ಅಥವಾ

ಒಟ್ಟು 28 ಕಡೆಗಳಲ್ಲಿ , 19 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತರೆಲ್ಲರೂ ಕೂಡಿ ಗುರೂಪದೇಶ ಸಹಿತವಾಗಿ ಕೊಟ್ಟ ಇಷ್ಟಲಿಂಗವ ಪ್ರಾಣಲಿಂಗವೆಂದು ಅಪ್ಪವಿಸಿದ ಮಾತ ಮರೆವರಲ್ಲಾ. ಸ್ಥಾವರಕ್ಕೆ ಹೋಗಿ ದಂಡಪ್ರಣಾಮವ ಮಾಡುವರು, ಆವುದಾಚಾರವಯ್ಯಾ ? ತನ್ನ ಲಿಂಗವಿದ್ದಂತೆ ಅನ್ಯಲಿಂಗವ ಮುಟ್ಟಿ ದರುಶನ ಮಾಡುವ ಪಾತಕರನಚ್ಚಶರಣರೆಂತೆಂಬೆನಯ್ಯಾ, ಕೂಡಲಚೆನ್ನಸಂಗಮದೇವಾ?
--------------
ಚನ್ನಬಸವಣ್ಣ
ಆರು ದರುಶನ ಅನಾಚಾರವ ನಡೆದವು, ಸುರೆಯ ಕುಡಿದವು, ಮಾಂಸವ ತಿಂದವು. ಆರು ದರುಶನಕ್ಕೆ ಅನಾಚಾರವಾದುದೆಂದು ನಾನು ಗುರುವಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮುಖಲಿಂಗದರುಶನ ಜಂಗಮದಲ್ಲಿ, ಭಾವಲಿಂಗ ದರುಶನ ಮನದಲ್ಲಿ ಸ್ವಯಲಿಂಗದರುಶನ ಕಾಯದಲ್ಲಿ, ಈ ತ್ರಿವಿಧಲಿಂಗದರುಶನ ಜ್ಞಾನದಲ್ಲಿ. ಇದು ಕಾರಣ-ಕೂಡಲಚೆನ್ನಸಂಗನಲ್ಲಿ, ಜಂಗಮಲಿಂಗದರುಶನ ಬಸವಣ್ಣಂಗಲ್ಲವೆ ಉಳಿದವರಾರಿಗೆಯೂ ಅಳವಡದು.
--------------
ಚನ್ನಬಸವಣ್ಣ
ದರುಶನ ತಪ್ಪುಕ ಪ್ರಥಮ ಪಾತಕ. ಪರುಶನ ತಪ್ಪುಕ ದ್ವಿತೀಯ ಪಾತಕ. ಗುರು ತಪ್ಪುಕ ತೃತೀಯ ಪಾತಕ. ಪಾರದ್ವಾರಿ ಚತುರ್ಥ ಪಾತಕ. ಮಾಂಸಾಹಾರಿ ಪಂಚಮ ಮಹಾ ಪಾತಕ. ಈ ಅಯ್ವರೊಡನೆ ನುಡಿಯಲಿಲ್ಲಯ್ಯ ರಾಮನಾಥ.
--------------
ಜೇಡರ ದಾಸಿಮಯ್ಯ
ಗುರುಹಿರಿಯರ ದರುಶನ ಸ್ಪರುಷನದಲ್ಲಿ ಇರುವ ಕಟ್ಟಳೆಯ ಕೇಳಿರೊ. ಭಕ್ತರು ಆಡದ ಆಚಾರ ಗಂಟುಹಾಕಲಾಗದು. ಗಡ್ಡ ಮೀಸೆಯ ತಿದ್ದಲಾಗದು. ಮಡ್ಡಮಾತು ಗೀತವನಾಡಲಾಗದು. ಅಥವ ಆಡಿದರೆ ಅವರ ಸಿರದ ಗುಡ್ಡದ ಬೋಳರ ಸಮಾನವೆಂದು ಕಂಡು ಸಡ್ಡೆಮಾಡದೆ ಇರುವರು ಸತ್ಪುರುಷರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ. ಆ ಪುರುಷನ ಮುಟ್ಟಿ ಹಿಡಿದು, ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ. ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ. ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನೆಂದುಪಮಿಸುವೆನಯ್ಯ? ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ. ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ. ಕಂಜಪದಯಗಳದೊಳು ಹೊಳವುತ್ತಿದಾನೆ ನಂಜುಗೊರಳಭವ ಕಾಣಿಭೋ. ಭವರೋಗವೈದ್ಯ, ಭವಹರ, ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು, ಎನ್ನ ಹೃದಯದಲ್ಲಿ ಕಂಡು, ಮನೋಭಾವದಲ್ಲಿ ಆರಾದ್ಥಿಸುತ್ತಿರ್ದೆನಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರು ಅಂಕಣದೊಳಗಾರು ದರುಶನ ಪೂಜೆ, ಆರೂಢರೂಢಾದಿಯೋಗಿಗಳಿರುತ್ತಿರಲು, ಆರಾರಿಂದತ್ತತ್ತ ವಿೂರಿ ತೋರುವ ಸ್ವಯಂಜ್ಯೋತಿ ಇರಲು, ಬೇರೆಯರಸಲುಂಟೆ ಶಿವಯೋಗವು ? ಆರು ಅಂಕಣದೊಳಗೆ ಆರು ಮಂದಿಯ ಸಂದಣಿಯ ಓಲಗದ ಸಡಗರವೆಂದು ಆರೂಢ ಯೋಗಿಗಳದನೆಣಿಕೆಗೊಳರು. ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರವಲ್ಲವಾಗಿ ವಿೂರಿ ಒಂಬತ್ತು ಗೊಪೆಯೊಳು ಲಯ ಗಮನ ಸ್ಥಿತ್ಯರ್ಥಂಗಳ ಹಂಗಿಲ್ಲದ ಹಂಗಿನಲ್ಲಿ ನೀನು ನಿನ್ನಲ್ಲಿ ಪತಂಗನ್ಯಾಯದಂತೆ ಗುಹೇಶ್ವರನೊಳೊಂದು ಕಂಡಾ.
--------------
ಅಲ್ಲಮಪ್ರಭುದೇವರು
ಶಿವಶಿವಾ ಎಂದು ಶಿವನ ಕೊಂಡಾಡುತ್ತ ಶ್ರೀ ವಿಭೂತಿಯ ಧರಿಸಿ, ಶ್ರೀ ಮಹಾದೇವನ ಪೂಜಿಸುವಾತನ ಕಾಯವೇ ಕೈಲಾಸ. ಆತನ ನಡೆಯೇ ಪಾವನ, ಆತನ ನುಡಿಯೇ ಆಗಮ. ಆತನ ದರುಶನ ಸ್ಪರುಶನವೇ ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು ನೋಡಾ ! ಆ ಮಹಾತ್ಮನಿಂದಧಿಕರು ಮೂಲೋಕದೊಳಗಿಲ್ಲ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ರುದ್ರಾಕ್ಷಿಸ್ಥಲವೆಂತೆಂದಡೆ : ಬ್ರಹ್ಮ ವಿಷ್ಮು ರುದ್ರ ಮೊದಲಾದ ಸಮಸ್ತ ದೇವರ್ಕಳು ತ್ರಿಪುರದ ರಾಕ್ಷಸರ ಉಪದ್ರಕ್ಕೆ ಭೀತರಾಗಿ ರುದ್ರಲೋಕದ ಮಹಾರುದ್ರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ ಚಿಂತಾಕ್ರಾಂತರಾಗಿ ನಿಲಲು, ಆ ರುದ್ರಲೋಕದ ಮಹಾರುದ್ರನು ತ್ರಿಪುರವಧಾರ್ಥ ಸರ್ವದೇವಮಯ ದಿವ್ಯ ಅನಂತತೇಜ ಅನಂತಪ್ರಚಯ ಅನಂತಜ್ವಾಲಾಮಯವಾಗಿಹ ಅಘೋರರೂಪ ತಾಳಿ ಉತ್ತಮವಾದ ಅಘೋರಾಸ್ತ್ರಮಂ ಚಿಂತಿಸಿ, ತ್ರಿಪುರದ ಕೀಲ ದಿವ್ಯಸಹಸ್ರವರ್ಷ ನೋಡಲು ಆ ರುದ್ರನ ಅಕ್ಷಿಯಲ್ಲಿ ರಕ್ತಾಶ್ರುಜಲಬಿಂದುಗಳು ಜನಿಸಿ ಭೂಮಿಯ ಮೇಲೆ ಬೀಳಲು ಮಹಾರುದ್ರಾಕ್ಷ ವೃಕ್ಷವಾಗಿ ತ್ರೈಲೋಕ್ಯಾನುಗ್ರಹ ಕಾರಣವಾಯಿತ್ತು ನೋಡಾ. ಆ ರುದ್ರಾಕ್ಷಿಯ ದರುಶನದ ಫಲ ಲಿಂಗದರುಷನದ ಫಲ, ರುದ್ರಾಕ್ಷಿಯ ದರುಶನ ಸ್ಪರ್ಶನದಿಂದ ಸರ್ವಪಾಪಂಗಳು ಹೋಹವು ನೋಡಾ. ಇದಕ್ಕೆ ಈಶ್ವರೋsವಾಚ : ``ಶ್ರುಣು ಷಣ್ಮುಖ ಯತ್ನೇನ ಕಥಯಾಮಿ ಸಮಾಸತಃ | ತ್ರಿಪುರೋ ನಾಮ ದೈತ್ಯಸ್ತು ಪುರಶ್ಚಿತ್ತು ಸುರರ್ಜಯಃ || ಚಿತ್ತಾಪ್ತೇವ ಸುರಾಸ್ಸರ್ವೇ ಬ್ರಹ್ಮ ವಿಷ್ಣೇಂದ್ರದೇವತಾಃ ಚಿಂತಿತಂ ಚ ಮಯಾ ಪುತ್ರ ಅಘೋರಾಸ್ತ್ರಮನುತ್ತಮಂ|| ಸರ್ವದೇವಮಯಂ ದಿವ್ಯಂ ಜ್ವಲಿತಂ ಘೋರರೂಪಕಂ | ತ್ರಿಪುರಸ್ಯ ವಧಾರ್ಥಾಯ ದೇವಾನಾಂ ಪ್ರಾಣವಾಯು ಚ || ಸರ್ವವಿಘ್ನಪ್ರಶಮನಂ ಅಘೋರಾಸ್ತ್ರಂತು ಚಿಂತಿತಂ | ದಿವ್ಯವರ್ಷಸಹಸ್ರಾಣಿ ಚಕ್ಷುರುನ್ಮೀಲಿತಂ ಮಯಾ || ಘಟೇಭ್ಯಾಂ ಚ ಕುಲಾಕ್ಷಿಭ್ಯಾಂ ಪತಿತಾ ಜಲಬಿಂದವಃ | ರಕ್ತಾಶ್ರುಬಿಂದವೋ ಜಾತಾಃ ಮಹಾರುದ್ರಾಕ್ಷವೃಕ್ಷಕಾಃ || ಸ್ಥಾವರತ್ವಮನುಪ್ರಾಪ್ಯ ಮತ್ರ್ಯಾನುಗ್ರಹಕಾರಣಾತ್ | ರುದ್ರಾಕ್ಷಾಣಾಂ ಫಲಂ ಧೃತ್ವಾ ತ್ರಿಷು ಲೋಕೇಷು ವಿಶ್ರುತಂ || ಲಿಂಗಸ್ಯ ದರ್ಶನೇ ಪುಣ್ಯಂ ಭವೇತ್‍ರುದ್ರಾಕ್ಷದರ್ಶನಾತ್ | ಭಕ್ತ್ಯ ರಾತ್ರೋ ದಿವಾಪಾಪಂ ದಿವಾರಾತ್ರಿ ಕೃತಂ ಹರೇತ್ || ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನೇ ಭವೇತ್ | ತತ್ಕೋಟಿ ಶತಂ ಪುಣ್ಯಂ ಲಭತೇ ಧಾರಣಾನ್ನರಃ || ಲಕ್ಷಕೋಟಿ ಸಹಸ್ರಾಣಿ ಲಕ್ಷಕೋಟಿ ಶತಾನಿ ಚ | ತಜ್ಜಪಾಲ್ಲಭತೇ ಪುಣ್ಯಂ ನಾತ್ರ ಕಾರ್ಯಂ ವಿಚಾರಣಾತ್ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋoವಾಚ : ``ಶಿರೋಮಾಲಾ ಚ ಷಟ್ತ್ರಿಂಶದ್ವಾತ್ರಿಂಶತ್ಕಂಠಮಾಲಿಕಾ | ಕೂರ್ಪರೇ ಷೋಡಶ ಪ್ರೋಕ್ತಾ ದ್ವಾದಶಂ ಮಣಿಬಂಧಯೋಃ || ಉರೋಮೂಲಾಚ ಪಂಚಾಶತಷ್ಟೋತ್ತರಶತಂ ತಥಾ | ಶಿರಸಾ ಧಾರಯತ್ಕೋಟಿ ಕರ್ಣಾಭ್ಯಾಂ ದಶಕೋಟಿಯಃ || ಗಳೇ ಬಂಧಂ ಶತಂ ಕೋಟಿ ಮೂಧ್ರ್ನಿ ಕೋಟಿಸಹಸ್ರಕಂ | ಆಯುಕಂಠೋಪವಿತ್ತಂ ಚ ಲಕ್ಷಮಾವೇ ಮಣಿಬಂಧಯೋರ್ಣ ವಕ್ತ್ರಾಣಿ | ದ್ವಾದಶಾದಿತ್ಯಾದಿ ಪಾಯು ಶ್ರೀಮಹಾದೇವಾಯ ನಮಃ || ಅಷ್ಟೋತ್ತರಶತಂ ಸೋಪವಿ ತ್ತಂ ಚತುರ್ದಶ ವಕ್ತ್ರಾಣಿ | ಶತರುದ್ರಾತ್ಮಾಕಾಯ ಶ್ರೀ ವಿಶ್ವೇಶ್ವರಾಯ ನಮಃ ಇತಿ ||'' ಇಂತೆಂದುದಾಗಿ, ಇದಕ್ಕೆ ಬೋಧಾಯನಶಾಖಾಯಾಂ : ``ತಾನಿ ಹವಾಏತಾನಿ ರುದ್ರಾಕ್ಷಾಣಿ ಯತ್ರ ಯೋ ಯೇ ಧಾರಯಂತಿ ಕಸ್ಮಾದೇವ ಧಾರಯಂತಿ ಸ್ನಾತ್ತ್ವಾನಿ ಧಾರಯನ್ ಗರ್ಭೇ ತಿಷ್ಟನ್ ಸ್ವಪನ್ ಖಾದನ್ ಉನ್ಮಿಷನ್ ಅಪಿ ಸರ್ವಾಣೈವಾನಿ ಚರತಿ ಮದ್ರಿ ಭೂತ್ವಾ ರುದ್ರೋ ಭವತಿ ಯೋಯೇನ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋಯತಿರ್ವಾ ಧಾರಯೇತ್ ಪದೇ ಪದೇ ಯಶ್ವಮೇಧಫಲಂ ಪ್ರಾಪ್ನೋತಿ ||'' ಇಂತೆಂದುದು ಶ್ರುತಿ. ಇದಕ್ಕೆ ಲೈಂಗ್ಯಪುರಾಣೇ : ``ರುದ್ರಾಕ್ಷಂ ಧಾರಯೇದ್ವಿಪ್ರಃ ಸಂಧ್ಯಾದಿಷು ಚ ಕರ್ಮಸು | ತತ್ಸರ್ವಂ ಸಮವಾಪ್ನೋತಿ ಕೋಟಿ ಕೋಟಿ ಗುಣಂ ಸದಾ || ಸ್ನಾನೇ ದಾನೇ ಜಪೇ ಹೋಮೇ ವೈಶ್ಯದೇವೇಷುರರ್ಚನೆ | ಪ್ರಾಯಶ್ಚಿತ್ತೇ ಕಥಾ ಶ್ರಾದ್ಧೇ ದೀಕ್ಷಾಕಾಲೇ ವಿಶೇಷತಃ || ರುದ್ರಾಕ್ಷಧರೋ ಭೂತ್ವಾ ಯತ್ಕಿಂಚಿತ್ಕರ್ಮವೈದಿಕಂ | ಕುರ್ಯಾದ್ವಿಪ್ರಸ್ತು ಯೋ ಮೋಹ ವಂಶಾವಪ್ನೋತಿ ತತ್ಫಲಂ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾಲ್ಲಭತೇ ವರಂ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಹಸ್ತೇಚೋರಸಿ ಕಂಠೇ ವಾ ಮಸ್ತಕೇ ವಾsಪಿ ಧಾರಯೇತ್ | ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಶಿಖಾಯಾಂ ಧಾರಯೇದೇಕಂ ಷಟ್ತ್ರಿಂಶನ್ಮಸ್ತಕೇ ತಥಾ| ದ್ವಾತ್ರಿಂಶತ್ಕಂಠದೇಶೇಚ ಪಂಚಾಷಣ್ಮಾಲಿಕಾ ಹೃದಿ || ಷೋಡಶಂ ಬಾಹುಮೂಲಯೋಃ ದ್ವಾದಶಂ ಮಣಿಬಂಧಕೇ | ಕರ್ಣಯೇಕೀಕಮೇಶುಸ್ಯಾ ದುಪವಿತೇ ಶತಾಷ್ಟಕಂ || ಶತಾಷ್ಟಮಕ್ಷಮಾಲಾಂತು ನಿತ್ಯಂ ಧಾರಯೇತೇ ವರಃ | ಪದೇ ಪದೇsಶ್ವಮೇಧಸ್ಯ ಫಲಂ ಪ್ರಾಪ್ನೋತಿ ನ ಸಂಶಯಃ || ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ರುದ್ರಾಕ್ಷ ಶತಕಂಠೋ ಯಃ ಗೃಹೇ ತಿಷ*ತಿ ಯೋ ವರಃ | ಕುಲೈಕವಿಂಶಮುಕ್ತಾರ್ಯ ಶಿವಲೋಕೇ ಕೋಟಿಭುಜದ್ವಯಂ | ಅಪ್ರಮೇಯ ಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಅವದ್ಯಃ ಸರ್ವಭೂತಾನಾಂ ರುದ್ರವದ್ವಿಚರೇತ್ ಭುವಿ | ಸುರಾಣಾಮಸುರಾಣಾಂ ಚ ವಂದನೀಯೋ ಯಥಾ ಶಿವಃ || ರುದ್ರಾಕ್ಷರಧಾರಶೋ ನಿತ್ಯಂ ವಂದನೀಯೋ ನರೈರಿಹ | ಉಚ್ಛಿಷ್ಟೋ ವಾ ವಿಕರ್ಮಸ್ತೋ ಯುಕ್ತೋ ವಾ ಸರ್ವಪಾಪಕೈಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಇಂತೆಂದುದಾಗಿ ಇದಕ್ಕೆ ಕಾತ್ಯಾಯನಶಾಖಾಯಾಂ : ``ಅಥೈವ ಭಗವಂತಂ ರುದ್ರಕುಮಾರಃ ಪಪ್ರಚ್ಛಾರಣೇನ ದಶಶತ ಗೋದಾನಫಲಂ || ದರ್ಶನಸ್ಪರ್ಶನಾಭ್ಯಾಂ ದ್ವಿಗುಣಂ ತ್ರಿಗುಣಂ ಫಲಂ ಭವತಿ, ಅತ ಊಧ್ರ್ವಂ ವಕ್ತುಂ ನ ಶಕ್ನೋಮಿ ತತೋಂ ಜಪ ಸಮಂತ್ರಕಂ ಧಾರಣೇ ವಿಧಿಂ ಕಥಯಾಮಿ || ಸ್ನಾನ ವಿಧಿನಾ ಸ್ನಾತೇಷು ಖೇರಾಜ್ಞೇಯ ಸ್ನಾನಂ ತ್ರಿಪುಂಡ್ರಧಾರಣಂ ಕೃತ್ವಾ ಏಕಾಶ್ಯಾದಿರುದ್ರ ಶಾಂತಾನಾಂ || ಸೃಷ್ಟಿಕ್ರಮೇಣಂ ಮಂತ್ರಾಸ್ಯಂ `ಓಂ ಹೂಂ ಚಂ ಖಂ ಹೂಂ ಕ್ಲಿಂ ಮಾಂ ದ್ರಾಂ ದ್ರಿಂ ಹ್ರುಂ ಕ್ರೂಂ ಕ್ಷಾಂ ಕ್ಷಿಂ ಕ್ಷುಂ' ನವಮಿತೀಷುರುವೋಕ್ತ ಂ ಮಂತ್ರಾನನಂತಾ ಶೋಕ್ತ್ವಾನ್ವಾ ಜಪೇದಿಮಾನ್ ಪಾಣಾನಾಯಮ್ಯ ಸಮಸ್ತಪಾಪಕ್ಷಯಾರ್ಥಂ ಶಿವಜ್ಞಾನಾ ವಸ್ಯಾರ್ಥ ಸಮಸ್ತ ಮಂತ್ರಸ್ಸಹಧಾರಣಂ ಕರಿಷ್ಯಾಮಿತಿ ಸಂಕಲ್ಪ್ಯ ಶಿಖಾಯಾಮೇಕಮೇಕಸ್ಯಂ ಶ್ರೀ ಸದಾಶಿವಾಯ ನಮಃ ಇತಿ ||'' ``ದ್ವಿ ತ್ರಿ ದ್ವಾದಶವಕ್ತ್ರಾಣಿ ಶಿರಸಿ ತ್ರೀಣಿ ಧಾರಯೇತ್ | ವಹ್ನಿ ಸೂರ್ಯಸೋಮಾಧಿಪಾಯ ಶಿವಾಯ ನಮಃ ಇತಿ || ಏಕಾದಶ ವಕ್ತ್ರಂ ಷಟ್ತ್ರಿಂಶನ್ಮೂಧ್ರ್ನಿ ಷಟ್ತ್ರಿಂಶತ್ತತ್ವಾತ್ಮಕಾಯ | ನಮ ಇತಿ ಪಂಚದಶ ವಕ್ತ್ರಾಣಿ ಕರ್ಣಯೋರೇಕಮೇಕಂ || ಸೋಮಾಯ ನಮಃ ಇತಿ, ಯೇದಷ್ಟವಕ್ತ್ರಾಣಿ ಕಂಠೇ ದ್ವಾತ್ರಿಂಶತ್ | ತ್ರ್ಯಂಬಕಕಲಾತ್ಮನೇ ಶ್ರೀಕಂಠಾಯ ನಮಃ ಇತಿ || ಚತುರ್ವಕ್ತ್ರಂ ಪಂಚಷಣ್ಮಾಲಿಕಾಮುರಸಿ ಶ್ರೀಕಂಠಾದಿ | ಮೂತ್ರ್ಯಾಯಸ್ಥಿಕಾಯ ಶ್ರೀ ಸರ್ವಜ್ಞಾಯ ನಮಃ ಇತಿ || ಬಾಹೋ ತ್ರಯೋದಶವಕ್ತ್ರಾಣಿ ಷೋಡಶಸುಖಾಸನಾದಿ | ಷೋಡಶಮೂತ್ರ್ಯಾತ್ಮಕಾಯ ಶ್ರೀಕಂಠಾಯ ನಮಃ ಇತಿ || ದಕ್ಷೇರ್ಣವ ವಕ್ತ್ರಾಣಿ ಶ್ರೀ ವ್ಯೋಮಕಳಾತ್ಮಕಾಯ ಉಪಮಾಪತಯೇ ನಮಃ ಇತಿ ಉಪಾಯತೇ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ರುದ್ರಾಕ್ಷಮಾಲಯಾ ಶುಭ್ರೋ ಜಟಾಜೂಟವಿರಾಜಿತಃ | ಭಸ್ಮಾವಲಿಪ್ತಸರ್ವಾಂಗಃ ಕಮಂಡಲುಕರಾನ್ವಿತಃ || ಕೃಷ್ಮಾಜಿನೋ ಪವಿತ್ರಾಂಗಃ ಆಶಾಹೆ ಪುಣ್ಯಕೀರ್ತನಃ | ಶಿವಃ ತಸ್ಮೆ ೈಃ ಮಹಾದೇವಂ ಯೋಗಿನಾಂ ಹೃದಯಾಲಯಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಧಾರಣಾಸ್ಸರ್ವೇ ಜಟಾಮಂಡಲಧಾರಣಾತ್ | ಅಕ್ಷಮಾಲಾರ್ಪಿತಕರಂ ತ್ರಿಪುಂಡ್ರಾಪಲಿಯುಕ್ತಾಂಗಂ | ಆಷೇಡೇವ ವಿರಾಜಿತಂ ಋಗ್ಯಜುಃಸಾಮರೂಪೇಣ | ಸೇವತೇಸ್ಮೈ ಮಹೇಶ್ವರಃ ಸಂಸ್ಥಾಯಮನೋದಿಷ್ಟಾಂಗೈ || ದೇವೈರ್ಮುನಿಗಣೈಸ್ತಥಾಮೃತ ತ್ರಿಪುಂಡ್ರಕೋ ದಿವ್ಯೇ | ರುದ್ರಾಕ್ಷೇಶ್ವ ವಿಭಾಷಿತಃ ಶುಭೇ ಸತತಂ ವಿಷ್ಟು| ಭಸ್ಮದಿಗ್ಧತಮೂಲತಃ ತ್ರಿಪುಂಡ್ರಾಂಕಿತ ಸರ್ವಾಂಗೋ | ಜಟಾಮಂಡಲಮಂಡನ ಭೂತಿ ತ್ರಿಪುಂಡ್ರರುದ್ರಾಕ್ಷಂ | ಅಕ್ಷರ ಮಾಲಾರ್ಪಿತಕರಃ ಕುರ್ವಕ್ತ್ರಃ ಪಿತಾಮಹಾ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋವಾಚ : ``ಭಾಲೇ ತ್ರಿಪುಂಡ್ರಕಂ ಚೈವ ಗಳೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರೀ ಮಂತ್ರೋ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಮಾಲಿಕಾ ಕಂಠೇ ಧಾರಸ್ತದ್ಭಕ್ತಿವರ್ಜಿತಃ | ಪಾಪಕರ್ಮಾಪಿ ಯೋ ನಿತ್ಯಂ ರುದ್ರಲೋಕೇ ಮಹೀಯತೇ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ರುದ್ರಾಕ್ಷಂ ಕಂಠಮಾಶ್ರಿತ್ಯ ಶ್ವಾನೋsಪಿ ಮಿೃಯತೇ ಯದಿ | ಸೋsಪಿ ರುದ್ರಂ ಸಮಾಪ್ನೋತಿ ಕಿಂ ಪುನರ್ಮಾನುಷಾದಯಃ || ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜೇಷ್ವಪಿ | ಸದ್ಯೋ ಭವತಿ ಪೂತಾತ್ಮಾ ರುದ್ರಾಕ್ಷೌ ಶಿರಸಿ ಸ್ಥಿತೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಶುಚಿರ್ವಾಪ್ಯಶುಚಿರ್ವಾಪಿ ಅಭಕ್ಷಸ್ಯ ಚ ಭಕ್ಷಣಾತ್ | ಅಗಮ್ಯಾಗಮನಂ ಚೈವ ಬ್ರಹ್ಮಹಾ ಗುರುತಲ್ಪಕಃ || ಮ್ಲೇಚ್ಛೋ ವಾಪ್ಯಥ ಚಾಂಡಾಲೋ ಯುಕ್ತೋ ವಾ ಪ್ಯಥ ಪಾತಕೈಃ | ರುದ್ರಾಕ್ಷಧಾರಣಾದ್ಯಸ್ತು ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಧ್ಯಾನಧಾರಣಹೀನೋsಪಿ ರುದ್ರಾಕ್ಷಂ ಯೋ ಹಿ ಧಾರಯೇತ್ | ಸರ್ವಪಾಪವಿನಿರ್ಮುಕ್ತಃ ಸಯಾತಿ ಪರಮಾಂ ಗತಿಂ||'' ಇಂತೆಂದುದಾಗಿ, ಇದಕ್ಕೆ ಮಾನವಪುರಾಣೇ : ``ಮೃಣ್ಮಯಂ ವಾಪಿ ರುದ್ರಾಕ್ಷಂ ಕೃತ್ವಾ ಯಸ್ತು ಧಾರಯೇತ್ | ಅಪಿ ದುಃಕೃತಕರ್ಮೋsಪಿ ಸ ಯಾತಿ ಪರಮಾಂ ಗತಿಂ ||'' ಇಂತೆಂದುದಾಗಿ, ಇದಕ್ಕೆ ಶಿವಲಿಂಗಾಗಮೇ : ``ರುದ್ರಾಕ್ಷಮಾಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಇಂತೆಂದುದಾಗಿ, ``ರುದ್ರಾಕ್ಷಿಯ ಧರಿಸಿಪ್ಪಾತನೆ ರುದ್ರನು. ಆತನ ಭವರೋಗಂಗಳು ಹೊದ್ದಲಮ್ಮವು ನೋಡಾ. `ಏವಂ ರುದ್ರಾಕ್ಷಧಾರಣಾದ್ ರುದ್ರಾ' ಎಂದುದು ಶ್ರುತಿ. ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇದ್ದೂರಲ್ಲಿ ಗುರುವಿದ್ದು ದರುಶನ ಪರುಷನವಿಲ್ಲದೆ ದೂರದಲೆ ನೆನದುಕೊಂಡಿದ್ದೇನೆಂಬವಿಚಾರಿ ಹಾದರಗಿತ್ತಿಯಂತೆ ಹೊಲೆಯರು ನೀವು ಕೇಳಿರೊ. ಬೇರೂರಿಗೆ ಹೋಗಿ ಸತಿಯರ ನೆನೆದರೆ ಇರವೆ ಮಾಡಿದ ಹಾಂಗೆ ಆಗುವುದೆ ? ಇಲ್ಲ. ಅದೇನು ಕಾರಣವೆಂದರೆ, ಗುರುಲಿಂಗಜಂಗಮದ ಪಾದಸೇವೆಯ ನೆರೆನಂಬಿ ಹೆರೆಹಿಂಗದೆ ಮಾಡುವುದೆ ಮಾಟಕೂಟ ಭಕ್ತಿಮುಕ್ತಿ. ಇಂತಲ್ಲದೆ ಉಳಿದಾದ ಮಾಟಕೂಟವೆಲ್ಲ ಬಗುಳಾಟ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಬೀಜವ ಕಳೆದು ತರು ಬೆಳೆದಂತೆ ತರುವ ಕಳೆದು ಬೀಜ ಆ ತರುವಿಂಗೆ ಕುರುಹಾದಂತೆ ಪರಮ ಜೀವನ ಕಳೆದು ಆ ಜೀವಕ್ಕೆ ತಾ ಪರಮನೆಂಬ ಪರಿಭ್ರಮಣವ ಕಳೆದು ಪರಶಕ್ತಿಸಮೇತವಾದಲ್ಲಿ ಮರದಲ್ಲಿ ಹುಟ್ಟಿದ ಕಿಚ್ಚು, ಮರ ನಷ್ಟವಾಗಿ ತಾ ನಷ್ಟವಾದಂತೆ ಅರಿದ ಅರಿವು ಕುರುಹಿನಲ್ಲಿ ಪರಿಹರಿಸಿದ ಮತ್ತೆ ತೆರೆ ದರುಶನ ಉಭಯವಡಗಿತ್ತು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಪ್ರಸಾದಿ ಭೋಗಣ್ಣ
ಮನದ ಸಂಚದೋವರಿಯೊಳಗೆ, ಮಿಂಚಿನ ಗೊಂಚಲು ಬಳ್ಳಿವರಿಯಿತ್ತಯ್ಯಾ. ಎನ್ನ ಕಾಯದ ಕರಣಂಗಳೊಳಗೆ, ನಿರುಪಮಸುಖ ಸಾಧ್ಯವಾಯಿತ್ತು. ಬಯಸುವ ಬಯಕೆ ಕೈಸಾರಿತ್ತು, ಅರಸುವ ಅರಕೆ ನಿಂದಿತ್ತು. ಆಹಾ, ಕರತಲಾಮಲಕವಾಯಿತ್ತಲ್ಲಾ ! ಸತ್ಯಶರಣರ ದರುಶನ ಏನ ಮಾಡದೊ ? ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಶ್ರೀಪಾದವ ಕಂಡು, ಬದುಕಿದೆನಯ್ಯಾ.
--------------
ಸೊಡ್ಡಳ ಬಾಚರಸ
ಆರು ದರುಶನ ಹದಿನೆಂಟು ಜಾತಿವೊಳಗಾದ ಜೀವನಂಗಳಿಗೆ, ಕುಡಿವ ನೀರು, ಬೇಯಿಸುವ ಬೆಂಕಿ, ಅಡಗುವ ಧರೆ ಒಂದೆನಬಹುದೆ? ಸುಕ್ಷೇತ್ರ ವಾಸಂಗಳಲ್ಲಿ ಮೌಕ್ತಿಕರತ್ನ ಮಲಯಜ ಹಿಮಜಲ ಮುಂತಾದ ಅಚೇತನ ಚೇತನ ವಸ್ತು ಕುಂಭಿನಿಯಲ್ಲಿ ವಿಶೇಷ ವಾಸಂಗಳಲ್ಲಿ ಹುಟ್ಟಿದುದ ಕಂಡುಕೊಂಡು, ಮತ್ತೆ ಮನೆಮಾರಿ ಒಡೆಯಂಗೆ ಸರಿಯಿಲ್ಲಾ ಎಂದು ಅಕ್ಕನ ಕೊಂಡುಬಂದು ಡಕ್ಕೆಯ ಬಾರಿಸುತ್ತಿದ್ದೇನೆ, ಕಾಲಾಂತಕ ಭೀಮೇಶ್ವರಲಿಂಗವಲ್ಲದೆ ಇಲ್ಲಾ ಇಲ್ಲಾಎಂದು.
--------------
ಡಕ್ಕೆಯ ಬೊಮ್ಮಣ್ಣ
ಅಯ್ಯಾ, ನಿಮ್ಮ ಶರಣರ ಕಂಡ ಕಡು ಸುಖವನೇನೆಂಬೆನಯ್ಯಾ ಅದು ಸಾಲೋಕ್ಯದಂತುಟಲ್ಲ, ಸಾಮೀಪ್ಯದಂತುಟಲ್ಲ, ಸಾರೂಪ್ಯದಂತುಟಲ್ಲ, ಸಾಯುಜ್ಯದಂತುಟಲ್ಲ. ಕೂಡಲಸಂಗಯ್ಯಾ, ನಿಮ್ಮ ಶರಣರ ಚರಣದ ದರುಶನ ಸ್ಪರುಶನದಿಂದಾನು ಧನ್ಯನಾದೆನು.
--------------
ಬಸವಣ್ಣ
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ, ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ. ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ? ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ? ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ ? ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ ಅಂಗಹೀನರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->