ಅಥವಾ

ಒಟ್ಟು 98 ಕಡೆಗಳಲ್ಲಿ , 35 ವಚನಕಾರರು , 90 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, `ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, `ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ `ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ ರಾಜಯೋಗ ಸಮರಸವಾದಲ್ಲಿ_ ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.
--------------
ಚನ್ನಬಸವಣ್ಣ
ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ, ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ. ಮನದ ವಿಕಾರದ ಮರವೆಯಲ್ಲಿ ಸಿಲ್ಕಿ, ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ. ಈ ತನುಮನದ ವಿಕಾರವ ಮಾಣಿಸಿ, ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿನ ಕ್ರಿಯಾಕಾರದಲ್ಲಿ ಒಡಲುಗೊಂಡಿಹವರು ಉಣ್ಣೆನೆಂದಡೆ ಅವರ ವಶವೆ? ತನುಗುಣ ನಾಸ್ತಿಯಾದವರು ಉಣ್ಣೆನೆಂದಡೆ ಸಲುವುದಲ್ಲದೆ ಕಾಮವಿಕಾರಕ್ಕೆ ಸಂದು, ತಾಮಸಕ್ಕೆ ಮೈಗೊಟ್ಟು ಇಪ್ಪವರೆಲ್ಲರೂ ಉಣ್ಣೆನೆಂದಡೆ ಹರಿವುದೆ? ನಿಜಗುರು ನಿಜಲಿಂಗ ನಿಜಜಂಗಮ ನಿತ್ಯಪ್ರಸಾದವ ಶ್ರೀಗುರು ಕರುಣದಿಂದ ಪಡೆದು ಅರಿದಾಚರಿಸಿದವರಿಗಲ್ಲದೆ ಭವವ ತಪ್ಪಿಸಬಾರದು ಕಾಣಾ ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಳಗರಿದ ಭಕ್ತನ ಒಳಗಾದ ಲಿಂಗವು ಒಳಗಾದ ಲಿಂಗದೊಳಗಾದ ಭಕ್ತನ ಹೊರಗಾದ ಲಿಂಗವ ಒಳಗೆ ತಂದಿರಿಸಿ ಆ ಭಕ್ತನ ತನುವಿನ ವಳೆಯವನಿನ್ನೇನ ಹೇಳುವೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಅಗಮ್ಯ ಗತಿಭಾವಿ, ಅನುಪಮ ಮತಿಯುಕ್ತ, ತನುಪ್ರಾಣಸಂಬಂದ್ಥಿ ತಾನಾದ ಶರಣಂಗೆ, ತನುವಿನ ತರಹರವ ತರಲಿಲ್ಲ, ಮನದ ಮಗ್ನತೆಯನರಿಯಲಿಲ್ಲ, ಪ್ರಾಣದ ಹೊಲೆಯ ಕಾಣಲಿಲ್ಲ. ಭಾವ ನಿರ್ಭಾವ ನಿರಾವಲಂಬಿ ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜನ್ಮದ ಭವಬಂಧನವ ತೊಡೆಯಬಲ್ಲಡೆ ಷಡಕ್ಷರವೇ ಬೀಜಮಂತ್ರ, ಕಾಲಕರ್ಮದ ದೆಸೆಯನೊರಸಬಲ್ಲಡೆ ಶಿವನ ತನುಧೂಳಿತಮಪ್ಪ ಶ್ರೀವಿಭೂತಿ, ಸಟೆ ಕುಹಕ ಪ್ರಪಂಚ ಗೆಲಬಲ್ಲಡೆ ಮಹಂತರ ಸಂಗ, ಶುಕ್ಲಶೋಣಿತದ ತನುವಿನ ಕಲ್ಮಷವ ತೊಡೆಯಬಲ್ಲಡೆ ಜಂಗಮದ ಪಾದೋದಕ ಪ್ರಸಾದ, ಮನ ಬುದ್ಧಿ ಚಿತ್ತ ಅಹಂಕಾರವ ಗೆಲುವಡೆ ಏಕೋಭಾವನಿಷ್ಠೆ. ಇವು ತಾನೆ ತನ್ನೊಳಗಾಗೆ ಬೇರಾವುದೂ ಘನವಿಲ್ಲ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನುವಿನ ಕೊನೆಯಲ್ಲಿ ನೇತ್ರದ ಅನುವ ಕಂಡೆನಯ್ಯಾ ಆ ನೇತ್ರದ ಕೊನೆಯಲ್ಲಿ ಮನದ ಸುಳುಹು ಕಂಡೆನಯ್ಯಾ. ಆ ಮನದ ಕೊನೆಯಲ್ಲಿ ಘನಮಹಾಶಿವನ ಕಂಡೆನಯ್ಯಾ. ಆ ಶಿವನೊಳಗೆ ಅನಂತಕೋಟಿಬ್ರಹ್ಮಾಂಡಗಳಡಗಿರ್ಪುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನು ಉಂಟೆಂಬ ಭಾವ ಮನದಲ್ಲಿಲ್ಲವಯ್ಯಾ; ಮನ ಉಂಟೆಂಬ ಭಾವ ಅರುಹಿನಲಿಲ್ಲವಯ್ಯಾ; ಅರುಹು ಉಂಟೆಂಬ ಭಾವ ನುಡಿಯೊಳಗಿಲ್ಲವಯ್ಯಾ. ಇಂತೀ ತನು ಮನ ಜಾÐನವೆಂಬ ತ್ರಿವಿಧವು ಏಕಾರ್ಥವಾದ ಬಳಿಕ, ಆವ ತನುವಿನ ಮೇಲೆ ಸ್ವಾಯತವ ಮಾಡುವೆ? ಎನ್ನ ಕಾಯವೆ ಬಸವಣ್ಣನು, ಎನ್ನ ಪ್ರಾಣಲಿಂಗವೆ ಪ್ರಭುದೇವರು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಒಳಗು ಹೊರಗೆಂಬುದಿಲ್ಲ ಕಾಣಾ, ಚೆನ್ನಬಸವಣ್ಣಾ.
--------------
ಸಿದ್ಧರಾಮೇಶ್ವರ
ಆಯತ ಸ್ವಾಯತ ಸನ್ನಹಿತವ ಅನಾಯತಗಳು ಮುಟ್ಟಲಮ್ಮವು ನೋಡಾ. ಕಂಗಳ ಕೈಗಳಲರ್ಪಿಸುವ, ಶ್ರೋತ್ರದ ಕೈಗಳಲರ್ಪಿಸುವ ನಾಸಿಕದ ಕೈಗಳಲರ್ಪಿಸುವ ಜಿಹ್ವೆಯ ಕೈಗಳಲರ್ಪಿಸುವ, ತನುವಿನ ಕೈಗಳಲರ್ಪಿಸುವ, ಮನದ ಕೈಗಳಲರ್ಪಿಸುವ, ಕೈಗಳ ಕೈಯಲರ್ಪಿಸುವ. ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿ ಲಿಂಗಾರ್ಪಿತವ ಮಾಡುವನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಆತ ಮಹಾಪ್ರಸಾದಿ.
--------------
ಚನ್ನಬಸವಣ್ಣ
ತನುವಿನ ಕೈಯಲ್ಲಿರ್ದ ಘನಲಿಂಗವನು ಮನೋಮಂಟಪದಲ್ಲಿ ಕುಳ್ಳಿರಿಸಿ ನೆನಹಿನ ಪರಿಣಾಮವ ಕೊಡಬಲ್ಲಾತನೆ ಶರಣನು. ಮತ್ತಾ ಲಿಂಗವನು ಕರ್ಣಮಂಟಪದಲ್ಲಿ ಕುಳ್ಳಿರಿಸಿ ಶಬ್ದ ಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಘ್ರಾಣಮಂಟಪದಲ್ಲಿ ಕುಳ್ಳಿರಿಸಿ ಗಂಧಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಜಿಹ್ವಾಮಂಟಪದಲ್ಲಿ ಕುಳ್ಳಿರಿಸಿ ರುಚಿಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಸರ್ವಾಂಗಮಂಟಪದಲ್ಲಿ ಕುಳ್ಳಿರಿಸಿ ಸರ್ವಪರಿಣಾಮವನು ಕೊಡಬಲ್ಲಾತನೆ ಶರಣನು. ಅಲ್ಲದೆ ಉಳಿದ ಅಂಗವಿಕಾರ ಆತ್ಮಸುಖಿಗಳೆಲ್ಲ ಭವದ ಕುರಿಗಳಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದಂತೆ ಲಿಂಗವಾಗಿರ್ದ ದೇಹ, ಲಿಂಗದಂತೆ ಅಂಗವಾಗಿರ್ದ ದೇಹ, ಈ ಕಾಯದ್ವಯಂಗಳಿಗೆ ಅಂಗಕಳಾ ಲಿಂಗಕಳಾ ಪ್ರಭಾವ ಒಂದಾಗಿ, ತನುವಿನ ಕೈಮುಟ್ಟಿ ಪ್ರಾಣಲಿಂಗ ಜಂಗಮದಾಸೋಹ ಮಾಡುತ್ತಿರಲು, ಆ ಜಂಗಮದ ಸ್ಥೂಲಪ್ರಾಸಾದವೆ ಬಸವಣ್ಣನ ಸಾಕಾರ. ಅಂತಪ್ಪ ಸಾಕಾರವನರಿವುತ್ತಿದ್ದರಿವು ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾಗಿ ನೆನೆವುತ್ತ ನೆನೆವುತ್ತ ನೆನೆಯದಂತಿರ್ದೆನಯ್ಯಾ
--------------
ಆದಯ್ಯ
ಆಚಾರವಿಡಿದು ಲಿಂಗ, ಅನುಭಾವಿಡಿದು ಜಂಗಮ. ತನುವಿನ ಪ್ರಾಣ ಆಚಾರ, ಮನದ ಪ್ರಾಣ ಅನುಭಾವ. ಇದು ಕಾರಣ ಕೂಡಲಚೆನ್ನಸಂಗಮದೇವಾ, ಲಿಂಗವನೂ ಜಂಗಮವನೂ ಬೇರರಸಲಿಲ್ಲ.
--------------
ಚನ್ನಬಸವಣ್ಣ
ರೂಹಿಲ್ಲದಂಗೆ ಒಲಿದವರಿಗೆ ತನುವಿನ ಹಂಗುಂಟೆ ! ಮನವಿಲ್ಲದವಂಗೆ ಮಚ್ಚಿದವರಿಗೆ ಅಬ್ಥಿಮಾನದ ಹಂಗುಂಟೆ ! ದಿಗಂಬರಂಗೆ ಒಲಿದವರಿಗೆ ಕೌಪೀನದ ಹಂಗುಂಟೆ ! ಕೂಡಲಸಂಗಮದೇವಯ್ಯಾ, ಮಹಾದೇವಿಯಕ್ಕನೆಂಬ ಭಕ್ತೆಗೆ, ಅವ ಹೊರೆಯೂ ಇಲ್ಲ ನೋಡಾ, ಪ್ರಭುವೆ.
--------------
ಬಸವಣ್ಣ
ಗುರುವಿಂಗೆ ತನುವನರ್ಪಿಸಿದಲ್ಲದೆ ತನುವಿನ ವಾಸನೆ ಹರಿಯದು. ಲಿಂಗಕ್ಕೆ ಮನವನರ್ಪಿಸಿದಲ್ಲದೆ ಮನದ ವಾಸನೆ ಹರಿಯದು. ಜಂಗಮಕ್ಕೆ ಧನವನರ್ಪಿಸಿದಲ್ಲದೆ ಧನದ ವಾಸನೆ ಹರಿಯದು. ಇದು ಕಾರಣ ತ್ರಿವಿಧಕ್ಕೆ ತ್ರಿವಿಧವನರ್ಪಿಸಿ ತ್ರಿವಿಧ ವಾಸನೆಯ ಹರಿದು, ತ್ರಿವಿಧವು ಒಂದಾದ ಘನವನೊಡಗೂಡಬಲ್ಲಡೆ ಸದ್ಭಕ್ತನೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->