ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ, ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ, ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ. ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ. ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ? ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು. ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ. ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ, ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ.
--------------
ಬಾಹೂರ ಬೊಮ್ಮಣ್ಣ
ಮುಟ್ಟಿತ್ತು ಕೆಟ್ಟಿತ್ತೆಂದಡೆ, ಇನ್ನರಸುವ ಠಾವಾವುದಯ್ಯಾ ? ತನುವ ಮರೆದಡೆ, ನೆನಹಿನೊಳಗದೇನೊ ? ಹಾವು ಪರೆಗಳೆದಡೆ, ವಿಷ ನಾಶವಪ್ಪುದೆ ? ಶರಣನು ಕಾಯವೆಂಬ ಕಂಥೆಯ ಕಳೆದಡೆ, ಗತ ಮೃತವಹನೆ ? ಅರಿವು ಲಿಂಗದಲ್ಲಿ ಪ್ರತಿಷೆ*ಯಾಗಿ, ನಿರ್ಲೇಪನಾಗಿ, ಮಹಾಲಿಂಗ ಕಲ್ಲೇರ್ಶವರನಲ್ಲಿ ಲೀಯವಾದ ಶರಣ.
--------------
ಹಾವಿನಹಾಳ ಕಲ್ಲಯ್ಯ
ಕಂಗಳಲ್ಲಿ ನೋಡಿ ದೃಕ್ಕಿಂಗೆ ಒಳಗಪ್ಪುದದೇನು ಹೇಳಾ. ನಾಸಿಕದಲ್ಲಿ ವಾಸಿಸಿ ಲೇಸಾಯಿತ್ತೆಂಬುದದೇನು ಹೇಳಾ. ಕರ್ಣದಲ್ಲಿ ಕೇಳಿ ಜೊಂಪಿಸಿ ತಲೆದೂಗುವುದು ಅದೇನು ಹೇಳಾ. ಜಿಹ್ವೆಯಲ್ಲಿ ಚಪ್ಪಿರಿದು ಪರಿಭಾವ ಪರಿಪೂರ್ಣವಾಯಿತ್ತೆಂಬುದದೇನು ಹೇಳಾ. ಕೈಯಲ್ಲಿ ಮುಟ್ಟಿ ಮೃದು ಕಠಿನವಾಯಿತ್ತೆಂಬುದದೇನು ಹೇಳಾ. ಇಂತೀ ಗುಣ, ಐದರ ಸೂತಕವೋ ? ತಾನರಿದೆ ಮರದೆನೆಂಬ ಭಾವದ ಸೂತಕವೋ? ಒಂದು ಆತ್ಮನೆಂದಲ್ಲಿ, ಇಂದ್ರಿಯಂಗಳು ಒಂದು ಬಿಟ್ಟು ಒಂದರಿಯವಾಗಿ. ಹಲವೆಡೆ ಉಂಟೆಂದಲ್ಲಿ, ಆತ್ಮನ ಹೊಲಬುದಪ್ಪಿದಲ್ಲಿ, ಆ ಕಳೆಯೆಲ್ಲಿ ಅಡಗಿತ್ತು ಹೇಳಾ ? ಇಂತೀ ರೂಪು ಘಟಭಿನ್ನ ಹಲವು ಚೇತನಂಗಳಲ್ಲಿ ಚೇತನಿಸುವುದು ಅದೇತರ ಗುಣವೆಂದು ಅರಿತಲ್ಲಿ, ಅರಿವು ಸೂತಕ ಭ್ರಾಂತಿ ನಿಂದಲ್ಲಿ, ಕಾಮಧೂಮ ಧೂಳೇಶ್ವರನೆಂಬುದಕ್ಕೆ ಠಾವಾವುದಯ್ಯಾ ?
--------------
ಮಾದಾರ ಧೂಳಯ್ಯ
-->