ಅಥವಾ

ಒಟ್ಟು 179 ಕಡೆಗಳಲ್ಲಿ , 47 ವಚನಕಾರರು , 167 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ, ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ, ಇಂತು ಶ್ರೀಗುರುವಾಕ್ಯವ ನಿಜನೈಷ್ಠಯಿಂದರಿದು, ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ ಸ್ವಪಾಕವಾದಡು ಸರಿಯೆ, ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ ಪದಾರ್ಥವಾದಡು ಸರಿಯೆ, ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ, ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ, ನಿರ್ವಂಚಕತ್ವದಿಂದ ಸಂಚಲಚಿತ್ತವನಳಿದು, ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು, ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ ದ್ವಿತೀಯ ಕೈಲಾಸ ಶಿವಮಂದಿರವೆಂದು ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು, ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ ಷಡ್ಗುಣೈಶ್ವರ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು, ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ದ್ಥೀರಪ್ರಸಾದ ವೀರಪ್ರಸಾದ ಆವೇಶಪ್ರಸಾದ. ಇಂತೀ ತ್ರಿವಿಧಪ್ರಸಾದವ ಕೊಂಬಲ್ಲಿ ಅಂಗವರತು ಇದಿರಿಂಗೆ ಭಯಭಂಗವಿಲ್ಲದೆ ಬೆಗಡು ಜಿಗುಪ್ಸೆ ಚಿಕಿತ್ಸೆ ತಲೆದೋರದೆ ಮಹಾಕುಂಭಘೃತಂಗಳ ಕೊಂಡಂತೆ. ಮಹಾಮೇರುವೆಯ ಅಲ್ಪಮೊರಡಿ ದ್ಥಿಕ್ಕರಿಸಿ ಅಲ್ಲಿಗೆ ಹೋದಡೆ ಅದರ ತಪ್ಪಲಲ್ಲಿಯೆ ತಾನಡಗಿದಂತೆ. ಈ ಗುಣ ದೃಷ್ಟಪ್ರಸಾದಿಯ ಕಟ್ಟಿನ ಭೇದ. ದಹನ ಚಂಡಿಕೇಶ್ವರಲಿಂಗವು ತಾನಾದ ಅಂಗದ ತೆರ.
--------------
ಪ್ರಸಾದಿ ಲೆಂಕಬಂಕಣ್ಣ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
`ನೀನು' `ನಾನು' ಎಂಬ ಉಭಯಸಂಗವಳಿದು ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು, ಬಟ್ಟಬಯಲು ಕಾಣಬಹುದು ನೋಡಾ ! ಆ ಬಯಲ ಬೆರಸುವಡೆ_ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ ! ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ ! ನಡೆ ಅಲ್ಲಿಗೆ ತಾಯೆ, ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ
--------------
ಅಲ್ಲಮಪ್ರಭುದೇವರು
ಓಂಕಾರವೆಂಬ ಉಲುಹಿನಲ್ಲಿ ಪ್ರಣವಸೋಹಂಕಾರವಿಡಿದು ಆಚರಿಸುತಿದ್ದನಯ್ಯ ಆ ಶರಣನು. ಆ ಶರಣಂಗೆ ಇಹಲೋಕವೆಂದಡೇನು? ಪರಲೋಕವೆಂದಡೇನು? ಇಹಪರವನೊಳಕೊಂಡು ತಾನು ತಾನಾದ ಭೇದವ ತಾನೇ ಬಲ್ಲನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ದ್ವೆ ೈತಿಯಲ್ಲ ಅದ್ವೆ ೈತಿಯಲ್ಲ ಕಾಣಿಭೋ ಶರಣ. ದ್ವೆ ೈತಾದ್ವೆ ೈತವೆಂಬ ಉಭಯ ಕಲ್ಪನೆಯನಳಿದುಳಿದ ವೀರಮಾಹೇಶ್ವರನು ಪರಶಿವನ ನಿರುತ ಸ್ವಯಾನಂದಸುಖಿ. ಪರಶಿವನ ಪರಮ ತೇಜದಾದಿ ಬೀಜ. ಪರಶಿವನ ಪರಮಜ್ಞಾನಪ್ರಕಾಶಮಯ ಪರಮಾನಂದದ, ನಿರುಪಮಲಿಂಗದ ಪ್ರಭಾಕಿರಣವೇ ತಾನಾದ ಶರಣನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
`ಓಂ' ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ. ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ. ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು, ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು, ಷಡಕ್ಷರಿಯ ಸ್ಮರಣೆಯಂಗೈದು ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ. ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ ಪಾತಕರ ಮುಖವ ನೋಡಲಾಗದು. ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು. ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ'' ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ ನಿಮ್ಮಾಣೆ ನಿಮ್ಮ ಪ್ರಮಥರಾಣೆ, ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಮಾಯೆಯೆಂದೇನೊ ಮದವಳಿದಂಗೆ ? ಕಾಯವೆಂದೇನೊ ಕಳವಳವಳಿದಂಗೆ ? ಜೀವವೆಂದೇನೊ ಪ್ರಕೃತಿಯಳಿದಂಗೆ ? ಭಾವವೆಂದೇನೊ ಭ್ರಮೆಯಳಿದಂಗೆ ? ಅರಿವೆಂದೇನೋ ಮರಹಳಿದಂಗೆ ? ತಾನೆಂದೇನೊ ಇದಿರಳಿದಂಗೆ ? ಸೌರಾಷ್ಟ್ರ ಸೋಮೇಶ್ವರಾ, ತಾನು ತಾನಾದ ಶರಣಂಗೆ ನೀನೆಂದೇನೊ.
--------------
ಆದಯ್ಯ
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು. ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು, ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು, ನಿಜದಂಗದ ಓಗರದ ಕುಂಭವ ಕಂಡು, ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಪಂಚತತ್ವಂಗಳುವಿಡಿದಾಡುವ ಚತುರ್ದಶೇಂದ್ರಿಯ ವಿಕಾರಂಗಳು ತಾನಲ್ಲ, ತನ್ನವಲ್ಲ. ತನುವುಂಟೆಂದಡೆ ಅಹಮ್ಮಾದಿಗೆ ಸಂದು, ಬಂಧಮೋಕ್ಷಂಗಳಿಗೊಳಗಾಯಿತ್ತು ನೋಡಾ. ಕುರುಹಿಲ್ಲದ ಲಿಂಗ ಅರಿವಿನೊಳು ಬಳಿಸಂದಡೆ ಅರಿವು ಕುರುಹು ತೆರಹಿಲ್ಲದೆ ನಿಂದ ನಿಲವು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜ ತಾನಾದ ಶರಣ.
--------------
ಆದಯ್ಯ
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ? ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ? ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ ಮನೋನಾಥನ ಅನುವ ವಿಚಾರಿಸಿ ಮನ ಮನನೀಯ ಭಾವ ಭಾವನೆ ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ. ಇಂತಿವನೆಲ್ಲವನೂ ತೆರದರಿಶನದಿಂದರಿದು ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.
--------------
ಬಾಲಸಂಗಣ್ಣ
ಭಿನ್ನವಳಿದು ತನ್ನನರಿದು ತಾನಾದ ಶರಣನು ಸಚರಾಚರವೆಲ್ಲ ತನ್ನ ನಿರ್ಮಿತವೆಂದು ಕಾಂಬುವನಲ್ಲದೆ ಬೇರೊಂದು ಕುರುಪಿಟ್ಟು ಹೇಳುವನಲ್ಲ ಕಾಣಾ. ಅಕಾಯಚರಿತ್ರನಾದ ಅನುಪಮಸುಖಿ ತನಗೊಮ್ಮೆ ಹಿರಿದುಕಿರಿದು ಉತ್ತಮ ಮಧ್ಯಮ ಕನಿಷ್ಠವೆಂಬವೇನು ಕಾಣದಿರ್ದವು ನೋಡಾ. ಈ ನಿಲವು ನಿಲುಕದ ಕುಲಾದಿ ಮದಯುಕ್ತರು ಶರಣಸ್ಥಲವ ತೋರಿ ನಡೆವರು. ಇವರೆತ್ತ ಹೋಗುವರು ಎತ್ತ ಬರುವರು ಹೇಳಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->