ಅಥವಾ

ಒಟ್ಟು 106 ಕಡೆಗಳಲ್ಲಿ , 43 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಭವಸಾಗರವೆಂಬ ಸಮುದ್ರದಲ್ಲಿ, ಸಾಕಾರವೆಂಬ ಹಡಗು, ಚೇತನವೆಂಬ ಅಶ್ವಕಟ್ಟಿ ಬರುತ್ತಿರಲಾಗಿ, ತ್ರಿವಿಧದ ಬಲುಗಿರಿಯ ಹೊಯಿದು, ಹಡಗೊಡೆಯಿತ್ತು. ಲಾಯದ ಅಶ್ವ ನೀರನೊಡಗೂಡಿತ್ತು. ಹಡಗಿನ ಸೆಟ್ಟಿ ಪರಪತಿಗಡಹಿಲ್ಲಾಯೆಂದು ಕುದುರೆಯನೊಡಗೂಡಿದ. ಅರ್ಕೇಶ್ವರಲಿಂಗವ ಕೇಳುವ ಬನ್ನಿ.
--------------
ಮಧುವಯ್ಯ
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು, ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು, ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ. ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ? ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ? ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ? ಅಂತರಂಗ ಬಹಿರಂಗ ಆತ್ಮಸಂಗ_ಈ ತ್ರಿವಿಧದ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ಗುರುಸ್ಥಲವೆಂದು ಬಂದೆ, ಆಚಾರ್ಯನಾಗಿ. ಲಿಂಗಸ್ಥಲವೆಂದು ಬಂದೆ, ಆರೋಹ ಅವರೋಹಂಗಳ ಪರಿಹರಿಸಿಹೆನೆಂದು. ಶರಣನಾಗಿ ಬಂದೆ, ಭಕ್ತಿಜ್ಞಾನ ವೈರಾಗ್ಯ ತ್ರಿವಿಧದ ಗೊತ್ತ ಮುಕ್ತಿಯ ಮಾಡಿಹೆನೆಂದು. ದುತ್ತೂರಕ್ಕೆ, ಕಲ್ಪತರುವಿಂಗೆ ಮತ್ತಾವ ವೃಕ್ಷಫಲಾದಿಗಳಿಗೆ ಅಪ್ಪುವೊಂದು, ಹಲವು ವೃಕ್ಷಂಗಳು ತಮ್ಮ ತಮ್ಮ ಸಶ್ಚಿತ್ತದ ಸವಿಯಾದಂತೆ, ನಾನಾ ಸ್ಥಲಕ್ಕೆ ದೇವನೊಬ್ಬನೆ. ಊರೊಳಗಾದಲ್ಲಿ ಅರಸು ಆಳಿನೊಳಗಾದಂತೆ ಆದೆಯಲ್ಲಾ. ಕ್ರೀಗೆ ತುತ್ತಾಗಿ ಸಿಕ್ಕಿದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮನವಿಕಾರದಲ್ಲಿ ತೋರುವ ಸುಳುಹು ತನುವಿಕಾರದಲ್ಲಿ ಕಾಣಿಸಿಕೊಂಡ ಮತ್ತೆ ಅರಿವಿನ ಭೇದ ಎಲ್ಲಿ ಅಡಗಿತ್ತು ? ಅರಿದು ತೋರದ ಮತ್ತೆ ನೆರೆ ಮುಟ್ಟಬಲ್ಲುದೆ ತ್ರಿವಿಧದ ಗೊತ್ತ ? ಇಂತೀ ಭಗಧ್ಯಾನರನೊಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ, ಐದು ವರ್ಣದ ಸಂಚಿಗ ಇವರೊಳಗಾದ ನಾನಾ ವರ್ಣದ ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ, ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ, ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು, ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು, ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.
--------------
ವೀರ ಗೊಲ್ಲಾಳ/ಕಾಟಕೋಟ
ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
>ಲಿಂಗ ಲಿಂಗವೆಂದಲ್ಲಿಯೇ ತಪ್ಪಿತ್ತು, ಜಂಗಮ ಜಂಗಮವೆಂದಲ್ಲಿಯೇ ತಪ್ಪಿತ್ತು, ಪ್ರಸಾದ ಪ್ರಸಾದವೆಂದಲ್ಲಿಯೇ ತಪ್ಪಿತ್ತು. ಈ ತ್ರಿವಿಧದ ನಿಕ್ಷೇಪದ ಸಂಚವ ಬಲ್ಲರೆ ಈ ಲೋಕದಲ್ಲಿ ಇದ್ದರೇನು? ಆ ಲೋಕಕ್ಕೆ ಹೋದರೇನು ? ಆ ಲೋಕದಿಂದ ಈ ಲೋಕಕ್ಕೆ ಬಂದರೇನು ? ಹದಿನಾಲ್ಕು ಭುವನದೊಳಗಿದ್ದ ನಿಸ್ಸಾರಮಂ ಬಿಟ್ಟು ಲಿಂಗಸಾರಾಯ ಮೋಹಿಯಾಗಿ ಕೂಡಲಚೆನ್ನಸಂಗನಲ್ಲಿ ನಿರ್ಲೇಪನಾದ ಶರಣ.
--------------
ಚನ್ನಬಸವಣ್ಣ
ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು ಲಿಂಗಪ್ರಾಣಿಯಾದ, ಲಾಂಛನದ ಪೂರ್ವಾಶ್ರಯವ ಕಳೆಯಲೆಂದು ಜಂಗಮಪ್ರೇಮಿಯಾದ, ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಪ್ರಸಾದಿಯಾದ, [ಇಂತೀ] ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು ಮಹಾಗುರುವಾಗಿ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ.
--------------
ಚನ್ನಬಸವಣ್ಣ
ಪಿಪೀಲಿಕ ಮಧುರವ ಕಾಂಬಂತೆ, ಮರ್ಕಟ ಲಂಘನವ ಕಾಂಬಂತೆ, ವಿಹಂಗ ಆಕಾಶವನಡರುವಂತೆ, ತ್ರಿವಿಧದ ಭೇದ. ಜ್ಞಾನವನರಿತು, ಕಾಯಬಿಂದು, ಜೀವಬಿಂದು, ಜ್ಞಾನಬಿಂದು, ತ್ರಿವಿಧಬಿಂದುವಿನಲ್ಲಿ ನಿಂದು ಕಂಡು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ, ಸ್ವಯಂಭುವನರಿಯಬೇಕು.
--------------
ಶಿವಲೆಂಕ ಮಂಚಣ್ಣ
ಹವಣಿಲ್ಲದ ಶಾಖೆಯ ಕಪಿ ಕೈವಿಡಿಯಲೊಲ್ಲದು, ಗಮನವಿಲ್ಲದೆ ಪಿಕಶಿಶು ನುಡಿಯಲೊಲ್ಲದು, ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕುಟ. ಈ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪರೆಲ್ಲ. ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ? ಹಸಿವು ತೃಷೆ ನಿದ್ರೆ ಆಲಸ್ಯವುಳ್ಳನ್ನಕ್ಕರ ಅದ್ವೈತವುಂಟೆ ಜಗದೊಳಗೆ ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವೆಂಥದೋ ? ಸುಡು ಸುಡು ಅವರು ಗುರುದ್ರೋಹಿಗಳು, ಆಚಾರಭ್ರಷ್ಟರು. ಉಭಯ ತನುಗುಣನಾಸ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಯ್ಯನೆಂತೊಲಿವನು ?
--------------
ಚನ್ನಬಸವಣ್ಣ
ಕ್ರೀಗುಣ ಶುದ್ಧವಾದಲ್ಲಿ ಭಾವಗುಣ ಶುದ್ಧ. ಆ ಸದ್ಭಾವದ ದೆಸೆಯಿಂದ ವಿಮಲಜ್ಞಾನ. ಆ ಸುಜ್ಞಾನ ಸೂತ್ರವಾಗಿ ತ್ರಿವಿಧಭೇದವಾಯಿತ್ತು. ಆ ತ್ರಿವಿಧದ ಸೂತ್ರದಿಂದ ಷಡುಸ್ಥಲವಾಯಿತ್ತು. ಆ ಷಡುಸ್ಥಲದ ಭಾವಂಗಳೆ ಬ್ಥಿನ್ನಭಾವವಾಗಿ ನಾನಾ ಸ್ಥಲಭೇದ ವ್ರತವಾಯಿತ್ತು. ಆ ವ್ರತದ ಲಕ್ಷಣವನರಿತು ಆವಾವ ಕ್ರೀಯಲ್ಲಿ ಆವಾವ ಭಾವಶುದ್ಧವಾಗಿ, ಕೃತ್ಯಕ್ಕೆ ಕಟ್ಟಳೆಯಾಗಿ, ನೇಮಕ್ಕೆ ನಿಶ್ಚಯವಾಗಿ ವ್ರತದಾಳಿಯ ತಪ್ಪದಿಪ್ಪ ಭಕ್ತನಲ್ಲಿ ಏಲೇಶ್ವರಲಿಂಗವು ನಿಶ್ಚಯವಾಗಿಪ್ಪನು.
--------------
ಏಲೇಶ್ವರ ಕೇತಯ್ಯ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಆಸೆ ತ್ರಿವಿಧದ ಗೊತ್ತು, ನಿರಾಸೆ ಏಕಮಯನ ಗೊತ್ತು. ಅಲ್ಲ, ಅಹುದೆಂಬುದು ಬಲ್ಲವನ ಮತವಲ್ಲ. ಎಲ್ಲಿಯೂ ಸದ್ಗುಣ, ಎಲ್ಲರಲ್ಲಿ ನಿಜಭಾವ, ಪರಿಪೂರ್ಣ ತಾನಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ_ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್''_ ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''_ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->