ಅಥವಾ

ಒಟ್ಟು 44 ಕಡೆಗಳಲ್ಲಿ , 14 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ವಿಶಿಷ್ಟಂ ದೀಯತೇ ಜ್ಞಾನಂ ಕ್ಷೀಯತೇ ಪಾಪಸಂಚಯಃ| ಅನಯೋಃ ಶಾಸನೇ ಸಿದ್ಧಾ ದೀಕ್ಷಾ ಕ್ಷಪಣದಾನಯೋಃ'. ಆ ದೀಕ್ಷೆ ನಿರಾಧಾರದೀಕ್ಷೆಯೆಂದು ಸಾಧಾರ ದೀಕ್ಷೆಯೆಂದು ಎರಡು ಪ್ರಕಾರಮಪ್ಪುದು., ಅವರೊಳು ಶಿವನು ನಿರಧಿ ಕರಣನಾಗಿ ತೀವ್ರ ಶಕ್ತಿನಿಪಾತದಿಂದ ವಿಜ್ಞಾನಾಕಲರು ಪ್ರಳಯಾ ಕಲರುಗಳಿಗೆ ಮಾಡುವ ದೀಕ್ಷೆ ನಿರಾಧಾರದೀಕ್ಷೆ ಎನಿಸಿಕೊಂಬುದು. ಗುರುಮೂರ್ತಿಯನಾಶ್ರ ಯಿಸಿ ಮಂದಶಕ್ತಿನಿಪಾತ ದತ್ತಣಿಂ ಸಕಲರುಗಳಿಗೆ ಮಾಡೂದು ಸಾಧಾರದೀಕ್ಷೆ ಎನಿಸಿಕೊಂಬುದು. ಇಂತೆಂದು ಪಾರಮೇಶ್ವರ ತಂತ್ರಂ ಪೇಳೂದು, ಶಾಂತ ವೀರೇಶ್ವರಾ.
--------------
ಶಾಂತವೀರೇಶ್ವರ
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು ಉಪದೇಶವ ಮಾಡುವ ಕ್ರಮವೆಂತೆಂದಡೆ: ಬ್ರಾಹ್ಮಣನ ಮೂರು ವರುಷ ನೋಡಬೇಕು, ಕ್ಷತ್ರಿಯನ ಆರು ವರುಷ ನೋಡಬೇಕು, ವೈಶ್ಯನ ಒಂಬತ್ತು ವರುಷ ನೋಡಬೇಕು, ಶೂದ್ರನ ಹನ್ನೆರಡು ವರುಷ ನೋಡಬೇಕು, ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ. ``ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ಈ ಕ್ರಮವನರಿಯದೆ, ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ, ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ. ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು ಸುಚಿತ್ತದಿಂದವೆ ಕಂಡೆ. ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ. ಆನಿಪ್ಪ ಲೋಕದಲ್ಲಿ ತಾನಿಪ್ಪ ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ ನಾನಿಪ್ಪ ಸಂಯೋಗ ಮೂಱಱ ಮೇಲಿಪ್ಪ ಮುಕ್ತ್ಯಾಂಗನೆಯರ ಕೂಟ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ
--------------
ಸಿದ್ಧರಾಮೇಶ್ವರ
ಮತ್ತಮಾ ಸಾಧಾರದೀಕ್ಷೆಯು ಸಬೀಜದೀಕ್ಷೆ ನಿರ್ಬೀಜದೀಕ್ಷೆ ಚಿನ್ಮಯ ದೀಕ್ಷೆ ಯೆಂದು ಮೂರು [ಪ್ರಕಾರದವು]. ಅವು ಯಥಾಕ್ರಮದಿಂದ ಕರ್ಮಕಾಂಡ ಭಕ್ತಿ ಕಾಂಡ ಜ್ಞಾನಕಾಂಡಗಳಲ್ಲಿಯ ದೀಕ್ಷೆ ಎನಿಸಿಕೊಂಬವು. ಇಂತೆಂದು ಕಾರಣಾಗಮ ಪೇಳೂದಯ್ಯಾ. ಅವರೊಳು ನಿರ್ಬೀಜದೀಕ್ಷೆ[ಯು ಸದ್ಯೋ ನಿರ್ವಾಣದೀಕ್ಷೆ ಎಂದು] ಚಿರಂ ನಿರ್ವಾಣದೀಕ್ಷೆ ಎಂದು ಎರಡು ಭೇದವು ಪೇಳಲ್ಪಡುತ್ತಿಹುದು. ಅವರೊಳು ಅತ್ಯಂತ ವಿರಕ್ತನಾದ ಶಿಷ್ಯ[ನು] ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಸಂಚಿತಕರ್ಮಂಗಳನು, ಮತ್ತಮಾ ಸಂಚಿತಕರ್ಮರಾಶಿಯೊಳಂ ಆಗ ತಾಳ್ದಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬು ಕರ್ಮಂಗಳನು, ಮುಂದೆ ಭವಾಂ ತರಂಗಳಲ್ಲಿ ಅನುಭವಿಸಲುಳ್ಳ ಆಗಾಮಿ ಕರ್ಮಂಗಳನು ಶೋದ್ಥಿಸಿ ಸದ್ಯೋನ್ಮುಕ್ತಿ ಯನೆಯಿಸುವ ದೀಕ್ಷೆ ಸದ್ಯೋನಿರ್ವಾಣದೀಕ್ಷೆ ಎನಿಸುವದಯ್ಯಾ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬಳಿಕ ಕ್ರಿ....ತನ್ನ ಶಿಷ್ಯನ ಕರೆದೆಲೆ ಮಗನೆ ನಿನ್ನ ಪ್ರಾ[ಣ]ಲಿಂಗವಿದು ತಾನೆ, ತತ್ವಾತೀತಮಾದ ಪರವಸ್ತುವಿದು ತಾನೆ, ಹರಿಬ್ರಹ್ಮರರಸಿ ಕಾಣದ ನಿಜತತ್ವವಿದ ನಿನ್ನು ನಿಮಿ...ರ್ಧಮಾದರೂ ನಿನ್ನ ಶರೀರದಿಂ ವಿಯೋಗಮಾಗದಂತೆ ಸಾವಧಾನದಿಂ ಧರಿಸು, ತ್ರಿಕಾಲಂ ತಪ್ಪದರ್ಚಿಸುತ್ತಿರು, ಲಿಂಗಾರ್ಪಿತವಲ್ಲ ದೇನೊಂದನು ಸ್ವೀಕರಿಸದಿರು, ಸಕಲಭೋಗಮೋಕ್ಷಂಗಳೆಲ್ಲಾ...ಸಾರಿದವೆಂದು ನಂಬು, ಸರ್ವ ಕ್ಲೇಶಮಂ ಬಿಡು, ನಿತ್ಯಸುಖಿಯಾಗು, ಸತ್ಯಮಿದೆಂಬಿವು ಮೊದ ಲಾದ ಶಿವಕ್ರಿಯೆಗಳ ನುಪದೇಶಂಗೆಯುಂತು ಪೇಳ ವೀರಶೈವದೀಕ್ಷೆಯಾದೊಡೆ ಆಜ್ಞಾದೀಕ್ಷೆ ಉಪ[ಮಾ]ದೀಕ್ಷೆ, ಸ್ವಸ್ಥಿಕಾರೋಹಣ, ಕಳಶಾಬ್ಥಿಷೇಕ, ವಿಭೂತಿಯ ಪಟ್ಟ, ಲಿಂಗಾಯತ, ಲಿಂಗಸ್ವಾಯತಮೆಂದು ಸಪ್ತವಿಧಮಾಗಿಹುದವರಲ್ಲಿ ಶ್ರೀಗುರು ತನ್ನಾಜ್ಞೆಯನೆ ಶಿಷ್ಯನಲ್ಲಿ ಪ್ರತಿಪಾದಿಸೊದೆ ಆಜ್ಞಾದೀಕ್ಷೆ ಎನಿಸೂದು. ಪುರಾತನ ಸಮಯಾಚಾರಕ್ಕೆ ಸದೃಶಮಾಗಿ ಮಾಡೂದೆ ಉಪಮಾದೀಕ್ಷೆ ಎನಿಸೂದು. ಸ್ವಸ್ತಿಕಮೆಂಬ ಮಂಡಲದ ಮೇಲೆ ಶಿಷ್ಯನಂ ಕುಳ್ಳಿರಿಸಿ ಮಂತ್ರ ನ್ಯಾಸಾದಿಗಳಂ ಮಾಡಿ ಮಂತ್ರಶರೀರಿ ಎನಿಸೂದೆ ಸ್ವಸ್ತಿಕಾರೋಣವೆನಿಸೂದು. ಪಂಚಕಳಶೋದಕಂಗಳಿಂ ಶಿಷ್ಯಂಗೆ ಸ್ನಪನಂಗೆಯ್ವುದೆ ಕಳಶಾಬ್ಥಿಷೇಕವೆನಿ ಸೂದು. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ಶ್ರೀವಿಭೂತಿ ಧಾರಣಂ ಗೆಯ್ವುದೆ ವಿಭೂತಿಯ ಪಟ್ಟವೆನಿಸೂದು. ಆಚಾರ್ಯಂ ತಾನೂ ಶಿಷ್ಯಂಗೆ ಕೊಡಲುತಕ್ಕ ಲಿಂಗವನರ್ಚಿಸಿ ಶಿಷ್ಯನಂ ನೋಡಿಸೊದೆ ಲಿಂಗಾಯತವೆನಿಸೂದು. ಆ ಶ್ರೀಗುರುವಿತ್ತ ಲಿಂಗವನೆ ಶಿಷ್ಯನು ಸಾವಧಾನದಿಂದುತ್ತಮಾಂಗಾದಿ ಸ್ಥಾನಂಗಳಲ್ಲಿ ಧರಿಸೂದೆ ಲಿಂಗಸ್ವಾಯತವೆನಿಸೂದು. ಇಂತು ಶಾಸ್ತ್ರೋಕ್ತ ಕ್ರಮದಿಂ ಸಾಂಗಿಕಮಾದ ಶಿವದೀಕ್ಷೆಯಿಂ ಲಿಂಗಾಂಗಸಂಬಂದ್ಥಿಯಾದ ವೀರಶೈವನು ಮಾಳ್ಪ ಶಿವಲಿಂಗ ಪೂಜಾಕ್ರಮವೆಂತೆಂದೊಡೆ :ಶ್ರೇಷ್ಠರುಗಳಾ ವಾವುದನಾಚರಿಸುವರದನೆ ಲೋಕದವರನುವರ್ತಿಪುದರಿಂ, ಜಗಕ್ಕುಪದೇಶ ಮಪ್ಪಂತೆ ತಾನು ನಿತ್ಯನಿರ್ಮಲನಾದರೂ ಮಂತ್ರನ್ಯಾಸಾ... [ಸಾಂಸ್ಥಿಕಮಾಗಿ] ಶಿವಲಿಂಗಾರ್ಚನೆಯಂ ಮಾಡುವಲ್ಲಿ ಮೊದಲು...ಳತನುಲಿಂಗುಪದೇಶಮಂ ಮಾಳ್ಪುದು. ಪದಿನೆಂಟುಕುಲ ಪ್ರವರ್ತನೆಯನಳಿದು, ಶರಣರ ಕುಲ ವನೊ.... ಶಿವಪೂಜೋಪಚಾರವೆ ತನಗೆ ಸಂಸಾರವೆನಲದುವೆ ನಿಸ್ಸಂಸಾರ ದೀಕ್ಷೆ ತ್ರಿಮಲ ಭವದೊಳು...ಲಿಂಗಾಂಗಸಮರಸವ ಮಾಳ್ಪುದೆ ತತ್ವದೀಕ್ಷೆ. ಲಿಂಗಾಂಗಸ್ವಯ ಲಿಂಗ ನೀನೆಂದು ತಿಳುಪುವದೆ ಅ...ಹವು ಹಿಂಗದಾ ಸಚ್ಚಿದಾನಂದಬ್ರಹ್ಮಾತ್ಮಕ ತಾನೆನಲ ದುಸತ್ಯಶುದ್ಧೀದಕ್ಷೆ. ಯೀ ಸಪ್ತಕವ....ಯದೆಹುದೆ ಏಕಾಗ್ರಚಿತ್ತದೀಕ್ಷೆ. ವ್ರತನಿಯಮಂ[ಗಳಲ್ಲಿ]....ಯ ಕರಣಭಾವಾರ್ಪಿತಗಳಂ ಸರ್ವಕಾಲದೊಳು ಇಷ್ಟ ಪ್ರಾಣವಾಸ ಲಿಂಗಂ.....ದಿರ್ಪುದೆ ....ದೀಕ್ಷೆಯೆನಿಪುದು. ಆದಿಮಧ್ಯಾವ ಸಾನರಹಿತ ಶಿವ ತಾನೆ ನಲ....ಚ್ಚಿ ಬೇರ್ಪಡಿಸದಿರವೆ ಸದ್ಯೋನ್ಮುಕ್ತಿದೀಕ್ಷೆ. ಈ ಏಳನು ಭಾವಕುಪದೇಶ ಮಂ....(ಅಪೂರ್ಣ)
--------------
ಶಾಂತವೀರೇಶ್ವರ
ತ್ರಿವಿಧ ತನುವಿಗೆ ತ್ರಿವಿಧ ದೀಕ್ಷೆ. ತ್ರಿವಿಧ ದೀಕ್ಷೆಗೆ ತ್ರಿವಿಧ ಲಿಂಗ. ತ್ರಿವಿಧ ಲಿಂಗಕ್ಕೆ ತ್ರಿವಿಧ ಕರವ ತೋರಿದ ಗುರುವೆ ಶರಣು. ಅದು ಎಂತೆಂದರೆ : ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು ಸ್ಥೂಲತನುವಿನ ಪೂರ್ವಾಶ್ರಯವ ಕಳೆದು ಕ್ರಿಯಾದೀಕ್ಷೆಯ ಮಾಡಿದ ಗುರುವೆ ಶರಣು. ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಸೂಕ್ಷ್ಮತನುವಿನ ಪೂರ್ವಾಶ್ರಯವ ಕಳೆದು ಪ್ರಣಮಪಂಚಾಕ್ಷರಿಯ ಕರ್ಣದಲ್ಲಿ ಹೇಳಿ, ಮಂತ್ರದೀಕ್ಷೆಯ ಮಾಡಿದ ಗುರುವೆ ಶರಣು. ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು ಕಾರಣತನುವಿನ ಪೂರ್ವಾಶ್ರಯವ ಕಳೆದು ಮಸ್ತಕದಲ್ಲಿ ಹಸ್ತವ ಮಡುಗಿ ವೇಧಾದೀಕ್ಷೆಯನಿತ್ತ ಮದ್ಗುರುವೆ ಶರಣು. ನಿಮ್ಮ ಪಾದದಡಿದಾವರೆಯೊಳು ಮನವ ಭೃಂಗನ ಮಾಡಿಸು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಹ್ವಾನ ವಿಸರ್ಜನೆಗಳ ಮಾಡಲೇಕಯ್ಯ ಶರಣಂಗೆ ? ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದೆನಿಸಿದ ಬಳಿಕ ಉಂಟೆ ಲೌಕಿಕರ ಉಪಚಾರಂಗಳು ? ನಿತ್ಯನಿರಂಜನನೈಕ್ಯನೆಂಬ ನಿರೂಪದಲ್ಲಿ ಸ್ವರೂಪ ತಾನಾದ ಬಳಿಕ ಉಂಟೆ ಲೌಕಿಕರ ತನುವಿನಂತೆ ತನುಗುಣ ? ತನುಗುಣ ನಾಸ್ತಿಯಾದ ಬಳಿಕ, ಉಂಟೆ ತಾಮಸಕ್ಕೆ ಎಡೆ ? ಇಲ್ಲ. ಅದು ಹೇಗೆಂದಡೆ_ ಗುರುಕೃಪಾದೃಷ್ಟಿಯಿಂದ ತಾನೆಯಾದ ಬಳಿಕ ಇಲ್ಲಿಲ್ಲ ದೇಹಾದಿ ವಿಕಾರಂಗಳು, ಇಲ್ಲಿಲ್ಲ ಕರಣೇಂದ್ರಿಯಾದಿ ವಿಕಾರಂಗಳು. ಅದ್ವೈತವ ಮೀರಿದೆ, ಬೊಮ್ಮವ ಸಾರಿದೆ, ಸಾಕಾರವ ಹರಿದೆನು. [ಇದರಿಂದ] ನೂನೈಶ್ವರ್ಯವದುಂಟೆ ? ವಾಜ್ಮಾನಸಜಿಹ್ವೆಗೆ ಅಗೋಚರವಾಗುತಿದ್ದಂತಹ ವಸ್ತುವ ಕಂಡೆ. ಸಕಲ ಶೂನ್ಯಾತೀತವ ಎಯ್ದಿದೆ, ಸ್ವಾನುಭಾವವನೊಡಗೂಡಿದೆ. ಮಹಾಲಿಂಗದ ಬಾಧೆ ಬಂದಡೆ ಉಣ್ಣೆನು, ಉಂಡಡೆ ಕಾಣೆ, ಕಂಡಡೆ ಮುಗಿಲ ಮುಟ್ಟಿದುದರುದ್ದವ ನೋಡಾ. ಎಂದು ದೀಕ್ಷೆ ಶಿಕ್ಷೆ ಸ್ವಾನುಭಾವವ ಸಂಬಂದ್ಥಿಸಿ ಶುದ್ಧ ನಿಷ್ಕಲವಾದ ಬಳಿಕ ಮರಳಿ ಪ್ರಪಂಚಿನ ಹಂಗುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಅಭ್ಯಂತರದಲಿಪ್ಪ ಗಂಡ ಗುರುವಿನ ಅನುಮತದಿಂದ ಸರ್ವಾಂಗಕ್ಕೆ ಬಂದಾನು. ಮನೆಯನಿಂಬುಮಾಡು ಮದವಳಿಗೆ, ಮನವ ಶುದ್ಧವ ಮಾಡು ಮದವಳಿಗೆ, ಮನೆಯದ್ದೆರಡನೂ ಎಬ್ಬಟ್ಟವ್ವಾ. ಸಿದ್ಧ ಶುದ್ಧ ಪ್ರಸಿದ್ಧದಿಂದ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ಎಬ್ಬಟ್ಟಿ ಮನೆಯ ಮಂಗಳವ ಮಾಡವ್ವಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಗಂಡ ಮನೆಯೊಳಕೆ ಬಂದು ಮತ್ತೊಬ್ಬರಿದ್ದಡೆ ಸೈರಿಸ.
--------------
ಸಿದ್ಧರಾಮೇಶ್ವರ
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಾಲದು ನೋಡಾ. ಉಪದೇಶವ ಮಾಡುವ ಗುರು ಒಂದಾದಲ್ಲಿ ಲಿಂಗ ಒಂದು, ಲಿಂಗ ಒಂದಾದಲ್ಲಿ ದೀಕ್ಷೆ ಒಂದು, ದೀಕ್ಷೆ ಒಂದಾದಲ್ಲಿ ಪ್ರಸಾದ ಒಂದು, ಪ್ರಸಾದ ಒಂದಾದಲ್ಲಿ ಭಕ್ತಿ ಒಂದು, ಭಕ್ತಿ ಒಂದಾದಲ್ಲಿ ಮುಕ್ತಿ ಒಂದು, ಅದೆಂತೆಂದಡೆ; ಗುರುರೇಕೋ ಲಿಂಗಮೇಕಂ ದೀಕ್ಷಾಮೇಕಾಂ ಪ್ರಸಾದಕಂ ಏಕಮುಕ್ತಿಮಿದಂ ದೇವಿ ವಿಶೇಷಂ ಶುದ್ಧಭಕ್ತಿಮಾನ್ ದ್ವಯೋರ್ಗುರು ದ್ವಯೋರ್ಲಿಂಗ ದ್ವಯೋದೀಕ್ಷಾ ಪ್ರಸಾದಯೋಃ ಯಥಾದ್ವಯಮಿದಂ ದೇವಿ ವಿಶೇಷಂ ಪಾತಕಂ ಭವೇತ್ ಎಂದುದಾಗಿ ಗುರುವೆರಡಾದಲ್ಲಿ ಲಿಂಗವೆರಡು ಲಿಂಗವೆರಡಾದಲ್ಲಿ ದೀಕ್ಷೆ ಎರಡು ದೀಕ್ಷೆ ಎರಡಾದಲ್ಲಿ ಭಕ್ತಿ ಎರಡು ಭಕ್ತಿ ಎರಡಾದಲ್ಲಿ ಮುಕ್ತಿದೂರ ನೋಡ. ಇಂತೀ ಮುಕ್ತಿದೂರರಿಗೆ ಮುಂದೆ ನರಕ ತಪ್ಪದು ನೋಡಾ. ಇದು ಕಾರಣ ತನ್ನ ಸತಿ-ಸುತ ಪಿತ ಮಾತೆ ಸಹೋದರ ಭೃತ್ಯ ದಾಸಿಯರಿಗುಪದೇಶವ ಮಾಡುವ ಗುರು ಒಬ್ಬನಲ್ಲದೆ ಇಬ್ಬರು ಸಲ್ಲದು ನೋಡಾ. ಅದೆಂತೆಂದಡೆ; ಪತೀ ಪತ್ನಿ ಭ್ರಾತೃಪುತ್ರ ದಾಸಿ ಗೃಹಚರಾದಿನಾಂ ಏಕದೀಕ್ಷಾ ಭವೇಸಿದ್ದೇವಿ ವಿಶೇಷಂತು ಶುದ್ಧಭಕ್ತಿಮಾನ್ ಎಂದುದಾಗಿ, ಒಂದು ಮನೆಗೆ ಗುರುಲಿಂಗವ ಎರಡು ಮಾಡಿಕೊಂಡು ನಡೆದಡೆ ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವನು.
--------------
ಚನ್ನಬಸವಣ್ಣ
ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ: ಆಚಾರಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ. ಈ ಕ್ರಮವರಿದು ಮಹಾಪ್ರಸಾದವೆಂದು ಕೈಕೊಂಡ ಬಳಿಕ ಪರಪಾಕಂ ನ ಕರ್ತವ್ಯಂ ಲಿಂಗನೈವೇದ್ಯಕಿಲ್ಬಿಷಂ ಸ್ವಯಂಪಾಕಂ ಪವಿತ್ರಾಣಾಂ ಲಿಂಗನೈವೇದ್ಯಮುತ್ತಮಂ ಎಂಬುದಾಗಿ, ಒಡಲ ಕಕ್ಕುಲತೆಗೆ, ಭಕ್ತನ ದಾಕ್ಷಿಣ್ಯಕ್ಕೆ ಅನ್ಯದೈವ ಭವಿನೇಮಸ್ತರುಳ್ಳಲ್ಲಿ ಹೊಕ್ಕರೆ, ಕೂಡಲಚೆನ್ನಸಂಗಾ ಅವರಂದೆ ದೂರ.
--------------
ಚನ್ನಬಸವಣ್ಣ
ಮರಲ್ದುಂ, ಕೇವಲಹೃದಯದಿಂ ಯಜನಂ ಜ್ಞಾನಜಹೃದಯದಿಂ ಸ್ಥಾಪನಂ ಯೋಗಜಹೃದಯದಿಂ ಪ್ರೋಕ್ಷಣಂ ಭೂತಜಹೃದಯದಿಂ ದೀಕ್ಷೆ ಕಾಮದಹೃದಯದಿಂ ಸರ್ವಕರ್ಮ ವಿಶೇಷವು ಮಾಡಲ್ಪಡುಗುಮೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಮಾ ಶಿಷ್ಯನ ಸಂಚಿತಕರ್ಮಗಳನು ಆಗಾಮಿಕರ್ಮಂಗಳನು ಕೆಡಿಸಿ, ದೀಕ್ಷೋತ್ತರ ಕ್ರಿಯಾವಸಾನ ಪರಿಯಂತರವಾಗಿ ಅನುಭವಿಸುತ್ತಿರ್ದ ಪ್ರಾರಬ್ಧ ಕರ್ಮಂಗಳ ಭೋಗಾಂತರದಲ್ಲಿ ಮುಕ್ತಿಯನೆಯ್ದಿಸುವ ದೀಕ್ಷೆ ಚಿರಂನಿರ್ವಾಣವೆನಿ ಸೂದು. ಇಂತೆಂದು ಪಾರಮೇಶ್ವರತಂತ್ರಂ ಪೇಳೂದಯ್ಯ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಇನ್ನಷ್ಟು ... -->