ಅಥವಾ

ಒಟ್ಟು 16 ಕಡೆಗಳಲ್ಲಿ , 2 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವೆಂಬ ಡಕ್ಕೆಯ ಮೇಲೆ ಜೀವವೆಂಬ ಹೊಡೆಚೆಂಡು ಬೀಳೆ ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ. ಇಂತೀ ಉಲುಹಿನ ಭೇದದಲ್ಲಿ ಹೊಲಬುದ್ಧಪ್ಪದೆ ಗೆಲಬೇಕು ಕಾಲವೆಂಬ ಮಾರಿಯ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಮಾಯಾಗುಣ ರೂಪಾದಲ್ಲಿ ಮಲಕ್ಕೊಡಲಾಯಿತ್ತು ಮಲಸ್ಥರೂಪವಾಗಿ ನಿಂದಲ್ಲಿ ಬಲವಂತರೆಲ್ಲರು ಮಲದ ಬೆಂಬಳಿಯಲ್ಲಿ ಮರುಳಾದರು. ಮರುಳಾಟದಲ್ಲಿ ಮಾರಿ ಒಲವರವಾಗಿ ಮನ ಶುದ್ಧವಿಲ್ಲದವರ ಮನೆ ಮನೆಯಲ್ಲಿ ತನುವಿಕಾರವನಾಡಿಸುತ್ತೈದಾಳೆ. ಮಾರಿಯ ಮುರಿದು ದಾರಾವತಿಯ ಕೆಡಿಸಿ ಕೈಯ ಡಕ್ಕೆಯ ಗತಿಯ ಹಿಂಗಿ ಮಾಯೆಯ ಬಾಗಿಲ ಭ್ರಾಂತಿಯ ಬಿಟ್ಟಲ್ಲಿ ಕಾಲಾಂತಕ ಬ್ಥೀಮೇಶ್ವರಲಿಂಗವನರಿದುದು.
--------------
ಡಕ್ಕೆಯ ಬೊಮ್ಮಣ್ಣ
ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ. ವಿಷ್ಣುವಿಂಗೆ ಲಕ್ಷಿ ್ಮಯಾಗಿ ಭವಕ್ಕೆ ತಿರುಗಿದಳು ಮಾಯೆ. ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳುಮಾಯೆ. ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಗೆ ಗಂಧವಾಗಿ, ಅವರವರಂಗದಲ್ಲಿ ಹಿಂಗದ ಪ್ರತಿರೂಪಾಗಿ ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಮರೆದವರ ಮನದಲ್ಲೆಲ್ಲವೂ ಮಾರಿ. ಅರಿದವರ ಮನದಲ್ಲೆಲ್ಲವೂ ಸ್ವಯಂಜ್ಯೋತಿ. ಡಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿವುದಕ್ಕೆ.
--------------
ಡಕ್ಕೆಯ ಬೊಮ್ಮಣ್ಣ
ನಾಡೆಲ್ಲರೂ ಮುಟ್ಟಿ ಪೂಜಿಸುವುದು ಸಿರಿದೇವಿ. ಸತ್ಯರೆಲ್ಲರೂ ಮುಟ್ಟಿ ಪೂಜಿಸುವುದು ಮೂದೇವಿ. ನಾ ಮೊರದಲ್ಲಿ ಹೊತ್ತಾಡುವುದು ಉರಿಮಾರಿ. ಸಿರಿ ಮೂದೇವಿ ಉರಿ ಮೊರದ ಗೋಟಿಗೊಳಗಾಯಿತ್ತು. ಡಕ್ಕೆಯ ದನಿಗೆ ಮುನ್ನವೆ ಸಿಕ್ಕದಿರು ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಅರಿವುಳ್ಳವಂಗೆ ಆರನರಿದೆಹೆನೆಂಬುದೆ ಮಾಯೆ. ಮೂರ ಮರೆದು ಬೇರೊಂದ ಕಂಡೆಹೆನೆಂಬುದೆ ಮಾಯೆ. ನುಡಿಯ ನುಡಿವವರಲ್ಲಿ ಎಡೆ ಮಾತನಾಡಿ ಬೇರೊಂದೆಡೆವುಂಟೆಂಬುದೆ ಮಾಯೆ. ಘಟಮಟವೆಂಬ ಮನೆಯಲ್ಲಿ ಮರವೆಯೆಂಬ ಮಾರಿಯ ಹೊತ್ತು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಡಾವರಕ್ಕೆ ಸಿಕ್ಕಿ ನೊಂದೆನು. ಇದರಚ್ಚುಗವ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ
ಆರು ದರುಶನ ಹದಿನೆಂಟು ಜಾತಿವೊಳಗಾದ ಜೀವನಂಗಳಿಗೆ, ಕುಡಿವ ನೀರು, ಬೇಯಿಸುವ ಬೆಂಕಿ, ಅಡಗುವ ಧರೆ ಒಂದೆನಬಹುದೆ? ಸುಕ್ಷೇತ್ರ ವಾಸಂಗಳಲ್ಲಿ ಮೌಕ್ತಿಕರತ್ನ ಮಲಯಜ ಹಿಮಜಲ ಮುಂತಾದ ಅಚೇತನ ಚೇತನ ವಸ್ತು ಕುಂಭಿನಿಯಲ್ಲಿ ವಿಶೇಷ ವಾಸಂಗಳಲ್ಲಿ ಹುಟ್ಟಿದುದ ಕಂಡುಕೊಂಡು, ಮತ್ತೆ ಮನೆಮಾರಿ ಒಡೆಯಂಗೆ ಸರಿಯಿಲ್ಲಾ ಎಂದು ಅಕ್ಕನ ಕೊಂಡುಬಂದು ಡಕ್ಕೆಯ ಬಾರಿಸುತ್ತಿದ್ದೇನೆ, ಕಾಲಾಂತಕ ಭೀಮೇಶ್ವರಲಿಂಗವಲ್ಲದೆ ಇಲ್ಲಾ ಇಲ್ಲಾಎಂದು.
--------------
ಡಕ್ಕೆಯ ಬೊಮ್ಮಣ್ಣ
ಆವ ಸ್ವಕಾಯದಿಂದಾದಡು ಆಗಲಿ ಭಾವಶುದ್ಧವಾಗಿ ಮಾಡುವ ಜಂಗಮ ಪೂಜೆ, ಸೂರ ಹುಲ್ಲು ಚುಳುಕೋದಕ ನೇಮ ಕ್ರೀ ತಪ್ಪದೆ ಮಾಡುವುದೆದೇವಪೂಜೆ. ಆವ ಪ್ರಸಂಗ ಬಂದಡೆ ಖಂಡಸಿ ನುಡಿವುದೆ ಪಂಡಿತನಿರವು. ತ್ರಿವಿಧ ಬಂದು ಮುಂದಿರಲಿಕ್ಕೆ ಅದರಂದವ ನೋಡದಿಪ್ಪುದೆ ನಿಸ್ಸಂಗ ಸುಸಂಗಿಯ ಇರವು. ಇಂತೀ ವಿಚಾರವನರಿದಲ್ಲಿ ಡಕ್ಕೆಯ ದನಿ ಹೊರಗಾಯಿತ್ತು. ಕಾಲಾಂತಕ ಭೀಮೇಶ್ವರಲಿಂಗವು ಒಳಗಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಮಹಾಕಾಳಾಂಧರ ಹಿಂಗಿ ಕಾಲಂಗಳಹಾಗ ಮಾಯಾಂಗನೆ ಮಹಾದೇವನ ಮರೆದವರಿಗೆ ಮಾರಿಯಾದಳು. ಸತ್ಕಿ ್ರೀಸಜ್ಜನಯುಕ್ತಿಯಿಂದ ಸದಾಶಿವನನರಿಯಲಾಗಿ ಉಮಾದೇವಿಯಾದಳು. ಇಂತೀ ಗುಣವ ಮರೆದಡೆ ಮಾಯೆಯಾಗಿ ಅರಿದಡೆ ಸ್ವಯವಾಗಿ ತನ್ನಲ್ಲಿ ಅನ್ಯಭಿನ್ನವಿಲ್ಲದೆ ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ ಕಾಲಾಂತಕ ಭೀಮೇಶ್ವರಲಿಂಗವನರಿಯಬೇಕು.
--------------
ಡಕ್ಕೆಯ ಬೊಮ್ಮಣ್ಣ
ತನುವೆಂಬ ಮೊರದಲ್ಲಿ ಮಾಯಾಗುಣವೆಂಬ ಮಾರಿಯ ಹಿಡಿದು ರಾಜಸ ತಾಮಸವೆಂಬ ಬಾಳು ಬಟ್ಟಲು ಕೈಯಲ್ಲಿ. ಪ್ರಳಯ ಸಂಹಾರವೆಂಬ ಬಳೆಯ ಕೈಯಲಿಕ್ಕಿ, ಅಂಗದ ಮನೆಯ ಬಾಗಿಲಲ್ಲಿ ಕೊಂಡು ಬಂದಿದೇನೆ. ಬಲ್ಲವರಿಕ್ಕಿ, ಅರಿಯದವರೆಲ್ಲರೂ ಸುಮ್ಮನಿರಿ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿ, ನಿಜತತ್ವವನರಿ, ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಕ್ರಿಯಾಶಕ್ತಿ ಬ್ರಹ್ಮಂಗೆ ಹಿಂಗಿ, ಇಚ್ಛಾಶಕ್ತಿ ವಿಷ್ಣುವಿಂಗೆ ಹಿಂಗಿ, ಜ್ಞಾನಶಕ್ತಿ ರುದ್ರಂಗೆ ಹಿಂಗಿ, ಉತ್ಪತ್ತಿ ಸ್ಥಿತಿ ಲಯವೆಂಬುದಕ್ಕೆ ಮಾಯಾದೇವಿವೊಂದೆ ಗೊತ್ತಾಗಿ ಬಲ್ಲ ಬಲ್ಲವರೆಲ್ಲರ ತನ್ನಲ್ಲಿಯೇ ಅಡಗಿಸುತ್ತ ಅರಿದವರಿಗೆ ದೇವಿಯಾಗಿ, ಮರೆದವರಿಗೆ ಮಾರಿಯಾಗಿ, ಮೊರದೊಳಗೆ ಕೊಂಡು ಬಂದಿದ್ದೇನೆ. ಮೊರಕ್ಕೆ ಮೂರು ಗೋಟು, ತಾಯಿಗೆ ಅಯಿದು ಬಾಯಿ, ಬೇಡುವಾತನ ಬಾಯಿವೊಂದೆಯಾಯಿತ್ತು. ಡಕ್ಕೆಯ ದನಿಯ ಕೇಳಿ ಬೆಚ್ಚುವುದಕ್ಕೆ ಮುನ್ನವೆ ಕಾಲಾಂತಕ ಭೀಮೇಶ್ವರಲಿಂಗವನರಿಯಿರಣ್ಣಾ.
--------------
ಡಕ್ಕೆಯ ಬೊಮ್ಮಣ್ಣ
ಚಿಕ್ಕ ಒಂದು ಹೊತ್ತಗೆ, ಬೆನಕನ ಕರಡಗೆಯಯ್ಯಾ, ನೀ ಡುಂಡುಟಿ ಗೊರವನಯ್ಯಾ, ಪುಣ್ಯವೇನಾದಡಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು. ನಮ್ಮ ಕೂಡಲಸಂಗಮದೇವನಲ್ಲದೆ ಅನ್ಯದೈವ ಉಂಟೆನ್ನದಿರು ಕಂಡಾ !
--------------
ಬಸವಣ್ಣ
ತನಗೆ ಇದಿರಿಟ್ಟು ಕಾಬುದೆಲ್ಲವು ತನಗೆ ಅನ್ಯದೈವ. ತಾ ಕುರುಹಳಿದು ತನಗೆ ಅನ್ಯವೆಂಬುದೊಂದಿಲ್ಲವಾಗಿ ಅದು ತನಗೆ ಭಿನ್ನವಿಲ್ಲದ ದೈವ. ಅಹಂಕಾರವೆಂಬ ಆತ್ಮಘಟದ ಮಾರಿಯ ಹೊತ್ತು ಉಲುವೆಂಬ ಡಕ್ಕೆಯ ಹಿಡಿದು ಭವಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ, ಡಕ್ಕೆಯ ದನಿಯ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ
ಬ್ರಹ್ಮಪ್ರಳಯವಾದಲ್ಲಿ ತಾ ಕೆಟ್ಟುದಿಲ್ಲ ಮಾರಿ. ವಿಷ್ಣು ಮರಣವಹಲ್ಲಿ ತಾ ಸತ್ತುದಿಲ್ಲ ಮಾರಿ. ರುದ್ರ ಯುಗ ಜುಂಗಂಗಳ ಗೆಲುವಲ್ಲಿ ಮಾಯೆ ಮನಸಿಜನ ಮನವೆಲ್ಲಿತ್ತು ಅಲ್ಲಿದ್ದಳು. ಇಂತೀ ತ್ರಿವಿಧ ಮೂರ್ತಿಗಳಲ್ಲಿ ಮರವೆಯ ದೆಸೆಯಿಂದ ಮಾರಿಯಾಯಿತ್ತು. ಆ ಮಾರಿಯ ಹೊತ್ತು ಭವದ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ ಭಕ್ತಿ ಮುಕ್ತಿಯನರಿದು ನಿಶ್ಚಯರಾಗಿ ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಕವಿಯ ಹುಗತೆ, ಗಮಕಿಯ ಸಂಚ, ವಾದಿಯ ಚೊಕ್ಕೆಹ, ವಾಗ್ಮಿಯ ಚೇತನ, ಇಂತೀ ಚತುಷ್ಟಯದಲ್ಲಿ ಯುಕ್ತಿವಂತನಾದಡೇನು? ಭಕ್ತಿಯನರಿಯಬೇಕು, ಸತ್ಯದಲ್ಲಿ ನಡೆಯಬೇಕು, ವಿರಕ್ತಿಯಲ್ಲಿ ವಿಚಾರಿಸಿ ನಿಲ್ಲಬೇಕು. ಈ ಗುಣ ಡಕ್ಕೆಯ ಬೊಮ್ಮನ ಭಕ್ತಿ ಕಾಲಾಂತಕ ಭೀಮೇಶ್ವರಲಿಂಗವನರಿವವನ ಸದ್ಭಕ್ತಿಯುಕ್ತಿ.
--------------
ಡಕ್ಕೆಯ ಬೊಮ್ಮಣ್ಣ
-->