ಅಥವಾ

ಒಟ್ಟು 44 ಕಡೆಗಳಲ್ಲಿ , 24 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಂಬೆಗೆ ರಂಭೆತನವುಂಟೆ ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ, ನೀ ಬಂದೆಯಲ್ಲಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಮರುಳಶಂಕರದೇವ
ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ, ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ, ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ, ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ, ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ, ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು, ಕಡಿವ ಜಂತುಜಂಗುಳಿಯ ಬಾಧೆ, ಸುಡುವ ಜಠರಾಗ್ನಿಯ ಬಾಧೆ, ಎಡದಲ್ಲಿ ಮೂತ್ರದ ತಡಿಕೆಯ ಬಾಧೆ, ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ, ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು, ಆ ಮೇಲೆ ಜಾತಿಸ್ಮರತ್ವ ಉದಯವಾಗಿ, ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ, ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ, ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು, ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು, ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು, ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ, ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ, ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ, ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ, ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ, ಕಾಮವಿಕಾರ ತಲೆಗೇರಿ ವಿಷಯಾತುರನಾಗಿ, ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ, ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ, ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ, ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು, ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು, ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ. ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ. ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು. ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು. ಆ ಷಡುಸ್ಥಲದ ಭಾವಂಗಳೆ ಬ್ಥಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು. ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ, ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು.
--------------
ಏಲೇಶ್ವರ ಕೇತಯ್ಯ
`ದೇಹೇ ಪ್ರಾಣಂ ಸಮಾಯೋಜ್ಯ ಪ್ರಾಣಲಿಂಗೇ ಪ್ರಕಲ್ಪಯೇತ್ | ಅವಿನಾಭಾವ ಸಂಯೋಗಾತ್ತಸ್ಮಾದೈಕ್ಯಂ ಪ್ರಕಲ್ಪಯೇತ್' | ಎಂದುದಾಗಿ, ಈ ಪ್ರಕಾರದಿಂ ವೀರಶೈವ ದೀಕ್ಷಿತನಾದ ವೀರಮಾಹೇಶ್ವರನು ದೇಹಪ್ರಾಣಂಗಳ ವರ್ತನೆ ಬೇರಾಗದ ಹಾಂಗೆ, ಏಕವಾಗಿ ಕೂಡಿ ತನ್ನ ಪ್ರಾಣಲಿಂಗದಲ್ಲಿ ಕಲ್ಪಿಸೂದ. ಆ ಅಗಲಿಕೆಯಿಂದ ಭಾವದ ಕೂಟದ ದೆಸೆಯಿಂದ ಪ್ರಾಣ ಲಿಂಗವೆಂಬೆರಡನೂ ಏಕವನು ಮಾಡುವುದಯ್ಯಾ ಶಾಂತ ವೀರೇಶ್ವರಾ.
--------------
ಶಾಂತವೀರೇಶ್ವರ
ಅಂಧಕಾರವಾಗಿಹ ಕತ್ತಲೆಯೊಳು ಮಹಾಮೇರುವಿಹುದು ನೋಡಾ. ಆ ಮಹಾಮೇರುವ ಉದಯಾಸ್ತಮಯವಾಗಿಹ ಚಂದ್ರಸೂರ್ಯರು ತಿರುಗುವರು. ಆ ಚಂದ್ರಸೂರ್ಯರ ದೆಸೆಯಿಂದ ಇರುಳು ಹಗಲೆಂಬ ವೃಕ್ಷ ಹುಟ್ಟಿ, ಆ ವೃಕ್ಷಕ್ಕೆ ಅರವತ್ತು ಶಾಖೆಗಳಾದವು ನೋಡಾ. ಒಂದೊಂದು ಶಾಖೆಗಳಲ್ಲಿ ಮುನ್ನೂರರವತ್ತು ಮುನ್ನೂರರವತ್ತು ಗೂಬೆಗಳು ಕುಳಿತು ಕೂಗುತ್ತಿಹವು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಿಂಬಿಗೆ ರಂಭೆತನವುಂಟೆ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ ನೀ ಬಂದೆಯಲ್ಲಾ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಸಿದ್ಧರಾಮೇಶ್ವರ
ಆ ನಿಜದರಿವು ತಾನೊಂದು ಬಂಧನದಿಂದ ಮರೆಯಾದುದ ತಾನರಿಯದೆ, ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ, ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ, ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು, ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ, ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ, ತ್ರಿದೋಷದ ದೆಸೆಯಿಂದ ನಾನಾದರುಶನ ಪಕ್ಷಪಾತಂಗಳಲ್ಲಿ ಹೊತ್ತು ಹೋರಿ, ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು, ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು, ಷಡುದರುಶನವ ಸಂಪಾದಿಸಿಹೆನೆಂದು, ಪಂಚಭೌತಿಕ ಭೇದ, ಪಂಚವಿಂಶತಿತತ್ವ ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು, ನೂರೊಂದರ ಲಕ್ಷ. ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ? ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ. ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ ಎಸಕವ ತಿಳಿದಡಗಿದ ತೆರದಂತೆ, ಅರಿದು ನಡೆವ ಪರಮವಿರಕ್ತಂಗೆ ಹಲವುಮಾತಿನ ಬಲೆಯ ಭ್ರಮೆಯಿಲ್ಲ. ಗೆಲ್ಲಸೋಲದ ಕಲ್ಲೆದೆಯವನಲ್ಲ. ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ ಥೆಕಾವ್ಯವೆಲ್ಲವ ಹೇಳುವನಲ್ಲ. ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ, ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ ಸಂಸಾರದಲ್ಲಿಯೆ ಸಾವನಲ್ಲ. ಕಲ್ಲಿಯೊಳಗಣ ಮಕರದ ಜೀವದಂತೆ, ಸಂಸಾರದಲ್ಲಿಯೆ ಹೋದ ಕುಳಿಗೊಂಬನಲ್ಲ. ಆತನ ಇರವು ದಗ್ಧಪಟದಂತೆ, ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ, ಸ್ಫಟಿಕದ ನಿರ್ದೇಹದ ವರ್ಣದ ಹೊದ್ದಿಗೆಯಂತೆ, ಇಂತು ಚಿದ್ರೂಪನ ಇರವು. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದೊಳಗಾದವನ ಇರವು
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಶುಕ್ಲಕಶೋಣಿತದಿಂದ ತನು ಮನ ಜನಿಸಿತ್ತು. ತನು ಮನದಿಂದ ನಡೆ ನುಡಿ ಜನಿಸಿತ್ತು. ನಡೆ ನುಡಿಯಿಂದ ಅಹಂಕಾರ ಮಮಕಾರ ಜನಿಸಿತ್ತು. ಇವರ ದೆಸೆಯಿಂದ ರಸ, ಗಂಧ, ರೂಪು, ಶಬ್ದ, ಸ್ಪರ್ಶನ ಜನಿಸಿತ್ತು. ಇವಕ್ಕಾಶ್ರಯವಾಗಿ ಮನವೊಂದಿದ್ದಿತಲ್ಲದೆ ಆ ಮನವು ಮಹದಲ್ಲಿ ಲಯವಾದಲ್ಲಿ ಆತ್ಮನಾವೆಡೆಯಲ್ಲಿದ್ದಿತ್ತೊ ? ಷಡುವರ್ಣದೊಳಗಲ್ಲ ನಡೆ ನುಡಿ ಚೈತನ್ಯವಲ್ಲ. ಹಿಡಿತಕ್ಕೆ ಬರಲಿಲ್ಲ ಇನ್ನೆಂತಿಪ್ಪುದೊ ? ದರ್ಪಣದ ಪ್ರತಿಬಿಂಬಕ್ಕೊಂದು ಚೇಷ್ಟೆಯುಂಟೆ ? ನೆಳಲಿಗೊಂದು ಹರಿದಾಟವುಂಟೆ ? ನಿಃಕಳಂಕ ಶಾಂತಮಲ್ಲಿಕಾರ್ಜುನಯ್ಯಾ, ಮನದ ನೆನಹೇ ಆತ್ಮನಲ್ಲದೆ ಬೇರಾತ್ಮನಿಲ್ಲ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕೇಳು ಕೇಳಯ್ಯ ಆತ್ಮನೇ, ಎರಡು ಪ್ರಕಾರದ ಆದಿಮಧ್ಯ ಅವಸಾನವ ತಿಳಿದು ನೋಡು, ಕೆಡಬೇಡ ಕೆಡಬೇಡ. ತಂದೆಯ ದೆಸೆಯಿಂದ ತಾಯಿ ಯೋನಿಚಕ್ರದಲ್ಲಿ ಬಂದುದೇ ಆದಿ. ಹೊನ್ನು ಹೆಣ್ಣು ಮಣ್ಣು ನನ್ನದೆಂದು ಹಿಡಿದು ಷಟ್ಕರ್ಮವನಾಚರಿಸಿ ಸುಖದುಃಖಂಗಳಲ್ಲಿ ಮುಳುಗಿಪ್ಪುದೇ ಮಧ್ಯ. ಆತ್ಮನ ಕೃಪೆಯಿಂದ ಅರೆದು ಸಣ್ಣಿಸಿಕೊಂಡು ಭವಕ್ಕೆ ನೂಂಕಿಸಿಕೊಳ್ಳುವುದೇ ಅವಸಾನ. ಇವನರಿದು ಇವಕ್ಕೆ ಹೇಹಮಂ ಮಾಡು. ಮತ್ತೆ ಆದಿ ಮಧ್ಯ ಅವಸಾನಮಂ ತಿಳುಹುವೆನು. ನಾನು ಮಹಾಲಿಂಗದ ಗರ್ಭಾಬ್ಧಿಯಲ್ಲಿ ಬಂದೆನೆಂಬುದೇ ಆದಿ. ಲೋಕದ ವ್ಯವಹಾರವ ಸಾಕುಮಾಡಿ ಇಷ್ಟಲಿಂಗದಲ್ಲಿ ನಿಷೆ*ಯಾಗಿ, ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿ, ಕ್ಷುತ್ತಿಂಗೆ ಭಿಕ್ಷೆ ಶೀತಕ್ಕೆ ರಗಟೆಯಾಗಿ, ಮೋಕ್ಷಗಾಮಿಯಪ್ಪುದೇ ಮಧ್ಯ. ತನುವ ಬಿಡುವಲ್ಲಿ ಮನವ ಪರಬ್ರಹ್ಮಕ್ಕೆ ಸಮರ್ಪಣ ಮಾಡಿ, ಜನನ-ಮರಣ ಗೆಲುವುದೇ ಅವಸಾನ. ಇದನರಿದು ಇದಕ್ಕೆ ಮೆಚ್ಚಿ, ಲಿಂಗವನೆ ಸಾಧಿಸು ವೇಧಿಸು. ಕಪಿಯ ಕೈಯ ಕನ್ನಡಿಯಂತೆ ಕುಣಿದರೆ ಕುಣಿದು, ಏಡಿಸಿದರೆ ಏಡಿಸಿ, ಹಲ್ಲುಕಿರಿದರೆ ಹಲ್ಲುಕಿರಿದು, ಮನವಾಡಿದಂತೆ ನೀನಾಡಬೇಡ. ಮನವಾಡಿದಂತೆ ಆಡಿದವಂಗೆ, ಭಕ್ತಿಯೆಲ್ಲಿಯದು? ಜ್ಞಾನವೆಲ್ಲಿಯದು? ವೈರಾಗ್ಯವೆಲ್ಲಿಯದು? ವಿರಕ್ತಿಯೆಲ್ಲಿಯದು? ಮುಕ್ತಿಯೆಲ್ಲಿಯದಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಾ ಹಡೆದೆ ಮೂವರು ಸೂಳೆಯರ. ಒಬ್ಬಳಿಗೋಹೆಯನಿಕ್ಕುವೆ; ಒಬ್ಬಳಿಗೆ ವೇಳೆಗೊತ್ತೆಯ ಕೊಡುವೆ; ಒಬ್ಬಳ ಮನೆಯೊಳಗೆ ಹಾಕಿಕೊಂಡೆ. ಎನ್ನ ವಂಚಿಸಿ ಮೂವರೂ ಓಡಿಹೋದರು; ಲೇಸಾಯಿತ್ತೆಂದೆ, ಗೊಹೇಶ್ವರನ ಶರಣ ಅಲ್ಲಮನ ದೆಸೆಯಿಂದ.
--------------
ಗಾಣದ ಕಣ್ಣಪ್ಪ
`ಶೈವೈರ್ಮಾಹೇಶ್ವರೈಶ್ಚ ೈವ ಕಾರ್ಯಮಂತರ್ಬಹಿಃ ಕ್ರಮಾತ್ | ಶೈವೋ ಮಾಹೇಶ್ವರಶ್ಚೇತಿ ನಾತ್ಯಂತಮಿಹ ವಿದ್ಯತೇ || ಇಂತೆಂದು ಶೈವರಿಂದವು ಮಾಹೇಶ್ವರರಿಂದವು ಅಂತರಂಗ ಬಹಿರಂಗದಲ್ಲಿ ಪರಿವಿಡಿಯ ದೆಸೆಯಿಂದ ಕ್ರಿಯೆಯೆು ಶೈವವೆಂದು ಮಾಹೇಶ್ವರವೆಂದು, ಇಲ್ಲಿ ಅಧಿಕವಾಗಿ ಏರ್ಪಡಿಸಲ್ಪಡು ವುದಿಲ್ಲವಯ್ಯಾ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಇಂಥವರ ದೆಸೆಯಿಂದ ಇಂತುಟಾದುದೆಂದು ಚಿಂತಿಸುತಿಪ್ಪ ಭಾಷೆಗೆಟ್ಟ ಮನದವ ನಾನಲ್ಲವಯ್ಯಾ. ಎನ್ನಲಿದ್ದುದ ನೀವೆ ಬಲ್ಲಿರಿ, ಬಹ ಅನುವನೂ ನೀವೆ ಬಲ್ಲಿರಿ, ಸಕಳೇಶ್ವರದೇವಾ, ಈವರು ಕಾವರು ನೀವೆಯಾಗಿ.
--------------
ಸಕಳೇಶ ಮಾದರಸ
ಹೊರಗೆ ಅಗ್ನಿ ಉರಿವುತಿಪ್ಪುದಯ್ಯ. ಕುಂಭದೊಳಗೆ ಉದಕವಿಪ್ಪುದಯ್ಯ. ಅಗ್ನಿಯ ಸಂಪರ್ಕದ ದೆಸೆಯಿಂದ ಕುಂಭದೊಳಗಿರ್ದ ಉದಕವು ಹೇಂಗೆ ಉಷ್ಣವಹುದು ಹಾಂಗೆ ಸರ್ವೇಂದ್ರಿಯವನುಳ್ಳಪ್ರಾಣನು ತನ್ನ ಪೂರ್ವಗುಣವನು ಬಿಟ್ಟು ಲಿಂಗಕಳೆಯನೆ ವೇಧಿಸಿ ಪ್ರಾಣವೆ ಲಿಂಗವೆನಿಸಿಕೊಂಡಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
`ಶುದ್ಧತ್ವಂ ಶಿವಮುದ್ಧಿಷ್ಟಂ ಶಿವಾಜ್ಜಾತಾದಿಶೈವಕಂ | ಶುದ್ಧಶೈವ ಸಮಾಯೋಗಾತ್ || ಶುದ್ಧಶೈವಮಿತಿ ಸ್ಮೃತಂ' ಎಂದು ಶಿವನು ಉದೇಶಿಸಲ್ಪಟ್ಟುದಹುದರಿಂದ ಶುದ್ಧತ್ವವಪ್ಪುದು. ಶಿವನ ದೆಸೆಯಿಂದ ಪುಟ್ಟಿದುದಾದ ಕಾರಣ ಶೈವ ಶಬ್ದವಾಯಿತ್ತು. ಶುದ್ಧಶೈವಂಗಳೆಂಬ ಶಬಗಳ ಕೂಟದ ದೆಸೆಯಿಂದ ಶುದ್ಧಶೈವವೆಂದು ನೆನೆಯಲ್ಪಟ್ಟಿತ್ತು. ಮತ್ತಂ `ಶುದ್ಧಶೈವಾನ್ಮಹಾಸೇನ ತಸ್ಮಾಜ್ಜಾತಃ ಶಿವದ್ವಿಜಃ' ಎಂದು ಆ ಶುದ್ಧಶೈವನ ದೆಸೆಯಿಂದ ಪುಟ್ಟಿದವನು ಶಿವಬ್ರಾಹ್ಮಣನೆನಿಸಿಕೊಂಬನು. `ವೀರತಂತ್ರೇ ಶಿವದ್ವಿಜಾಸ್ತು ವಿಪ್ರೇಂದ್ರಕಾದ್ಯಾದಿ ಶೈವಾಃ ಪ್ರಕೀರ್ತಿತಾಃ' ಎಂದು ಶಿವಬ್ರಾಹ್ಮಣರೆನಿಸಿಕೊಂಬ ಆ ಬ್ರಾಹ್ಮಣರುಗಳು ಆದಿಶೈರೆನಿಸಿಕೊಂ ಬರು. ಅವರಾರಾರೆಂದೊಡೆ ಪೇಳ್ದಪಂ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಇನ್ನಷ್ಟು ... -->