ಅಥವಾ

ಒಟ್ಟು 537 ಕಡೆಗಳಲ್ಲಿ , 76 ವಚನಕಾರರು , 469 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ ಮುಟ್ಟದ ಮಜ್ಜನ ತನು ತಾಗದ ದೇಹಾರ, ಭಾವ ತಾಗದ ಪೂಜೆ, ಎದೆ ತಾಗದ ನೋಟ ವಾಯು ತಾಗದ ನಲಿಂಗದ¥sgಠ್ಞವ ತೋರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಗ್ಘವಣಿ ಸುಯಿದಾನವಾದ ಶರಣಂಗೆ, ತನು ಸುಯಿದಾನವಾಗಬೇಕು. ತನು ಸುಯಿದಾನವಾದ ಶರಣಂಗೆ ಮನ ಸುಯಿದಾನವಾಗಬೇಕು. ಮನ ಸುಯಿದಾನವಾದ ಶರಣಂಗೆ ಪ್ರಾಣದ ಮೇಲೆ ಲಿಂಗ ಸಯವಾಗಬೇಕು. ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ
--------------
ಚನ್ನಬಸವಣ್ಣ
ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಲಿಂಗಪ್ರಸಾದಿಗಳೆಂಬರು ಬಲ್ಲರೆ ನೀವು ಹೇಳರೋ! ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ಸದ್ಭಕ್ತರು ತಮ್ಮ ಲಿಂಗಕ್ಕೆ ಗುರುಮಂತ್ರೋಪದೇಶದಿಂದ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಕಲ ಪದಾರ್ಥವೆಲ್ಲವ ಪ್ರಮಾಣಿನಲ್ಲಿ ಭರಿತವಾಗಿ ಗಡಣಿಸಿ, ತನು ಕರಗಿ ಮನ ಕರಗಿ ನಿರ್ವಾಹ ನಿಷ್ಪತ್ತಿಯಲಿ ಗಟ್ಟಿಗೊಂಡು ತಟ್ಟುವ ಮುಟ್ಟುವ ಭೇದದಲ್ಲಿಯೇ ಚಿತ್ತವಾಗಿ ಲಿಂಗಾರ್ಪಿತವ ಮಾಡೂದು ಆ ಪ್ರಸಾದವ ತನ್ನ ಪಂಚೇಂದ್ರಿಯ ಸಪ್ತಧಾತು ತೃಪ್ತವಾಗಿ ಭೋಗಿಸೂದು. ಲಿಂಗಪ್ರಸಾದ ಗ್ರಾಹಕನ ಪರಿಯಿದು, ಕೊಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಿಕಾರಿ ಭಿಕಾರಕ್ಕೆಳಸ. ಉಣ್ಣಲು ಉಡಲು ಕಾಣದಾತ ಭಿಕಾರಿ. ತನು ಮೀಸಲು, ಮನ ಮೀಸಲು, ಬಾಯಿ ಬೋರು ಬೋರು. ಮರಣವಳಿದುಳಿದಾತ ಭಿಕಾರಿ. ಸಂಚಲದ ಪಂಚಕರಣಗಳ ತೆಗೆದುಂಡು, ರುಂಡಮಾಲೆಯ ರಣಮಾಲೆಯ ಹೆಣಮಾಲೆಯ ಚಾರುಚ್ಚಿದಲ್ಲದೆ ಭಿಕಾರಿ ಭೀಮೇಶ್ವರಲಿಂಗಕ್ಕೆ ದೂರ ಕಾಣಾ, ಕರುತಿರುವ ಗೊರವಾ
--------------
ಭಿಕಾರಿ ಭೀಮಯ್ಯ
ಹುಟ್ಟಿತ್ತಲ್ಲಾ ಉಂಟೆನಿಸಿತ್ತಲ್ಲಾ. ಕರುವಿಟ್ಟಿತ್ತಲ್ಲಾ ರೂಪಾಯಿತ್ತಲ್ಲಾ. ನೋಡ ನೋಡ ವಾಯುಗುಂದಿತ್ತಲ್ಲಾ. ನೋಡ ನೋಡ ಭಾವಗುಂದಿತ್ತಲ್ಲಾ. ಅರಿವು ವಿಕಾರದಲ್ಲಿ ಆಯಿತ್ತು, ಹೋಯಿತ್ತು, ಮಹಾಲಿಂಗ ತ್ರಿಪುರಾಂತಕಾ, ನಿಮಗೆರಗದ ತನು.
--------------
ಕಿನ್ನರಿ ಬ್ರಹ್ಮಯ್ಯ
ತನು ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಮನ ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಕಿವಿಗಳು ಕೇಳಿದ ಪದಾರ್ಥ ಲಿಂಗಾರ್ಪಿತವಲ್ಲ, ಕಂUಳು ನೋಡಿದ ಪದಾರ್ಥ ಲಿಂಗಾರ್ಪಿತವಲ್ಲ, ಘ್ರಾಣ ಸೋಂಕಿದ ಪದಾರ್ಥ ಲಿಂಗಾರ್ಪಿತವಲ್ಲ, ಜಿಹ್ವೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ. ಅಹುದೆಂಬುದ ನಡೆಯ (ನುಡಿಯ?), ಅಲ್ಲೆಂಬುದ ನುಡಿಯ, ಬೇಕು ಬೇಡೆಂಬುದಿಲ್ಲ, ಸಾವಯವೆಂಬುದಿಲ್ಲ. ನಿರವಯದಲ್ಲಿ ಸಕಲಭೋಗಂಗಳ ಭೋಗಿಸುವನು,
--------------
ಚನ್ನಬಸವಣ್ಣ
ಉದಯಕ್ಕೆ ತನುವೆಂಬ ಹಸ್ತದಲ್ಲಿ ಇಷ್ಟಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಮಧ್ಯಾಹ್ನಕ್ಕೆ ಮನವೆಂಬ ಹಸ್ತದಲ್ಲಿ ಪ್ರಾಣಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ಅಸ್ತಮಾನಕ್ಕೆ ಧನವೆಂಬ ಹಸ್ತದಲ್ಲಿ ಭಾವಲಿಂಗವ ಮೂರ್ತಿಗೊಳಿಸಿ ಪೂಜಿಸಬಲ್ಲರೆ ಶರಣನೆಂಬೆ. ತನು ಮುಟ್ಟದ ಮುನ್ನ, ಮನ ಮುಟ್ಟದ ಮುನ್ನ, ಭಾವ ಮುಟ್ಟದ ಮುನ್ನ, ಲಿಂಗಕ್ಕೆ ದ್ರವ್ಯವ ಸಲಿಸಬಲ್ಲರೆ ಶರಣನೆಂಬೆ. ಕಾಲು ತಾಗದ ಮುನ್ನ, ಕೈ ಮುಟ್ಟದ ಮುನ್ನ ಉದಕವ ತಂದು ಲಿಂಗಕ್ಕೆ ಮಜ್ಜನವ ನೀಡಬಲ್ಲರೆ ಶರಣನೆಂಬೆ. ಹೂವು ನೋಡದ ಮುನ್ನ, ಹಸ್ತದಿಂದ ಮುಟ್ಟದ ಮುನ್ನ, ಹೂವಕೊಯಿದು ಧರಿಸಬಲ್ಲರೆ ಶರಣನೆಂಬೆ. ಈ ಭೇದವ ತಿಳಿಯಬಲ್ಲರೆ ಶಿವಜ್ಞಾನಿಶರಣ ಲಿಂಗಾಂಗಸಂಬಂದ್ಥಿ. ಇಂತೀ ನಿರ್ಣಯವ ತಿಳಿಯದೆ ಶರಣಸತಿ ಲಿಂಗಪತಿ ಎಂಬಾತನ ಲಿಂಗ ಪ್ರೇತಲಿಂಗ, ಅವ ಭೂತಪ್ರಾಣಿ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಐದುಮುಖದಂಗನೆಗೆ ತನು ಮೂರು, ತದಂಗವೆರಡು, ಜೀವವೊಂದು, ಗುಣ ಇಪ್ಪತ್ತೈದು. [ವಂಶದ]ವರು ಇಪ್ಪತ್ತೈದುಮಂದಿಯ ಕೈವಿಡಿದು ಅಷ್ಟದಿಕ್ಕು ನವಖಂಡ ಜಂಬೂದ್ವೀಪವ ಮೇಲುಹೊದಿಕೆಯ ಮಾಡಿ, ಹೊದ್ದುಕೊಂಡು, ದೃಷ್ಟಜಗಕ್ಕೆ ಬಂದು ಕಷ್ಟಬಡುತಿದ್ದ ಭೇದವ ನೀನೆ ಬಲ್ಲೆ, ಉಳಿದರಿಗಸಾಧ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೊಸ ಮದುವೆ ಹಸೆಯುಡುಗದ ಮುನ್ನ, ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ! ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ! ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ! ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ! ಆಶೆಯಿಲ್ಲದಿರ್ದಡೆ ಶರಣನೆಂಬೆ! ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ! ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ! ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು. ಬೈದಡರಿಯದು; ಹೊಯ್ದಡರಿಯದು. ನಿಂದಿಸಿದಡರಿಯದು; ಸ್ತುತಿಸಿದಡರಿಯದು. ಸುಖವನರಿಯದು; ದುಃಖವನರಿಯದು. ಇಂತಿವರ ತಾಗು ನಿರೋಧವನರಿಯದಿರ್ದಡೆ ಅವರ ಮಹಾಲಿಂಗ ಗಜೇಶ್ವರನೆಂಬೆ.
--------------
ಗಜೇಶ ಮಸಣಯ್ಯ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶುದ್ಧಪ್ರಸಾದಿಯಾದಡೆ ತನು ಸತ್ಕ್ರಿಯಾ ಸನ್ನಿಹಿತನಾಗಿ, ಅಣುಮಾತ್ರ ದ್ವೈತಿಯಾಗದೆ ಚರಿಸಬೇಕು. ಸಿದ್ಧಪ್ರಸಾದಿಯಾದಡೆ ಮನ ಜ್ಞಾನಸನ್ನಿಹಿತನಾಗಿ, ಕಿಂಚಿತ್ತು ಮಲವಿಷಯಕ್ಕೆ ಜಿನುಗದೆ ಚರಿಸಬೇಕು. ಪ್ರಸಿದ್ಧಪ್ರಸಾದಿಯಾದಡೆ ಭಾವ ಮಹಾನುಭಾವಸನ್ನಿಹಿತನಾಗಿ, ಒಂದಿನಿತು ಭ್ರಾಂತನಾಗದೆ ಚರಿಸಬೇಕು. ಈ ಭೇದವನರಿಯದೆ ಅವರವರಂತೆ, ಇವರಿವರಂತೆ, ತಾನು ತನ್ನಂತೆ ನಡೆನುಡಿ ಕೊಡುಕೊಳ್ಳಿಯುಳ್ಳರೆ ಕಡೆ ಮೊದಲಿಲ್ಲದೆ ನರಕವನೈಯ್ದುವ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ, ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ, ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ, ಇಂತೀ ತ್ರಿವಿಧವು ನಿಮ್ಮದೆಂದರಿದ ಬಳಿಕ ಎನಗೆ ಬೇರೆ ವಿಚಾರವುಂಟೆ, ಕೂಡಲಸಂಗಮದೇವಾ
--------------
ಬಸವಣ್ಣ
ಬಾರನೇತಕವ್ವಾ ನಮ್ಮನೆಯಾತ ? ತೋರನೇತಕವ್ವಾ ತನ್ನ ದಿವ್ಯರೂಪವ ? ಬೀರನೇತಕವ್ವಾ ಅತಿಸ್ನೇಹವ ? ಇನ್ನೆಂತು ಸೈರಿಸುವೆನವ್ವಾ. ಹೇಗೆ ತಾಳುವೆನವ್ವಾ. ತನು ತಾಪಗೊಳ್ಳುತ್ತಿದೆ, ಮನ ತಲ್ಲಣವಾಗುತ್ತಿದೆ. ಅಖಂಡೇಶ್ವರನೆಂಬ ನಲ್ಲನ ತೋರಿಸಿ ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->