೆ ದೇವಪದ. ದೇವನ ನೆನೆದು ಕಾಯಕವ ಮಾಡಿದಲ್ಲಿ ಆವ ಪದಕ್ಕೂ ಸುಖ, ಕಾಲಾಂತಕ ಭೀಮೇಶ್ವರಲಿಂಗವ ಕುರಿತು ಮಾಡಿದಲ್ಲಿ.
--------------
ಡಕ್ಕೆಯ ಬೊಮ್ಮಣ್ಣ
ಧರೆಯೊಳಗೆ ಹುಟ್ಟಿದವರೆಲ್ಲ ಬಲ್ಲೆನೆಂದು ಬಲ್ಲತನಕ್ಕೆ ಗೆಲ್ಲಸೋಲಕ್ಕೆ ಹೋರಿ, ಸಲ್ಲದೆ ಹೋದರು ನಮ್ಮ ಶರಣರಿಗೆ. ಅದೇನು ಕಾರಣವೆಂದರೆ, ಇವರೆಲ್ಲ ಪುರಾಣದ ಪುಂಡರು, ಶಾಸ್ತ್ರದ ಸಟೆಯರು, ಆಗಮದ ತರ್ಕಿಗಳು, ವೇದದ ಹಾದರಿಗರು, ಬೀದಿಯ ಪಸರದ, ಸಂತೆಯ ಸುದ್ದಿಯ ಗೊತ್ತಿಗರು. ಇಂತಿವರಾರೂ ಲಿಂಗದ ನೆಲೆಯನರಿಯರು. ಹಿಂದೆ ಹೋದ ಯುಗಂಗಳಲ್ಲಿ ಹರಿಬ್ರಹ್ಮರು ವಾದಿಸಿ, ನಮ್ಮ ದೇವನ ಕಾಣದೆ ಹೋದರು. ಇದಕ್ಕೆ ಶ್ರುತಿ ಸಾರುತ್ತಿದೆ. ದೇವ ದಾನವ ಮಾನವರು ಕಾಲ ಕಾಮಾದಿಗಳ ಆರಾಧಿಸಿ, ನಮ್ಮ ದೇವರ ಕಾಣದೆ ಹೋದರು. ನಿಮ್ಮ ಪಾಡೇನು ? ಅರಿಮರುಳುಗಳಿರಾ ? ನಮ್ಮ ದೇವನ ಕಂಡೆನೆಂದರೆ ನೋಟಕಿಲ್ಲ, ನೆನಹಿಗಿಲ್ಲ. ತನುವಿಗಿಲ್ಲ, ಸಾಧಕರಿಗಿಲ್ಲ, ಭಾವನೆಗಿಲ್ಲ. ಇಂತಪ್ಪ ದೇವನ ಒಡಲ ಹಿಡಿವರ ಕಂಡೆನೆಂದರೆ ಆಗದು. ಇದರ ಬಿಡುಮುಡಿಯನರಿದು ಅಂಗೈಸುವ ಶರಣರ ಸಂಗದೊಳಗೆ ಎನ್ನ ಕಂಗಳು ಲಿಂಗವಾಗಿ, ಕರವೆ ಜಂಗಮವಾಗಿ, ಇಹಪರದೊಳಗೆ ಪರಿಪೂರ್ಣವಾದೆನಯ್ಯಾ. ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು, ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ, ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ, ಈಶ್ವರ ಮೇಲೋಗರ, ಸದಾಶಿವ ತುಪ್ಪ; ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವೇದ ಪ್ರಣವದ ಶೇಷ. ಶಾಸ್ತ್ರ ಸಂಕಲ್ಪದ ಸಂದು. ಪುರಾಣ ಪುಣ್ಯದ ತಪ್ಪಲು. ಇಂತೀ ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ವಾದಕ್ಕೆ ಹೋರುವ ವಾಗ್ವಾದಿಗಳು ಭೇದವನರಿಯದೆ ಹೋರಲೇಕೆ? ಹೊಲಬುದಪ್ಪಿ ಬೇವಿನ ಮರನ ಹತ್ತಿ ಬೆಲ್ಲವ ಮೆದ್ದಡೆ ಕಹಿಯೊ? ಸಿಹಿಯೊ? ಎಂಬುದನರಿತಾಗ, ಆವ ಬಳಕೆಯಲ್ಲಿದ್ದಡೂ ದೇವನ ಕಲೆಯನರಿತಲ್ಲಿ ಆವ ಲೇಪವೂ ಇಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇಂದು ಭಾನುವನೊಂದುಗೂಡಿಸಿ, ಬಿಂದು ನಾದವನೊಂದುಮಾಡಿ, ಅವರಲ್ಲಿ ತಂದಿರಿಸಿದ ಜೀವ ಪ್ರಾಣಂಗಳನು. ಅವರೊಳಗೆ ಕರಣೇಂದ್ರಿಯಗಳ ಹುರಿಗೊಳಿಸಿ, ನಾಡಿ ಚಕ್ರಂಗಳಿಂದ ಜಂತ್ರವ ಹೂಡಿ ನಿಲಿಸಿ, ತಾಯಿ ಉಂಡ ಅನ್ನರಸವ ನಾಭಿಸೂತ್ರದಲ್ಲಿ ಶಿಶುವಿಗೆ ಊಡಿಸಿ, ಜೀವಿಸಿದ ಶಿಶುವ ಯೋನಿಮುಖದಿಂ ಹೊರವಡಿಸಿ, ತಾಯಿಯ ಸ್ತನದಲ್ಲಿ ಅಮೃತವ ತುಂಬಿ ಊಡಿಸಿ, ಸಲಹುವ ದೇವನ ಮರೆವ ಜೀವರಿಗೆ ಇನ್ನಾವಗತಿಯೂ ಇಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->