ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇಣಿನ ಬೆಸೆ, ಒಂಬತ್ತುಹುರಿ ಬೇವ, ಎರಡು ಹಿಡಿಕಿಯ ಕೊಡತಿ ಹೆಣಕಿಲ್ಲದ ತಟ್ಟಿ, ಇಂತೀ ಆಯುಧದಿಂದ ಕೆಂಪಡಿ ಮಸಬ ಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸದೆ ಎರಿನೀರು ಕಲ್ಲಭೂಮಿಯ ಹತ್ತಿ ಅರಳಿಯ ಪಿಡಿದು ಝಾಡಿಸಿ, ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎಲಾ, ಶಿವಪೂಜೆಯ ಮಾಡುವ ಶಿವಪೂಜಕರು ನೀವು ಕೇಳಿರಯ್ಯಾ ; ನಿಮ್ಮ ಶಿವಪೂಜೆ[ಯ]ವಿಧ ಯಾವುದೆಲಾ ? ಜಲದಿಂದ ಮಜ್ಜನವ ನೀಡುವಿರಿ ; ಜಲ ಮೀನಿನೆಂಜಲು. ಅಡವಿಯಂ ತಿರುಗಿ, ಪುಷ್ಪವಂ ತಂದು, ಶಿವಗಂ ಅರ್ಪಿ[ಸುವಿರಿ]; ಪುಷ್ಪ ಭೃಂಗದೆಂಜಲು. ಪಂಚಾಭಿಷೇಕ[ವ]ಮಾಡುವಿರಿ; ಕ್ಷೀರ ಕರುವಿನೆಂಜಲು. ಮಧು[ವ] ಅಭಿಷೇಕವ ಮಾಡುವಿರಿ; [ಮಧು] ಮಧು[ಕ]ರಮಯಂ. [ಇಂ]ತೀ ನೈವೇದ್ಯವಂ ಮಾಡುವೆಯಲ್ಲದೆ ಶಿವಪೂಜೆಯ ವಿಧವ ಬಲ್ಲೆ ಏನಯ್ಯಾ ? ಅದು ಎಂತೆಂದಡೆ: ಮಾನಸ ಪೂ[ಜಕ]ಸ್ಯ ಸರ್ವಪಾಪಃ [ಪರಿಹರತಿ] | ಸಾ[ಮೀ]ಪ್ಯ[ಂ] ಸದ್ಗು[ರೋಃ] ಪ್ರಾ[ಪ್ಯ] ಪುನರ್ಭವ ವಿನಶ್ಯತಿ || ಇಂತೀ ಆಗಮ ಗ್ರಂಥವುಂಟಲ್ಲಾ ಇದನ್ನರಿತು ಮಾನಸವೆಂಬೋ ಕಲ್ಲಿನ ಮೇಲೆ ಮದಮಚ್ಚರವೆಂಬೋ ಗಂಧ ಕೊರಡಿನಿಂದ ತೇಯ್ದು, ಸತ್ಯವೆಂಬೋ ಗಂಧವಂ ಹಚ್ಚಿ, ನಿತ್ಯತ್ವ ಎಂಬೋ ಅಕ್ಷತೆಯನಿಟ್ಟು, ಗುರುಕೀಲೆಂಬೋ ಒರಳಿನಲ್ಲಿ ಮದಮಚ್ಚರವೆಂಬೋ ತಂಡಿಲಂ ಕುಟ್ಟಿ, ಬುದ್ಧಿಯೆಂಬೋ ಮೊರದಿಂದ ಝಾಡಿಸಿ ಕೇರಿ, ನಿಜವೆಂಬೋ ಅನ್ನವಂ ಮಾಡಿ, ನಿರ್ಮಳ ಚಿತ್ತವೆಂಬೋ ತುಪ್ಪವಂ ನೀಡಿ, ನಿರುಪಮ ಅವಸ್ಥೆಗಳಿಂದ ನೈವೇದ್ಯವಂ ಕೊಟ್ಟು, ಕಾಮಕ್ರೋಧವೆಂಬೋ ಬತ್ತಿಯ ಹೊಸೆದು, ಗುರುಪ್ರಣುತವೆಂಬೋ ಪಣತಿಯೊಳಗೆ ನಿರ್ಮಳವೆಂಬೋ ತೈಲವಂ ಎರೆದು ಜ್ಯೋತಿಯ ಮುಟ್ಟಿಸಿ, ನಿರ್ಮಳ ಲಿಂಗಕ್ಕಂ ಅರ್ಪಿಸಿ ಮೋಕ್ಷವ ಕಂಡಡೆ ಶಿವಪೂಜಕನೆಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಶಿವಪೂಜೆ' 'ನೀ ಶಿವಪೂಜಕ'ನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಭವಿ ಭಕ್ತರೆಂಬೆರಡು ವಿವರವಾಯಿತು ನೋಡಾ ಅಯ್ಯಾ. ಭವಿಗೆ ಶೈವ, ಭಕ್ತಂಗೆ ವೀರಶೈವ. ಭವಿ ಶೈವಲಿಂಗವ ಪೂಜೆಮಾಡಿದರೆ ಅವರ ಭಾವಕ್ಕೆ ಒಲಿವನಲ್ಲದೆ, ಶಿವಭಕ್ತ ಶೈವಲಿಂಗವ ಪೂಜೆಮಾಡಿದರೆ ತಪ್ಪದು ನರಕ. ಅದು ಕಾರಣವೆಂದರೆ : ಶಿವಲಿಂಗ ಕರಸ್ಥಲದಲ್ಲಿರುತಿರೆ ಆ ಲಿಂಗದ ಪೂಜೆಯ ಮಾಡಿ, ವರವ ಪಡೆಯಲರಿಯದೆ, ಅನ್ಯಲಿಂಗಕ್ಕೆ ಹರಿದು ಹೋಗಿ, ಗಡಗಡನುರುಳಿ, ಆ ಲಿಂಗದೇವಾಲಯವ ಪ್ರದಕ್ಷಣ ಮಾಡಿದರೆ, ಕುನ್ನಿ ಬೂದಿಯೊಳಗೆ ಹೊರಳಿ ಲಟಪಟನೆ ಝಾಡಿಸಿ ಎದ್ದು ತುಡುಗಿಗೆ ಮನೆಯೊಳು ಹೊಕ್ಕು ಸುತ್ತುತಿರೆ ನಡುನೆತ್ತಿಯ ಮೇಲೆ ಬಡಿವಂತೆ, ಏನೆಂದು ಸಟೆಮಾಡನಯ್ಯಾ ಇಂತಪ್ಪ ಅಜ್ಞಾನಿಗಳ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
-->