ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು. ಅದೆಂತೆಂದಡೆ: ಬಾಲರು ಭ್ರಾಮಕರು ಚೋರರು ಕಟುಕರು ಪಾರದ್ವಾರಿಗಳು ಜಾರರು ಪಗುಡಿ ಪರಿಹಾಸಕರು_ ಅವರಲ್ಲಿ ಪ್ರಸಾದದ ನಚ್ಚು ಮಚ್ಚುಂಟೆ? ಪ್ರಸಾದವ ಕೊಂಬಲ್ಲಿ ಸಮಶೀಲಸಂಪನ್ನರು, ಏಕಲಿಂಗನಿಷ್ಠವಂತರು. ಸರ್ವಾಂಗಲಿಂಗಪರಿಪೂರ್ಣರು, ಪರಮನಿರ್ವಾಣಪರಿಪೂರ್ಣರು. ಇಂತೀ ಇವರೊಳಗಾದ ಸರ್ವಗುಣಸಂಪನ್ನಂಗೆ ಗಣಪ್ರಸಾದವಲ್ಲದೆ ಕಾಗೆಯಂತೆ ಕರೆದು, ಕೋಳಿಯಂತೆ ಕೂಗಿ, ಡೊಂಬರಂತೆ ಕೂಡಿ ಆಡಿ, ಭಂಗ ಹಿಂಗದಿದ್ದಡೆ ಕೊಂಡಾಡುವ ಆ ಲಾಗ ನೋಡಿಕೊಳ್ಳಿ. ನಿಮ್ಮ ಭಾವಕ್ಕೆ ನಿಮ್ಮ ಭಾವವೆ ದೃಷ್ಟಸತ್ಯ, ಮರೆಯಿಲ್ಲ, ಭಕ್ತಿಗೆ ಇದಿರೆಡೆಯಿಲ್ಲ, ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಕಟ್ಟು ಮೆಟ್ಟ ಮಾಡಲಿಲ್ಲ. ಇದು ಕಟ್ಟಾಚಾರಿಯ ದೃಷ್ಟ, ಏಲೇಶ್ವರಲಿಂಗವು ಸರ್ವಶೀಲವಂತನಾದ ಸಂಬಂಧಸಂಪದದಂಗ.
--------------
ಏಲೇಶ್ವರ ಕೇತಯ್ಯ
ಮಾಯೆಯ ಕಾಲು ಬಾಯಿಗೆ ಸಿಕ್ಕಿಕೊಂಡು ತೊತ್ತಳದುಳಿಸಿಕೊಂಬ ಮರುಳುಮಾನವರ ಬಗೆಯ ನೋಡಯ್ಯ ಮನವೇ. ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು ಮುಂಡೆ ಹಾರುವಿತಿಯಂತೆ ಬೆಳುವಲ್ಲ ಮಾಡಿಕೊಂಡು ತೆಂಗ ಪೋಟಾಡುವಂತೆ ಕರಸ್ಥಳದಲ್ಲಿ ಲಿಂಗವ ಹಿಡಿದುಕೊಂಡು ಠವುಳಿಕಾರನಂತೆ ಮನವ ಕದ್ದು ಮಾತನಾಡುತ್ತ ಮನೆಮನೆಗೆ ಹೋಗಿ ಹೊಟ್ಟೆಯ ಕಿಚ್ಚೆಗೆ ಸಟೆಯ ಶಾಸ್ತ್ರವ ಹೇಳುವ ಡೊಂಬರಂತೆ ಪುಸ್ತಕವ ಹಿಡಿದುಕೊಂಡು ಪುರಜನವ ಮೆಚ್ಚಿಸುವ ಕೋಡಿಗರಂತೆ ವೇಷಮಂ ಹಲ್ಲುಣಿಸಿ ಕೊಂಡು ನಿಜ ವಿರಕ್ತರಂತೆ ದೇಶಮಧ್ಯದಲ್ಲಿ ಸುಳಿದು ವಿರಕ್ತರ ಕಂಡಲ್ಲಿ ಸಟೆಯ ಭಕ್ತಿಯ ಹೊಕ್ಕು ಹೂಸಕದುಪಚಾರಮಂ ನುಡಿದು ಮಾಡಿ ನೀಡುವ ಭಕ್ತರ ಮನೆಗೆ ಭಿಕ್ಷಮುಖದಿಂದ ಹೋಗಿ ನಚ್ಚು ಮಚ್ಚ ನುಡಿದು ಉಂಡುಕೊಂಡು ದಿನಕಾಲಮಂ ನೂಂಕಿ ಮನೋವಿಕಾರದಿಂದ ಪರಧನ ಪರಸ್ತ್ರೀಯರಿಗಳುಪಿ ಭವಿ ಭಕ್ತರೆನ್ನದೆ ಉಂಡುಟ್ಟಾಡಿ ತೀರ್ಥ ಪ್ರಸಾದವೆಂಬ ಅಳುಕಿಲ್ಲದೆ ಚೆಲ್ಲಾಡಿ ನಡೆಯಿಲ್ಲದ ನಡೆಯ ನಡೆದು ನುಡಿಯಿಲ್ಲದ ನುಡಿಯ ನುಡಿದು ತನ್ನ ಕಪಟವನರಿಯದೆ ಶಿವಶರಣರ ಮೇಲೆ [ಮಿಥ್ಯವನಾಡಿ] ಹಗೆಯಂ ಸಾಧಿಸಿ ಹಸಿಯ ಮಾದಿಗರಂತೆ ಹುಸಿಯ ನುಡಿದು ಶಿವಶರಣರ ಮೇಲೆ ಒಂದೊಂದ ನುಡಿಯ ಗಳಹುತಿಪ್ಪ ನರಕ ಜೀವರುಗಳಿಗೆ ಮಾಡಿದ ಪರಿಭವದ ರಾಟವಾಳವು ಗಿರುಕು ಗಿರುಕೆಂದು ತಿರುಗುತ್ತಲಿದೆಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಖ್ಯಾತಿಲಾಭಕ್ಕೆ ಮಾಡುವಾತ ಭಕ್ತನಲ್ಲ. ಡಂಬಕಕ್ಕೆ ಡೊಂಬರಂತೆ ತಿರುಗುವವ ಜಂಗಮವಲ್ಲ. ತನು ತಲೆ ಬತ್ತಲೆಯಾಗಿ, ಮನ ತ್ರಿವಿಧ ಆಸೆ ಉಳ್ಳನ್ನಕ್ಕ ವಿರಕ್ತನಲ್ಲ. ಇಂತೀ ಗುಣವ ಸಂಪಾದಿಸುವನ್ನಕ್ಕ, ಎನಗೆ ಮುಕ್ತಿಯೆಂಬ ಬಟ್ಟೆಯಿಲ್ಲ. ನೀ ಸತ್ತೆ, ನಾ ಕೆಟ್ಟೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
-->