ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಗುರುವಿನ ಶ್ರೀಪಾದವಿಡಿದ ಶಿವಕವಿ ಅತೀತನೆಂತೆನೆ : ``ಪರಬ್ರಹ್ಮಸ್ವರೂಪ ಉತ್ತಮಂ ಮುಕ್ತಿ ಸಂತತಃ ದೇವದೂತಿ ಪ್ರಸನ್ನಿತೆ ಉಭಯಮಾರ್ಗ ವರಕವಿ ಮುದಿಮಮ್ ಪ್ರಳಯಕಾಲಸ್ಯ | ಆತ್ಮತೃಪ್ತಿ ನರಕವಿ ರಾಜವಂದಿತಾ ತನ್ನಿಷ್ಟ ನರಕಪಿತಃ ತ್ರಿವಿಧ ಶಬ್ದ ಶಾಸ್ತ್ರಯಿತಾರ್ಥ ಸಮೋದ್ದಿಷ್ಟ ವಚನಧಾರಿ ನಿಷ್ಕಳಂ ||''(?) ಶ್ರೀ ಶ್ರೀ ಕವಿಗಳೆಂದು ಪೆಸರಿಟ್ಟುಕೊಂಡು ನುಡಿವಣ್ಣಗಳಿರಾ ಕಾಯದ ಕೀಲನರಿತು ಕಾವ್ಯತ್ವವನು ಮಾಡಿ ಭೇದವ ಬಲ್ಲರೆ ಹೇಳಿ, ಅರಿಯದಿರ್ದೊಡೆ ಕೇಳಿ. ನಿಮ್ಮ ಅಂಗ ಪಾತಾಳವೆಂಬ ಪವನಸೂತ್ರವನು ಮೆಟ್ಟಿ ಬಿಡುವಿಲ್ಲದಂತಾ ಉಯ್ಯಾಲೆಯನಾಡುತಿಹುದು. ನಿಮ್ಮ ಅಂಗ ಭುವಿಯೆಂಬ ಭೂಚಕ್ರದ ಮೂಲ ತಿಳಿದು ನಾಭಿಮಂಡಲವೆಂಬ ಹುತ್ತದೊಳಗಿರ್ದ ನಾಗಕೂರ್ಮನೆಂಬ ಘಟಸರ್ಪನ ತಲೆಕೆಳಗಾಗಿ ಬಾಲ ಮೇಲಕಾಗಿರುವುದು ಕಾಣಿರೋ. ಯೋಗದೃಷ್ಟಿಯೆಂಬ ನಾಗೇಶ್ವರನನು ಹಿಡಿದುಕೊಂಡು ಊದಲಾಗಿ ಆಗ ನಾಗಕೂರ್ಮನೆಂಬ ಸರ್ಪ ಸಭೆಯನು ತಿಳಿಯಲಿಕ್ಕೆ ಇಳುಹಿ ತಲೆಯ ಮೇಲಕ್ಕೆ ಮಾಡಿ ಗಗನಾಕಾರವೆಂಬ ಮಂಡಲಕ್ಕೆ ಹೆಡೆಯೆತ್ತಿ ಆರ್ಭಟಿಸಿ ಝೇಂಕರಿಸಿ ನಲಿದಾಡುವಂತೆ, ನಾದವನು ತನ್ನಲ್ಲಿ ಜ್ಞಾನೋದಯದಿಂದ ಲಾಲಿಸಿ ಕೇಳಬಲ್ಲರೆ ಆತನಿಗೆ ಝೇಂಕಾರ ಮೊದಲಾದ ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪಶಾಸ್ತ್ರಂಗಳಲ್ಲಿ ಗೀತ ಗಾಯನ ಯತಿ ಪ್ರಾಸ ದೀರ್ಘ ಗುರು ಲಘು ಬತ್ತೀಸ ರಾಗವನು ಎತ್ತಿ ಹಾಡುವಂತ ಮೂಲದ ಕೀಲ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಪಂಚಶತಕೋಟಿ ಭುವನದಲ್ಲಿ ಚಲಿಸ್ಯಾಡುವಂಥ ಮನದ ಚಂಚಲವೆಂಬ ಪಕ್ಷಿಯ ಪಕ್ಕವನು ಹರಿದು, ತನುವೆಂಬ ಪಂಜರದೊಳಗೆ ಇಂಬಿಟ್ಟುಕೊಂಡು, ತಾಮಸ ಮದಗುಣಾದಿಗಳೆಂಬ ಹುಳುಗಳ ಜಾತಿಗಳ ತೂಗಡಿಕೆ ಮದನಿದ್ರೆ ವಾಹಡಿಕೆ ಆಕಳಿಕೆ ಸೀನು ಬಿಕ್ಕಳಿಕೆ ಬದಗರ ತೇಗು ಮೊದಲಾದ ತಾಮಸಗುಣಾದಿ ಗುಣಂಗಳೆಂಬ ಹುಳುಜಾತಿಗಳನ್ನೆಲ್ಲ ತಿಂದು ನುಂಗಿ ನಿರ್ಮಲ ದೇಹಿಯಾಗಿರಬಲ್ಲರೆ ಆತನಿಗೆ ಒಂ ನಮಃಶಿವಾಯ ಎಂಬ ಷಡಕ್ಷರದ ಭೇದವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮಗೆ ಅಷ್ಟದಿಕ್ಕಿನಲ್ಲಿ ಆಡುವಂಥ ದಶರೂಪಗಳನ್ನೆಲ್ಲ ಚಿತ್ತ ಏಕ ಮಾಡಿ, ಸುಜ್ಞಾನವೆಂಬ ಹಸ್ತದಲ್ಲಿ ಹಿಡಿದು, ಮುಖದ ಮೇಲುಗಿರಿಮಂದರಪರ್ವತದ ಶಿಖರದ ತುದಿಯಲ್ಲಿ ನಿಲ್ಲಿಸಿ, ಕ್ಷೀರಸಾಗರವೆಂಬ ಸಮುದ್ರದೊಳಗೆ ಹುಚ್ಚೆದ್ದು ಸೂಸಿ ಆಡುವಂಥ ತೆರೆಗಳನ್ನೆಲ್ಲ ನಿಲ್ಲಿಸಬಲ್ಲರೆ ಆತನಿಗದು ತ್ರಿಕಾಲ ಮರಣಾದಿಗಳನ್ನೆಲ್ಲ ಗೆಲಿಯಬಲ್ಲಂಥ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಆತನಿಗೆ ಜ್ಞಾನ ಅರ್ಥ ಪದದ ಕೀಲ ವಚನಂಗಳ ಅರ್ಥ ಅನುಭಾವಂಗಳ ಮಾಡಬಲ್ಲನೆಂದೆನ್ನಬಹುದು ಕಾಣಿರೋ ! ಇಂತು ಮಂತ್ರದ ಕೀಲನರಿಯದ ಕವಿಗಳು ಕಂದಯ್ಯಗೆ ಮಹಾಪ್ರಭುಲಿಂಗಲೀಲೆ, ಕರಣಹಸಿಗೆ, ಮಿಶ್ರಾರ್ಪಣ, ನವಚಕ್ರಕೋಟಿಗಳೆಂಬ ಇಂತೀ ಭುವಿಯಲ್ಲಿ ಶಿವಾಗಮವೆಂದು ಬರಿಯ ಮಾತಿನ ಮತಿಯ ಪತ್ರವನು ಹಿಡಕೊಂಡು ಓದಿ, ಅದರೊಳಗಿನ ಅರ್ಥವನು ಭಾವಂಗಳಲಿ ತಿಳಿತಿಳಿದು ನೋಡಿ, ಜ್ಞಾತತ್ವದ ವಚನಂಗಳ ಮಾಡಿ ಇಡುವಂಥ ಕವಿಗಳು ತಮ್ಮ ಆತ್ಮದ ಶುದ್ಧಿಯ ತಾವರಿಯದೆ ಭೂತವೊಡೆದವರು ಬೊಗಳಾಡಿದಂತೆ ಆಯಿತ್ತು ಕಾಣಿರೋ. ಅದೆಂತೆಂದರೆ :ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹಂಚಿನ ಕುಡಿಕೆಯೊಳಗೆ ತುಂಬಿದ ಅರ್ಥ ಅನುಭಾವಂಗಳ ತಿಳಿತಿಳಿದು ನೋಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ರವಿಶಶಿಯಾದಿಗೂ ಹೆಸರದೆಸೆಯ ಕೊಂಡುಕೊಂಡು, ಇಂತಿವು ಮೂರನು ಕೂಡಿಕೊಂಡು, ಒಂದಕ್ಕೆ ಒಂದು ಕಟ್ಟಿ ಹಾಕಿ ಪ್ರಾಸ ಬಿದ್ದಿತೊ ಬೀಳದೊ ಎಂದು ತಮ್ಮನದಲ್ಲಿ ತಾವು ಅಳದಾಡುವಂತೆ ಒಂದು ಹೊದವಿದ ಪದ್ಯವನು ಮಾಡಿ ಇಡುವಂತಹ ಕಲಿಕೆಯ ಕವಿಗಳು ಮುಂದೆ ಅಜ್ಞಾನದಿಂದ ಮುಕ್ತಿಯ ದಾರಿಯ ಕಾಣಲರಿಯದೆ ಮುಂದುಗಾಣದ ತುರುಕರು ಅಘೋರವೆಂಬ ನರಕದ ಕಿಚ್ಚಿನ ಕೊಂಡದೊಳಗೆ ಬಿದ್ದು ಹೋರಟೆಗೊಳ್ಳುತ್ತಿದ್ದರು ಕಾಣಿರೋ. ಅದೆಂತೆಂದರೆ ; ಛಂದಸ್ಸು ನಿಘಂಟು ಅಮರ ವ್ಯಾಕರಣ ನಾನಾರ್ಥಂಗಳೆಂಬುವೆಲ್ಲ ಕವಿಯೆಂಬ ಕುಂಬಾರ ಮಾಡಿ ಸವಿದುಂಡು ಬೀದಿಯೊಳಗೆ ಬಿಟ್ಟಿರ್ದ ಎಂಜಲ ಪತ್ರಾವಳಿಯೊಳಗಿನ ಭೋಜನಕ್ಕೆ ಕವಿಗಳೆಂಬುವ ಆರುಮಂದಿ ಸೊಣಗಗಳು ಕೂಗಿಡುತಿರ್ದವು ಕಾಣಿರೋ. ಅದೆಂತೆಂದರೆ:ಕಾಮ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಕ್ರೋಧ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮದ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮೋಹ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಮಚ್ಚರ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಲೋಭ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಇಂತಿವರು ಆರು ಮಂದಿ ಕವಿಗಳೆಂಬ ಶ್ವಾನಗಳು ಕೂಡಿ ನಾ ಹೆಚ್ಚು ತಾ ಹೆಚ್ಚು ಎಂದು ಒಂದಕ್ಕೊಂದು ಕಾದಾಡಿ ಚಿತ್ತಪಲ್ಲಟವಾಗಿ, ಆ ಪತ್ರದೊಳಗಿನ ಬೋನದ ಸವಿಯನು ಬಿಟ್ಟು ಚಿತ್ತಪಲ್ಲಟವಾಗಿ, ಆ ಪತ್ರದ ತುಳಿಯನು ಹರಿದುಕೊಂಡು ತಿಂದು ಹಲವು ಕಡೆಗೆ ಹರಿದಾಡುತ್ತಿದ್ದವು ಕಾಣಿರೋ. ಅದು ಎಂತೆಂದರೆ :ಇಂತು ಕಾಯದ ಕೀಲನರಿಯದೆ ಮಾಡಿದ ಕವಿಗಳು ಕಾಲನ ಬಾಧೆಗಳೆಂಬ ಮರಣಕ್ಕೆ ಒಳಗಾಗಿ ಹೋದಂತೆ ಕುರುಡ ಕವಿಗಳಂ ಕಂಡು ನಗುತ್ತಿದ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
-->