ಅಥವಾ

ಒಟ್ಟು 11 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕದ ನುಡಿ ತನಗೆ ಡೊಂಕು, ತನ್ನ ನುಡಿ ಲೋಕಕ್ಕೆ ಡೊಂಕು. ಊರ ಹೊದ್ದ, ಕಾಡ ಹೊದ್ದ, ಆಪ್ಯಾಯನ ಮುಕ್ತಿ ವಿರಹಿತ ಶರಣ. ಕಪಾಲದೊಳಗೆ ಉಲುಹಡಗಿದ, ಕೂಡಲಚೆನ್ನ[ಸಂಗ]ಯ್ಯನಲ್ಲಿ ಒಂದಾದ, ಲಿಂಗೈಕ್ಯವು.
--------------
ಚನ್ನಬಸವಣ್ಣ
ಹಾವಿನ ಡೊಂಕು ಹುತ್ತಕ್ಕೆ ಸಸಿನ, ನದಿಯ ಡೊಂಕು ಸಮುದ್ರಕ್ಕೆ ಸಸಿನ, ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ. 144
--------------
ಬಸವಣ್ಣ
ಆಯತ ಒಂದೆಡೆಯಲ್ಲಿ ತೆರನನರಿಯರಾಗಿ ನೋಡಬಾರದು, ನೋಡಿ ನುಡಿಸಬಾರದು. ಅದು. ತಿದ್ದಬಾರದ ಡೊಂಕು ಕೂಡಲಸಂಗನ ಭಕ್ತಿ.
--------------
ಬಸವಣ್ಣ
ನರರು ಸುರರು ನವಕೋಟಿಯುಗಗಳ ಪ್ರಳಯಕ್ಕೆ ಒಳಗಾಗಿ ಹೋದರು, ಒಳಗಾಗಿ ಹೋಹಲ್ಲಿ ಸುರಪತಿಗೆ ಪರಮಾಯು ನೋಡಿರೆ ! ಅಂಥ ಸುರಪತಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ, ಚಿಟ್ಟಜನೆಂಬ ಋಷಿಗೆ ಒಂದು ಚಿಟ್ಟು ಸಡಿಲಿತ್ತು ನೋಡಿರೆ ! ಅಂಥ ಚಿಟ್ಟನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಚಿಪ್ಪಜನೆಂಬ ಋಷಿಗೆ ಒಂದು ಚಿಪ್ಪು ಸಡಿಲಿತ್ತು ನೋಡಿರೆ ! ಅಂಥ ಚಿಪ್ಪಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಡೊಂಕಜನೆಂಬ ಋಷಿಗೆ ಒಂದು ಡೊಂಕು ಸಡಿಲಿತ್ತು ನೋಡಿರೆ ! ಅಂಥ ಡೊಂಕಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರೋಮಜನೆಂಬ ಋಷಿಗೆ ಒಂದು ರೋಮ ಸಡಿಲಿತ್ತು ನೋಡಿರೆ ! ಅಂಥ ರೋಮಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿಬ್ರಹ್ಮಂಗೆ ಆಯುಷ್ಯವು ನೂರಾಯಿತ್ತು ನೋಡಿರೆ ! ಅಂಥ ಆದಿಬ್ರಹ್ಮ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿನಾರಾಯಣಂಗೆ ಒಂದು ದಿನವಾಯಿತ್ತು ನೋಡಿರೆ ! ಅಂಥ ಆದಿ ನಾರಾಯಣ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರುದ್ರಂಗೆ ಕಣ್ಣೆವೆ ಹಳಚಿತ್ತು ನೋಡಿರೆ ! ಅಂಥ ರುದ್ರರು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಫಣಿಮುಖರೊಂದು ಕೋಟಿ, ಪಂಚಮುಖರೊಂದು ಕೋಟಿ, ಷಣ್ಮಮುಖರೊಂದು ಕೋಟಿ, ಸಪ್ತಮುಖರೊಂದು ಕೋಟಿ ಅಷ್ಟಮೂಖರೊಂದು ಕೋಟಿ, ನವಮುಖರೊಂದು ಕೋಟಿ ದಶಮುಖರೊಂದು ಕೋಟಿ_ ಇಂತಿವರೆಲ್ಲರ ಕೀರೀಟದಾಭರಣಂಗಳು ಬಿದ್ದವು ನೋಡಿರೆ ! ಅಂಥ ಸಪ್ತಕೋಟಿಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ನಂದಿವಾಹನರೊಂದು ಕೋಟಿ, ಭೃಂಗಿ ಪ್ರಿಯರೊಂದು ಕೋಟಿ ಚಂದ್ರಪ್ರಿಯರೊಂದು ಕೋಟಿ_ ಇಂತೀ ತ್ರಿಕೋಟಿಗಳ ತಲೆಗಳು ಬಾಗಿದವು ನೋಡಿರೆ ! ಅಂಥ ತ್ರಿಕೋಟಿಗಳ ತಲೆಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣನೀ ಸುದ್ದಿಯನೇನೆಂದುವರಿಯನು
--------------
ಚನ್ನಬಸವಣ್ಣ
ಇಂದ್ರ ಇಂದ್ರರೆಂಬುವರನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು, ಮೂವತ್ತುಮೂರುಕೋಟಿ ದೇವರ್ಕಳಿಗೆ ಒಂದು ಸಂವತ್ಸರವಾಯಿತ್ತು. ಅಂಥ ಮೂವತ್ತುಮೂರುಕೋಟಿ ದೇವರ್ಕಳು ಅನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಬ್ರಹ್ಮನಿಗೊಂದು ದಿನವಾಯಿತ್ತು . ಅಂಥ ಬ್ರಹ್ಮಾದಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಮೀನಜನೆಂಬ ಮುನಿಗೊಂದು ಮೀನ ಸಡಿಲಿತ್ತು. ಅಂಥ ಮೀನಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ರೋಮಜನೆಂಬ ಮುನಿಗೊಂದು ರೋಮ ಸಡಿಲಿತ್ತು. ಅಂಥ ರೋಮಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಡೊಂಕಜನೆಂಬ ಮುನಿಗೊಂದು ಡೊಂಕು ಸಡಿಲಿತ್ತು. ಅಂಥ ಡೊಂಕಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ನೇತ್ರಜನೆಂಬ ಮುನಿಗೊಂದು ನೇತ್ರ ಸಡಿಲಿತ್ತು. ಅಂಥ ನೇತ್ರಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು [ಚಿ]ಪ್ಪಜನೆಂಬ ಮುನಿಗೊಂದು ಚಿಪ್ಪು ಸಡಿಲಿತ್ತು. ಅಂಥ [ಚಿ]ಪ್ಪಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಪಾದಜನೆಂಬ ಮುನಿಗೊಂದು ಪಾದ ಸಡಿಲಿತ್ತು. ಅಂಥ ಪಾದಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಚಿಟುಕನೆಂಬ ಮುನಿಗೊಂದು ಚಿಟುಕು ಸಡಿಲಿತ್ತು. ಅಂಥ ಚಿಟುಕಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಸಾರಂಗನೆಂಬ ಮುನಿಗೊಂದು ರೇಣು ಕುಂದಿತ್ತು. ಅಂಥ ಸಾರಂಗನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ವಿಷ್ಣುವಿಗೊಂದು ದಿನವಾಯಿತ್ತು. ಅಂಥ ವಿಷ್ಣುಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ರುದ್ರನ ಕಣ್ಣೆವೆ ಹಳಚಿತ್ತು. ಅಂಥ ರುದ್ರಾದಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು ಅತಲ ಸುತಲ ವಿತಲ ತಲಾತಲ ಮಹಾತಲ ರಸಾತಲ ಪಾತಾಲ, ಭೂಲೋಕ ಭುವರ್ಲೋಕ ಮಹರ್ಲೋಕ ಜನರ್ಲೋಕ ತಪೋಲೋಕ ಸತ್ಯಲೋಕ ಗೋಲೋಕವೆಂಬ ಹದಿನಾಲ್ಕು ಲೋಕವು ಲಿಂಗಗರ್ಭದಲ್ಲಿ ಲಯವಾಗಲು ಇಂತೀ ಹದಿನಾಲ್ಕು ಲೋಕವನೊಳಕೊಂಡು ಅತ್ತತ್ತವಾಗಿಹ ಅಖಂಡಮಹಾಜ್ಯೋತಿರ್ಮಯ ಲಿಂಗದೊಳಗಿದ್ದವರೆಲ್ಲರು ಲಿಂಗವನರಿಯದೆ ಸತ್ತರು. ಲೋಕದೊಳು ಸುಳಿವ ವೇಷಧಾರಿಗಳಿಗೆಂತು ಸಾಧ್ಯವಹುದು ನೋಡಾ. ಸಾಕ್ಷಿ : ``ಆಕಾಶಗತಲಿಂಗಾನಾಂ ಪೃಥ್ವೀಗತ ಪೀಠಯಃ | ಆಲಯಂ ಋಷಿದೇವಾನಾಂ ಲಯನಾಂ ಲಿಂಗಮುಚ್ಯತೇ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೆ ೈ ಶ್ರೀಗುರವೇ ನಮಃ ||'' ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭೂಪಾಲನ ಡೊಂಕು ಗೋಪಾಲಂಗಲ್ಲದೆ ಗೋಪಾಳಿಗೆಲ್ಲಿಹುದಯ್ಯಾ? ಗೋಕುಲದ ಡೊಂಕು ಗೋಪಾಲಂಗಲ್ಲದೆ ಗೋಪಾಳಿಗೆಲ್ಲಿಹುದಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->