ಅಥವಾ

ಒಟ್ಟು 67 ಕಡೆಗಳಲ್ಲಿ , 18 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಖೇಚರರಾಗಲಿ, ಭೂಚರರಾಗಿಲಿ, ಪುರಹರರಾಗಲಿ, ಮಧ್ಯಸ್ಥರಾಗಲಿ, ಪವನನುಂಡುಂಡು ದಣಿಯದವರಾಗಲಿ, ಅಗ್ನಿ ಪರಿಹರರಾಗಲಿ, ಖೇಚರರೊಳು ಬಸವಾಜ್ಞೆ, ಭೂಚರರೊಳು ಬಸವಾಜ್ಞೆ. ಪುರಹರರೊಳು ಬಸವನ ಮಹಾರತಿ. ಮಧ್ಯಸ್ಥರೊಳು ಬಸವನೇಕಾಂತವಾಸಿ. ಪವನದೊಳು ಬಸವ ಹೇಳಿತ್ತ ಕೇಳುವೆ. ಅಗ್ನಿಯೊಳು ಬಸವಂಗೆ ದಾಸೋಹವ ಮಾಡುವೆ. ಎನ್ನನೀ ಪರಿಯಲ್ಲಿ ಸಲಹಿದಾತ ಬಸವಣ್ಣ ಕಾಣಾ ಕಲಿದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ಬೇಡಿ ತಂದು ದಾಸೋಹವ ಮಾಡುವನ್ನಬರ, ಪಂಗುಳನ ಪಯಣದಂತೆ. ಯಾಚಕತ್ವ ಭಕ್ತಂಗುಂಟೆ ? ಭಕ್ತನಾಗಿ ಹುಟ್ಟಿ ಭಕ್ತರ ಬೇಡಿತಂದು ಮಾಡಿ ಮುಕ್ತಿಯನರಸಲುಂಟೆ ? ಅದು ಅಮರೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಆಯ್ದಕ್ಕಿ ಮಾರಯ್ಯ
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಆವಾವ ಪರಿಯಲ್ಲಿ ಆವಾವ ಭಾವದಲ್ಲಿ ಗುರುಲಿಂಗಜಂಗಮಕ್ಕೆ ದಾಸೋಹವ ಮಾಡಿಹೆನೆಂಬ, ಕೂಡಿಹೆನೆಂಬ ಸದ್ಭಕ್ತರ ಬಾಗಿಲ ತೋರಿ ಬದುಕಿಸಯ್ಯಾ. ಎಲ್ಲವನೊಪ್ಪಿ `ಲಿಂಗಜಂಗಮವೆನ್ನ ಪ್ರಾಣೇಶ್ವರ' ಎಂಬ ಮಹಾಪುರಾತನರ ಪಾದರಕ್ಷೆಯ ಹೊತ್ತಿರಿಸೆನ್ನನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಯಕ್ಲೇಶದಿಂದ ತನುಮನ ಬಳಲಿ ಧನವ ಗಳಿಸಿ ಗುರುಲಿಂಗಜಂಗಮಕ್ಕೆ ವೆಚ್ಚಿಸಿ ದಾಸೋಹವ ಮಾಡುವ ಭಕ್ತನ ಪಾದವ ತೋರಯ್ಯಾ, ನಿಮ್ಮ ಧರ್ಮ. ಅದೇಕೆಂದಡೆ; ಆತನ ತನು ಶುದ್ಧ ಆತನ ಮನ ಶುದ್ಧ. ಆತನ ನಡೆ ನುಡಿ ಪಾವನ. ಆತಂಗೆ ಉಪದೇಶವ ಮಾಡಿದ ಗುರು ನಿರಂಜನ ನಿರಾಮಯ. ಅಂತಹ ಭಕ್ತನ ಕಾಯವೆ ಕೈಲಾಸವೆಂದು ಹೊಕ್ಕು ಲಿಂಗಾರ್ಚನೆಯ ಕಾಡುವ ಜಂಗಮ ಜಗತ್ಪಾವನ. ಇಂತಿವರಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯ
--------------
ಚನ್ನಬಸವಣ್ಣ
ಆಚಾರಶೂನ್ಯ ಅಂಗ ಗುರುದ್ರೋಹಿ ಮಾಡಲಾಗದು ಭಕ್ತಿಯ. ಆಚಾರಶೂನ್ಯ ಮನ ಲಿಂಗದ್ರೋಹಿ ಮಾಡಲಾಗದು ಪೂಜೆಯ. ಆಚಾರಶೂನ್ಯ ಭಾವ ಜಂಗಮದ್ರೋಹಿ ಮಾಡಲಾಗದು ದಾಸೋಹವ. ಆಚಾರತ್ರಯವಿರಹಿತವಾದ ಅನಾಚಾರ ಭ್ರಷ್ಟರುಗಳ ಶ್ರೇಷ್ಠರೆಂದು ಪೂಜೆಯ ಮಾಡಿದರೆ ಭವತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅದ್ವೈತವ ಅಂತರಂಗದಲ್ಲಿ ಅರಿದು ಹೊರಗೆ ದಾಸೋಹವ ಮಾಡದಿರ್ದಡೆ ಎಂತಯ್ಯಾ ಉಭಯ ಸಂದೇಹದಲ್ಲಿ ನಿಜವಪ್ಪುದು ನಿಮ್ಮ ಶರಣರ ಮನ ನೊಂದಲ್ಲಿ ನಾನು ಸೈರಿಸಿಕೊಂಬೆನೆಂತಯ್ಯಾ ಕೂಡಲಸಂಗಮದೇವಾ, ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ.
--------------
ಬಸವಣ್ಣ
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು. ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ ದಾರಿಯ ಹೋಗಿ ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ. 246
--------------
ಬಸವಣ್ಣ
ನುಡಿಯಲ್ಲಿ ಎರಡು ನುಡಿಯನು; ನಡೆಯಲ್ಲಿ ಎರಡು ನಡೆಯನು; ನುಡಿಯಂತೆ ನಡೆ ವಿಸ್ತರಿಸುವ; ನಡೆಯಂತೆ ನುಡಿ ವಿಸ್ತರಿಸುವ ; ಹಿಡಿವನು ಗುರುಲಿಂಗಜಂಗಮ ದಾಸೋಹವ. ಬಿಡುವನು ಹೊನ್ನು ಹೆಣ್ಣು ಮಣ್ಣೆಂಬ ತ್ರಿಮಲದಾಸೆಯ. ಇಂತಪ್ಪ ವೀರಮಾಹೇಶ್ವರನನೇನೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗ ಪ್ರಾಣ, ಪ್ರಾಣ ಲಿಂಗ, ಆ ಮಹಾಲಿಂಗಕ್ಕೆ ಕಾಯವೆ ಭಕ್ತನು, `ಭಕ್ತಕಾಯ ಮಮಕಾಯ' ಎಂದುದಾಗಿ ಆ ಪ್ರಾಣ ಲಿಂಗವು, ಕಾಯ ಭಕ್ತನು ಆ ಲಿಂಗಕ್ಕೆ ಆ ಭಕ್ತನು ದಾಸೋಹವ ಮಾಡಿದಡೆ ಭಿನ್ನ ಭೇದವೆ ? ಅಲ್ಲ, ಸ್ವಭಾವ ನೈಜ. ಅಂಗಕ್ರೀಯೆಲ್ಲ ಲಿಂಗಕ್ರೀ, ಲಿಂಗಕ್ರೀಯೆಲ್ಲ ಅಂಗಕ್ರೀ. ಕೈಕಲಸಿದಡೆ ಬಾಯಿಗೆ, ಹಾಂಗೆ ಸರ್ವಾಂಗ ಲಿಂಗಕ್ಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಭಕ್ತನು ರುದ್ರಗಣಂಗಳ ಮಠಕ್ಕೆ ಬಂದಡೆ ಭೃತ್ಯನಾಗಿರಬೇಕು. ಕರ್ತನಾಗಿ ಕಾಲ ತೊಳೆಯಿಸಿಕೊಂಡಡೆ ಹಿಂದೆ ಮಾಡಿದ ಭಕ್ತಿ ಹಾನಿಯಪ್ಪುದು. ಲಕ್ಷಗಾವುದ ಹೋಗಿಯಾದಡೂ ಭಕ್ತನು ಗಣಂಗಳ ಕಾಂಬುದು ಸದಾಚಾರ. ಅಲ್ಲೇ ಕೂಡಿ ದಾಸೋಹವ ಮಾಡಿ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಕೊಟ್ಟು ಅಹಂಕಾರವಳಿದಿಹ ಪುರಾತನರು ಮೆಟ್ಟುವ ಪಾದರಕ್ಷೆಗಳ ಮಸ್ತಕದ ಮೇಲಿರಿಸಿಕೊಂಡು, ಕೃತಾರ್ಥನಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಿತ್ತಂ ಚ ರಾಜವಿತ್ತಂ ಚ ಕಾಮಿನೀ ಕಾಮಕಾವಶಾ ಪೃಥಿವೀ ವೀರಭೋಜ್ಯಾ ಚ ಸ್ವಧನಂ ಧರ್ಮ ಏವ ಚ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ಅಧರ್ಮಾತ್ ಜಾಯತೇ ಕಾಮಃ ಕ್ರೋಧೋ[s] ಧರ್ಮಾಚ್ಚ ಜಾಯತೇ ಧರ್ಮಾತ್ ಸಂಜಾಯತೇ ಮೋಕ್ಷಃ ತಸ್ಮಾದ್ಧರ್ಮಂ ಸಮಾಚರೇತ್ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವನಮೇವ ಚ ಯಮಸ್ಯ ಕರುಣೋ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಇಂತು, ನಾನಾ ವೇದ ಶಾಸಸ್ತ್ರ ಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿದರೆ ಸತ್ಪಾತ್ರಕ್ಕೆ ಮಾಡಿ ಧನ ಕೆಡದ ಹಾಂಗೆ. ಪಾತ್ರಪರೀಕ್ಷೆಗಳಲ್ಲಿ ಸತ್ಪಾತ್ರರು ಮಾಹೇಶ್ವರರು. ಅಲ್ಲಿ ಪ್ರೇಮ ಪ್ರೀತಿ ಕಿಂಕರತೆಯಿಂದ ದಾಸೋಹವ ಮಾಡಿ ಬದುಕಿರೆ. ನ ಮೇ ಪ್ರಿಯಶ್ಚತುರ್ವೆದೀ ಮದ್ಭಕ್ತ ಶ್ವಪಚೋಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಯಥಾ ಪೂಜ್ಯಸ್ತಧಾಹಿ ಸಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ನಿಕೃಷ್ಟಚಾರಜನ್ಮಾನೋ ವಿರುದ್ಧಾ ಲೋಕವೃತ್ತಿಷು ಕೋಟಿಭ್ಯೋ ವೇದವಿದುಷಾಂ ಶ್ರೇಷಾ* ಮದ್ಭಾವಭಾವಿತಾಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಚತುರ್ವೇದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ ದುಷ್ಟಚಾಂಡಾಲಭಾಂಡಸ್ಥಂ ಯಥಾ ಭಾಗೀರಥೀಜಲಂ ಚುರ್ವೇದಧರೋ ವಿಪ್ರಃ ಶಿವದೀಕ್ಷಾವಿವರ್ಜಿತಃ ತಸ್ಯ ಭೋಜನದಾನೇನ ದಾತಾ ಚ ನರಕಂ ವ್ರಜೇತ್ ಚದುರ್ವೇದಧರೋ ವಿಪ್ರಃ ಸರ್ವಶಾಸ್ತ್ರವಿಶಾರದಃ ಶಿವಜ್ಞಾನಂ [ನ]ಜಾನಾತಿ ದರ್ವೀ ಪಾಕರಸಂ ಯಥಾ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಇಂತು ನಾನಾವೇದಶಾಸ್ತ್ರಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿ, ಮಾಡಿ ಮಾಡಿ, ಮಾಹೇಶ್ವರರಿಗೆ. ಫಲವ ಬಯಸಲು ಫಲವಹುದು. ಮುಕ್ತಿಯ ಬಯಸಲು ಮುಕ್ತಿಯಹುದು. ಅನಿಮಿತ್ತಂ ನಿಮಿತ್ತಂ ಚ ಉಪಾಧಿರ್ನಿರುಪಾಧಿಕಂ ದಾಸೋಹಯುಕ್ತ ಕರ್ಮಾ ಚ ಯಥಾ ಕರ್ಮ ತಥಾ ಫಲಂ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಅನಾದರಾದಹಂಕಾರಾತ್ ಮೋಹಾದ್ಭೀತಿರುಪಾಧಿಕಾ ಕೀರ್ತಿಶ್ಚ ಷಡ್ಗುಣೋ ನಾಸ್ತಿ ದಾಸೋಹಶ್ಚ ಸ್ವಯಂ ಶಿವಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಕೆಡಬೇಡ ಕೆಡಬೇಡ. ಸಾಲೋಕ್ಯಾದಪಿ ಸಾಮೀಪ್ಯಾತ್ ಸಾರೂಪ್ಯಾಚ್ಚ ಸಯುಜ್ಯಕಾತ್ ಶಿವತತ್ತ್ವಾದಿಶೇಷಶ್ಚ ಸ್ವಯಂ ದಾಸೋಹ ಉತ್ತಮಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಸಕೃಲ್ಲಿಂಗಾರ್ಚಕೇ ದತ್ವಾ ವಸ್ತ್ರಮಾತ್ರಂ ಯಥೇಪ್ಸಿತಂ ಏಕತಂತ್ರಂ ಲಭೇದ್ರಾಜ್ಯಂ ಶಿವಸಾಯುಜ್ಯಮಾಪ್ನುಯಾತ್ ಸಕೃಲ್ಲಿಂಗಾರ್ಚಕೇ ದತ್ವಾ ಗೋಷ್ಟದಂ ಭೂಮಿಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವೇನ ಸಹ ಮೋದತೇ ಸಕೃಲ್ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವೈಶ್ಚ ಪೂಜ್ಯಮಾನಸ್ತು ಗಣಮುಖ್ಯೋ ಗಣೇಶ್ವರಃ ಸಕೃಲ್ಲಿಂಗಾರ್ಚಕೇ ದತ್ವಾ ಭಿಕ್ಷಾಮಾತ್ರಂ ಚ ಸಾದರಂ ಪದ್ಮಾನಿ ದಶಸಾಹಸ್ರಂ ಪಿತ್ರೂಣಾಂ ದತ್ತಮಕ್ಷಯಂ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಸಾವು, ದಿಟ ದಿಟ. ದಾಸೋಹವ ಮಾಡಲು ತನು ಕೆಡದ ಹಾಂಗೆ ಸತ್ಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್ ಅಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್ ಎಂಬುದನರಿದುದಕ್ಕೆ ಸತ್ಪಾತ್ರವಾವುದೆಂದಡೆ: ಕಿಂಚಿದ್ವೇದಮಯಂ ಪಾತ್ರಂ ಕಿಂಚಿತ್ಪಾತ್ರಂ ತಪೋಮಯಂ ಆಗಮಿಷ್ಯತಿ ಯತ್ಪಾತ್ರಂ ತತ್ಪಾತ್ರಂ ತಾರಯಿಷ್ಯತಿ ಸರ್ವೇಷಾಮೇವ ಪಾತ್ರಾಣಮತಿಪಾತ್ರಂ ಮಹೇಶ್ವರಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ, ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ಸಂಶಯಃ ಇಂತೆಂದುದಾಗಿ, ಅರಿದು ಇದು ಕಾರಣ, ಅರಿವನೇ ಅರಿದು, ಮರವೆಯನೇ ಮರದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ[ನ]ರಿದು, ಪೂಜಿಸಲು ಇಹಪರಸಿದ್ಧಿ ಸದ್ಯೋನ್ಮುಕ್ತಿ ಕೇಳಿರಣ್ಣಾ.
--------------
ಉರಿಲಿಂಗಪೆದ್ದಿ
ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿತಂದು ಜಂಗಮಕ್ಕೆ ಮಾಡಿದೆನೆಂಬ ದಂದುಗದೋಗರ ಲಿಂಗಕ್ಕೆ ನೈವೇದ್ಯ ಸಲ್ಲ. ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ ದಾಸೋಹವ ಮಾಡುವುದೆ ಮಾಟ. ಕಾಶಿಯಕಾಯಿ ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ. ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.
--------------
ನುಲಿಯ ಚಂದಯ್ಯ
ಪ್ರಣತೆಯೂ ಇದೆ ಬತ್ತಿಯೂ ಇದೆ; ಜ್ಯೋತಿಯ ಬೆಳಗುವಡೆ, ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ? ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ ಭಕ್ತಿ ಎಲ್ಲಿಯದೊ? `ಸ್ಯೋಹಂ' ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವೆ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->