ಅಥವಾ

ಒಟ್ಟು 34 ಕಡೆಗಳಲ್ಲಿ , 23 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿಡಿಹನ್ನಕ್ಕರ ಕಾಮವೆ ಮೂಲ; ಜೀವವಿಡಿಹನ್ನಕ್ಕರ ಕ್ರೋಧವೆ ಮೂಲ; ವ್ಯಾಪ್ತಿಯುಳ್ಳನ್ನಕ್ಕರ ಸಕಲ ವಿಷಯಕ್ಕೆ ಆಸೆಯೆ ಮೂಲ. ಎನ್ನ ಆಸೆ ಘಾಸಿಮಾಡುತ್ತಿದೆ, ಶಿವಯೋಗದ ಲೇಸಿನ ಠಾವ ತೋರು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ, ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ. ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ. ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ಮತ್ಸ್ಯ ಹೊಳೆಯ ನುಂಗಿ, ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ. ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಗುರು ಲಿಂಗ ಒಂದೆಂಬರು. ಗುರು ಲಿಂಗ ಒಂದಾದ ಠಾವ ತಿಳಿದು ನೋಡಿರೆ. ಗುರು ಕಾರುಣ್ಯವಾದ ಬಳಿಕ ಅಂಗದ ಮೇಲೆ ಲಿಂಗವಿರಬೇಕು. ಲಿಂಗವಿಲ್ಲದ ಗುರುಕಾರುಣ್ಯವು ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ, ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ, ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ. ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ. ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ? ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು. ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ. ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ, ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ.
--------------
ಬಾಹೂರ ಬೊಮ್ಮಣ್ಣ
ಹೊಯ್ದ ಭೇರಿಯ ನಾದ ಸಾಗಿತ್ತು ಎಲ್ಲಿಗೆ ? ಅದನಾರು ಬಲ್ಲರು ವೇದ್ಥಿಸಿದ ಠಾವ ? ಗುಡುಗಿನೊಳಗಣ ಗುಲುಗಡಗಿದ ಭೇದವ ? ಅದು ಪೊಡವಿಯೊಳಗೋ, ಅಂಬರದಂಗವೋ ? ಅದರ ಸಂಗವನಾರು ಬಲ್ಲರು ? ಹೊಯ್ದ ಭೇರಿಯ ಕಾಣಬಹುದಲ್ಲದೆ, ನಾದವಡಗಿದ ಠಾವ ಭೇದಿಸಬಹುದೆ ಅಯ್ಯಾ ? ಆ ಶರಣರಿರವು ನಾದಭೇದದಂತೆ, ಗುಡುಗು ಗರ್ಜನೆಯಲ್ಲಿ ಅಡಗಿದಂತೆ, ಇದನೊಡಗೂಡಬಲ್ಲಡೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಯಕ್ಕೆ ಉತ್ಪತ್ಯವಾಗಿ, ಮಧ್ಯಾಹ್ನಕ್ಕೆ ಸ್ಥಿತಿಯಾಗಿ, ಅಸ್ತಮಾನಕ್ಕೆ ಲಯವಹ ದೇಹವ ಹೊತ್ತು ಮತ್ತೆ, ನಿಶ್ಚಿಂತದಲ್ಲಿ ನಿಂದು, ಕಷ್ಟವ ಬಿಡಿಸುವ ಠಾವ ತೋರಾ. ಹಗಲಿಂಗೆ ಹಸಿವು ತೃಷೆ, ಇರುಳಿಂಗೆ ವಿಷಯ ವ್ಯಸನ ವ್ಯಾಪಾರ, ಇಂತೀ ಘಟವ ಹೊಕ್ಕು, ಐದಕ್ಕೆ ಒಡಲಾದೆಯಲ್ಲಾ ಐಘಂಟೇಶ್ವರಲಿಂಗಾ.
--------------
ಸತ್ತಿಗೆ ಕಾಯಕದ ಮಾರಯ್ಯ
ಹಾಸುಹೊಕ್ಕಿನಠಾವ ದಾಸಯ್ಯ ಬಲ್ಲ. ಉಂಬ ಉಡುವ (ಊಡುವ ?) ಠಾವ ಸಿರಿಯಾಳ ಬಲ್ಲ. ಕೊಂಬ ಕೊಡುವ ಠಾವ ಬಲ್ಲಾಳ ಬಲ್ಲ. ಲಿಂಗ ಜಂಗಮದ ಠಾವ ಬಸವಣ್ಣ ಬಲ್ಲ. ರುಚಿಯಠಾವ ಬಂಕಯ್ಯ ಬಲ್ಲ. ನಮ್ಮ ಗುಹೇಶ್ವರನ ನಿಲವ, ಸೊನ್ನಲಿಗೆಯ ಸಿದ್ಧರಾಮಯ್ಯನೆ ಬಲ್ಲ
--------------
ಅಲ್ಲಮಪ್ರಭುದೇವರು
ಅಪರಾಧವ ಮಾಡಿದ ಭಟ ಅರಸಿಂಗೆ ಸಜ್ಜನನಪ್ಪನೆ ? ವ್ರತಭ್ರಷ್ಟ, ನೇಮಕ್ಕೆ ಹಾನಿಯಾದವ. ನಿತ್ಯಕೃತ್ಯವೆಂದು ಹಿಡಿದು ಬಿಟ್ಟವ. ತ್ರಿವಿಧಮಲವನೊಲ್ಲೆನೆಂದು ತೊಟ್ಟವ. ಇಂತೀ ಕಷ್ಟಗುಣದಲ್ಲಿ ನಡೆವ ದೃಷ್ಟಗಳ್ಳರ ನೋಡಾ. ಇದು ಬಾಯೊಳಗಣ ಹುಣ್ಣು ಹೇವರಿಸಿದ ಮತ್ತೆ ಇನ್ನಾವ ಠಾವಿನಲ್ಲಿ ನುಂಗುವ ? ಈ ಹೇಹ[ಯ]ವ ಬಿಡಿಸಾ ಎನಗೆ ಸಂಗನಬಸವಣ್ಣಾ. ಬ್ರಹ್ಮೇಶ್ವರಲಿಂಗವಿಪ್ಪ ಠಾವ ತೋರಾ.
--------------
ಬಾಹೂರ ಬೊಮ್ಮಣ್ಣ
ಹಿಡಿಗಟ್ಟಿಗೊಳಗಾದನೆಂಬ ಸುದ್ದಿಯ ಗುರು ಕೇಳಿದ. ಕೇಳಿ ಸೈರಿಸಲಾರದೆ ಕಂಡು ಕಂಡು, ಇರಿಸುವ ಠಾವಂ ತೋರಿದ. ಅಲ್ಲ್ಲಲ್ಲಿಯಿದ್ದಡೆ ಎಲ್ಲಿಯೂ ಇರನೆಂದು ಅಜಲೋಕಕ್ಕೆ ಕಳುಹಿದ. ಅಜಲೋಕದಲ್ಲಿ ಆನಂದವೆಂಬ ಮನೆಯಲ್ಲಿ, ಭಕ್ತಿಯೆಂಬ ಬಂಧನವಂ ಮಾಡಿ, ಜ್ಞಾನವೆಂಬ ಕಾವಲಂ ಕೊಟ್ಟಿರಲಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಇನಿತು ಬಂಧನಕ್ಕೊಳಗಾದೆ.
--------------
ಸಿದ್ಧರಾಮೇಶ್ವರ
ಗುರುಹಸ್ತಸರೋಜಗರ್ಭ ಮಧ್ಯದಲ್ಲಿ ಹುಟ್ಟಿದ ಶಿಷ್ಯನೆಂಬ ಸತಿಯು, ಗುರುವಿನ ಸದ್ಭಾವಗರ್ಭ ಮಧ್ಯದಲ್ಲಿ ಹುಟ್ಟಿದ ಲಿಂಗವೆಂಬ ಪತಿಯು, ಸಹೋದರ ಸಂಬಂಧದಿಂದರ್ದರಾಗಿ, ಶರಣಸತಿ, ಲಿಂಗಪತಿಯಾದ ಪರಿಹೊಸತು. ಇದು ವಿಪರೀತ ನೋಡ. ಸತಿಪತಿಗಳಿಬ್ಬರೂ ಹೆತ್ತವರ ಕೊಂದು, ತಾವು ಸತ್ತರು. ಇವರು ಮೂವರು ಸತ್ತ ಠಾವನರಿದೆನೆಂದಡೆ ಆರಿಗೂ ಅಸದಳ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಅವರು ಸತ್ತ ಠಾವ ನೀವೇ ಬಲ್ಲಿರಿ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವಿದ್ದುದೇ ಕೈಲಾಸ, ಲಿಂಗವಿದ್ದುದೇ ಕಾಶೀಕ್ಷೇತ್ರ ಲಿಂಗವಿದ್ದುದೇ ಅಷಾ*ಷಷ್ಟಿಮುಕ್ತಿಕ್ಷೇತ್ರ ಕಾಣಿರಣ್ಣಾ. ಇದು ಕಾರಣ, ಲಿಂಗವಿದ್ದ ಠಾವ ಕೇಳಿರೆ: ಲಿಂಗವಿದ್ದ ಠಾವು, ಭಕ್ತಕಾಯ ಮಮಕಾಯವೆಂದುದಾಗಿ ಭಕ್ತನ ಕಾಯ ಲಿಂಗಕಾಯ, `ಲಿಂಗಾಲಿಂಗೀ ಮಹಜ್ಜೀವಿ' ಎಂದುದಾಗಿ ಲಿಂಗವಂತನೇ ಲಿಂಗಪ್ರಾಣಿ ಕಾಣಿರಣ್ಣಾ. ಇಂತೆಂದುದಾಗಿ, ಶಿವಭಕ್ತನ ಸಂಗ ಲಿಂಗಸಂಗ, ಶಿವಭಕ್ತನ ಪಾದವೇ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯ ನಿನ್ನ ವಿಕಳತೆಯಿಂದ ಹಲವು ಪರಿಯ ಭ್ರಮಿತನಾದೆನಯ್ಯಾ. ಅಯ್ಯಾ ಗಿರಿಗಹ್ವರದೊಳಗೆ ಹಲವು ಪರಿಯಲಿ ಅರಸಿ ತೊಳಲಿ ಬಳಲಿದೆನಯ್ಯಾ. ಕಂಡೆ, ಕಂಡೆ, ನೀನಿಪ್ಪ ಠಾವ. ನೀನು ಭಕ್ತಿ ಕಾರಣ ಪರಶಿವಮೂರ್ತಿಯಪ್ಪುದನು ಕಂಡೆ ಕಂಡೆ ನಿನ್ನವರಲ್ಲಿ ಕಪಿಲಸಿದ್ದಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗಿರಿಯೊಳು ಮನದೊಳು ಗಿಡಗಿಡದತ್ತ ದೇವ, ಎನ್ನದೇವ, ಬಾರಯ್ಯಾ, ತೋರಯ್ಯಾ ನಿಮ್ಮ ಕರುಣವನೆಂದು, ನಾನು ಅರಸುತ್ತ ಅಳಲುತ್ತ ಕಾಣದೆ ಸುಯಿದು ಬಂದು ಕಂಡೆ. ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಯ್ಯ, ವರಕುಮಾರದೇಶಿಕೇಂದ್ರನೆ, ನೀನು ಅಷ್ಟಭೋಗಂಗಳಂ ತ್ಯಜಿಸಿ, ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು. ಅದೆಂತೆಂದಡೆ :ಮಹಾಜ್ಞಾನ ತಲೆದೋರಿ ಸರ್ವಸಂಗ ಪರಿತ್ಯಾಗವ ಮಾಡಿ, ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ, ಅಂಗಲಿಂಗದ ಪೂರ್ವಾಶ್ರಯವ ಕಳೆದು, ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ, ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ, ತಮ್ಮ ಕೃಪಾಹಸ್ತವನ್ನಿಟ್ಟು, ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ, ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ, ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ, ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು, ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ, ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ, ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ, ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ, ಏಕಲಿಂಗನೈಷೆ*ಯಿಂದ ಸಾವಧಾನಭಕ್ತಿ ಕರಿಗೊಂಡು, ಆ ಲಿಂಗಾಂಗದ ಭಾಳದ ಪೂರ್ವಲಿಖಿತವ ಜಂಗಮದ ಚರಣೋದ್ಧೂಳನದಿಂದ ತೊಡದು, ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ, ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ, ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ, ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ, ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು, ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ. ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ, ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ. ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ ತೃತೀಯದಲ್ಲಿ ಜಂಗಮಪ್ರಸಾದ ನೋಡ. ಅದರಿಂದತ್ತ ಲಿಂಗಾಂಗವೆರಡಳಿದು, ಸರ್ವಾಚಾರಸಂಪತ್ತಿನಾಚರಣೆಯ ತೋರಿ, ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ, ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ ಚತುರ್ಥದಲ್ಲಿ ನಿಜಪ್ರಸಾದ ನೋಡ. ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು, ಇನ್ನಾವ ಭಯಕ್ಕೆ ಹೆದರಬೇಡಯ್ಯ! ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ, ಬಂದುದು ಕೊಂಡು, ಬಾರದುದನುಳಿದು ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನ್ನಷ್ಟು ... -->