ಅಥವಾ

ಒಟ್ಟು 30 ಕಡೆಗಳಲ್ಲಿ , 12 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಗೋಮಯವ ತಂದು ಪಂಚಪ್ರಣವ ಶಿಖಾಗ್ನಿಯಿಂದೆ ದಹಿಸಿ, ವಂಚನೆಯಳಿದುಳಿದು ವರ್ಮವರಿದು ಸ್ಥಾನವು ಧೂಳನ ಧಾರಣವಾದ ಮಹಾಘನಮಹಿಮ ಶಿವಶರಣಂಗೆ ನಮೋ ನಮೋ ಎಂಬೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಂತಕೋಟಿ ಆದಿಬ್ರಹ್ಮರ ಶಿರವನರಿದು ಬ್ರಹ್ಮಕಪಾಲವ ಪಿಡಿದಾಡದಂದು, ಅನಂತಕೋಟಿ ಆದಿನಾರಾಯಣರ ನಿಟ್ಟೆಲುವ ಮುರಿದು ಕಂಕಾಳದಂಡವ ಧರಿಸದಂದು, ಅನಂತಕೋಟಿ ಆದಿಕಾಲರ ಒದ್ದೊದ್ದು ಕೊಲ್ಲದಂದು, ಅನಂತಕೋಟಿ ಆದಿ ಮನ್ಮಥರ ದಹಿಸಿ ಭಸ್ಮವ ಮಾಡದಂದು, ಅನಂತಕೋಟಿ ತ್ರಿಪುರಂಗಳ ಸಂಹಾರವ ಮಾಡದಂದು, ಪರಶಿವಲೀಲೆಯಿಂದ ಅನಂತಕೋಟಿ ಬ್ರಹ್ಮಾಂಡಂಗಳ ಸೃಜಿಸದಂದು, ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಷ್ಠದಲ್ಲಿ ಹುಟ್ಟಿದ ಅಗ್ನಿ, ಕಾಷ್ಠವ ದಹಿಸಿ, ತಾನೊಡನೆ ಲೀಯವಾದಂತೆ, ಭಾವದಲ್ಲಿ ಶಿವಾನಂದಭಾವ ಹುಟ್ಟಿ ಭಾವ ನಿಃಪತಿಯಾಯಿತ್ತು. ಭಾವ ನಿಃಪತಿಯಾಗಲು, ಭಾವ್ಯ ಭಾವ ಭಾವಕವೆಂಬುದಿಲ್ಲದೆ ತಮ್ಮಲ್ಲಿ ತಾವೆ ಲೀಯವಾದವು. ಇಂತಾದ ಬಳಿಕ ಭಾವಿಸಲೇನುಂಟು ಹೇಳಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಾವಾತೀತನೆಂದು ಶ್ರುತಿ ಸಾರುತ್ತಿರಲಿನ್ನು ಭಾವಿಸಲೇನುಂಟು ಹೇಳಾ?.
--------------
ಸ್ವತಂತ್ರ ಸಿದ್ಧಲಿಂಗ
ಬ್ರಹ್ಮಸ್ಥಾನದಲ್ಲಿ ಜ್ಯೋತಿರ್ಲಿಂಗವಿಪ್ಪುದನರಿತು, ಕ್ರೀವೆರಸಿ ನಿಃಕ್ರೀಯಲ್ಲಿ ನಿಂದು ಕ್ರಮದಿಂದೂಧ್ರ್ವಕ್ಕೆಯ್ದಲು ಮಹಾಲಿಂಗದ ಬೆಳಗು, ಪೃಥ್ವಿಯಂ ಮುಸುಕಿ, ಅಪ್ಪುವನೀಂಟಿ, ಅಗ್ನಿಯಂ ದಹಿಸಿ, ವಾಯುವಂ ನುಂಗಿ, ಆಕಾಶಕ್ಕಳವಲ್ಲದೆ ಸ್ಥಲನಿಸ್ಥಲವನೆಯ್ದಿ ಶೂನ್ಯಾವಸ್ಥೆಯಲ್ಲಿ ನಿಂದ ನಿಲವ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲದೆ ಅರಿವು ಮರಹನೊಳಕೊಂಡಿಪ್ಪ ಅಜ್ಞಾನಿಗಳೆತ್ತ ಬಲ್ಲರಯ್ಯಾ ?
--------------
ಆದಯ್ಯ
ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಜಲವ ದಹಿಸಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಲನ ಸುಟ್ಟು ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಿಲವ ದಗ್ಧ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಭಾವ ದಹನವ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಕರ್ತಾರನ ಕರ್ಮವನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಸಕಲವನುರುಹಿ ಬೆಳಗ ಮಾಡಿ ಕೂಡ ಅರ್ಚಿಸುವರಾರಯ್ಯಾ? ಅಪ್ರತಿಮಶರಣರಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರುಗೊಂಡೆನಯ್ಯಾ. ವಿತ್ತಾಪಹಾರಿ ಗುರುಗಳು ನೂರಾರು; ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು; ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು; ಸತ್ಕರ್ಮೋಪದೇಶವನರುಹಿ ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು; ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು. ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು; ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ಪ್ರಮಥರು. ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕರ್ಲಭೂಮಿಯ ಹರಳ ಅಶ್ವಪತಿ ಕಿರಣದಿಂದ ದಹಿಸಿ, ನೀರಭೂಮಿಯ ಹರಳ ಯರಳಪತಿ ಕಾಯಿಂದ ದಹಿಸಿ, ಬೆಟ್ಟದ ಭೂಮಿಯ ಹರಳ ಟೆಗರಪತಿ ಕಾಂತಿಯಿಂದ ದಹಿಸಿ, ಉಳಿದ ಭೂಮಿಯ ಹರಳ ದಗಡಲೋಹದ ಕಿಡಿಗಳಿಂದ ದಹಿಸಿ, ಸುಣ್ಣವ ಮಾಡಿ ಮೂರು ಮುಖದಪ್ಪಿಗೆ ಕೊಟ್ಟು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರಿಭೂಮಿಯ ಬಿದಿರ ಬೊಂಬವ ಕಡಿದು ಬಿಳಿಭೂಮಿಯ ಬಿದಿರ ಅಗ್ನಿಯಿಂದ ದಹಿಸಿ ಭಸ್ಮ ಮಾಡಿ ಧರಿಸಿ ಕಾಯಕದಲ್ಲಿರ್ದು ಕಾಯಕಕ್ಕೆ ಸಿಕ್ಕದೆ ಮೇದಾರ ಕೇತಯ್ಯನೊಳಗಾದರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೀಕ್ಷಿತನು ಯಜನಾರ್ಥಿಯಾಗಿ, ಭೂಶುದ್ಧಿಯಂ ಮಾಡಿ, ಯೂಪಸ್ತಂಭವಂ ಪ್ರತಿಷೆ*ಯಂ ಮಾಡಿ, ಋತ್ವಿಜರಂ ಕೂಡಿ, ಮಹಾಘೋರಾಟವಿಯಲ್ಲಿ ಕಳಪುಲ್ಲಂ ತಿಂದು ಕೊಳಕುನೀರಂ ಕುಡಿದು ಅಧೋಮುಖಗಳಾಗಿ ಸಂಚರಿಸುವ ಪಶುಸಮೂಹಗಳೊಳೊಂದು ಸಲಕ್ಷಣಮಾದ ಪಶುವಂ ಪಿಡಿದು, ಯೂಪಸ್ತಂಭದಲ್ಲಿ ಹರಿಯದ ಹಗ್ಗದಲ್ಲಿ ಕಟ್ಟಿ, ಅತಿಖಾತಮಪ್ಪ ಯಜ್ಞಕುಂಡವಂ ಚೆನ್ನಾಗಿ ಸಮೆದು, ಒಣಗಿಯೊಣಗದ ಕಾಷ*ಂಗಳಿಂದಗ್ನಿಯ ಹೊತ್ತಿಸಿ, ಅತಿಸುಗಂಧಮಾದ ಘೃತಮಂ ಮಂತ್ರಘೋಷದಿಂದಾಹುತಿಗೊಡುತ್ತಿರೆ, ಅಗ್ನಿಯು ಪಟುವಾಗಿ, ನಿಜವಾಸನಾಧೂಪದಿಂ ಸಕಲದೇವತೆಗಳಂ ತೃಪ್ತಿಬಡಿಸಿ ಋತ್ವಿಕ್ಕುಗಳನೊಳಕೊಂಡು ದೀಕ್ಷಿತನಂ ವಿೂರಿ, ಪಾಶಮಂ ದಹಿಸಿ, ಕಂಭದಲ್ಲಿ ಬೆರೆದು ಪರಮಶಾಂತಿಯನೆಯ್ದಿದ ತಾನೇ ಸೋಮಯಾಜಿಯಾಯಿತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ತನುಮಧ್ಯ ಮಂಟಪದ ಒಳಗೆ ದಾಯಂಗೊಳಿಸಿ ತನು ಮಲತ್ರಯವ ದಹಿಸಿ, ಜ್ಯೋತಿರ್ಮಯ ಲಿಂಗವನು ತನ್ನ ಮನದ ಕೊನೆಯಲ್ಲಿತ್ತ ಗುರು, ಅದ ನಿಸ್ತಾರವೆಂದು ಹಿಡಿದ, ಆಯ ಇದರಲ್ಲಿ ಆಜ್ಞಾವಿಲೋಕನದ ಆನಂದ ಶಿಷ್ಯನು, ಅಪ್ರಮಾಣನವ್ವಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಯ್ಯಾ, ನಿಮ್ಮ ಶರಣರನುಭಾವಕ್ಕೆ ಪ್ರತಿಸಾಕ್ಷಿಯೆಂದು ಬೆರೆಸಿ ಹೇಳುವರು ಹಾದಿ ಹತ್ತಿಕೆಯ ನುಡಿಗಳ. ಅದು ಎನಗೆಂದೂ ಸೊಗಸದು ಕಾಣಾ. ಎನ್ನ ನಿಜರತ್ನಪ್ರಕಾಶ ನಿಮ್ಮ ಶರಣರ ವಚನ. ಇವಕ್ಕೆ ಸಾಕ್ಷಿ ತಂದು ಹೇಳುವ ಭಾವವ ದಹಿಸಿ ಭಸ್ಮವ ಮಾಡಿ ಧರಿಸಿರ್ದೆನಾಗಿ ಕಾಣಿಸದು. ಶರಧಿಗೆ ತೊರೆಗಾವಲಿ, ಮೇರುವಿಗೆ ಮೊರಡಿ, ಗಗನಕ್ಕೆ ಕೊಪ್ಪರಿಗೆ ತೋರಿದರೆ ಸರಿಯಪ್ಪುದೆ ? ಆ ಕುರಿಗಳ ನುಡಿ ಅತ್ತಿರಲಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರ ನುಡಿಬೆಳಗನಗಲದಿರ್ದೆನು ನಿಮ್ಮೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಅನಾದಿ ಮಹಾಪ್ರಭು ಶ್ರೀಗುರುಲಿಂಗಜಂಗಮದ ಚರಣೋದ್ಧೊಳನವೆ ಚಿದ್ಬ್ರಹ್ಮ ಚಿದೈಶ್ವರ್ಯ ನೋಡ. ಶ್ರೀಗುರುಲಿಂಗಜಂಗಮದ ಕ್ರಿಯಾಚಕ್ಷುವಿನ ಕ್ರಿಯಾ ಪ್ರಕಾಶವೆ ಕ್ರಿಯಾಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಜ್ಞಾನಚಕ್ಷುವಿನ ಜ್ಞಾನಪ್ರಕಾಶವೆ ಜ್ಞಾನಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಚಕ್ಷುವಿನ ಮಹಾಜ್ಞಾನಪ್ರಕಾಶವೆ ಮಹಾಜ್ಞಾನಭಸಿತವಾಗಿರ್ಪುದಯ್ಯ. ಇಂಥ ಚಿತ್ಪ್ರಕಾಶಸ್ವರೂಪವಾದ ಚಿದ್ಭಸಿತವ ಅನಾದಿ ಬಸವದಂಡಪ್ರಮಥರು ತಮ್ಮ ಗೋಪ್ಯಮುಖದಲ್ಲಿ ಸಕಲಕ್ರಿಯೆಗಳ ಆಚರಿಸುತ್ತಿರಲು ಆಗ ಶಿವನು ತನ್ನ ಪಂಚಮುಖದಿಂದ ಪಂಚವರ್ಣದ ಗೋವ ನಿರ್ಮಿಸಿ, 'ಎಲೈ ಎನ್ನ ಚಿಚ್ಚೈತನ್ಯಮೂರ್ತಿ ಬಸವದಂಡನಾಯಕರೆ ಈ ಪಂಚಗೋವುಗಳ ಈರೇಳುಲೋಕಕ್ಕೆ ಪಾವನಸ್ವರೂಪವ ಮಾಡಿ, ನಿಮ್ಮ ಶರಣಗಣಂಗಳಿಗರ್ಪಿತವಾಗುವಂತೆ ಮಾಡಿರಯ್ಯ.' ಎಂದು ಅಭಿವಂದಿಸಲು, ಆಗ ಬಸವದಂಡಪ್ರಮಥರು ಆ ಗೋವಿನ ಸಗಣವ ಕ್ರಿಯಾಗ್ನಿಯಿಂದ ದಹಿಸಿ, ಶ್ರೀಗುರುಲಿಂಗಜಂಗಮದ ಚಿತ್ಪ್ರಭೆಯ ವೇಧಿಸಿ ಸಕಲಲೋಕಂಗಳಿಗೆ ಸಕಲ ಮುನಿಜನಕ್ಕೆಲ್ಲ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತ, ಪಾಪಹರಭಸಿತವೆನಿಸಿಕೊಟ್ಟರು ನೋಡ. ಆ ಗೋವಿನ ಜಲಮಲ ವೀರ್ಯದಿಂದ ಭೂಮಿಯ ಸಮ್ಮಾರ್ಜನೆಗೆ ಯೋಗ್ಯವೆಂದೆನಿಸಿದರಯ್ಯ. ಆ ಗೋವಿನ ಕುಚಕ್ಷೀರವ ಸರ್ವಲೋಕಂಗಳಿಗೆ ಪಂಚಾಮೃತವೆಂದೆನಿಸಿದರಯ್ಯ. ಆ ಗೋವಿನ ಪುತ್ರನಿಂದ ಸಕಲಪ್ರಾಣಿಗಳು ಬದುಕುವಂತೆ ಮಾಡಿದರಯ್ಯ. ಆ ಗೋವಿನ ಮಾಂಸವ ದುರಾಚಾರಭವಿಜನ್ಮಾತ್ಮರು ಭುಂಜಿಸುವಂತೆ ಮಾಡಿದರಯ್ಯ. ಆ ಗೋವಿನ ಚರ್ಮವ ಶಿವಗಣಂಗಳ ಪಾದರಕ್ಷೆಯೆಂದೆನಿಸಿದರು ನೋಡಯ್ಯ. ಇತ್ತಲಾಗಿ ಸಕಲಪ್ರಮಥಗಣಂಗಳೆಲ್ಲ ಶ್ರೀ ಬಸವೇಶ್ವರಸ್ವಾಮಿಗಳ ಚಿತ್ಪ್ರಕಾಶಭಸಿತವ ಬೆಸಗೊಂಡು ಆ ವಿಭೂತಿಯ ಶ್ರೀ ಗುರುಲಿಂಗಜಂಗಮದ ದೀಕ್ಷಾಜಲ-ಶಿಕ್ಷಾಜಲದಿಂದ ಸಮ್ಮಿಶ್ರವ ಮಾಡಿ, ಇಪ್ಪತ್ತೊಂದು ದೀಕ್ಷಾಸ್ವರೂಪವಾದ ಮಹಾಪ್ರಣಮವ ಸ್ಥಾಪಿಸಿ, ಸಕಲಾಚಾರಕ್ರಿಯೆಗಳಿಗೆ ಶುಭತಿಲಕವಿದೆ ಚಿದ್ವಿಭೂತಿಯಿದೆಂದು ನಿರಂತರ ಸ್ನಾನ ಧೂಳನ-ಧಾರಣವ ಮಾಡಿದರು ನೋಡ. ಅದರಿಂ ಮೇಲೆ ಆ ಗೋವಿನ ಕುಚಕ್ಷೀರವ ಈ ಭಸಿತದಿಂದ ಪಾವನವ ಮಾಡಿ, ಪರಮಾಮೃತವೆನಿಸಿ, ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಪರಮಾಮೃತ ಶೇಷಪ್ರಸಾದವ ನಿಜನಿಷೆ*ಯಿಂದ ಲಿಂಗಾರ್ಪಿತವ ಮಾಡಿದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶಭಸಿತವ ಬಹಿಷ್ಕರಿಸಿ ಸಕಲಪ್ರಮಥಗಣಂಗಳಿಗೆ ಪರಮಪದ ಮೋಕ್ಷದ ಕಣಿಯೆಂದು ಬೋಧಿಸಿದಂಥ ಬಸವದಂಡನಾಥನ ಚರಣಕ್ಕೆ ನಮೋ ನಮೋ ಎಂಬೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹಲವು ಕಾಷ*ವನೊಟ್ಟಿ ಕಿಚ್ಚನಿಕ್ಕಿದರೆ ಅದರುರಿ ಆಕಾಶಕ್ಕೆ ನೆಗೆವುದಲ್ಲದೆ ಅಧೋಕಡೆಗಾಗದು ನೋಡಾ! ಹಲವು ಬಿತ್ತುಗಳು ಅಸ್ತಬೆಸ್ತ ಅಡಿ ಮಗ್ಗುಲಮುಖವಿರಲು ಬೆಳೆಯಾಕಾಶದತ್ತ ಮುಖವಲ್ಲದೆ ಅಧೋಕಡೆಗಾಗದು ನೋಡಾ! ತನುವಿಡಿದ ಭಕ್ತನಲ್ಲುದಯಿಸಿದ ಸುಜ್ಞಾನಾಗ್ನಿ ಸಕಲವ ದಹಿಸಿ ಪ್ರಕಾಶ ಶಿವನತ್ತ ನೆಗೆದುದು. ಅನಾದಿಭಕ್ತನಂಗದಲ್ಲಿ ಗುರುಕೃಪೆ ಹೇಗೆ ಬಿತ್ತಿದಡೇನು ಶಿವಜ್ಞಾನ ಬೀಜಾದಿಗಳು ಪಲ್ಲವಿಸಿ ಗುರುನಿರಂಜನ ಚನ್ನಬಸವಲಿಂಗಕ್ಕೆ ಸಸಿನ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಚಗವ್ಯದಿಂದಾದ ಗೋಮಯವಂ ತಂದಾರಿಸಿ ಪಂಚಾಮೃತಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂ ಅಭಿವಂದಿಸಿ ಶಿವನ ವಹ್ನಿಯಲ್ಲಿ ದಹಿಸಿ ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು ಎಡದ ಹಸ್ತದೊಳ್ಪಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿ ಜಲಮಿಶ್ರವಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ ಲಿಂಗಾರ್ಚನೆಯಂ ಮಾಡುವ ಶರಣ, ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞ, ಆತನೇ ಸದ್ಯೋನ್ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪಂಚಗವ್ಯದಿಂದಾದ ಗೋಮಯವ ತಂದಾರಿಸಿ ಪಂಚಾಮೃತದ ಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂದಭಿಮಂತ್ರಿಸಿ ಶಿವಜ್ಞಾನವಹ್ನಿಯಲ್ಲಿ ದಹಿಸಿ ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು ಎಡದ ಹಸ್ತದೊಳ್ವಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿಕೊಂಡು ಜಲಮಿಶ್ರಮಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ ಲಿಂಗರ್ಚನೆಯ ಮಾಡುವ ಶರಣ ತಾನೆ ವೇದವಿತ್ತು. ಆತನೆ ಶಾಸ್ತ್ರಜ್ಞ, ಆತನೆ ಸದ್ಯೋನ್ಮುಕ್ತನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇನ್ನಷ್ಟು ... -->