ಅಥವಾ

ಒಟ್ಟು 79 ಕಡೆಗಳಲ್ಲಿ , 21 ವಚನಕಾರರು , 77 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ, ಸತ್ಯಶರಣರು ಮಾಡುಂಡುದೊಂದು ಕಾಯಕ, ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ, ಗುರುಚರಪರಸ್ಥಿರಕ್ಕೆ ಷಟ್‍ಸ್ಥಲಸಂಬಂಧಗಳಿಂದ, ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು. ಆ ನಿಲುಕಡೆಯೆಂತೆಂದಡೆ : ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ, ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು, ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ, ಭವಿಶೈವ ಬ್ಥಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು, ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ, ಹಲವು ಶಾಸ್ತ್ರೋಪದೇಶವಿಡಿದು, ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ, ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ ಸಮಾದ್ಥಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ ಮದುವೆಯಕಂಭ ಕುಂಭ ಸರಕಿನಗಂಟು ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ, ತನ್ನ ಕಾಯ ವಾಚ ಮನದಲ್ಲಿ ಹೊಳೆದು, ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ ತನ್ನ ಮನೆಯಲ್ಲಿ ಮಾಡಿದ ಎಡೆ ವಾರಮೃತ್ಯೋದಕ, ಪಾದೋದಕಸಂಬಂಧವಾದ, ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಬ್ಥಿನ್ನವ ಕರ್ಮಕ್ರಿಯಾಚಾರಲಿಂಗಬಾಹ್ಯರಾದ ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು ಚರಲಿಂಗೋದಯಘನಪಾದತೀರ್ಥವರ್ಪಿಸಿ, ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ. ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ. ಇದಕ್ಕೆ ಹರನಿರೂಪ ಸಾಕ್ಷಿ : ``ಶಿವಾಚಾರಸುಸಂಪನ್ನಃ ಕೃತ್ವ್ದಾನ್ಯದೈವಸ್ಯ ಪೂಜನಂ | ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ | ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ || ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ | ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ || ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ | ಶೈವಕರ್ಮೋಪವಾಸಿನಾಂ ನರಕೇ ಕಾಲಮಕ್ಷಯಂ || ಕಾರ್ತೀಕಮಾಘಶ್ರಾವಣ ಶೈವಪೂಜಾವಿಶೇಷತಃ | ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ || ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ || ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ | ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ || ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ | ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ || ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ | ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ | ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ || ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ | ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ || ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ | ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ ||'' ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ, ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ, ಭವಬಂಧನವಪ್ಪದು ತಪ್ಪದು. ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ, ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು ನರಗುರಿಗಳ ಪ್ರಥಮಪಾತಕನಿರಸನ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ ಬಯಲಾವುದುಂಟು ಹೇಳಿರಣ್ಣಾ ? ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ ಜ್ಯೋತಿ ಆವುದುಂಟು ಹೇಳಿರಣ್ಣಾ ? ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧವನರಿದು, ತ್ರಿವಿಧವ ಮರೆದು, ಕಲಿಯುಗದ ಕತ್ತಲೆಯ ದಾಂಟಿ, ತನ್ನ ಭವವ ದಾಂಟಿದವಂಗೆ, ಬ್ರಹ್ಮಾಂಡದ ಬಯಲು ಕೈವಶವಾಯಿತ್ತು. ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು, ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಆದಿಶಕ್ತಿವಿಡಿದಾಡುವರೆಲ್ಲರು ಜಂಗಮವಲ್ಲ, ಅನಾದಿಶಕ್ತಿವಿಡಿದಾಡುವರೆಲ್ಲರು ಜ್ಞಾನಿಗಳಲ್ಲ, ಆದಿ ಅನಾದಿಯೆಂಬೀ ಎರಡ ಭೇದಿಸಿ ದಾಂಟಿ, ಇಚ್ಛಾಶಕ್ತಿಯ ಇಚ್ಛೆಯ ಮರೆದು, ಕ್ರಿಯಾಶಕ್ತಿಯ ಭಾವವ ಬಿಟ್ಟು, ಜ್ಞಾನಶಕ್ತಿಯ ಠಾವವನೊಲ್ಲದೆ, ತಾನು ತಾನಾದವಂಗೆ ಏನೂ ಇದಿರಿಲ್ಲಾ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು, ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು; ಬಟ್ಟಬಯಲಾಯಿತ್ತು. ತುಟ್ಟತುದಿಯನೇರಿ ತೂರ್ಯಾತೀತನಾಗಿ, ಇಷ್ಟ ಪ್ರಾಣ ಭಾವ ಬಯಲಾಯಿತ್ತು. ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು, ಬ್ರಹ್ಮವೆಯಾಯಿತ್ತು, ಕರ್ಮ ಕಡೆಗೋಡಿತ್ತು. ಅರಿವರತು ಮರಹು ನಷ್ಟವಾಯಿತ್ತು. ತೆರನಳಿದು ನಿರಿಗೆ ನಿಃಪತಿಯಾಗಿ ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು, ನೋಟ ತ್ರಾಟಕವ ದಾಂಟಿ ಕೂಟದಲ್ಲಿ ಕೂಡಿ, ಬೆರಸಿ ಬೇರಾಗದಿಪ್ಪ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮೂರು ಗುಣ ಮುರಿಮುರಿದು ಮೂರಕ್ಕೆ ತಂದು ಮುರಿಟ್ಟಿತ್ತು ನೋಡಾ, ಮಾರಹರ ಪಾದಪದ್ಮಭ್ರಮರ. ಮೂರು ಗುಣದಂತಾಚರಿಸಬಾರದು; ಮೂರು ಗುಣ ಬಿಡಬಾರದು ನೋಡಾ. ಮೂರರಿಂದಾರು ಲಿಂಗವ ದಾಂಟಿ, ಮೂರರಲ್ಲಿ ಐಕ್ಯವ ನೋಡೆ ಪುರಾರಿ ಪರಮಾತ್ಮ ಕಪಿಲಸಿದ್ಧಮಲ್ಲಿಕಾರ್ಜುನಾ ತಾನೆ ನೋಡಾ, ಮಾರಯ್ಯಾ.
--------------
ಸಿದ್ಧರಾಮೇಶ್ವರ
ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು. ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು. ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು. [ಮ]ಣ್ಣು ಹೊನ್ನು[ಹೆ]ಣ್ಣ ಬಿಟ್ಟು ಲಿಂಗಾಂಗ ಸಂಯೋಗವರಿಯದೆ ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ ಫಲಭೋಗಕ್ಕೊಳಗಾದರು. ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ. ಆರ ಬಿಟ್ಟು ಮೂರ ಕಂಡು ಮನ ಮುಳುಗಿ ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ. ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ ನಾದಮೂರುತಿಲಿಂಗವ ಕಂಡೆ. ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ, ತಾ ಬಟ್ಟಬಯಲಾಯಿತ್ತು ನೋಡಾ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ಕುಂಡಲಿಯ ಬಾಗಿಲಲ್ಲಿ ಕೆಂಡವ ಪುಟಮಾಡಿ, ಉದ್ದಂಡವಿಕಾರದ ಉಪಟಳವನುರುಹಿ, ತಂಡತಂಡದ ನೆಲೆಗಳ ದಾಟಿ ದಂಡನಾಳವ ಪೊಕ್ಕು ಮಂಡಲತ್ರಯದ ಮೇಲೆ ಚಂಡ ರವಿಕೋಟಿಪ್ರಭೆಯಿಂದೆ ಬೆಳಗುವ ಅಖಂಡಮೂರ್ತಿಯ ಕಂಡು ಕೂಡಬಲ್ಲಾತನೆ ಪ್ರಚಂಡ ಪ್ರಾಣಲಿಂಗಿಯೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೈಲಾಸ ಮರ್ತ್ಯಲೋಕ ಎಂಬರು. ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ ? ಅಲ್ಲಿಯ ನಡೆಯೂ ಒಂದೆ, ಇಲ್ಲಿಯ ನಡೆಯೂ ಒಂದೆ. ಅಲ್ಲಿಯ ನುಡಿಯೂ ಒಂದೆ, ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು. ಕೈಲಾಸದವರೆ ದೇವರ್ಕಳೆಂಬರು; ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿದಿಲ್ಲವೆಂಬರು. ನರಲೋಕದೊಳಗೆ ಸತ್ತು ಸತ್ತು ಹುಟ್ಟುತಿಹರೆಂಬರು. ಇದ ಕಂಡು ನಮ್ಮ ಶರಣರು ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ, ಭವವ ದಾಂಟಿ ತಮ್ಮ ತಮ್ಮ ಹುಟ್ಟನರಿದು, ಮಹಾಬೆಳಗನೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ ಸೀಮೆಯ ದಾಂಟಿ ನಿಸ್ಸೀಮನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->