ಅಥವಾ

ಒಟ್ಟು 25 ಕಡೆಗಳಲ್ಲಿ , 12 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಟಿಲತಟದಲ್ಲಿ ಮಠವ ಮಾಡಿಕೊಂಡು, ಘಟವ ಸಟೆಮಾಡಿ, ದಿಟವ ಪಿಡಿದು ನಟಿಸಿ ನಿರಂಜನಲಿಂಗದಲ್ಲಿ ಘಟೋತ್ತರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾುತ್ತಯ್ಯಾ, ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾುತ್ತಯ್ಯಾ, ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾುತ್ತಯ್ಯಾ, ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬೀ ಒಡವೆಯನು ದಿಟವ ಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ. 509
--------------
ಬಸವಣ್ಣ
ಭಕ್ತ, ಭೃತ್ಯನಾಗಿ ಮಾಡುವ ಮಾಟದಲ್ಲಿ ವಿಚಾರವುಂಟಯ್ಯಾ, ಅದೆಂತೆಂದರೆ:ಸಂಸಾರಚ್ಛೇದನೆಯುಳ್ಳರೆ ಜಂಗಮಲಿಂಗವಹುದು, ಅದಕ್ಕೆ ಮಾಡಿದ ಫಲಂ ನಾಸ್ತಿ. ಸಂಸಾರಚ್ಛೇದನೆ ಇಲ್ಲದಿದ್ದರೆ ಆ ಜಂಗಮ ಭವಭಾರಿಯಹನು. ಅದಕ್ಕೆ ಮಾಡಿದಲ್ಲಿ ಫಲವುಂಟು. ಫಲವುಂಟಾದಲ್ಲಿ ಭವ ಉಂಟು, ಫಲವಿಲ್ಲದಲ್ಲಿ ಭವವಿಲ್ಲ. `ಮನದಂತೆ ಮಂಗಳ' ಎಂಬ ಶ್ರುತಿಯ ದಿಟವ ಮಾಡಿ, ಈ ಉಭಯದೊಳಗೆ ಆವುದ ಪ್ರಿಯವಾಗಿ ಮಾಡುವರು ಅಹಂಗೆ ಇಹರು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಷ್ಟಜೀವನ ಮನುಜರಿರಾ, ನೀವು ಹುಟ್ಟಿದ ಮೊದಲು, ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ ನಷ್ಟವಾಗಿ ಹೋದುದ ಕಂಡು ಕಂಡೂ ಹೆಂಡಿರು ತನ್ನವರೆಂಬೆನೆ? ಮಿಂಡಿಯಾಗಿ ಹಲವರ ಬಯಸುವವಳ ಮಕ್ಕಳ ತನ್ನವರೆಂಬೆನೆ? ಕೂಡುವಾಗ ದುಃಖ, ಕೂಡಿದ ಒಡವೆಯ ಮಡಗುವಾಗ ದುಃಖ, ಮಡಗಿದ ಒಡವೆಯ ತೆಗೆವಾಗ ದುಃಖ, ಪ್ರಾಣವ ಬಿಡುವಾಗ ದುಃಖ, ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ, ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ, ಸಟೆಯಂ ಬಿಡಿ, ದಿಟವಂ ಹಿಡಿ, ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ, ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ, ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ, ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾಯಿತ್ತಯ್ಯಾ, ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬೀ ಒಡವೆಯನು ದಿಟವ ಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಬಳ್ಳ ಬೇವಿನಕೊರಡು ಆಡಿನಹಿಕ್ಕೆ ಲಿಂಗವೆ ? ಸದ್ಭಾವದಿಂ ಭಾವಿಸಿ ಲಿಂಗವ ಮಾಡಿ ಸದ್ಭಕ್ತರಾದರು ಪುರಾತನರು. ಕೇವಲ ಪರಶಿವಮೂರ್ತಿಲಿಂಗವು. ಶ್ರೀಗುರು ಪರಶಿವನು, ಲಿಂಗವು ಪರಶಿವನು, ಜಂಗಮವು ಪರಶಿವನು, ದಿಟವ ಸೆಟೆಮಾಡಿ ನರಕಕ್ಕಿಳಿಯದಿರಿ, ಅಭಕ್ತರಾಗದಿರಿ. ಇವಂದಿರಂತಿರಲಿ ತಮ್ಮ ಬಲ್ಲಂಗತಾಲಿ. ಮನವೇ ನಾ ನಿಮ್ಮ ಬೇಡಿಕೊಂಬೆನು ನಂಬು ಕಂಡಾ. ಸದ್ಭಾವದಿಂ ಲಿಂಗವ ನಂಬಲು ಭಕ್ತಿ ಸದ್ಭಕ್ತಿ ಕೇವಲ ಮುಕ್ತಿಯಪ್ಪುದು ನೆರೆ ನಂಬು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸ್ವಾಮಿಭೃತ್ಯಸಂಬಂಧಕ್ಕೆ ಆವುದು ಪಥವೆಂದಡೆ: ದಿಟವ ನುಡಿವುದು, ನುಡಿದಂತೆ ನಡೆವುದು. ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ ಕೂಡಲಸಂಗಮದೇವ. 237
--------------
ಬಸವಣ್ಣ
ಅಯ್ಯ, ಶ್ರೀಗುರುಲಿಂಗಜಂಗಮವೇ ರುದ್ರಲೋಕದ ರುದ್ರಗಣಂಗಳಿಗೆ, ಶಾಂಭವಲೋಕದ ಶಾಂಭವಗಣಂಗಳಿಗೆ, ನಾಗಲೋಕದ ನಾಗಗಣಂಗಳಿಗೆ, ದೇವಲೋಕದ ದೇವಗಣಂಗಳಿಗೆ, ಮರ್ತೃಲೋಕದ ಮಹಾಗಣಂಗಳಿಗೆ ಅವರವರ ಮನ-ಭಾವ-ಕಾರಣಂಗಳು ಹೇಗುಂಟೊ ಹಾಂಗೆ ಆಯಾಯ ಪ್ರಸನ್ನೇತಿ ಪ್ರಸಾದವಾಗಿರ್ಪರು ನೋಡ. ಸ್ವರ್ಗ-ಮರ್ತೃ-ಪಾತಾಳಲೋಕದಲ್ಲಿ ಚರಿಸುವ ಹÀರಿಸುರಬ್ರಹ್ಮಾದಿ ದೇವದಾನವಮಾನವ ಮನಮುನಿಗಳೆಲ್ಲ ಅತ್ಯತಿಷ*ದ್ದಶಾಂಗುಲವೆಂದು ಹೊಗಳುವ ಶ್ರುತಿಯಂತೋ ಹಾಂಗೆ ಅವರವರ ಮನದಂತೆ ಮಹಾದೇವನಾಗಿ ಫಲಪದಂಗಳ ಕೊಟ್ಟು, ದುಷ್ಟನಿಗ್ರಹ ಶಿಷ್ಟಪ್ರತಿಪಾಲಕತ್ವದಿಂದ ಸರ್ವಲೋಕಂಗಳಿಗೆಲ್ಲ ಸೂತ್ರಧಾರಿಗಳಾಗಿರ್ಪರು ನೋಡ. ಇಂತು ಏಕಮೇವ ಪರಬ್ರಹ್ಮವೆಂಬ ಶ್ರುತಿಯ ದಿಟವಮಾಡಿ ಪರಮಸ್ವಸ್ಥಿರದ ಮಂಡಲದ ಮೇಲೆ ಶಿವ-ಶಕ್ತಿ, ಅಂಗ-ಲಿಂಗವೆಂಬ ಉಭಯನಾಮವಳಿದು ಶಿಷ್ಯರೂಪಿನಿಂದ ಕುಳ್ಳಿರಿಸಿ ದೀಕ್ಷಾಪಾದೋದಕ ಮಿಶ್ರವಾದ ಗೋಮೂತ್ರದಿಂದ ಸಪ್ತವ್ಯಸನ ಸಂಬಂಧವಾದಂಗ, ಸಪ್ತಧಾತುಸಂಬಂಧವಾದ ಲಿಂಗ, ಇಂತು ಅಂಗದ ಮಲಿನಭಾವ, ಲಿಂಗದ ಶಿವಭಾವವ ಕಳದು, ಕ್ಷೀರ, ಘೃತ, ರಂಭಾ, ಇಕ್ಷು, ಮಧುಯುಕ್ತವಾದ ರಸಪಂಚಾಮೃತವ ಜಂಗಮಚರಣೋದಕ ಮಿಶ್ರದಿಂದ ಅಭಿಷೇಕಮಾಡಿಸಿ, ಅದರಿಂ ಮೇಲೆ ಗುರುಪಾದೋದಕದಲ್ಲಿ ಶರಣಗಣಂಗಳು ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ, ಪುಷ್ಪೋದಕವೆಂಬ ಪಂಚಪರಮಾನಂದ ಜಲದಿಂದ ಅಭ್ಯಂಗಸ್ನಾನ ಮಾಡಿಸಿ, ಹಿಂದು-ಮುಂದಣ ಕಾಲಕಾಮರ ಭಯಕ್ಕೆ ಅಂಜಬೇಡವೆಂದು ತ್ರಿವಿಧಂಗುಲಪ್ರಮಾಣವಾದ ದರ್ಭೆಯ ಅಂತು ಮಾಡಿ ತ್ರಿವಿಧಮಂತ್ರಸ್ಮರಣೆಯಿಂದ ಕಟಿಯಲ್ಲಿ ಧರಿಸಿದರಯ್ಯ. ಆರುವೈರಿಗಳಿಗೆ ಒಳಗಾಗಬೇಡವೆಂದು ಷಡಂಗುಲಪ್ರಮಾಣವಾದ ರಂಭಾಪಟ್ಟೆಯ ಕೌಪೀನವ ಮಾಡಿ ಷಡಕ್ಷರಮಂತ್ರಸ್ಮರಣೆಯಿಂದ ಹರಿಯಜದ್ವಾರಗಳ ಬಂಧಿಸಿದರಯ್ಯ. ಅದರಿಂದ ಮೇಲೆ ನಾರಂಗಶಾಟಿಯ ಪವಿತ್ರತೆಯಿಂ ಹೊದ್ದಿಸಿ, ಶ್ರೀ ಗುರುದೇವನ ಚರಣಕಮಲಕ್ಕೆ ಅಷ್ಟಾಂಗಪ್ರಣಿತನ ಮಾಡಿಸಿ, ಶಿವಶರಣ ಭಕ್ತ ಮಾಹೇಶ್ವರರುಗಳಿಗೆ ಹುಸಿಯ ನುಡಿಯದೆ, ದಿಟವ ಬಿಡದೆ, ಆಪ್ತತ್ವದಿಂದ ನಡೆ-ನುಡಿ, ಕೊಟ್ಟುಕೊಂಬ ವಿಚಾರಂಗಳ ಶ್ರುತಮಾಡಿದಲ್ಲಿ ಶ್ರೀ ಗುರುದೇವನು ಶರಣಗಣ ಒಪ್ಪಿಗೆಯಿಂದ ಶಿಷ್ಯನ ಮಸ್ತಕದ ಮೇಲೆ ಅಭಯಹಸ್ತವನ್ನಿಟ್ಟು, ಗುರುಶಿಷ್ಯಭಾವವಳಿದು, ಗುರುವಿನ ಸೂತ್ರದ ಶಿಷ್ಯಹಿಡಿದು, ಶಿಷ್ಯನ ಸೂತ್ರವ ಗುರುವು ಹಿಡಿದು, ಅಂತರಂಗಬಹಿರಂಗದಲ್ಲಿ ಶಿವಯೋಗಾನುಸಂಧಾನದಿಂದ ಏಕರೂಪವಾಗಿ ಭೃತ್ಯರಿಂದ ಕಳಸಾರ್ಚನೆಯ ರಚಿಸಿ, ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ನವರತ್ನಖಚಿತವಾದ ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡಿರುವಂಥ ಮಂತ್ರಮೂರ್ತಿ ನಿರಂಜನಜಂಗಮಕ್ಕೆ ವಿಭೂತಿ ವೀಳ್ಯ, ಸುವರ್ಣಕಾಣಿಕೆ, ದಶಾಂಗಘನಸಾರ, ಪುಷ್ಪದಮಾಲೆ, ವಸ್ತ್ರಾಭರಣ ಮೊದಲಾಗಿ ಸಪ್ತಪದಾರ್ಥಂಗಳ ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರ ಮಧ್ಯದಲ್ಲಿ ಇಟ್ಟು ಅಷ್ಟಾಂಗಯುಕ್ತರಾಗಿ ಸ್ವಸ್ಥದೃಢಚಿತ್ತದಿಂದ ಬಹು ಪರಾಕು ಭವರೋಗ ವೈದ್ಯನೆ ಎಂದು ತ್ರಿಕರಣಶುದ್ಧತಿಯಿಂದ ಅಭಿವಂದಿಸುವಂಥಾದ್ದೆ ಸ್ವಸ್ತಿಕಾರೋಹಣದೀಕ್ಷೆ. ಇಂತುಟೆಂದು ಶ್ರೀ ಗುರುನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ ಲಿಂಗವನು ಭಕ್ತಿಯಿಂದ ಪೂಜಿಸಿ ಲಿಂಗದಲ್ಲಿ ವರವ ಪಡೆದು, ಶಿವಪದವ ಪಡೆದರು ಪುರಾತನರು. ಅದೆಂತೆನಲು ಕೇಳಿರೆ: ಬಳ್ಳ ಲಿಂಗವೆ? ಅಲ್ಲ, ಅದು ಸಟೆ, ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ. ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ. ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ. ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು ಸಿರಿಯಾಳನಿಂದ. ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು ಕೆಂಭಾವಿಯ ಭೋಗಣ್ಣನಿಂದ. ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ. ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ. ಇಂತು ಸಟೆಯ ದಿಟವ ಮಾಡಿ ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು. ದಿಟ ಶಿವನ ಸಟೆಯ ಮಾಡಿ ಕಂಡು ಸನತ್ಕುಮಾರನೊಂಟೆಯಾದನು. ದಿಟ ಶಿವನ ಸಟೆಯ ಮಾಡಿ ಕಂಡು ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ದಕ್ಷನು ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ನರಸಿಂಹನು ವಧೆಗೊಳಗಾದನು. ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು. ಮಹಾಲಿಂಗದ ಸದ್ಭಕ್ತರು, ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು. ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ. ಅದಂತಿರಲಿ, ದಿಟವ ಸಟೆಯ ಮಾಡಿ ದೋಷಿಗಳಾದಿರಿ ಅಭಕ್ತರಂತೆ. ಅದಂತಿರಲಿ, ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ. ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ ಅವಿಶ್ವಾಸದಿಂ ಕೆಡಬೇಡ, ಕೆಡಬೇಡ. ಸಹಜವಹ ದೃಷ್ಟವಹ ಪರಶಿವನು ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವಮೂರ್ತಿ ಜಂಗಮವು ವಿಶ್ವಾಸವ ಮಾಡಿ ನಂಗಿರಣ್ಣಾ, ಮತ್ತೆಯೂ ನಂಬಿರಣ್ಣಾ. ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ. ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.
--------------
ಉರಿಲಿಂಗಪೆದ್ದಿ
ಗತಿಯ ಪಥವನರಿವಡೆ, ದಿಟವ ಸುಯಿದಾನ ಮಾಡು. ದಿಟ ಬೇರೆ ಆಚಾರ ಶಿವಾಚಾರವೆಂ[ದರು]ಮರುಳೆ. ಗುರು ದೇವನೆಂದರು ಮರುಳೆ. ದೂರತೋsಂ ಗುರುಂ ದಷ್ಟ್ವಾ ಉದಾಸೀನೇನ ಯೋ ವ್ರಜೇತ್ | ಶ್ವಾನಯೋನಿಂ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಶಿವೇ ಕೃದ್ಧೇ ಗುರುಸ್ತ್ರಾತಾ ಗುರೌ ಕೃದ್ಧೇ ನ ಕಶ್ಚನ | ತಸ್ಮಾದಿಷ್ಟಂ ಗುರೋಃ ಕುರ್ಯಾತ್ ಕಾಯೇನ ಮನಸಾ ಗಿರಾ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವ ಮುನಿದಡೆ ತಿಳುಹಬಹುದು, ಗುರು ಮುನಿದಡೆ ತಿಳುಹಬಾರದು, ಏಳೇಳು ನರಕ ತಪ್ಪದು.
--------------
ಸಂಗಮೇಶ್ವರದ ಅಪ್ಪಣ್ಣ
ಸತ್ಯಾಸತ್ಯವೆಂದು ವಿವರಿಸಿ ತಿಳಿದು ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ ಘನಲಿಂಗದೇವರೆಂಬೆನು. ನಿತ್ಯಾನಿತ್ಯವೆಂದು ವಿವರಿಸಿ ತಿಳಿದು ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ ಘನಲಿಂಗದೇವರೆಂಬೆನು. ಪುಣ್ಯಪಾಪವೆಂದು ವಿವರಿಸಿ ತಿಳಿದು ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ ಘನಲಿಂಗದೇವರೆಂಬೆನು. ಧರ್ಮಕರ್ಮವೆಂದು ವಿವರಿಸಿ ತಿಳಿದು ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ ಘನಲಿಂಗದೇವರೆಂಬೆನು. ಆಚಾರ ಅನಾಚಾರವೆಂದು ವಿವರಿಸಿ ತಿಳಿದು ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ ಘನಲಿಂಗದೇವರೆಂಬೆನು. ಇಂತೀ ಉಭಯದ ನ್ಯಾಯವನರಿಯದೆ ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ ಘಟವ ಹೊರೆವ ಕುಟಿಲ ಕುಹಕರ ತುಟಿಯತನಕ ಮೂಗಕೊಯ್ದು ಕಟವಾಯ ಸೀಳಿ ಕನ್ನಡಿಯ ತೋರಿ ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ಸಾವುದು ದಿಟ ದಿಟ ನೋಡಾ. ಅದು ಸಟೆಯೆಂದು ನಿತ್ಯವೆಂದನಿತ್ಯವ ನಂಬಿ ಹೊನ್ನು ಹೆಣ್ಣು ಮಣ್ಣು ನಿನ್ನವೆಂದು ನಂಬಿರಲು ಅವು ನಿನ್ನ ವಂಚಿಸಿ ಅನ್ಯರಿಗೆ ಹೋದುದನರಿಯಿ?. ಅಯ್ಯೋ! ಅಯ್ಯೋ! ಕೆಡದಿರಿ ಕೆಡದಿರಿ, ಸತ್ಪಾತ್ರಕ್ಕೆ ಸಲಿಸಿ ಬದುಕಿರಯ್ಯಾ. ಗುರುಲಿಂಗಜಂಗಮಕ್ಕೆ ಸದ್ಭಕ್ತಿಯಂ ದಾಸೋಹವಂ ಮಾಡಲು ನಿತ್ಯನು. ಇದು ಸಟೆಯೆಂದು ನರಕಕ್ಕಿಳಿದು ಕೆಡದಿರಿ ಕೆಡದಿರಿ, ಇದನರಿದು ಸಟೆಯ ದಿಟವ ಮಾಡದಿರಿ. ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವುದೆ ದಿಟ. ಇದು ಸತ್ಯ ಇದು ಸತ್ಯ, ಇದೇ ನಿತ್ಯ ಇದೇ ಯುಕ್ತಿ ಇದೇ ಭಕ್ತಿ, ಇದೇ ಶಕ್ತಿ ಇದೇ ಮುಕ್ತಿ ಇದು ಸತ್ಯ. ಶಿವ ಬಲ್ಲ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ವಿಶ್ವ ತೈಜಸ ಪ್ರಾಣನಾಗಿಪ್ಪ ಕಾರಣ, ಅಹೋರಾತ್ರಿಯಲ್ಲಿ ನಿಮ್ಮ ನೆನಹೆನಗೆ. ಚೆನ್ನಬಂಕೇಶ್ವರಲಿಂಗವೆ, ಎನ್ನ ಸಜ್ಜನಿಕೆಯ ದಿಟವ ಮಾಡೆನ್ನ ತಂದೆ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->