ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ ಜಂಗಮದೇವರೊಯ್ವರೆ? ಆ ಜಂಗಮದೇವರ ಮೇಲೆ ಹೊರಿಸುವನೆ ಭಕ್ತ ? ಅವರು ಭಕ್ತರೊಡೆಯರಲ್ಲ. ಅವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಹೊಯ್ಯೋ ಡಂಗುರವ, ಕಲಿದೇವರು ಸಾಕ್ಷಿಯಾಗಿ.
--------------
ಮಡಿವಾಳ ಮಾಚಿದೇವ
ಆದಿಯನಾದಿ ಆಚಾರವ ಕಾಣದೆ, ಸಮಮಾನದ ಲಿಂಗದ ಘನವ ತಿಳಿಯದೆ, ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ, ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ. ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ, ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ, ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ, ಕೃತಿಯ ದ್ವೆ ೈತವ ನಟಿಸುವ ಪಂಚಮಹಾಪಾತಕದೇವರ ದೇವತ್ವದ ಬಲ್ಲರು ಕೇಳಿರಣ್ಣ. ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ. ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ. ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ | ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ | ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ | ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ, ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು, ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು, ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ, ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ. ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ, ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ? ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ ಯೋನಿಚಕ್ರವ ಕೂಡಿ ನೆರೆದ ಬಳಿಕ, ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ, ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ, ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ. ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ. ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ. ಅವ ಅಮೇಧ್ಯ ಸುರ ಭುಂಜಕನು. ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ. ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು. ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ. ಸೋವಿಯ ಸಂಗ ಆಲಿಂಗನಂಗೈದವ, ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು. ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು. ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು. ಸಚರಾಚರಯೋನಿ ಯೋನಿನವಕೋಟಿ ತಪ್ಪದು. ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು. ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ, ಅಲ್ಲ ನಿಲ್ಲು, ಮಾಣು, ಹೊರಗಯ್ಯ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.
--------------
ಷಣ್ಮುಖಸ್ವಾಮಿ
-->