ಹಲವು ಕರಣಂಗಳೆಂಬ ಹಲವು ಬಣ್ಣದ ಚಿನ್ನವ
ಗುರುಮುಖಾಗ್ನಿಯಿಂದ ಒಮ್ಮುಖಕ್ಕೆ ತಂದು
ಜ್ಞಾನಾಗ್ನಿಯಿಂ ಪುಟವಿಟ್ಟು, ಕಾಲಕರ್ಮವೆಂಬ ಕಾಳಿಕೆಯಂ ಕಳೆದು,
ವೃತ್ತಿ ಬಗೆಗಳೆಂಬ ಅವಲೋಹವಂ ಬಿಟ್ಟು,
ಅಹಂಕಾರ ಮಮಕಾರಂಗಳೆಂಬ ತೂಕಗುಂದಿ
ಅರಿವೆಂಬ ಮೂಸೆಯೊಳಿಟ್ಟು ಪರಮಜ್ಞಾನದಿಂ ಕರಗಿಸಿ
ಸುಮನವೆಂಬ ನಿರ್ಮಲೋದಕದಲ್ಲಿ ಢಾಳಿಸಿದ
ಶುದ್ಧಸುವರ್ಣ ಸ್ವಯಂಪ್ರಕಾಶ ನಿರಾಳದ ಬೆಳಗು
ಸೌರಾಷ್ಟ್ರ ಸೋಮೇಶ್ವರನ ಶರಣರಲ್ಲಿ ಸ್ವಯವಾಯಿತ್ತು.