ಅಥವಾ

ಒಟ್ಟು 17 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಸಂಸಾರವಿರಹದೊಳು ಸವೆದು, ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ, ಭುಜಂಗ ತಲೆಯೆತ್ತಿ ನೋಡಲು, ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ ಸದ್ಯೋಜಾತನ ಜಟಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು, ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು ದೃಷ್ಟಿದೃಷ್ಟವಾದ (ಅ)ನಿಮಿಷನ ಕರಸ್ಥಲವ ಕಂಡು ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು ಆತನ ಬೆರಗು ನಿಮ್ಮ ಹೊಡೆದು ಖ್ಯಾತಿಯಾಯಿತ್ತು ನೋಡಯ್ಯಾ, ಅಲ್ಲಮಪ್ರಭುವೆಂಬ ನಾಮ ನಿಮಗೆ ! ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ ಬದನೆಯ ಕಾಯಿಗಳು ಬಾಣಲಿಂಗವಾಗವೆ ನಮ್ಮ ಬಸವಣ್ಣನ ದೃಷ್ಟಿತಾಗಲು ? ಇದು ಕಾರಣ-ಕೂಡಲಚೆನ್ನಸಂಗನಲ್ಲಿ ಅನಿಮಿಷಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ.
--------------
ಚನ್ನಬಸವಣ್ಣ
ಆಕಾಶದಲ್ಲಿರ್ದ ತಾವರೆಯೊಳಗಿನ ಮುತ್ತಿನ ನೀಲದ ಮುಮ್ಮೊನೆಯೊಳು ಥಳಥಳನೆ ಹೊಳೆವ ಪರಮ ಪುರುಷನ ನೆರೆದು ಸುಖಿಸಬಲ್ಲ ಮಹಿಮನೆ ಪ್ರಾಣಲಿಂಗಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಜಮುಕ್ತಿಗೆ ಸದಾ ಸಂಧಾನದಲ್ಲಿರಬೇಕೆಂದು ಶಿವಶರಣರು ನುಡಿಯುತ್ತಿಪ್ಪರು. ಆ ಸಂಧಾನದ ಹೊಲಬ ನಾನರಿಯೆ, ಎನಗೆ ಮುಕ್ತಿಯಿಲ್ಲ. ಇನ್ನೇವೆನೆಂದು ಕಂಬನಿದುಂಬಿ ಕರಗುತಿಪ್ಪೆ ಮನವೇ. ಗುರು ಕೊಟ್ಟ ಸಂಧಾನವೆ ಕರಕಮಲದಲ್ಲಿ ಪ್ರಸನ್ನ ಪ್ರಸಾದಮಂ ಪ್ರತ್ಯಕ್ಷವಾಗಿ ತೋರುತ್ತಿದೆ. ಗುರು ಕೊಟ್ಟ ಸಂಧಾನವೆ ಎಂಟೆಸಳಿನ ಚೌದಳದ ಮಧ್ಯದಲ್ಲಿ ಹೊಂಗಲಶದಂತೆ ಥಳಥಳನೆ ಹೊಳೆಯುತ್ತಿದೆ. ಗುರುಕೊಟ್ಟ ಸಂಧಾನವೆ ಮುಪ್ಪುರದ ಮಧ್ಯದಲ್ಲಿ ರತ್ನ ಮಿಂಚಿನಂತೆ ಕುಡಿವರಿದು ಉರಿಯುತ್ತಿದೆ. ಗುರು ಕೊಟ್ಟ ಸಂಧಾನವೆ ಪಂಚಪತ್ರದ ಮಧ್ಯದಲ್ಲಿ ಬೆಳ್ದಿಂಗಳ ಲತೆಯಂತೆ ಬೀದಿವರಿದು ಬೆಳಗ ಬೀರುತ್ತಿದೆ. ಈ ಪ್ರಕಾರದ ಬೆಳಗೆ ಮುಕ್ತಿಸಂಧಾನವಾಗಿ ಒಪ್ಪುತ್ತಿಹವು. ಇವನೆ ಕಣ್ದುಂಬಿ ನೋಡು ಇವನೆ ಮನದಣಿವಂತೆ ಹಾಡು ಇವನೆ ಅಪ್ಪಿ ಅಗಲದಿಪ್ಪುದೇ ನಿಜಮುಕ್ತಿ. ತಪ್ಪದು ನೀನಂಜಬೇಡ. ಗುರು ಕೊಟ್ಟ ಸಂಧಾನವಂ ಮರೆದು ಭಿನ್ನವಿಟ್ಟು ಲಕ್ಷಿಪರ ಸಂಧಾನವೆಲ್ಲಾ ಭವಸಂಧಾನವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಘನಮಹಿಮರನುಭಾವದ ಬೆಳಗೆನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅನಿಷ್ಟವ ನಷ್ಟಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಚಿನುಮಯ ಶರಣರನುಭಾವದ ಬೆಳಗೆನ್ನ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಪ್ರಾಣನ ಪ್ರಕೃತಿಯ ದಹಿಸಿ ಥಳಥಳನೆ ಬೆಳಗುತ್ತಿದೆ ನೋಡಾ. ಸತ್ಪುರುಷರನುಭಾವದ ಬೆಳಗೆನ್ನ ಭಾವಸ್ಥಲದಲ್ಲಿ ಭಾವಲಿಂಗವಾಗಿ ಸಂಸಾರ ವಿಷಯಭ್ರಾಂತಿಯನಳಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿಜಪ್ರಕಾಶ ಶರಣರನುಭಾವದ ಬೆಳಗೆನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಅನಾಚಾರವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ಸತ್ಯಶರಣರನುಭಾವದ ಬೆಳಗೆನ್ನ ಜಿಹ್ವೆಯ ಸ್ಥಲದಲ್ಲಿ ಗುರುಲಿಂಗವಾಗಿ ಅನೃತವ ನಾಶಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಅನುಪಮ ಶರಣರನುಭಾವದ ಬೆಳಗೆನ್ನ ನಯನ ಸ್ಥಲದಲ್ಲಿ ಶಿವಲಿಂಗವಾಗಿ ದುಶ್ಚಲನೆಯ ದಹಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಿಪೂರ್ಣ ಶರಣರನುಭಾವದ ಬೆಳಗೆನ್ನ ತ್ವಕ್ಕಿನ ಸ್ಥಲದಲ್ಲಿ ಜಂಗಮಲಿಂಗವಾಗಿ ಭಿನ್ನಭಾವದ ಸೋಂಕನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಮಾನಂದ ಶಣರನುಭಾವದ ಬೆಳಗೆನ್ನ ಶ್ರೋತ್ರಸ್ಥಲದಲ್ಲಿ ಪ್ರಸಾದಲಿಂಗವಾಗಿ ದುಃಶಬ್ದರತಿಯ ನಷ್ಟವ ಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಮಶಾಂತ ಶರಣರನುಭಾವದ ಬೆಳಗೆನ್ನ ಹೃದಯಸ್ಥಲದಲ್ಲಿ ಮಹಾಲಿಂಗವಾಗಿ ಭಿನ್ನದರಿವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರುಪಮ ಶರಣರನುಭಾವದ ಬೆಳಗೆನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರ್ಮಾಯ ಶರಣರನುಭಾವದ ಬೆಳಗೆನ್ನ ಉನ್ಮನಿಯಲ್ಲಿ ಶೂನ್ಯಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರವಯ ಶರಣರನುಭಾವದ ಬೆಳಗೆನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಅಖಂಡ ಶರಣರನುಭಾವದ ಬೆಳಗೆನ್ನ ಕಿಂಚಿತ್ತು ಕಾಣಿಸದೆ ಸರ್ವಾಂಗದಲ್ಲಿ ಥಳಥಳನೆ ಹೊಳೆಯುತ್ತಿದೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂಸಾರವ ನಿರ್ವಾಣವ ಮಾಡಿ, ಮನವ ವಜ್ರತುರಗವ ಮಾಡಿ, ಜೀವವ ರಾವುತನ ಮಾಡಿ, ಮೇಲಕ್ಕೆ ಉಪ್ಪರಿಸಲೀಯದೆ, ಮುಂದಕ್ಕೆ ಮುಗ್ಗರಿಸಲೀಯದೆ ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ, ಮೋಹರವಾಗಿದ್ದ ದಳದ ಮೇಲೆ, ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲರಿಯದೆ, ಧವಳಬಣ್ಣದ ಕೆಸರುಗಲ್ಲ ಮೆಟ್ಟಿ ತೊತ್ತಳದುಳಿವುತ್ತಲು ಇದಾರಯ್ಯಾ. ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನಸೆಟ್ಟಿ ಈ ಥಳಥಳನೆ ಹೊಳೆವ ಪ್ರಜ್ವಲಿತವ ಕಾಣದೆ ಹಳಹಳನೆ ಹಳಸುತ್ತೈದಾರೆ ಅಯ್ಯಾ. ಆಧಾರಸ್ಥಾನದ ಇಂಗಳವನಿಕ್ಕಿ ವಾಯು ಪವನದಿಂದ ನಿಲಿಸಲು, ಆ ಅಗ್ನಿಯ ಸೆಕೆ ಹೋಗಿ ಬ್ರಹ್ಮರಂಧ್ರವ ಮುಟ್ಟಲು, ಅಲ್ಲಿರ್ದ ಅಮೃತದ ಕೊಡನೊಡೆದು ಕೆಳಗಣ ಹೃದಯಸ್ಥಾನದ ಮೇಲೆ ಬೀಳಲ್ಕೆ, ಮರಸಿದ ಮಾಣಿಕ್ಯದ ಬೆಳಗು ಕಾಣಬಹುದು. ಇದನಾರಯ್ಯಾ ಬಲ್ಲರು :ಹಮ್ಮಳಿದ ಶರಣರ ಮೇಲೆ ? ಇಹಪರವ ಬಲ್ಲ ಶರಣ, ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ. ಒಡಲ ಬಿಟ್ಟ ಶರಣನಲ್ಲದೆ ಉಳಿದ ಪ್ರಾಣಘಾತಕ ಪಾತಕರಿವರೆತ್ತಲು, ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗಲ್ಲದೆ ?
--------------
ಅಕ್ಕಮಹಾದೇವಿ
-->