ಅಥವಾ

ಒಟ್ಟು 74 ಕಡೆಗಳಲ್ಲಿ , 6 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮದ ಗುಣವನಳಿದು ಅಸಮಾಯಲಿಂಗದೊಳು ಕೂಡಿ ಸೀಮೆಯ ದಾಂಟಿ ನಿಸ್ಸೀಮನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದು ಕಂಬದ ಗುಡಿಯ ಶಿಖರದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತು ನೋಡಾ. ಆ ಲಿಂಗದ ಬೆಳಗಿನೊಳಗೆ ತನ್ನ ಮರೆದು ನಿಃಪ್ರಿಯನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸ್ಥೂಲವಾದರೇನಯ್ಯ ? ಆ ಸ್ಥೂಲಕ್ಕೆ ಕ್ರಿಯವ ನಟಿಸಬೇಕಯ್ಯ. ಸೂಕ್ಷ್ಮವಾದರೇನಯ್ಯ ? ಆ ಸೂಕ್ಷ್ಮಕ್ಕೆ ಮಂತ್ರವ ನಟಿಸಬೇಕಯ್ಯ. ಕಾರಣವಾದರೇನಯ್ಯ? ಆ ಕಾರಣಕ್ಕೆ ಸದಾಚಾರವ ನಟಿಸಬೇಕಯ್ಯ. ಮಹಾಕಾರಣವಾದರೇನಯ್ಯ? ಆ ಮಹಾಕಾರಣಕ್ಕೆ ಲಿಂಗಾಂಗಸಮರಸವÀ ನಟಿಸಬೇಕಯ್ಯ. ಪರಕಾರಣವಾದರೇನಯ್ಯ? ಆ ಪರಕಾರಣಕ್ಕೆ ನಿಃಶಬ್ದ ನಿರಾಳವ ನಟಿಸಬೇಕಯ್ಯ. ಜ್ಞಾನಕಾರಣವಾದರೇನಯ್ಯ? ಆ ಜ್ಞಾನಕಾರಣಕ್ಕೆ ಸ್ವಾನುಭವಸಿದ್ಭಾಂತವ ನಟಿಸಬೇಕಯ್ಯ. ಇಂತೀ ಷಡ್ವಿಧ ಅಂಗವನರಿತು ಆಚರಿಸಬಲ್ಲ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ನಿಲಿಸಬಲ್ಲ ಶರಣನ ಅಂತರಂಗದಲ್ಲಿ ಪರಬ್ರಹ್ಮಲಿಂಗವಿರ್ಪುದು ನೋಡಾ. ಆ ಲಿಂಗದಲ್ಲಿ ತನ್ನ ಮರೆದು ಇರಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಹುಟ್ಟಿ ಆಡುವ ಹಂಸನ ಕಂಡೆ ನೋಡಾ, ಅದಕೆ ತಲೆ ಒಂದು, ನಾಲಗೆ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು, ಐವತ್ತೆರಡು ಎಸಳಿನ ಮನೆಯಲ್ಲಿ ಸುಳಿದಾಡುತಿಪ್ಪುದು ನೋಡಾ. ಆ ಸುಳುವಿನ ಭೇದವನರಿವ ಶರಣರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಮಲಬ್ರಹ್ಮದಲ್ಲಿ ಸಕಲ ಬ್ರಹ್ಮಾಂಡಂಗಳು ಅಡಗಿಪ್ಪವಯ್ಯ. ಆ ಸಕಲ ಬ್ರಹ್ಮಾಂಡಕೆ ಒಂದೇ ಲಿಂಗ ನೋಡಾ! ಆ ಲಿಂಗವನು ಮಹಾಜ್ಞಾನದಿಂದ ತಿಳಿದು ಪರಿಣಾಮಿಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ! ಆ ಕಂಬದ ಮೇಲೊಂದು ಕೋಗಿಲೆ ಕುಳಿತು ಕೂಗುತಿದೆ ನೋಡಾ! ಆ ಕೋಗಿಲೆಯ ಹಿಡಿದು ನಿಶ್ಚೈಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಡುವ ಕರಣಂಗಳೇ ಮಕ್ಕಳು, ಬೇಡುವ ಮನವೇ ಭ್ರಾಂತಿ. ಕಾಡುವ ಕರಣಂಗಳಿಗೆ ಸಿಲ್ಕದೆ, ಬೇಡುವ ಭ್ರಾಂತಿಗೆ ಸಿಲ್ಕದೆ ತ್ರಿಕೂಟದಲ್ಲಿಪ್ಪ ಲಿಂಗವ ನೋಡಿ ಭ್ರಮಿಸುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಪ್ಪತ್ತೈದು ಗ್ರಾಮದ ಮೇಲೆ ಸುಳಿದಾಡುವ ಪುಷ್ಪದತ್ತನ ಕಂಡೆನಯ್ಯ. ಆ ಪುಷ್ಪದತ್ತನ ಕರಕಮಲದಲ್ಲಿ ಸಾವಿರೆಸಳ ಪುಷ್ಪವಿಪ್ಪುದು ನೋಡಾ. ಆ ಪುಷ್ಪದ ಪರಿಮಳವ ಅರುಹುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸರ್ವಾಂಗದೊಳಹೊರಗೆ ಪರಿಪೂರ್ಣವಾಗಿ ತುಂಬಿಕೊಂಡಿಪ್ಪ ಪರಬ್ರಹ್ಮಲಿಂಗವು. ಆ ಪರಬ್ರಹ್ಮಲಿಂಗದೊಳು ಕೂಡಿ ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಬಣ್ಣದ ಪಟ್ಟಣದೊಳಗೆ ಮೂರು ಬಣ್ಣದ ಕೊತ್ತಳವ ಕಂಡೆನಯ್ಯ. ಮೂರು ಬಣ್ಣದ ಕೊತ್ತಳದಿಂದತ್ತತ್ತ ಸಾವಿರಕಂಬದ ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಪರಮಾನಂದ ಲಿಂಗವು ತೊಳಗಿ ಬೆಳಗುತಿಪ್ಪುದು ನೋಡಾ. ಆ ಬೆಳಗಿನೊಳು ಕೂಡಿ ಪರಿಪೂರ್ಣವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನ್ನೊಳಗಿಪ್ಪ ಲಿಂಗದ ಭೇದವನು ಮಹಾಜ್ಞಾನದಿಂದ ತಿಳಿದು, ಹೃದಯದಲ್ಲಿಪ್ಪ ಅಂಜನವ ತೆಗೆದು, ನಿರಂಜನವೆಂಬ ಜ್ಯೋತಿಯ ಮುಟ್ಟಿಸಲು ಆ ಜ್ಯೋತಿಯ ಬೆಳಗಿನೊಳಗೆ ಸುಳಿದಾಡುವ ಸುಳುವನರಿತ ಮಹಾತ್ಮರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->