ಅಥವಾ

ಒಟ್ಟು 106 ಕಡೆಗಳಲ್ಲಿ , 32 ವಚನಕಾರರು , 90 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ ಸಮರಸದಲ್ಲಿ! ಉದಯದ ಬೆಳಗನು ಮದಗಜ ಒಳಕೊಂಡು ಮಾವತಿಗನ ನುಂಗಿ ಉಗುಳದಲ್ಲಾ! ಸದಮದ ಭರಿಕೈಯೊಳಗೆ ಈರೇಳು ಭುವನವನು ಒದರಿ ಹಾಯ್ಕಿ ತಾನೆ ನಿಂದುದಲ್ಲಾ! ಸದಮಲಜಾÕನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಸ್ವಯವಾಯಿತ್ತು
--------------
ಚನ್ನಬಸವಣ್ಣ
ಕ್ರಿಯಾಸ್ವರೂಪವೇ ಲಿಂಗವೆಂದು, ಜಾÕನಸ್ವರೂಪವೇ ಜಂಗಮವೆಂದು, ಜಾÕನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ ಲಿಂಗಕ್ಕೆ ಜೀವಕಳೆಯೆಂದೆ. ಜ್ಯೋತಿ ಕರ್ಪೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು. ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು. ಈ ಕ್ರಿಯಾ ಜಾÕನ ಭಾವ ನಿರವಯವಾದವಾಗಿ ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ ಇದುಕಾರಣ, ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ. ಕೊಡುವುದು ಕೊಂಬುದು ಎರಡೂ ನಿರ್ಲೇಪವಾದ ಬಳಿಕ ನಾನೆಂಬುದೂ ನೀನೆಂಬುದೂ, ಏನು ಏನುಯೆಂಬೂದಕ್ಕೆ ತೆರಹಿಲ್ಲದೆ, ಪರಿಪೂರ್ಣ ಸರ್ವಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಗಧ್ಯಾನವೆಂಬುವ ಬಂದಿಕಾನವ ಹೊಕ್ಕು, ಸತಿಯರ ಸವಿನುಡಿಯೆಂಬ ಶಸ್ತ್ರವ ಹಾಯ್ದು, ಅಂಗನೆಯರ ಶೃಂಗಾರವೆಂಬ ಕತ್ತಲೆಗವಿದು, ಕಂಗಳು ಕೆಟ್ಟು, ಲಿಂಗನೆನಹೆಂಬ ಜ್ಯೋತಿ ನಂದಿತ್ತು ನೋಡಾ. ಆ ಸ್ವಯಂ ಜ್ಯೋತಿ ಕೆಡದ ಮುನ್ನ, ಅಂಗವಿಕಾರವೆಂಬ ಅರಸು ಅನಂತ ಹಿರಿಯರ ನುಂಗುವದ ಕಂಡು, ಮಹಾಜ್ಞಾನಿಗಳು ಹೇಸಿ ಕಡೆಗೆ ತೊಲಗಿದರು ನೋಡಾ ನಿಮ್ಮ ಪ್ರಮಥರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ ಬಯಲಾವುದುಂಟು ಹೇಳಿರಣ್ಣಾ ? ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ ಜ್ಯೋತಿ ಆವುದುಂಟು ಹೇಳಿರಣ್ಣಾ ? ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧವನರಿದು, ತ್ರಿವಿಧವ ಮರೆದು, ಕಲಿಯುಗದ ಕತ್ತಲೆಯ ದಾಂಟಿ, ತನ್ನ ಭವವ ದಾಂಟಿದವಂಗೆ, ಬ್ರಹ್ಮಾಂಡದ ಬಯಲು ಕೈವಶವಾಯಿತ್ತು. ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು, ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮನೆಯೊಳಗಣ ಜ್ಯೋತಿ ಮನೆಯ ಮುಟ್ಟದಂತೆ, ಬಸುರೊಳಗಣ ಶಿಶು ಬಸುರ ಮುಟ್ಟದಂತೆ, ಕಕ್ಷೆ, ಕರಸ್ಥಳ, ಅಂಗಸೋಂಕು ಮುಖಸೆಜ್ಜೆ ಕಂಠ ಉತ್ತಮಾಂಗ, ಇವೆಲ್ಲ ಆಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ.
--------------
ಚನ್ನಬಸವಣ್ಣ
ಆರೆಂದು ಕುರುಹ ಬೆಸಗೊಳಲು, ಏನೆಂದು ಹೇಳುವೆನಯ್ಯಾ ? ಕಾಯದೊಳಗೆ ಮಾಯವಿಲ್ಲ; ಭಾವದೊಳಗೆ ಭ್ರಮೆಯಿಲ್ಲ. ಕರೆದು ಬೆಸಗೊಂಬಡೆ ಕುರುಹಿಲ್ಲ. ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು ನಿರ್ಬುದ್ಧಿಯಾದವಳನೇನೆಂಬೆನಣ್ಣಾ ? ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ ಎನ್ನ ಅಜಗಣ್ಣತಂದೆಯ ಬೆನ್ನಬಳಿಯವಳಾನಯ್ಯಾ.
--------------
ಮುಕ್ತಾಯಕ್ಕ
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು. ದೂರ[ದ] ಧಾತು ಸಾರಾಯದೊಳಡಗಿತ್ತು. ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ. ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು, ಘೋರ ರುದ್ರನ ದಳ ಮುರಿಯಿತ್ತು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ ಕಂಡೆನಯ್ಯ. ಮೂಜಗ ಸತ್ತು ಮೂಜಗದೊಡೆಯನುಳಿದುದು ಸೋಜಿಗವೆಂದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಘುಟಿಕಾಸಿದ್ಧರ ಘುಟಿಕೆಯುರುಳಿತ್ತು ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು ಮಂತ್ರಿಗಳ ಮಂತ್ರ ಮರೆತುಹೋಯಿತ್ತು ಔಷಧಿಗರ ಔಷಧವನಾರಡಿಗೊಂಡಿತ್ತು ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು ಮೂರ್ಛಿತರಾದರು ಕಾಣಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಅವನು ಅವಳು ಅದು ನಾನೆಂಬ ಜ್ಯೋತಿ ಅಡಗಿತ್ತಾಗಿ ಕರ್ಮ ನಷ್ಟ. ರೂಪ ನಿರೂಪೆಂಬುದು ಕೆಟ್ಟುದಾಗಿ ಮಾಯೆ ನಷ್ಟ. ಅರಿವು ತಲೆದೋರಿತ್ತಾಗಿ ಆಣವ ನಷ್ಟ. ಶಿವಪ್ರಕಾಶವಾದ ಕಾರಣ ತಿರೋಧಾನಶಕ್ತಿ ನಷ್ಟ. ಫಲಪದವಿಗಳು ಬಯಕೆ ಹಿಂಗಿತ್ತಾಗಿ ಇಚ್ಛಾಶಕ್ತಿ ನಷ್ಟ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕರಸ್ಥಲದ ಲಿಂಗ ಕೈಸೇರಿ ಇರು ತಿರಲನ್ಯ ಭಯಗಳುಂಟೆ ಗುರುವೆ ? ಪದ :ಕಂಠೀರ[ವ]ನಿಹ ವನದೊಳು ಕರಿಯಭಯ ವುಂಟೇ ಇನ್ನಾ ತೆರದೊಳು ಬಂಟಾಯುಧವಿರೆ ಕರದೊಳು ಸೂಜಿಯ ಮೊನೆಯ ತುಂಟಕದ ಭಯಗಳುಂಟೆ ಗುರವೆ ? | 1 | ಕರಿಯನೇರಿ ಪೋಗುತಿರಲು ಶುನಿ ಬಗುಳುತ ಬರುತಿರುವ ಭಯಗಳುಂಟೆ ನೋಡಾ. ಹರನೆನ್ನ ಕರದೊಳಿರಲು ಪಂಚೇಂದ್ರಿ ದುರಿತ ಭಯದಂಜಿಕೆಯುಂಟೆ ಗುರುವೆ ? | 2 | ದ್ಯುಮಣಿಗುರಿಯ ಭಯಗಳುಂಟೆ ? ಅಷ್ಟದಳ ಕಮಲದೊಳು ಸುಳಿವ ಹಂಸ ತಾನೆ ಭ್ರಮರನಂತೆ ಕರಕಮಲದ ಲಿಂಗವ ತಾ ಭ್ರಮಿಸೆರಗೆ ಭಯಗಳುಂಟೆ ಗುರುವೆ ? | 3 | ಉರಿಯುತಿರೆ ಜ್ಯೋತಿ ಗೃಹದಿ ತಮ ನಡೆದು ಬರುವ ಬ್ಥೀತಿಯುಂಟೆ ನೋಡಾ. ಪರಂಜ್ಯೋತಿರ್ಲಿಂಗಯೆನ್ನ ಅಂಗಾಕಾರದೆ ಇರೆ ಮಾಯದ ಬ್ಥೀತಿಯುಂಟೆ ಗುರುವೆ ? | 4 | ಉರಗ ಮುಟ್ಟಲು ಓರ್ವನ ತನು ವಿಷದಿ ಭರಿತವಾದಂತೆ ಶರಣ ಶರೀರವನು ಸೊಮ್ಮು ಸೋಂಕಿ ಸರ್ವಾಂಗ ಕಾರಣಲಿಂಗವಾಗೆ ಭಯವೆ ಗುರುವೆ ? | 5 | ಅಗಲದೆ ಸರ್ವಾಂಗದಿ ಭರಿತವಾದಂತೆ ಶರಣ ಶಿವಲಿಂಗ ಝಗಝಗಿಸುತಿದೆ ಕೋಯೆಂದು ನುಡಿದು ಪೊಗಳ್ದ ಹೇಮಗಲ್ಲ ಹಂಪ ಪಡುವಿಡಿಯ ಬಗೆಯ ಗುರು ರಾಚನಿರವು ತಾನೆ | 6
--------------
ಹೇಮಗಲ್ಲ ಹಂಪ
ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ. ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ ! ಅದೆಂತೆಂದಡೆ: ಸಜ್ಜನವೆ ಮಜ್ಜನ, ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ, ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಾವು ಗುರುವೆಂದು ಮುಂದಣವರಿಗನುಗ್ರಹವ ಮಾಡುವರಯ್ಯಾ, ತಾವು ಗುರುವೆಂತಾದರೊ ! ಎಲ್ಲರಿಗೆಯೂ ಒಂದೇ ದೇಹ. ``ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ ಆತ್ಮಾಕಾಯಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಯಂ' ಎಂದುದಾಗಿ, ಗುರುವೆಂಬುದು ತಾನು ಪರುಷವು ಆ ಪರುಷವು ಮುಟ್ಟಲೊಡನೆ ಉಳಿದ ಲೋಹಂಗಳು ಸುವರ್ಣವಾದುವಲ್ಲದೆ, ಆ ಪರುಷವೆ ಆಗಲರಿಯವು_ ಅದು ಗುರುಸ್ಥಲವಲ್ಲ ನಿಲ್ಲು ಮಾಣು. ಗುರುವೆಂಬುದು ತಾನು ಸ್ವಯಂ ಜ್ಯೋತಿಪ್ರಕಾಶವು, ಅಂತಪ್ಪ ಸ್ವಯಂಜ್ಯೋತಿ ಪ್ರಕಾಶವ ತಂದು ಪರಂಜ್ಯೋತಿಯ ಹೊತ್ತಿಸಿದಡೆ, ಆ ಜ್ಯೋತಿ ತನ್ನಂತೆ ಮಾಡಿತ್ತು. ಅದಾವ ಜ್ಯೋತಿಯೆಂದಡೆ ಪಶ್ಚಿಮಜ್ಯೋತಿ. ಆ ಪಶ್ಚಿಮಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು ಸುಖಿಯಾದೆನು. ನಾಲ್ಕು ವೇದಾರ್ಥ:ಅಜಪಗಾಯತ್ರಿ. ಅಜಪಗಾಯತ್ರಿಯರ್ಥ:ಪ್ರಾಣಾಯಾಮ. ಪ್ರಾಣಾಯಾಮದಿಂದ ಪ್ರಾಣಲಿಂಗ ಸಂಬಂಧವ ಮಾಡೂದು. ಇಷ್ಟರಲ್ಲಿ ತಾನು ಸ್ವತಂತ್ರನಾದಡೆ, ಇಷ್ಟಲಿಂಗವನಾರಿಗಾದರೂ ಕೊಡುವುದು. ಇಲ್ಲದಿದ್ದರೆ ಅಂಧಕನ ಕೈಯ ಹೆಳವ ಹಿಡಿದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ
--------------
ಚನ್ನಬಸವಣ್ಣ
ಇನ್ನಷ್ಟು ... -->