ಅಥವಾ

ಒಟ್ಟು 71 ಕಡೆಗಳಲ್ಲಿ , 34 ವಚನಕಾರರು , 65 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನರಕುಲ ಹಲವಾದಲ್ಲಿ, ಯೋನಿಯ ಉತ್ಪತ್ಯ ಒಂದೇ ಭೇದ. ಮಾತಿನ ರಚನೆ ಎಷ್ಟಾದಡೇನು ? ನಿಹಿತವರಿವುದು ಒಂದು ಭೇದ. ವಸ್ತು ಜಾತಿ ಗೋತ್ರ ವಿಶೇಷವೆಂಬಲ್ಲಿ, ದಿನರಾತ್ರಿಯೆಂಬ ಉಭಯವನಳಿವುದಕ್ಕೆ ತಮ ಬೆಳಗೆರಡೆಂಬವಲ್ಲದಿಲ್ಲ. ಕುಲ ಉಭಯಶಕ್ತಿ ಪುರುಷತ್ವವಲ್ಲದಿಲ್ಲ. ಬೇರೆ ಹಲವು ತೆರನುಂಟೆಂದಡೆ, ಮೀರಿ ಕಾಬ ಶ್ರುತ ದೃಷ್ಟ ಇನ್ನಾವುದು ? ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ ಆರೈದು ನೋಡುವ ದೃಷ್ಟಿಯೊಂದೆ ಬೊಂಬೆ. ಬೊಂಬೆ ಹಲವ ನೋಡಿಹೆ, ಬೊಂಬೆ ಹಲವಂದ ಕಾಣ್ಬಂತೆ, ಅದರಂಗವ ತಿಳಿದು ನಿಂದಲ್ಲಿ, ಹಲವು ಕುಲದ ಹೊಲೆಯೆಂದೂ ಇಲ್ಲವೆಂದೆ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ
--------------
ವೀರ ಗೊಲ್ಲಾಳ/ಕಾಟಕೋಟ
ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು. ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ. ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ. ಏನನರಿತಡೂ ಜೀವನ ನೋವನರಿಯಬೇಕು. ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು. ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ, ಕಡಿಯಬಹುದೆ ಅಯ್ಯಾ ? ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ ಕೊಡನೊಡೆದ ಏತದ ಕಣೆಯಂತೆ, ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ನೂರನೋದಿ ನೂರ ಕೇಳಿ ಏನು ಆಸೆ ಬಿಡದು, ರೋಷ ಪರಿಯದು. ಮಜ್ಜನಕ್ಕೆರೆದು ಫಲವೇನು ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು ಆ ಜಾತಿಯಂತಹವಲ್ಲದೆ ಮತ್ತೊಂದು ಜಾತಿಯಹವೆ ಹೇಳಾ. ``ಯಥಾ ಬೀಜಸ್ತಥಾ ವೃಕ್ಷಃ' ಎಂಬ ನ್ಯಾಯದಂತೆ, ಲಿಂಗದಿಂದೊಗೆದ ಶರಣ ಲಿಂಗವಹನಲ್ಲದೆ, ಮಾನವನಾಗಲರಿಯನೆಂಬುದಕ್ಕೆ ಗುರುವಚನವೇ ಪ್ರಮಾಣು. ಇಂತಿದನರಿಯದೆ, ನಾನು ಮಾನವನು ದೇಹಿ ಸಂಸಾರಬದ್ಧನು ಎಂಬವಂಗೆ, ಎಂದೆಂದು ಮುಕ್ತಿಯಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾನವನಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. ಅದೆಂತೆಂದಡೆ: 'ಭಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ | ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ || ' ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ. ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ ಕುಂಭೇಶ್ವರಲಿಂಗವೆಂಬೆನು.
--------------
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
ಶೀಲವಂತರು ಶೀಲವಂತರು ಎಂದು ಶೀಲದಲ್ಲಿ ಆಚರಿಸುವ ಅಣ್ಣಗ[ಳೇ] ನಿಮ್ಮ ಶೀಲವಾವುದು ಹೇಳಿರೋ, ಅರಿಯದಿದ್ದರೆ ಕೇಳಿರೋ: ಶಿರಸ್ಸಿನಲ್ಲಿ ಶಿವನಿಪ್ಪ, ಕಟಿಯಲ್ಲಿ ವಿಷ್ಣುವಿಪ್ಪ, ಆಧಾರದಲ್ಲಿ ಬ್ರಹ್ಮನಿಪ್ಪ, ಲಲಾಟದಲ್ಲಿ ವಿಭೂತಿರುದ್ರಾಕ್ಷಿ, ಜಿಹ್ವೆಯಲ್ಲಿ ಪಂಚಾಕ್ಷರಿಯು. ಇಂತಪ್ಪ ಅಷ್ಟಾವರಣದಲ್ಲಿ ಸವೆಯದೆ, ಸಂಸಾರವೆಂಬ ಶರದ್ಥಿಯಲ್ಲಿ ಮುಳುಗೇಳುವರು ಶೀಲವಂತರಲ್ಲ. ಬರಿದೆ ನಾವು ಶೀಲವಂತರೆಂಬುವ ಮನುಜ ಕೇಳು: ಕಣ್ಣೇ ಕಂಚುಗಾರ, ಕರ್ಣವೇ ಬಣಜಿಗ, ಮೂಗೇ ಈಳಿಗ, ಕೊರಳೇ ಕುಂಬಾರ, ತುಟಿಯೇ ಹೆಂಡಗಾರ, ಹಲ್ಲೆ ಕಲ್ಲುಕುಟಿಗ, ತಲೆಯೇ ಮೋಪುಗಾರ, ಬೆನ್ನೇ ಜೇಡ, ಅಂಗೈಯೇ ಅಕ್ಕಸಾಲಿಗ, ಮುಂಗೈಯೇ ಬಡಿಗ, ಕರವೇ ಕೋಮಟಿಗ, ಕಣಕಾಲೇ ಕಾಳಿಂಗ, ಕುಂಡಿಯೇ ಕುಡುವೊಕ್ಕಲಿಗ, ಒಳದೊಡೆಯೇ ಸಮಗಾರ, ಹೊರದೊಡೆಯೇ ಮಚ್ಚಿಗ, ಮೇಗಾಡಿ ಹೊಲೆಯ, ಬುದ್ಧಿಯೇ ಬಯಲಗಂಬಾರ. -ಇಂತಪ್ಪ ಕುಲ ಹದಿನೆಂಟು ಜಾತಿ ಎಲು ಮಾಂಸವನು ತುಂಬಿಟ್ಟುಕೊಂಡು ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ ವಾಮಪಾದುಕೆಯಿಂದ ಪಡಪಡನೆ ಹೊಡಿ ಎಂದಾತ, ನಮ್ಮಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಊರೆಂಬುದರಿಯ ಉಲುವೆಂಬುದರಿಯ ಬರಿಯ ಮಾತಿನ ಬಣ್ಣವನರಿಯದ ಸಿರಿಸಂಪದದೊಳಾನಂದ ತಲೆಗೇರಿ ಜಾತಿ ಗೋತ್ರ ಕುಲಾಶ್ರಮ ವರ್ಣ ನಾಮಂಗಳೆನುಯೇನೆಂಬ ಭಾವವ ಮರೆದಿರ್ದನು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುನ್ನಲುಳ್ಳ ಕರ್ಮ ಬೆನ್ನ ಬಿಡದು ನೋಡ. ಜಾತಿ ವಿಜಾತಿಗಳಲ್ಲಿ ತೀವಿ ಭೋಗಕ್ಕೆ ಸಾಧನವಾದ ಪರಿಯ ನೋಡ. ಅಲ್ಲಿಯೆ ಮತ್ತೆ ಮತ್ತೆ ಪುಣ್ಯ ಪಾಪವ ಮಾಡಿ, ಸ್ವರ್ಗನರಕವನೈದುವ ಕರ್ಮಿಗಳು, ಕಣ್ಣುಗೆಟ್ಟು ಮುಂದುಗಾಣದೆ ಪುಣ್ಯ ಪಾಪವ ಬೆನ್ನಲ್ಲಿ ಕಟ್ಟಿ, ರಾಟಾಳದಂತೆ ತನುವ ತೊಡುತ್ತ ಬಿಡುತ್ತ ತಿರುಗುತ್ತಿಹರಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಕರ್ಮಿಗಳ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಮಾಣ ಪ್ರಮೇಯ ಸಂಶಯ ಪ್ರಯೋಜನ ದೃಷ್ಟಾಂತ ಸಿದ್ಧಾಂತ ಅವಯವ ಕರ್ತ ನಿರ್ಣಯ ವಾದ ಜಲ್ಪ ವಿತಂಡ ಹೇತ್ವಾಭಾಸ ತ [ಛಲ] ಜಾತಿ ನಿಗ್ರಹಸ್ಥಾನಂಗಳೆಂಬ ಷೋಡಶಪದಾರ್ಥಮಂಪೇಳುತ್ತವೆ. ಪ್ರಪಂಚಕ್ಕೀಶ್ವರ ಕರ್ತೃತ್ವಮಂ ನಿಶ್ಚೈಸೂದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಗತಿಮತಿಯೊಳೊಡವೆರೆದ ಪರಮಾನಂದ ಶರಣ ಪುತ್ರ ಮಿತ್ರ ಕಳತ್ರಾದಿಗಳನರಿಯ ನೋಡಾ. ಜಾತಿ ಗೋತ್ರ ಕುಲ ಆಶ್ರಮ ನಾಮ ವರ್ಣಂಗಳಿಲ್ಲದೆ ಭಕ್ತಾಂಗನೆ ಮುಕ್ತಾಂಗನೆಯ ನೆರೆದು ಯುಕ್ತಿಯನಳಿದುಳಿದು ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನು ತಾನಾದ ಭಾವಶೂನ್ಯನ ಏನೆಂದುಪಮಿಸಬಹುದು ಹೇಳಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡಬಂದ ಮೂರ್ತಿಗೆ ಕೂಡಿ ಮಾಡಬಲ್ಲವರಾರಯ್ಯಾ ? ಮಾತು ನೀತಿಯ ಕೇಳಿ, ಜಾತಿ ಮೂಲ ಜಂಜಡವೊಂದೆ ಮಾಡಿ ಲಾಭವನುಂಬ ಹಾದಿಯ ಹಿರಿಯರಂತಿರಲಿ ನೀಡಿಯಾಡದೆ ಕೊಟ್ಟು ಕಾಣುವ ದಿಟ್ಟಗಲ್ಲದೆ ಬಟ್ಟೆಗಳ್ಳರಿಗೆಂತೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗ ?
--------------
ದೇಶಿಕೇಂದ್ರ ಸಂಗನಬಸವಯ್ಯ
ವಶಿಷ*ಗೋತ್ರದಲ್ಲಿ ಹುಟ್ಟಿದವನು ವಶಿಷ*ಗೋತ್ರದವನೆಂಬಂತೆ, ಭಾರದ್ವಾಜಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ, ಕಾಶ್ಯಪಗೋತ್ರದಲ್ಲಿ ಹುಟ್ಟಿದವನು ಕಾಶ್ಯಪಗೋತ್ರದವನೆಂಬಂತೆ, ವಿಶ್ವಾಮಿತ್ರಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ ಆ ಪರಿ ಆವಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವನು ಆ ಗೋತ್ರ, ಆ ಸಂತತಿ, ಆ ಸುತನು ಎಂಬುದು ಉಪಚರ್ಯವೆ ? ಅಸತ್ಯವೇ ಹೇಳಿರಣ್ಣಾ ? ಅದು ತಾತ್ಪರ್ಯ, ಅದು ಸತ್ಯ. ಆ ಪರಿ ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು, ವೈಶ್ಯನ ಮಗ ವೈಶ್ಯನು, ಶೂದ್ರನ ಶೂದ್ರನು, ಆ ಪರಿ ತಪ್ಪದು. ದಿಟ ದಿಟ ವಿಚಾರಿಸಿ ನೋಡಿರೆ. ಅದು ಹೇಗೆಂದಡೆ ಶ್ರುತಿ: `ಮಹಾಬ್ರಾಹ್ಮಣಮೀಶಾನಂ' ಎಂದುದಾಗಿ ಮತ್ತಂ `ವಿರೂಪಾಕ್ಷಂ ದ್ವಿಜೋತ್ತಮಂ' ಎಂದುದಾಗಿ ಮಹಾಬ್ರಾಹ್ಮಣನೇ ಮಹಾದೇವನು. ಇದಕ್ಕೆ ಮತ್ತೆ ಶಿವರಹಸ್ಯದಲ್ಲಿ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಃ ಪರಂ ತತ್ತ್ವಂ ತಸ್ಮೈ ಶ್ರೀಗುರುವೇ ನಮಃ ಎಂದುದಾಗಿ, ಮಹಾದೇವನೇ ಶ್ರೀಗುರು ಕಾಣಿರಣ್ಣಾ. ಆ ಶ್ರೀಗುರುವಿನ ಕರಕಮಲದಲ್ಲಿ ಉದ್ಭವಿಸಿದ ತಚ್ಛಿಷ್ಯನೇ ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ. ಜಾತಿ ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು. ಅಷ್ಟಾದಶಜಾತಿಯೊಳಗೊಂದೂ ಭಾವಿಸಲಾಗದು. ಆ ಮಹಿಮನೇ ಸತ್ಕುಲಜನು. ಇದಕ್ಕೆ ಮತ್ತುಂ `ಬ್ರಹ್ಮಣಾ ಚರತೀ ಬ್ರಾಹ್ಮಣಃ' ಎಂದುದಾಗಿ ಆ ಮಹಾಮಹಿಮನು ಬ್ರಹ್ಮವ ಆಚರಿಸುವನಾಗಿ ಬ್ರಾಹ್ಮಣ ಮತ್ತಂ ಕೂರ್ಮಪುರಾಣದಲಿ `ಸ ಏವ ಭಸ್ಮಜ್ಯೋತಿಃ' ಎಂದುದಾಗಿ ವಿಭೂತಿಯ ಧರಿಸಿಪ್ಪವನಾಗಿ ಆ ಮಹಾತ್ಮನೇ ಜ್ಯೋತಿರ್ಲಿಂಗವು. ಮತ್ತಂ ಶಿವಧರ್ಮದಲ್ಲಿ `ರುದ್ರಾಕ್ಷಂ ಧಾರಯೇನ್ನಿತ್ಯಂ ರುದ್ರಸ್ಸಾಕ್ಷಾದಿವ ಸ್ಮøತಃ' ಎಂದುದಾಗಿ ರುದ್ರಾಕ್ಷಿಯಂ ಧರಿಸಿಪ್ಪª ತಾನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಕಾಳಿಕಾಗಮದಲ್ಲಿ `ತಸ್ಮಿನ್ವೇದಾಶ್ಚ ಶಾಸ್ತ್ರಾಣಿ ಮಂತ್ರಃ ಪಂಚಾಕ್ಷರೀ ತಥಾ ಎಂದುದಾಗಿ, ಶ್ರೀ ಪಂಚಾಕ್ಷರಿಯ ಜಪಿಸುವನಾಗಿ ಆ ಮಹಿಮನೇ ವೇದವಿತ ಶಾಸ್ತ್ರಜ್ಞನು. ಮತ್ತಂ ಲೈಂಗೇ ಮೂಢನಾಮಪ್ಯಯುಕ್ತಾನಾಂ ಪಾಪಿನಾಂ ಚಾಭಿಚಾರಿಣಾಂ ಯಮಲೋಕೋ ನ ವಿದ್ಯೇತ ಸದಾ ವೈ ಲಿಂಗಧಾರಣಾತ್ ಎಂದುದಾಗಿ ಲಿಂಗವ ಧರಿಸಿಪ್ಪನಾಗಿ ಆ ಮಹಾಮಹಿಮನೇ ಲಿಂಗದೇಹಿ, ಲಿಂಗಕಾಯನು, ಲಿಂಗಪ್ರಾಣನು ಶಿವಲಿಂಗಾರ್ಚನೆಯಂ ಮಾಡುವನಾಗಿ, ಆ ಮಹಾಮಹಿಮನೇ ಶಿವನು ಮತ್ತಂ ಆದಿತ್ಯಪುರಾಣೇ ಅಕೃತ್ವಾ ಪೂಜನಂ ಶಂಭೋರ್ಯೋ ಭುಂಕ್ತೇ ಪಾಪಕೃದ್ದ್ವಿಜಃ ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ ಎಂದುದಾಗಿ ಶಿವಲಿಂಗಕ್ಕೆ ಅರ್ಪಿಸದೇ ಕೊಳ್ಳನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಶಾಂಕರಸಂಹಿತೆಯಲ್ಲಿ ತಿಲಷೋಡಶಭಾಗಂ ತು ತೃಣಾಗ್ರಾಂಬುಕಣೋಪಮಂ ಪಾದೋದಕಪ್ರಸಾದಾನಾಂ ಸೇವನಾನ್ ಮೋಕ್ಷಮಾಪ್ನುಯಾತ್ ಎಂದುದಾಗಿ ಪಾದೋದಕ ಪ್ರಸಾದವಂ ಕೊಂಬನಾಗಿ ಆ ಮಹಾತ್ಮರು ತಾನೇ ಲಿಂಗೈಕ್ಯನು. ಇನ್ನು ನಾನಾವೇದಶಾಸ್ತ್ರಪುರಾಣಾಗಮಂಗಳ ಸಮ್ಮತ ದೃಷ್ಟವಾಕ್ಯಂಗಳನು ವಿಚಾರಿಸಿ ನೋಡಿದಡೆಯೂ ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು. ಇಂತಹ ಶಿವಭಕ್ತನನು ಜಾತಿವಿಜಾತಿ ಎಂದು ಭಾವಿಸಿದಡೆ, ಮತ್ರ್ಯನೆಂದು ಭಾವಿಸಿದಡೆ ನರಕ ತಪ್ಪದು. ವಶಿಷ* ಪುರಾಣದಲ್ಲಿ ಕೇಳಿರೆ: ಮತ್ರ್ಯವನ್ಮನುತೇ ಯಸ್ತು ಶಿವನಿಷ*ಂ ದ್ವಿಜಂ ನರಃ ಕುಂಭೀಪಾಕೇ ತು ಪತತಿ ನರಕೇ ಕಾಲಮಕ್ಷಯಂ ಎಂದುದಾಗಿ ಇದು ಕಾರಣ ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ ಋಷಿಪುತ್ರನ ಋಷಿ ಎಂಬಂತೆ ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ. ಆ ಮಹಾಮಹಿಮನ ದರ್ಶನವ ಮಾಡಿ ಪಾದೋದಕ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹುರಿಯ ಮೆಟ್ಟುವ ವಿಹಂಗ ಜಾತಿ ಜೀವಂಗಳೆಲ್ಲವೂ ಮುಂಚಿ ಅವ ಬಲ್ಲಡೆ ಸಂಚವ ಮೆಟ್ಟಿ ತಾವು ಸಿಕ್ಕುವವೆ ? ಆ ತೆರನ ಕಂಡು ತ್ರಿವಿಧದ ಹುರಿಯಲ್ಲಿ ಅಡಿಯನಿಕ್ಕಿ ಅಡೆಗೊಡ್ಡಿದಂತೆ ಬಿದ್ದಿರುತ್ತ, ಮತ್ತರಿಕೆಯ ಮಾತ ನುಡಿದಡೆ ಅದು ಬರುಕಟಿಯೆಂಬರು. ನೆರೆ ಅರಿದು ಹರಿದ ಶರಣರು ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಹೊರೆಹೊರೆಯಲ್ಲಿ ವೇಧಿಸಬೇಕು
--------------
ಬಾಹೂರ ಬೊಮ್ಮಣ್ಣ
ಇನ್ನಷ್ಟು ... -->