ಅಥವಾ

ಒಟ್ಟು 167 ಕಡೆಗಳಲ್ಲಿ , 40 ವಚನಕಾರರು , 157 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ ? ಆಚಾರವಟ್ಟದ ಹೊನ್ನೆ ? ಮೊತ್ತದ ಮಡಕೆಯೆ ? ಸಂತೆಯ ಬೆವಹಾರವೆ ? ಜೂಜಿನ ಮಾತೆ ? ವೇಶ್ಯೆಯ ಸತ್ಯವೆ ? ಪೂಸರ ವಾಚವೆ ? ಇಂತೀ ವ್ರತದ ನಿಹಿತವ ತಿಳಿದಲ್ಲಿ, ಇಷ್ಟಬಾಹ್ಯನ ವ್ರತಭ್ರಷ್ಟನ ಸರ್ವಪ್ರಮಥರಲ್ಲಿ ಅಲ್ಲಾ ಎಂದವನ ನಾನರಿತು ಕೂಡಿದೆನಾದಡೆ, ಅರಿಯದೆ ಕೂಡಿ ಮತ್ತರಿದಡೆ, ಆ ತನುವ ಬಿಡದಿರ್ದಡೆ ಎನಗದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಪ್ಪಿದಡೆ ಹೊರಗೆಂದು ಮತ್ತೆ ಕೂಡಿಕೊಳ್ಳೆ.
--------------
ಅಕ್ಕಮ್ಮ
ಗುರುವಾಗಿ ಬಂದು ತನುವ ಕೊರೆದಡೂ ಕೇಳೆ, ಲಿಂಗವಾಗಿ ಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದಡೂ ಕೇಳೆ, ಜಂಗಮವಾಗಿ ಬಂದು ಬಯಲ ಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ. ಅದೆಂತೆಂದಡೆ ; ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ, ಕುಟಿಲದ ದೇವರುಂಟೆ ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ, ಮೂರು ಕಿಸುಕುಳಕಾಗಿ ಘಟವ ಹೊರೆದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಕಾಯ ಲಿಂಗದರುಶನವನರಿದಲ್ಲಿ, ಮನವನರಿದು ತನುವೊಪ್ಪುವಂತೆ, ತನು ಸೋಂಕಿದ ಸುಖವ, ಆತ್ಮನರಿದು ಅರ್ಪಿಸುವಂತೆ, ಜಾಹೆಯಲ್ಲಿ ಮರೆದೊರಗಿರಲಾಗಿ, ತನುವ ತಟ್ಟಿದಡೆ, ಆತ್ಮನೆಚ್ಚರುವಂತೆ ಇಪ್ಪುದು, ಇಷ್ಟಪ್ರಾಣಸಂಬಂಧಯೋಗ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ಘನದ ವೇದಿಸಿದ ಮನ, ಮನವ ವೇದಿಸಿದ ಇಂದ್ರಿಯಂಗಳು, ಇಂದ್ರಿಯಂಗಳ ವೇದಿಸಿದ ತನು, ತನುವ ವೇದಿಸಿದ ಪ್ರಸಾದ, ಪ್ರಸಾದವ ವೇದಿಸಿದ ಪರಿಣಾಮ, ಪರಿಣಾಮವ ವೇದಿಸಿದ ತೃಪ್ತಿ, ತೃಪ್ತಿಯ ವೇದಿಸಿದ ಇಷ್ಟಲಿಂಗ, ಇಷ್ಟಲಿಂಗವ ವೇದಿಸಿದ ಜ್ಞಾನ, ಜ್ಞಾನವ ವೇದಿಸಿದ ನಿರ್ಮಲ ಶಿವಕ್ರಿಯೆ, ನಿರ್ಮಲ ಶಿವಕ್ರಿಯೆ[ಯ] ವೇದಿಸಿದ ಶರಣಂಗೆ ಇನ್ನು ವೇದ್ಯರುಂಟೆ, ಮಹಾಲಿಂಗ ಕಲ್ಲೇಶ್ವರಾ ?
--------------
ಹಾವಿನಹಾಳ ಕಲ್ಲಯ್ಯ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ; ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ; ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ; ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ; ಎನಗಾದ್ಥಿಕ್ಯವಪ್ಪ ವಸ್ತು ಬೇರೊಂದಿಲ್ಲ. ಅದೇನುಕಾರಣ? ಅವ ನಾನಾದೆನಾಗಿ. ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದಿಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆನಾಗಿ. ಅದೇನು ಕಾರಣ? ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗ ಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರೆಲ್ಲರನು ತೋರಿದೆ ಗುರುವೆ.
--------------
ಸಿದ್ಧರಾಮೇಶ್ವರ
ಗುರುವೆನ್ನ ತನುವ ಬೆರಸಿದ ಕಾರಣ, ಗುರುವಿನ ತನುವ ನಾ ಬೆರಸಿದ ಕಾರಣ, ಗುರು ಶುದ್ಧನಾದನಯ್ಯಾ. ಲಿಂಗವೆನ್ನ ಮನವ ಬೆರಸಿದ ಕಾರಣ, ಲಿಂಗದ ಮನವ ನಾ ಬೆರಸಿದ ಕಾರಣ, ಲಿಂಗ ಶುದ್ಧವಾದನಯ್ಯಾ. ಜಂಗಮವೆನ್ನ ಜಿಹ್ವೆಯ ಬೆರಸಿದ ಕಾರಣ, ಜಂಗಮದ ಜಿಹ್ವೆಯ ನಾ ಬೆರಸಿದ ಕಾರಣ ಜಂಗಮ ಶುದ್ಧನಾದನಯ್ಯಾ ಈ ಮೂವರು ತಮ್ಮಿಂದ ತಾವಾಗಲರಿಯದೆ ಎನ್ನ ಮುಟ್ಟಿ ಶುದ್ಧವಾದರು ಕಾಣಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶೀಲವಂತರು, ಶೀಲವಂತರು ಎಂದೇನೊ ? ಶೀಲವಂತಿಕೆಯನಾರು ಬಲ್ಲರು? ಶೀಲವಾದರೆ ಶಿವನೊಳು ಬೆರೆವುದೇ ಶೀಲ. ಶೀಲವಾದರೆ ಗುರುಲಿಂಗಜಂಗಮವ ತನ್ನೊಳಗರಿವುದೇ ಶೀಲ. ಅದಕ್ಕೆ ಮೀರಿದ ಶೀಲವಾದರೆ, ಹಸಿವು ತೃಷೆ ನಿದ್ರೆ ವಿಷಯವ ಕೆಡಿಸುವುದೇ ಶೀಲ. ಅದಕ್ಕೆ ತುರಿಯಾತೀತ ಶೀಲವಾದರೆ, ಬಾಲನಾಗಿ ತನ್ನ ಲೀಲಾವಿನೋದವ ಭೂಮಿಯ ಮೇಲೆ ನಟಿಸುವುದೇ ಶೀಲ. ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ, ತನ್ನ ತನಗೆ ಕಾಯಕೃತ್ಯವಲ್ಲದೆ, ಇದನರಿದು ಮೋಹ ಘನವನೆ ಮರೆದು, ಮನವನೆ ಬಳಲಿಸಿ, ಘನವ ಮಾಡಿ, ತನುವ ಹೊರೆದೆನೆಂಬ ಬಿನುಗರ ನುಡಿಯ ಮೆಚ್ಚುವನೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಉರೆ ತಾಗಿದ ಮೃಗವು ಒಂದಡಿಯನಿಡುವುದೆ ತನುವ ತಾಗಿದ ಸುಖವು ಅಗಲುವುದೆ ಕೂಡಲಸಂಗನ ಶರಣರ ಅನುಭಾವವರಿದವರ ಮರಳಿ ಮತ್ರ್ಯರೆಂದೆನಬಹುದೆ
--------------
ಬಸವಣ್ಣ
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ. ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂ[ಗ]ಗೊಳಿಸಿದವನೆಂಬೆ. ತನುವ ಮರೆದು, [ಆ ತ]ನುವ ಕಂಡಡೆ, ಆತನ ಅರಿದವನೆಂಬೆನಯ್ಯಾ. ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವ ಮರೆಯಬೇಕೆಂದು ಗುರುವ ತೋರಿ, ಮನವ ಮರೆಯಬೇಕೆಂದು ಲಿಂಗವ ತೋರಿ, ಧನವ ಮರೆಯಬೇಕೆಂದು ಜಂಗಮವ ತೋರಿ, ಲೇಸ ಮರೆದು ಕಷ್ಟಕ್ಕೆ ಕಡಿದಾಡುವ ಭಾಷೆಹೀನರ ಕಂಡು ನಾಚಿಕೆಯಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ವೇಷವ ಧರಿಸಿ, ಭಾಷೆಯ ಕಲಿತು, ದೇಶವ ಸುತ್ತಿ ಬಳಲಬೇಡ. ಜಗದೀಶನ ಪಾದವನೊಲಿದು ಪೂಜಿಸಿರಣ್ಣಾ. ಸವಿಯೂಟದಾಸೆಗೆ ಮನವೆಳಸಬೇಡ. ಪರಮೇಶನ ಪಾದವ ನೆನೆದು ಸುಖಿಸಿರಣ್ಣಾ. ತರ್ಕಶಾಸ್ತ್ರ ಆಗಮ ಮಾಯಾಜಾಲದ ಹರಟೆಗೆ ಹೊಗದೆ, ಮೂಲಮಂತ್ರ[ವ] ಮರೆಯದೆ ಸ್ಮರಿಸಿರಣ್ಣಾ. ಸಂಸಾರಿಗಳ ಸಂಗದೊಳಗೆ ಇರಬೇಡ. ಸದ್ಭಾವರ ಸಂಗದೊಳಗಿರ್ದು ನಿತ್ಯವ ಸಾದ್ಥಿಸಿಕೊಳ್ಳಿರಣ್ಣಾ. ಪರರ ಯಾಚಿಸಿ ತನುವ ಹೊರೆಯಬೇಡ. ಶಿವನಿಕ್ಕಿದ ಬ್ಥಿಕ್ಷೆಯೊಳಗಿದ್ದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ ನಿಮ್ಮ ಶರಣಂಗೆ. ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ ಘನಮಹಿಮ, ನಿಮ್ಮ ಪಾದದಾಣೆ. ಮನ ವಚನ ಕಾಯದಲ್ಲಿ ನೀವಲ್ಲದೆ ಮತ್ತೊಂದನರಿದಡೆ ಕೂಡಲಸಂಗಮದೇವಾ, ಭವ ಘೋರದಲ್ಲಿಕ್ಕಯ್ಯಾ.
--------------
ಬಸವಣ್ಣ
ಗುರುಪ್ರೇಮಿಯಾದಡೆ ಚತುರ್ವಿಧಭಕ್ತಿಯಿಂದ ತನುವ ದಂಡಿಸಲಾಗದು. ಲಿಂಗಪ್ರೇಮಿಗಳಾದಡೆ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಮನವ ಬಳಲಿಸಲಾಗದು. ಜಂಗಮಪ್ರೇಮಿಗಳಾದಡೆ ಅನ್ನ ವಸ್ತ್ರ ಹದಿನೆಂಟು ಜೀನಸಿನ ಧಾನ್ಯ ಮೊದಲಾದ ಷೋಡಶಭಕ್ತಿಯಿಂದ ಆತ್ಮನ ಬಳಲಿಸಲಾಗದು. ಇಂತಪ್ಪ ಭಕ್ತರಿಗೆ ಭವ ಹಿಂಗದು ; ಮುಕ್ತಿಯು ತೋರದು. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದು ಕರ್ಮಕಾಂಡಿಗಳಾದ ಕಾರಣ. ಇಂತಪ್ಪವರ ಬ್ಥಿನ್ನಕ್ರಿಯಾಚಾರವನು ಸುಜ್ಞಾನೋದಯವಾದ ಜ್ಞಾನಕಲಾತ್ಮನು ತನ್ನ ಪರಮಜ್ಞಾನದಿಂ ನಷ್ಟವ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಂಬಂದ್ಥಿಯಾಗಿ, ಸರ್ವಾಂಗಲಿಂಗಮಯ ತಾನೆಂದು ತಿಳಿದು, ವಿಚಾರಿಸಿಕೊಂಡು ಪರಶಿವಪರಮೂರ್ತಿಗಳಾದ ಗುರುಲಿಂಗಜಂಗಮವನ್ನು ತನ್ನ ತನುಮನದಲ್ಲಿ ಸ್ವಾಯತವಮಾಡಿದ ಶಿವಶರಣಂಗೆ ಭವ ಹಿಂಗಿ, ಮುಕ್ತಿ ಎಂಬುದು ಕರತಳಾಮಳಕವಾಗಿ ತೋರುವದು ಕಾಣೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->