ಅಥವಾ

ಒಟ್ಟು 25 ಕಡೆಗಳಲ್ಲಿ , 14 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು, ಆತ್ಮನೇಕವೆಂಬುದು, ಇಂದ್ರಿಯಂಗಳು ಹಲವೆಂಬುದು, ಅರಿವು ಹಿಂಗಲಿಕೆ ಒಂದೆಂಬುದು, ಅಣೋರಣೀಯಾನ್ಮಹತೋ ಮಹೀಯಾನ್ ಎಂಬುದು, ಎಲ್ಲಾ ದೃಷ್ಟದ ಲಕ್ಷದಲ್ಲಿ ಉಂಟೆಂಬುದು, ಉಭಯಭಾವದಲ್ಲಿ ತೋರಿ ಹರಿದಾಡುವುದು, ಅದು ಚಿತ್ತೋ, ಚಿದಾದಿತ್ಯನೋ, ವಸ್ತು ಭಾವವೋ ? ಇಂತೀ ಲಕ್ಷ ಅಲಕ್ಷಂಗಳೆಂಬ ಗೊತ್ತ ಮೆಟ್ಟಿ, ಬಟ್ಟಬಯಲಾದ ಕಾಮಧೂಮ ಧೂಳೇಶ್ವರನೊಳಗಾದೆ, ಆಗೆನೆಂಬ ಭಾವ ನಿಂದಲ್ಲಿ.
--------------
ಮಾದಾರ ಧೂಳಯ್ಯ
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ, ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ, ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ, ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ, ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ? ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಹೆಂಡದ ಮಾರಯ್ಯ
ಕಾಯದ ಒಲವರದಲ್ಲಿ ನಿಲುವ ಚಿತ್ತ, ಕಂಗಳ ಗೊತ್ತಿನಲ್ಲಿ ಕಟ್ಟುವಡೆದು ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ ಮನದ ಸೂತಕ ಹರಿದು ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
--------------
ಅಲ್ಲಮಪ್ರಭುದೇವರು
ದೃಷ್ಟದ ಜ್ಯೋತಿಯ ನಂದಿಸಬೇಕಲ್ಲದೆ ಪರಂಜ್ಯೋತಿಯ ಬಂದ್ಥಿಸಿ ನಂದಿಸಿ ಕೆಡಿಸಿಹೆನೆಂದಡೆ ಕೆಟ್ಟುದುಂಟೆ ಆ ಬೆಳಗು? ಈ ಗುಣ ಇಷ್ಟಲಿಂಗವನರಿವುದಕ್ಕೆ ದೃಷ್ಟ ಮನ ಇಷ್ಟದಲ್ಲಿ ವಿಶ್ರಮಿಸಿದ ಲಕ್ಷ ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 50 ||
--------------
ದಾಸೋಹದ ಸಂಗಣ್ಣ
ಗುರುಪ್ರಸಾದಿ ಆ ಪ್ರಸಾದವ ಲಿಂಗಕ್ಕೆ ಅರ್ಪಿಸಲಾಗದು, ಲಿಂಗಪ್ರಸಾದಿ ಆ ಪ್ರಸಾದವ ಜಂಗಮಪ್ರಸಾದದಲ್ಲಿ ಕೂಡಲಾಗದು. ಇಂತೀ ತ್ರಿವಿಧಪ್ರಸಾದವ ತಾ ಸ್ವೀಕರಿಸುವಲ್ಲಿ ತನ್ನ ದೃಷ್ಟದ ಇಷ್ಟಕ್ಕೆ ಅರ್ಪಿಸದೆ ಮುಟ್ಟಲಾಗದು. ಇಂತೀ ಭಾವ ಅಮೃತದಲ್ಲಿ ವಿಷ ಬೆರೆದಂತೆ: ಅಮೃತವ ಚೆಲ್ಲಬಾರದು, ವಿಷವ ಮುಟ್ಟಬಾರದು. ಗೋವು ಮಾಣಿಕವ ನುಂಗಿದಂತೆ: ಗೋವ ಕೊಲ್ಲಬಾರದು, ಮಾಣಿಕವ ಬಿಡಬಾರದು. ಗೋವು ಸಾಯದೆ ಮಾಣಿಕ ಕೆಡದೆ ಬಹ ಹಾದಿಯ ಬಲ್ಲಡೆ ಆತ ತ್ರಿವಿಧ ಪ್ರಸಾದಿಯೆಂಬೆ. ಆ ಗುಣ ಏಲೇಶ್ವರಲಿಂಗಕ್ಕೂ ಅಸಾಧ್ಯ ನೋಡಾ!
--------------
ಏಲೇಶ್ವರ ಕೇತಯ್ಯ
ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ, ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ ಅದಕ್ಕೆ ಭಿನ್ನಭಾವವಾವುದು ? ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು, ಆ ಕುಂಭಂಗಳಿಗೆ ಒಳಗೆ ಮುಟ್ಟಿದಡೂ ಹೊರಗೆ ಮುಟ್ಟಿದಡೂ ಪಾಕಪ್ರಯತ್ನ ತಪ್ಪದಾಗಿ. ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ, ಒಳಗಣ ಜ್ಞಾನಸಂಬಂಧವು; ಉಭಯದ ತತ್ತಿಲ್ಲ. ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ ? ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ ಗುಟ್ಟಿನ ಕುಲವಿಲ್ಲ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಸ್ವಯಾನುಭಾವಸಿದ್ಧನಾದ ಕಾರಣ.
--------------
ಮೋಳಿಗೆ ಮಹಾದೇವಿ
ಎಂಟು ಯೋಗ ಆರು ಭೇದ ಮೂರು ಬಟ್ಟೆ ಐದು ಮುಟ್ಟು ಈರೈದು ಹಾದಿ ಹದಿನಾರು ಸಂಗ ನಾಲ್ಕು ಮೆಟ್ಟು ಎರಡುಸಂಚಾರ ಒಂದರ ಕಟ್ಟಿನಲ್ಲಿ ಮುಟ್ಟುಮಾಡಿ ನಿಲಿಸಿ, ದೃಷ್ಟದ ಇಷ್ಟದಲ್ಲಿ ಬೈಚಿಟ್ಟು, ಅವರವರ ಸ್ವಸ್ಥಾನದ ಕಟ್ಟಣೆಯಲ್ಲಿ ವಿಶ್ರಮಿಸಿ ಆ ಚಿತ್ತವ ಆ ಚಿತ್ತು ಒಡಗೂಡಿ ಇಪ್ಪುದೆ ಕ್ರಿಯಾಪಥಲಿಂಗಾಂಗಯೋಗ. ಇದನರಿಯದೆ ಮಾಡುವ ಯೋಗವೆಲ್ಲವೂ ತನ್ನಯ ಭವರೋಗ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಭಕ್ತ ಮಾಹೇಶ್ವರ ಪ್ರಸಾದಿ ಇಂತೀ ತ್ರಿವಿಧವನರಿತು, ಆ ತ್ರಿವಿಧಸ್ಥಾನಂಗಳಲ್ಲಿ ಕಾಯ ಜೀವ ಭಾವ ಈ ತ್ರಿವಿಧವನರಿತು, ಕಾಯದ ಕರ್ಮವ ಕಳೆದು, ಜೀವದ ಭವವ ಹಿಂಗಿಸಿ, ಭಾವದ ಪ್ರಕೃತಿಯ ನಂದಿಸಿ, ಇಷ್ಟಲಿಂಗವ ದೃಷ್ಟದ ತನುವಿಂಗೆ ಪ್ರಮಾಣಿಸುವಲ್ಲಿ, ಅದು ಗುರುಸ್ಥಲಭಾವ, ಅಲ್ಲಿ ಮೂರುಸ್ಥಲ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸ್ವಪ್ನದಲ್ಲಿ ಮರೆದು, ಸಕಲವ ಕಂಡು ಅರಿದು, ಹೇಳುವುದು, ಆತ್ಮ ಭಿನ್ನವೋ, ಘಟ ಭಿನ್ನವೋ ? ಇಷ್ಟಲಿಂಗವೆಂದು, ಪ್ರಾಣಲಿಂಗವೆಂದು ಕಟ್ಟಿ ಹೋರುವಾಗ, ತಾನು ದೃಷ್ಟದ ಅಂಗವ ಹೊತ್ತು ಹೋರುತ್ತಿದ್ದು, ಮತ್ತೆ ಕ್ರೀಯಲ್ಲಾವೆಂಬುದಕ್ಕೆ ತೆರಪಾವುದು ? ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಕ್ರೀಯೋ, ನಿಃಕ್ರೀಯೋ ? ಮಂದಿಯ ನಡುವೆ ನಿಂದಿರ್ದ ಉಡುವಿನಂತೆ, ಕಣ್ಣು ಮುಚ್ಚಿ ಗೆದ್ದೆನೆಂದು ಬಡಿಯಿಸಿಕೊಂಬ ತೆರದ ಮಾತಿನ ಮಾಲೆ ಬೇಡ. ನೂಲ ಹಿಡಿದು ಬೆಟ್ಟವನೇರುವಂತೆ, [ವಿ]ಧವೆ ಬಾಲನ ಹಿಡಿದು ಬದುಕುವಂತೆ, ಕೂಷ್ಮಾಂಡವ ಹಿಡಿದು ಎಯ್ದುವ ಜಲದಲ್ಲಿ ಚರಿಸುವನಂತೆ, ಕಡೆಯಾಗಬೇಡ, ನೆರೆ ನಂಬು. ಮಾಡುವ ಕ್ರೀಯಲ್ಲಿ ಅರಿವುಹೀನವಾಗಬೇಡ. ಮಡುವಿನ ನಡುವೆ ಕಟ್ಟಿದ ಹಾಲದ ಹಾದಿಯಂತೆ, ಅಡಿ ತೊಲಗಿದಡೆ ಕುಡಿವಿರಿ ನೀರ. ಬಿಡದಿರು ಮಾಡುವ ಸತ್ಕ್ರೀಯ. ಇದನರಿದು ಒಡಗೂಡು, ಐಘಟದೂರ ರಾಮೇಶ್ವರಲಿಂಗವ, ಉಭಯ ಭಾವವಳಿದು.
--------------
ಮೆರೆಮಿಂಡಯ್ಯ
ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ? ಸುಗಂಧದ ನನೆಯ ತಂದು ಬಂಧಿಸಿದಲ್ಲಿ, ಆ ಸುವಾಸನೆ ಬಂದುದುಂಟೆ ? ಆ ಕಿರಣ ಪರುಷಶಿಲೆ ಸತಿಯಾಗಿ ಬೆರಸಿದಲ್ಲಿ, ಬಿಂದು ರೂಪಾಯಿತ್ತು. ರಿತುಕಾಲಕ್ಕೆ ಕುಸುಮ ಬಲಿಯಲಾಗಿ, ಸುವಾಸನೆಯೆಸಗಿತ್ತು. ಇಂತೀ ಉಭಯದಿಂದ ಅರಿವಲ್ಲಿ, ಸ್ಥಲಸ್ಥಲವ ನೆಮ್ಮಿ ನಿಃಸ್ಥಲವನರಿತಲ್ಲಿ, ದೃಷ್ಟದ ಇಷ್ಟ ಅಲ್ಲಿಯೇ ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ ಆ ಶೂಕರ ಮದಗಜವಾಗಬಲ್ಲುದೆ ? ಎಲುಬು ಕಡಿಯುವ ಶುನಿಗಳಿಗೆ ಗಜವೈರಿಯ ಹೋಲಿಸಿದರೆ ಆ ಶುನಿಗಳು ಗಜವೈರಿಯಾಗಬಲ್ಲುವೆ ? ಇಲಿಯ ತಿಂಬುವ ಮಾರ್ಜಾಲನಿಗೆ ಮಹಾವ್ಯಾನ ಹೋಲಿಸಿದರೆ ಆ ಮಾರ್ಜಾಲ ಮಹಾವ್ಯಾಘ್ರನಾಗಬಲ್ಲುದೆ ? ಹೊಲಸುತಿಂಬುವ ಕಾಗಿಯ ಮರಿಗೆ ಕೋಗಿಲೆಯ ಹೋಲಿಸಿದರೆ ಆ ಕಾಗಿಯಮರಿ ಸುನಾದಸ್ವರ ಕೋಗಿಲಮರಿಯಾಗಬಲ್ಲುದೆ ? ಕಸವ ತಿಂಬುವ ಕತ್ತೆಗೆ ಕುದುರೆಯ ಹೋಲಿಸಿದರೆ ಆ ಕತ್ತೆ ಮಹಾತೇಜಿಯಾಗಬಲ್ಲುದೆ ? ಕಸ ನೀರು ಹೊರುವ ದಾಸಿಗೆ ಅರಸಿಯ ಹೋಲಿಸಿದರೆ ಆ ದಾಸಿಯು ಅರಸಿಯಾಗಬಲ್ಲಳೆ ? ಈಚಲ ಕಾಡಿನಮರಕ್ಕೆ ಟೆಂಗಿನಮರ ಹೋಲಿಸಿದರೆ ಆ ಈಚಲ ಕಾಡಿನಮರ ಎಳೆಯ ಟೆಂಗಿನಮರವಾಗಬಲ್ಲುದೆ ? ನೀರೊಳಗಣ ಕೋಳಿಗೆ ಕೊಳದೊಳಗಣ ಹಂಸನ ಹೋಲಿಸಿದರೆ ಆ ನೀರಕೋಳಿಯು ರಾಜಹಂಸನಾಗಬಲ್ಲುದೆ ? ತಿಪ್ಪೆಯೊಳಗಣ ಪುಳವತಿಂಬುವ ಕೋಳಿಗೆ ಪಂಜರದೊಳಗಣ ಗಿಣಿಯ ಹೋಲಿಸಿದರೆ ಆ ಕೋಳಿಯು ಅರಗಿಳಿಯಾಗಬಲ್ಲುದೆ ? ಇಂತೀ ದೃಷ್ಟದ ಹಾಗೆ ಲೌಕಿಕದ ಜಡಮತಿ ಮನುಜರಿಗೆ ಶಿವಜ್ಞಾನಸಂಪನ್ನರಾದ ಶರಣರ ಹೋಲಿಸಿದರೆ, ಆ ಮಂದಮತಿ ಜೀವರು ಶಿವಜ್ಞಾನಿಗಳಾದ ಶಿವಶರಣರಾಗಬಲ್ಲರೆ ? ಈ ಭೇದವ ತಿಳಿಯಬಲ್ಲರೆ ಕೂಡಲ ಚನ್ನಸಂಗಯ್ಯನ ಶರಣರೆಂಬೆ. ಇದ ತಿಳಿಯದಿದ್ದರೆ ಭವಭಾರಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ. ಕಬ್ಬಿಣಕ್ಕೆ ಇದ್ದಲಿಯ ಹಾಕಿ ಅಗ್ನಿಯನಿಕ್ಕಿ, ಕಾವುಗೊಳಲಾಗಿ, ಕರಗಿ ನೀರಾಗುತ್ತಿದೆ. ಹಾಲಿಗೆ ನೀರ ಹೊಯ್ದರೆ ಅದು ಏರುವ ಭೇದವನಾರೂ ಅರಿಯರು. ಶರಣರು ತನುವಿಡಿದಿದ್ದರೂ ಇದ್ದವರಲ್ಲ. ಅದು ಹೇಗೆಂದರೆ, ಹಿಂದಣ ದೃಷ್ಟದ ಪರಿಯಲ್ಲಿ ಲಿಂಗವ ಹಿಡಿದಂಗಕ್ಕೆ ಬೇರೊಂದು ಸಂಗಸುಖ ಉಂಟೆ ? ಅದು ಕಾರಣ, ಸರ್ವಾಂಗಲಿಂಗಿಯಾ ಶರಣನು ಮುಟ್ಟಿದ, ತಟ್ಟಿದ, ಕೇಳಿದ, ನೋಡಿದ, ನುಡಿದ, ಸೋಂಕಿದನೆನ್ನಬೇಡ. ಅದು ಕಾರಣ, ಕಬ್ಬಿಣ ನೀರುಂಡಂತೆ ಅರ್ಪಿತವ ಬಲ್ಲ ಐಕ್ಯಂಗೆ ಮೈಯೆಲ್ಲ ಬಾಯಿ. ಇದರ ಬೇದವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ.
--------------
ಹಡಪದ ಅಪ್ಪಣ್ಣ
ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ ಆ ಲೆಪ್ಪಕ್ಕೆ ಇಷ್ಟಲಿಂಗ, ರುದ್ರಾಕ್ಷಿ, ಭಸಿತಪಟ್ಟವ ಕಟ್ಟಿ, ಎನ್ನ ಕೆಯ್ಯ ತಪ್ಪಲಲ್ಲಿ ಕಾಷ್ಠವ ನೆಟ್ಟು ಕಟ್ಟಿದ ಮತ್ತೆ, ವಿಹಂಗಕುಲ ಮೃಗಜಾತಿ ಮುಟ್ಟಲಿಲ್ಲ. ಮೀರಿಬಂದು ಮುಟ್ಟಿಹೆನೆಂದಡೆ ಮುಟ್ಟುವುದಕ್ಕೆ ಮುನ್ನವೆ ಅಟ್ಟಿ ಅದ್ದರಿಸಿ ಕುಟ್ಟಿ ಓಡಿಸುವವು. ಅದು ತೃಣದ ಲೆಪ್ಪದ ಬಲಿಕೆಯೊ? ತನ್ನ ಚಿತ್ತದ ಬಲಿಕೆಯೊ? ಅದು ಎನ್ನ ನಿನ್ನ ದೃಷ್ಟದ ಭಾವ. ಅದು ಎನ್ನ ಸ್ವತಂತ್ರವಲ್ಲ. ಅದು ನಿಮ್ಮಯ ಭಾವ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ.
--------------
ಅಕ್ಕಮ್ಮ
ಉಟ್ಟುದ ಹೊದ್ದುದ ಬಿಟ್ಟು ಬಂದು, ಮತ್ತೊಬ್ಬರ ಅಂಗಳದ ಬಟ್ಟೆಯ ಕಾಯಲೇತಕ್ಕೆ ? ದೃಷ್ಟದ ವಸ್ತುವಿದೆಯೆಂದು ಮಿಕ್ಕಾದವರಿಗೆ ಹೇಳುತ್ತ, ತ್ರಿವಿಧಬಟ್ಟೆಯ ತಾ ಕಾವುತ್ತ, ಈ ಕಷ್ಟರ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತಾ ಹಿಡಿದ ವ್ರತಕ್ಕೆ ನಿಶ್ಚಯವ ಕಂಡು ನಡೆವಲ್ಲಿ ಸೋಂಕು ಬಹುದಕ್ಕೆ ಮುನ್ನವೆ ಸುಳುಹನರಿದು, ತಟ್ಟುಮುಟ್ಟು ಬಹುದಕ್ಕೆ ಮುನ್ನವೆ ಕಟ್ಟಣೆಯ ಮಾಡಿ, ಮೀರಿ ದೃಷ್ಟದಿಂದ ಶಿವಾಧಿಕ್ಯ ತಪ್ಪಿ ಬಂದಲ್ಲಿ ತನ್ನ ಕಟ್ಟಳೆಯ ವ್ರತಸ್ಥಭಕ್ತರು ಗಣಂಗಳು ಗುರುಲಿಂಗಜಂಗಮ ಮುಂತಾಗಿ ಎನ್ನ ವ್ರತದ ದೃಷ್ಟದ ಕಟ್ಟಳೆ ತಪ್ಪಿತ್ತೆಂದು ಮಹಾಪ್ರಮಥರಲ್ಲಿ ತಪ್ಪನೊಪ್ಪಿಸಿ, ಇನ್ನು ಘಟವಿಪ್ಪುದಿಲ್ಲಾಯೆಂದು ಬೀಳ್ಕೊಂಡು ಸತ್ಯಕ್ಕೊಪ್ಪಿದಂತೆ ತನ್ನ ಚಿತ್ತವಿದ್ದು ಪರಿಹರಿಸಿಕೊಂಬುದು ಮತ್ರ್ಯದ ಅನುಸರಣೆ. ತಪ್ಪಿದಲ್ಲಿಯೆ ಆತ್ಮವಸ್ತುವಿನಲ್ಲಿ ಕೂಡುವುದು ಕಟ್ಟಾಚಾರಿಯ ನೇಮ. ಇಂತೀ ಉಭಯವ ವಿಚಾರಿಸಿ ನಿಂದ ವ್ರತಕ್ಕೆ ನಿಮ್ಮ ಮನವೆ ಸಾಕ್ಷಿ. ಆಜ್ಞೆಯ ಮೀರಲಿಲ್ಲ, ಬಂಧನದಲ್ಲಿ ಅಳಿಯಲಿಲ್ಲ. ನೀವು ನೀವು ಬಂದ ಬಟ್ಟೆಯ ನೀವೆ ನೋಡಿಕೊಳ್ಳಿ. ಎನ್ನ ಬಟ್ಟೆ, ಏಲೇಶ್ವರಲಿಂಗದ ಗೊತ್ತು, ಕೆಟ್ಟಿಹಿತೆಂದು ಸೂಚನೆದೋರಿತ್ತು.
--------------
ಏಲೇಶ್ವರ ಕೇತಯ್ಯ
ಇನ್ನಷ್ಟು ... -->