ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಲೋಕದ ನಚ್ಚಮಚ್ಚನೆ ನೀಗಿ ನಿಚ್ಚಟನಾಗಿ ಜ್ಞಾನ ಕ್ರೀಗಳಿಂದಾಚರಿಸಿ ಅಂಗಲಿಂಗದ ಸಂಬಂಧಿಗಳಾದ ಶಿವಲಿಂಗಮೋಹಿಗಳು ನೀವು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಬಟ್ಟೆಯ ಬೆಡಗು ಬಿನ್ನಾಣದ ಪರಿಯ. ಆ ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಕಣ್ಣು ಮನಕ್ಕೆ ಮುಟ್ಟದ ಮಹಾಪಟ್ಟಣವೊಂದೇ. ಆ ಪಟ್ಟಣವ ಕಟ್ಟಿದುದು ಮೊದಲಾಗಿ ಊರು ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಂಗಳೆಂಬ ಎರಡು ಪಟ್ಟಣಂಗಳು ತುಂಬಿ ತುಳುಕುತ್ತಿವೆ. ಆ ಎರಡು ಪಟ್ಟಣಕ್ಕೆ ಹೋದ ಹಾದಿ ಹೆಬ್ಬಟ್ಟೆಗಳಾಗಿಪ್ಪವು. ಆ ಎರಡು ಪಟ್ಟಣದ ವಿದಿಕ್ಕಿನಲ್ಲಿ ಒಂದು ಭಕ್ತಿಪುರವಿದೆ. ಆ ಭಕ್ತಿಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಣ ಮುಕ್ತಿಪುರದ ಬಟ್ಟೆಯ ಕಾಣಬಾರದು. ಆ ಮುಂದಣ ಪಯಣಗತಿಯ ಸಂಚುವರಿಯುವ ಸಂಬಂಧಮಂ ಶರಣ ಮನದಲ್ಲಿ ತಿಳಿದು ಆ ಹೆಬ್ಬಟ್ಟೆಗಳಲ್ಲಿ ಹೋದರೆ ಎಂಬತ್ತುನಾಲ್ಕುಲಕ್ಷ ಪ್ರಕಾರದ ಪರಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ ತಮ್ಮವರು ಹೋದ ನಸುದೋಯಲ ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದ ನಡುವೆ ಹೋಗುತಿಪ್ಪ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಳ್ಳ ರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಮಧ್ಯದಲ್ಲಿ ಎಂಟುಕಲಶದ ಚೌಕಾಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟುವ ಕಟ್ಟುವ ಸಮರ್ಥಿಕೆಯನುಳ್ಳ ಜಂಗಮಲಿಂಗವಿದೆ. ಆ ಜಂಗಮಲಿಂಗಮಂ ಶರಣ ಕಂಡು ಹರುಷಗೊಂಡು ಭಾವದಲ್ಲಿಯೇ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂಮಾಡಿ ತನ್ನ ಮನದಭೀಷ್ಟೆಯಂ ನೆನೆದಂತೆ ಮನದಲ್ಲಿ ಬೇಡಿ ದೇಹ ಮನ ಪ್ರಾಣಕುಳ್ಳ ಸಮಸ್ತ ಕರಣಾದಿ ಗುಣಗಳೆಲ್ಲಮಂ ಸುಟ್ಟು ಬೊಟ್ಟಿಕ್ಕಿ ನಿರ್ಮಲ ಸ್ವರೂಪನಾಗಿ ಅಲ್ಲಿಂದ ಮುಂದೆ ನಡೆವುತಿಪ್ಪಾಗ ಊಧ್ರ್ವದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು ಆ ತ್ರಿಪುರವ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಆರುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲಂ ಸತಿ ಸಾರುವಂತೆ ಆ ಶರಣ ಆ ಉಪ್ಪರಿಗೆಯ ಬಾಗಿಲಂ ಸಾರೆ ಆ ಬಾಗಿಲಿನಲ್ಲಿ ಡಾಕಿನಿ ಶಾಕಿನಿ ರಾಕಿನಿ ಲಾಕಿನಿ ಕಾಕಿನಿ ಹಾಕಿನಿಯರೆಂಬ ಷಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು, ಊಧ್ರ್ವಕುಂಡಲಿನಿಯೆಂಬ ಜ್ಞಾನಶಕ್ತಿ. ಆ ಶಕ್ತಿ ಆ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳು ಅಂಗರ ತಡೆವಳು ನಿರಂಗರ ಬಿಡುವಳೆಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ ಸೋಮ ಸೂರ್ಯರ ಕಲಾಪಮಂ ನಿಲಿಸಿ ಕುಂಭಮಂ ಇಂಬುಗೊಳಿಸಿ ರೆುsುೀಂ ರೆುsುೀಂ ಎಂದು ರೆುsುೀಂಕರಿಸುತಿಪ್ಪ ಪೆಣ್ದುಂಬಿಯ ನಾದಮಂ ಚಿಣಿಮಿಣಿ ಎಂದು ಸಣ್ಣರಾಗದಿಂದ ಮನವ ಸೋಂಕುತಿಪ್ಪ ವೀಣಾನಾದಮಂ ಲಿಂಗ ಲಿಂಗವೆಂದು ಕರೆವುತಿಪ್ಪ ಘಂಟಾನಾದಮಂ ಢಮ್ಮ ಢಮ್ಮ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಿಲು ಪಿಟಿಲು ಧಿಗಿಲು ಭುಗಿಲೆನುತಿಪ್ಪ ಮೇಘನಾದಮಂ ಓಂ ಓಂ ಎಂದು ಎಲ್ಲಿಯೂ ಎಡೆವಿಡದೆ ಉಲಿವುತಿಪ್ಪ ಪ್ರಣವನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೇಂ ಹ್ರೆ ೈಂ ಹ್ರೌಂ ಹ್ರಂ ಹ್ರಃ ಎಂದು ಬೆಳಗ ಬೀರುತಿಪ್ಪ ದಿವ್ಯನಾದಮಂ ಅರಣ್ಯ ಘೋಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರದ ನಾದಂಗಳಂ ಶರಣ ಕೇಳಿ ಮನದಣಿದು ಹರುಷಂ ಮಿಕ್ಕು ಆ ಬಾಗಿಲು ದಾಂಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಡೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಭ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾ ಶ್ರೀ ಗುರುವಿನ ಒಡ್ಡೋಲಗದ ಹಜಾರದ ಪ್ರಭೆಯು ಆಕಾಶವನಲೆವುತಿಪ್ಪುದಂ ಕಂಡು ಬಹಿರಾವರಣವ ಸೇರಿಪ್ಪ ಪ್ರಾಕಾರದ ಗೋಡೆಯ ಎರಡು ಹದಿನಾರು ಗೊತ್ತುಗಳಲ್ಲಿ ಈಶಾನ ಪರ್ಜನ್ಯ ಜಯಂತರೊಳಗಾದ ಮೂವತ್ತೆರಡು ತಂಡದ ಅನಂತ [ವಾ]ಸ್ತುದೇವತೆಗಳ ಕಾವಲ ಅತ್ಯುಗ್ರವಂ ಕಂಡು ಶರಣರ್ಗೆ ತಡೆಹಿಲ್ಲವೆಂಬುದಂ ತನ್ನ ಮನಜ್ಞಾನದಿಂದವೇ ಅರಿದು ಕಾವಲಾಗಿಪ್ಪ [ವಾ]ಸ್ತುದೇವತೆಗಳ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕ್ಕೆ ಮೂಲ ಸೂತ್ರವಾದ ಬ್ರಹ್ಮರಂಧ್ರದ ಪೂರ್ವ ದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣನು ಒಳಹೊಗಲೊಡನೆ ಬಹಿರಾವರಣದ ವೀಥಿ ಓಲಗದೊಳಿಪ್ಪ ಹರಿ ಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲರು ಬೆದರಿ ಕೆಲಸಾರೆ ಸೋಮವೀಥಿಯೊಳಿಪ್ಪ ಅನಂತರುದ್ರರೊಳಗಾದ ಇಪ್ಪತ್ತನಾಲ್ಕುತಂಡದ ಅನಂತರು ಶಿವನ ಒಡ್ಡೋಲಗದ ವೈಭವವ ನಡೆಸುವ ಪರಿಚಾರಕರು ಬಂದು ಶರಣ ಲಿಂಗದೃಷ್ಟಿ ಸಂಧಾನವಾಗಲೆಂದು ಸಮ್ಮುಖವಂ ಮಾಡೆ ಸೂರ್ಯವೀಥಿಯೊಳಿಪ್ಪ ಉಮೆ ಚಂಡೇಶ್ವರ ನಂದಿಕೇಶ್ವರರೊಳಗಾದ ಹದಿನಾರುತಂಡದ ಅನಂತರುದ್ರರು ಬಂದು ಶರಣನ ಸನ್ಮಾನವಂ ಮಾಡೆ ಅಗ್ನಿವೀಥಿಯೊಳಿಪ್ಪ ವಾಮೆ ಜ್ಯೇಷೆ*ಯರೊಳಗಾದ ಎಂಟುತಂಡದ ಅನಂತಶಕ್ತಿಯರು ಬಂದು ಶರಣನ ಇದಿರ್ಗೊಳೆ ಕರ್ನಿಕಾವೀಥಿಯೊಳಿಪ್ಪ ಅಂಬಿಕೆ ಗಣಾನಿಯರೊಳಗಾದ ನಾಲ್ಕುತಂಡದ ಶಕ್ತಿಯರು ಬಂದು ಶರಣನ ಕೈವಿಡಿದು ಕರೆತರೆ ಈ ಸಿಂಹಾಸನಕ್ಕೆ ಮೇಲುಗದ್ದಿಗೆಯೆನಿಪ ಸಿಂಹಾಸನ ಶುಭ್ರವರ್ಣದ ಹತ್ತುನೂರುದಳವ ಗರ್ಭೀಕರಿಸಿಕೊಂಡು ಬೆಳಗುತಿಪ್ಪ ಒಂದು ಮಹಾಕಮಲ. ಆ ಕಮಲದಳಂಗಳೊಳಗಿಪ್ಪ ಪ್ರಣವ. ಆ ಪ್ರಣವ ಸ್ವರೂಪರಾದ ಬಸವಾದಿ ಅಸಂಖ್ಯಾತ ಪ್ರಮಥಗಣಂಗಳು ಆ ಪ್ರಮಥಗಣಂಗಳಿಗೆ ಶರಣಭಾವದಲ್ಲಿಯೇ ಸಾಷ್ಟಾಂಗವೆರಗಿ ನಮಸ್ಕಾರವ ಮಾಡೆ ಆ ಗಣಂಗಳು ಕೃಪಾದೃಷ್ಟಿಯಿಂದ ಶರಣನ ಮೈದಡವಿ ಅನಂತಕೋಟಿ ಸೋಮ ಸೂರ್ಯ ಕಾಲಾಗ್ನಿ ಮಿಂಚು ನಕ್ಷತ್ರಂಗಳು ತಮ್ಮ ತಮ್ಮ ಪ್ರಕಾಶಮಂ ಒಂದೇ ವೇಳೆ ತೋರಿದ ಬೆಳಗಿನೊಡ್ಡವಣೆ ಪಂಚಪತ್ರಂಗಳಾವರಣಂಗಳಾಗಿ ತೋರ್ಪ ಹದಿನಾರುದಳಂಗಳೊಳಿಪ್ಪ ಷೋಡಶಕಳಾಪುಂಜವೆನಿಸುವ ಪದ್ಮಿನಿ ಚಂದ್ರಿಣಿಯರೊಳಗಾದ ಷೋಡಶ ಲಾವಣ್ಯಶಕ್ತಿನಿಯರ ಬೆಳಗಂ ಕಂಡು ಆ ಬೆಳಗಿನೊಡ್ಡವಣೆ ಬಯಲಾಯಿತ್ತು. ಈ ಕರ್ಣಿಕಾಪ್ರದೇಶದ ಪಂಚಪತ್ರಂಗಳೊಳಗಿಪ್ಪ ಪಂಚಪ್ರಣವಂಗಳ ಬೆಳಗಂ ಕಂಡು ಆ ಲಾವಣ್ಯಶಕ್ತಿನಿಯರ ಬೆಳಗು ತೆಗೆದೋಡಿತ್ತು. ಕರ್ಣಿಕಾಗ್ರದೊಳು ನಿಜನಿವಾಸವಾಗಿ ಮೂರ್ತಿಗೊಂಡಿಪ್ಪ ನಿಷ್ಕಲಬ್ರಹ್ಮದ ಚರಣದಂಗುಲಿಯ ನಖದ ಬೆಳಗಂ ಕಂಡು ಆ ಪ್ರಣವಂಗಳ ಬೆಳಗು ತಲೆವಾಗಿದವು. ಇಂತಪ್ಪ ಘನಕ್ಕೆ ಘನವಾದ ಮಹಾಲಿಂಗವಂ ಶರಣಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ಮನಂ ನಲಿದು ಆನಂದಾಶ್ರುಜಲಂ ಸುರಿದು ಪುಳಕಂಗಳುಣ್ಮೆ ರೋಮಾಂಚನಂ ಗುಡಿಗಟ್ಟೆ ಪ್ರಣವದ ನುಡಿ ತಡೆಬಡಿಸಿ ನಡೆ ದಟ್ಟಡಿಸುವ ಕಾಲದಲ್ಲಿ ಕರ್ಪೂರದ ಪುತ್ಥಳಿ ಬಂದು ಉರಿಯ ಪುತ್ಥಳಿಯನಾಲಂಗಿಸಿದಂತೆ ಶರಣಂ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ ಘನಲಿಂಗ ತಾನೆಯಾದ, ಮಹಾಗುರು ಸಿದ್ಧೇಶ್ವರಪ್ರಭುವಿನ ಚರಣಮಂ ನಾನು ಕರಸ್ಥಲದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೇ ಪಂಚಬ್ರಹ್ಮ ಪ್ರಾಣವೇ ಪರಬ್ರಹ್ಮವಾಯಿತು. ಪ್ರವೃತ್ತಿಯ ಬಟ್ಟೆ ಹುಲ್ಲು ಹುಟ್ಟಿತು. ನಿವೃತ್ತಿಯ ಬಟ್ಟೆ ನಿರ್ಮಲವಾಯಿತು. ಉಯ್ಯಾಲೆಯ ಮಣೆ ನೆಲೆಗೆ ನಿಂದಂತೆ ಆದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಓಂ ವಿಶ್ವನಿರಾಕಾರ ನಿರವಯನಿರ್ವಿಕಾರ ಅವಗತವಾಗ್ಮನವಾಗತ ಆಕಾಶ ಸಭಾಮೂರ್ತಿ ನಿರಾಕಾರವೆಂಬ ನಿಜಲಿಂಗವಪ್ಪ ಪರಶಿವಾನಂದ ಮೂರ್ತಿ ತನ್ನೊಳು ತ್ರಿಗುಣಾತ್ಮಕನಾಗಿಹ. ಅದೆಂತೆಂದಡೆ : ಶಿವ ಸದಾಶಿವ ಮಹೇಶ್ವರನೆಂದು ಪರಶಿವನ ತ್ರಿಗುಣಾತ್ಮಕ ಭೇದಂಗಳು, ಇಂತಪ್ಪ ಪರಶಿವನು ವಿಶ್ವದುತ್ಪತ್ಯಕಾರಣನಾಗಿ ಪಂಚಸಾದಾಖ್ಯ ರೂಪಗಳಂ ಪ್ರತ್ಯೇಕ ತ್ರಿಗುಣಾತ್ಮಕರಾಗಿ ಜ್ಯೋತಿಯಿಂ ಪೊತ್ತಿಸಲಾಪುದು. ಘನವಾದುದು ಉಪಮಿಸಬಾರದ ಮಹಾಘನದಂತೆ ಆ ಮಹಾಬೆಳಗು ತನ್ನೊಳೈದು ರೂಪಾಯಿತ್ತು. ಅದೆಂತೆಂದಡೆ : ಶಿವ ಅಮೂರ್ತಿ ಮೂರ್ತಿ ಕರ್ತೃ ಕರ್ಮರೆಂಬ ಪಂಚಬ್ರಹ್ಮ ಹುಟ್ಟಿದವು; ಅದಕೈವರು ಶಕ್ತಿಯರುದಯಿಸಿದರು, ಅವರ ನಾಮಂಗಳು:ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ. ಇಂತಿಂತು ಐವರನು ಪಂಚಬ್ರಹ್ಮರಿಗೆ ವಿವಾಹಂ ಮಾಡಿದೊಡಾ ಶಿವಶಕ್ತಿ ಪಂಚಕದಿಂದೊಂದು ಓಂಕಾರವೆಂಬ ಬೀಜವಂ ನಿರ್ಮಿಸಿದಡಾ, ಓಂಕಾರ ಬೀಜದಿಂದೊಂದು ವಿರಾಟಸ್ವರೂಪಮಪ್ಪ ಮಹಾಘನ ತೇಜೋಮಯವಪ್ಪ ಅನಾದಿರುದ್ರಸಹಸ್ರಾಂಶುವಿಂಗೆ ಸಾವಿರ ಶಿರ ಸಾವಿರ ನಯನ ಸಾವಿರ ದೇಹ ಸಾವಿರಪಾದವುಳ್ಳ ಸ್ವಯಂಭುಮೂರ್ತಿ ಪುಟ್ಟಿದ ಆ ಸ್ವಯಂಭುಮೂರ್ತಿಯ ಮುಖದಲ್ಲಿ ಈಶ್ವರಪುಟ್ಟಿದ, ಈಶ್ವರನ ವಾಮಭಾಗದಲ್ಲಿ ವಿಷ್ಣುಪುಟ್ಟಿದ. ದಕ್ಷಿಣಭಾಗದಲ್ಲಿ ಬ್ರಹ್ಮಪುಟ್ಟಿದ. ಇಂತು ತ್ರಿದೇವತೆಯರೊಳಗಗ್ರಜನಪ್ಪ ಮಹಾಮಹಿಮ ಈಶ್ವರನ ಪಂಚಮುಖದಲ್ಲಿ ಪಂಚಬ್ರಹ್ಮ ತೇಜೋಮಯ ರುದ್ರರು ಪುಟ್ಟಿದರು. ಅವರ ನಾಮಂಗಳು : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯರೆಂದಿಂತು. ಅವರೋಳ್ಸದ್ಯೋಜಾತನೆಂಬ ಅಗ್ರಜರುದ್ರ ಪುಟ್ಟಿದನು. ಆ ಸದ್ಯೋಜಾತಂಗೆ ಮಹಾರುದ್ರ ಪುಟ್ಟಿದನು. ಆ ಮಹಾರುದ್ರಂಗೆ ಶ್ರೀರುದ್ರ ಪುಟ್ಟಿದನು. ಆ ಶ್ರೀರುದ್ರಂಗೆ ರುದ್ರ ಪುಟ್ಟಿದನು. ಆ ರುದ್ರಂಗೆ ಅಗ್ನಿಯು ಅವಗತ ಪುಟ್ಟಿದವು. ಆ ಅಗ್ನಿಗೆ ಕಾಶ್ಶಪಬ್ರಹ್ಮ ಪುಟ್ಟಿದನು. ಅವಗತಕ್ಕೆ ಮಾಯಾಸ್ವಪ್ನಬ್ರಹ್ಮ ಪುಟ್ಟಿದನು. ಅದೆಂತೆಂದಡೆ : ಮಾಯವೆ ಮೃತ್ಯು, ಬ್ರಹ್ಮವೆ ಸತ್ಯ ಅದು ಮಾಯಾಸ್ವವಪ್ನಬ್ರಹ್ಮವೆನಿಸಿತ್ತು. ಇಂತಿಪ್ಪ ಬ್ರಹ್ಮವು ಮಾಯಾ ಅವಲಂಬಿಸಿಹುದಾಗಿ ಅದು ಮಾಯಾಸ್ವಪ್ನಬ್ರಹ್ಮವೆನಿಸಿತ್ತು. ಇಂತಪ್ಪ ಮಾಯಾ ಸ್ವಪ್ನಬ್ರಹ್ಮಂಗೆ ತ್ರಯೋದಶಕುಮಾರಿಯರು ಪುಟ್ಟಿದರು. ಅವರ ನಾಮಂಗಳು : ಬೃಹತಿ, ಅದಿತಿ, ದಿತಿ, ವಿನುತಾದೇವಿ, ಕದ್ರು, ಸುವರ್ಣಪ್ರಭೆ, ಕುಮುದಿನಿ, ಪ್ರಭಾದೇವಿ, ಕಾಳಿದಂಡಿ, ಮೇಘದಂಡಿ, ದಾತೃಪ್ರಭೆ, ಕುಸುಮಾವತಿ, ಪಾರ್ವಂದಿನಿ ಎಂದಿಂತು ತ್ರಯೋದಶಕುಮಾರಿಯರು ಪುಟ್ಟಿದರು. ಇದಕ್ಕೆ ಆದಿ ಪರಮೇಶ್ವರನು ಸೃಷ್ಟಿ ನಿರ್ಮಿತ ಜಗದುತ್ಪತ್ಯ ಸ್ಥಿತಿ ಲಯಗಳಾಗಬೇಕೆಂದು, ಆ ಕಾಶ್ಯಪಬ್ರಹ್ಮಗು ತ್ರಯೋದಶ ಸ್ತ್ರೀಯರಿಗೆಯು ವಿವಾಹವ ಮಾಡಿದನು. ಆ ಕಾಶ್ಯಪಬ್ರಹ್ಮನ ಮೊದಲ ಸ್ತ್ರೀಯ ಪೆಸರು ಬೃಹತಿ. ಆ ಬೃಹತಿಗೆ ಪುಟ್ಟಿದ ಮಕ್ಕಳ ಪೆಸರು ಹಿರಣ್ಯಕಾಂಕ್ಷ. ಹಿರಣ್ಯಕಾಂಕ್ಷನ ಮಗ ಪ್ರಹರಾಜ, ಪ್ರಹರಾಜ ಮಗ ಕುಂಭಿ, ಆ ಕುಂಭಿಯ ಮಗ ನಿಃಕುಂಭಿ, ನಿಃಕುಂಭಿಯ ಮಗ ದುಂದುಭಿ, ಆ ದುಂದುಭಿಯ ಮಗ ಬಲಿ, ಬಲಿಯ ಮಗ ಬಾಣಾಸುರ. ಇಂತಿವರು ಮೊದಲಾದ ಛಪ್ಪನ್ನಕೋಟಿ ರಾಕ್ಷಸರು ಪುಟ್ಟಿದರು. ಎರಡನೆಯ ಸ್ತ್ರೀಯ ಪೆಸರು ಅದಿತಿ. ಆ ಅದಿತಿಗೆ ಸೂರ್ಯ ಮೊದಲಾದ ಮೂವತ್ತುಕೋಟಿ ದೇವರ್ಕಳು ದೇವಗಣ ಪುಟ್ಟಿದವು. ಮೂರನೆಯ ಸ್ತ್ರೀಯ ಪೆಸರು ದಿತಿದೇವಿ. ಆ ದಿತಿದೇವಿಗೆ ಕೂರ್ಮ ಮೊದಲಾದ ಜಲಚರಂಗಳು ಪುಟ್ಟಿದವು. ನಾಲ್ಕನೆಯ ಸ್ತ್ರೀಯ ಪೆಸರು ವಿನುತಾದೇವಿ. ಆ ವಿನುತಾದೇವಿಗೆ ಸಿಡಿಲು, ಮಿಂಚು, ವರುಣ, ಗರುಡ ಮೊದಲಾದ ಖಗಜಾತಿಗ?ು ಪುಟ್ಟಿದವು. ಐದನೆಯ ಸ್ತ್ರೀಯ ಪೆಸರು ಕದ್ರುದೇವಿ. ಆ ಕದ್ರುವಿಗೆ ಶೇಷ, ಅನಂತ, ವಾಸುಗಿ, ಶಂಬವಾಳ, ಕಕ್ಷರ, ಕರ್ಕೋಟ, ಕರಾಂಡ, ಭುಜಂಗ, ಕುಳ್ಳಿಕ, ಅಲ್ಲಮಾಜಾರ್ಯ ಇಂತಿವು ಮೊದಲಾದ ನವಕುಲನಾಗಂಗಳು ಪುಟ್ಟಿದವು. ಆರನೆಯ ಸ್ತ್ರೀಯ ಪೆಸರು ಸುವರ್ಣಪ್ರಭೆ. ಆ ಸುವರ್ಣಪ್ರಭೆಗೆ ಚಂದ್ರ, ತಾರಾಗಣ, ನಕ್ಷತ್ರಂಗಳು ಪುಟ್ಟಿದವು. ಏಳನೆಯ ಸ್ತ್ರೀಯ ಪೆಸರು ಕುಮುದಿನಿ. ಆ ಕುಮುದಿನಿಗೆ ಐರಾವತ, ಪುಂಡರೀಕ, ಪುಷ್ಪದಂತ, ವಾಮನ, ಸುಪ್ರದೀಪ, ಅಂಜನ, ಸಾರ್ವಭೌಮ, ಕುಮುದ, ಭಗದತ್ತ ಇಂತಿವು ಮೊದಲಾದ ಮೃಗಕುಲಾದಿ ವ್ಯಾಘ್ರ ಶರಭ ಶಾರ್ದೂಲಂಗಳು ಪುಟ್ಟಿದವು. ಎಂಟನೆಯ ಸ್ತ್ರೀಯ ಪೆಸರು ಪ್ರಭಾದೇವಿ. ಆ ಪ್ರಭಾದೇವಿಗೆ ಕನಕಗಿರಿ, ರಜತಗಿರಿ, ಸೇನಗಿರಿ, ನೀಲಗಿರಿ, ನಿಷಧಗಿರಿ, ಮೇರುಗಿರಿ, ಮಾನಸಗಿರಿ ಇಂತಿವು ಮೊದಲಾದ ಪರ್ವತಂಗಳು ಪುಟ್ಟಿದವು. ಒಂಬತ್ತನೆಯ ಸ್ತ್ರೀಯ ಪೆಸರು ಕಾಳಿದಂಡಿ. ಆ ಕಾಳಿದಂಡಿಗೆ ಸಪ್ತಋಷಿಯರು ಮೊದಲಾದ ಅಷ್ಟಾಸೀತಿ ಸಹಸ್ರ ಋಷಿಯರು ಪುಟ್ಟಿದರು. ಹತ್ತನೆಯ ಸ್ತ್ರೀಯ ಪೆಸರು ಮೇಘದಂಡಿ. ಆ ಮೇಘದಂಡಿಗೆ ನೀಲಮೇಘ, ಕುಂಭಮೇಘ, ದ್ರೋಣಮೇಘ, ಧೂಮಮೇಘ, ಕಾರ್ಮೇಘ ಇಂತಿವು ಮೊದಲಾದ ಮೇಘಂಗಳು ಪುಟ್ಟಿದವು. ಹನ್ನೊಂದನೆಯ ಸ್ತ್ರೀಯ ಪೆಸರು ದಾತೃಪ್ರಭೆ. ಆ ದಾತೃಪ್ರಭೆಗೆ ಚಿಂತಾಮಣಿ ಮೊದಲಾದ ನವರತ್ನಂಗಳು ಪುಟ್ಟಿದವು. ಹನ್ನೆರಡನೆಯ ಸ್ತ್ರೀಯ ಪೆಸರು ಕುಸುಮಾವತಿ. ಆ ಕುಸುಮಾವತಿಗೆ ಕಾಮಧೇನು, ಕಲ್ಪವೃಕ್ಷಂಗಳು ಪುಟ್ಟಿದವು. ಹದಿಮೂರನೆಯ ಸ್ತ್ರೀಯ ಪೆಸರು ಪಾರ್ವಂದಿನಿ. ಆ ಪಾರ್ವಂದಿನಿಗೆ ಅಷ್ಟದಿಕ್ಪಾಲಕರು ಪುಟ್ಟಿದರು. ಇಂತಿವರುಗಳ ರಜಸ್ಸೀಲಾಶೋಣಿತದಿಂದ ಸಹಸ್ರವೇದಿ ಮೊದಲಾದ ಅಷ್ಟ ಪಾಷಾಣಂಗಳು ಪುಟ್ಟಿದವು. ಇವರುಗಳ ಮಲಮೂತ್ರದಿಂದ ಪರುಷರಸ ಸಿದ್ಧರಸ ನಿರ್ಜರೋದಕ ಪುಟ್ಟಿದವು. ಇಂತಿವರುಗಳ ಬೆಚ್ಚು ಬೆದರಿಂದ ದೇವಗ್ರಹ, ಯಕ್ಷಗ್ರಹ, ನಾಗಗ್ರಹ, ಗಾಂಧರ್ವಗ್ರಹ, ಪಿಶಾಚಗ್ರಹ, ಪೆಂತರಗ್ರಹ, ಬ್ರಹ್ಮರಾಕ್ಷಸಗ್ರಹ ಶತಕೋಟಿ ದೇವಗ್ರಹ, ಸರ್ವದರ್ಪಗ್ರಹ, ಶಾಕಿನಿ, ಡಾಕಿನಿ ಮೊದಲಾದ ಗ್ರಹಭೂತ ಪ್ರೇತ ಪಿಶಾಚಂಗಳು ಪುಟ್ಟಿದವು. ಇವರುಗಳ ಪ್ರಸೂತಿಕಾಲ ಮಾಸಿನಿಂದ ಅಷ್ಟಲೋಹ ಪಾಷಾಣಂಗಳು ಪುಟ್ಟಿದವು. ಕಾಲರಾಶಿ, ಕರಣರಾಶಿ, ಭೂತರಾಶಿ, ಮೂಲರಾಶಿ, ಪ್ರಾಣರಾಶಿಗಳು ಮೊದಲಾದ ಕೀಟಕ ಜಾತಿಗಳು ಪುಟ್ಟಿದವು. ಇಂತು ಚತುರ್ದಶ ಭುವನಂಗಳು, ಐವತ್ತಾರುಕೋಟಿ ರಾಕ್ಷಸರು, ದ್ವಾದಶಾದಿತ್ಯರು, ಮೂವತ್ತುಮೂರುಕೋಟಿದೇವರ್ಕಗಳು, ದೇವಗಣ ಸುರಪತಿ, ಖಗಪತಿ, ಸಿಡಿಲು, ಮಿಂಚು, ವರುಣ, ಗರುಡ, ನವಕುಲ ನಾಗಂಗಳು, ಚಿಂತಾಮಣಿನವರತ್ನಂಗಳು, ಕಾಮಧೇನು, ಕಲ್ಪವೃಕ್ಷ ಪರುಷರಸ, ಸಿದ್ದರಸ ನಿರ್ಜರೋದಕ, ದಿಕ್ಕರಿಗಳು, ಕೂರ್ಮ ಮೊದಲಾದ ಜಲಚರಂಗಳು, ಚಂದ್ರತಾರಾಗಣ ನಕ್ಷತ್ರಂಗಳು ಪುಟ್ಟಿದವು. ಇದಕ್ಕೆ ಶ್ರುತಿ : ಓಂ ವಿಶ್ವಕರ್ಮಹೃದಯೇ ಬ್ರಹ್ಮಚಂದ್ರಮಾ ಮನಸೋ ಜಾತಃ ಚಕ್ಷೋಸ್ಸೂರ್ಯದಯಾಭ್ಯೋ ಸರ್ವಾಂಗ ಭೂಷಿಣಿ ದೇವಸ್ಯ ಬಾಹುದ್ವಯಾಂಶಕಃ ಪ್ರತಿಬಾಹು ವಿಷ್ಣುಮೇವಚ ಮಣಿಬಂಧೇ ಪಿತಾಮಹಃ ಜ್ಯೇಷಾ*ಂಗುಲೇ ದೇವೇಂದ್ರ ತರ್ಜಂನ್ಯಂಗುಲೇ ಈಶಾನಃ ಪ್ರೋಕ್ತಃ ಮಾಧ್ಯಮಾದಂಗುಲೇ ಮಾಧವಃ ಅನಾಮಿಕಾಂಗುಲೇ ಅಗ್ನಿ ದೇವಃ ಕನಿಷ್ಟಾಂಗುಲೇ ಭಾಸ್ಕರಃ ಅಚಲಕುಚಿತಮಧ್ಯೇ ವನರ್ಚಪಾದ ಆಹ್ವಾನಾಂತು ಜಗತ್ ನಿರ್ಮಿತ ವಿಶ್ವಕರ್ಮಣಾಂ ಇಂತು ಕಾಶ್ಯಪಬ್ರಹ್ಮನ ಹದಿಮೂರು ಸ್ತ್ರೀಯರುಗಳಿಗೆ ಸಚರಾಚರಂಗಳು ಪುಟ್ಟಿದವಾಗಿ, ಇವರ ಪರಿಪ್ರಮಾಣ ನಮ್ಮ ಶರಣಸ್ಥಲದಲ್ಲಿದ್ದವರು ಬಲ್ಲರು. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ, ಪಂಚವಕ್ತ್ರ, ಆದಿಲಿಂಗ, ಅನಾದಿಶರಣ ಇವರೆಲ್ಲರು ಸಾಕ್ಷಿಯಾಗಿ ಕೂಡಲಚೆನ್ನಸಂಗಯ್ಯನೆ ವಿಶ್ವಕರ್ಮ ಜಗದ್ಗುರು
--------------
ಚನ್ನಬಸವಣ್ಣ
-->