ಅಥವಾ

ಒಟ್ಟು 40 ಕಡೆಗಳಲ್ಲಿ , 16 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ, ರೋಮರೋಮವೆಲ್ಲ ಲಿಂಗ. ಆ ಭಕ್ತಂಗೆ ಆಧಾರಸ್ಥಾನವೆ ನಿಜಸ್ಥಾನ. ಆಧಾರಚಕ್ರದಲ್ಲಿ ನಾಲ್ಕೆಸಳಿನ ತಾವರೆ ಕಮಲದ ಮಧ್ಯದಲ್ಲಿ ಬಾಲಾರ್ಕಕೋಟಿ ಸೂರ್ಯಪ್ರಕಾಶನುಳ್ಳುದು ಆಚಾರಲಿಂಗ. ಆ ಭಕ್ತನ ಗುಹ್ಯದಲ್ಲಿ ಗುರುಲಿಂಗ, ಆ ಭಕ್ತನ ಮಣಿಪೂರಕದಲ್ಲಿ ಶಿವಲಿಂಗ. ಆ ಭಕ್ತನ ಅನಾಹತದಲ್ಲಿ ಜಂಗಮಲಿಂಗವಿಹುದು. ಆ ಭಕ್ತನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಿಹುದು. ಆ ಭಕ್ತನ ಭ್ರೂಮಧ್ಯದಲ್ಲಿ ಮಹಾಲಿಂಗವಿಹುದು. ಆ ಭಕ್ತನ ಆಧಾರದಲ್ಲಿ ನಕಾರ ಪ್ರಣಮದ ಜನನವು. ಆಣವಮಲ, ಮಾಯಾಮಲ, ಕಾರ್ಮಿಕಮಲ ಅನಂತಕೋಟಿಗಳಿಗೆ ನಕಾರವೇ ಮೂಲ. ಇನ್ನೂರು ಹದಿನಾರು ಭುವನಂಗಳು ಆ ಭಕ್ತನ ಗುದದಲ್ಲಿ ಬಿದ್ದಿದ್ದವಷ್ಟು ಹದಿನೆಂಟುಧಾನ್ಯಕ್ಕೆ ಶಾಕಪತ್ರ ಕಂದಮೂಲ ಫಲಾದಿಗಳಿಗೆ ಭೂಮಿ ಎಂದುದಾಗಿ. ಉಂಬುವದು ಅಗ್ನಿ, ಉಡುವದು ಪೃಥ್ವಿ ಎಂದುದಾಗಿ. ಈ ಜಗವೆಲ್ಲ ಮಲವನೆ ಭುಂಜಿಸಿ ಮಲವನೆ ವಿಸರ್ಜನೆಯಂ ಮಾಡುವರು. ಇದು ಕಾರಣ ಇದ ಕೊಂಬುವದು ಪ್ರಸಾದವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಸದ್ಭಕ್ತನಲ್ಲ. ಈ ಪ್ರಸಾದವ ಕೊಳ್ಳಬಲ್ಲರು ನಮ್ಮ ಶರಣರು. ಪ್ರಸಾದವೆಂತೆಂದಡೆ : ಅವರ್ಣ, ಆದಿ, ಅವ್ಯಕ್ತ. ಆ ನಾಮವು, ಭರ್ಗೋದೇವಾದಿ ಪಂಚಮೂರ್ತಿಗಳಿಗೆ ಆಶ್ರಯವಾಯಿತು. ಕರಣಚತುಷ್ಟಯಂಗಳಿಗೆ ನಿಲುಕದು. ಪ್ರಾಣಾದಿ ವಾಯುಗಳಿಗೆ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳಿಗೆ ಅಗಮ್ಯ. ವಾಕ್ಕಾದಿ ಕರ್ಮೇಂದ್ರಿಯಗಳಿಗೆ ತೋರದು. ನಿಜಾನಂದ ನಿತ್ಯಪರಿಪೂರ್ಣ ಪ್ರಸಾದವು ಚೆನ್ನಯ್ಯಪ್ರಿಯ ನಿರ್ಮಾಯ ಪ್ರಭುವೆ, ನಿಮ್ಮ ಶರಣರಿಗಲ್ಲದೆ ಉಳಿದ ಜಡಜೀವಿಗಳಿಗೆ ಅಸಾಧ್ಯ.
--------------
ಚೆನ್ನಯ್ಯ
ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ ಸ್ವತಂತ್ರ ಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ. ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ. ಅಂಗಲಿಂಗಗಳ ಸಂಯೋಗವ ತೋರಿ, ಅಖಂಡ ಪರಶಿಲಿಂಗೈಕ್ಯವನುಂಟುಮಾಡಿ ಕೊಡುವ ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ. ಇದಕ್ಕೆ ಶಿವರಹಸ್ಯೇ ; 'ಯದ್ಭಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ ೀ ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ || ಯತ್ಪ್ರಸಾದಾಭಿದಂ ಸ್ಥಾನಂ ತದ್ಬೋಧೋ ನಿರಂಕುಶಃ ೀ ಯತ್ಪ್ರಣಲಿಂಗಕಂ ನಾಮ ತತ್ಸ್ವಾತಂತ್ರೈಮುದಾಹೃತಂ || ಯದಸ್ತಿ ಶರಣಂ ನಾಮ ಹ್ಯಲುಪ್ತಾ ಶಕ್ತಿರುಚ್ಯತೇ ೀ ಯದೈಕ್ಯಸ್ಥಾನಮೂರ್ಧಸ್ಥಾ ಹ್ಯನಂತಾಶಕ್ತಿರುಚ್ಯತೇ ||ú ಎಂದುದಾಗಿ, ಇಂತಪ್ಪ ಷಟ್‍ಸ್ಥಲಗಳಲ್ಲಿ ಷಡ್ವಿಧ ಶಕ್ತಿಗಳ ಸ್ಥಳಕುಳಂಗಳ ತಿಳಿದು, ಷಡ್ವಿಧ ಲಿಂಗಗಳಲ್ಲಿ ಧ್ಯಾನ ಪೂಜಾದಿಗಳಿಂದ ಅಂಗಗೊಂಡು ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‍ಸ್ಥಲಬ್ರಹ್ಮಿಗಳಾಗರು. ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆ ಕಣ್ಗಾಣದೆ ಹೊರಿಸುತ್ತ ಪರದಾರ ದಾಶಿ ವೇಶಿ ಸೂಳೆಯರ ಕೂಡಿ ಭುಂಜಿಸಿ ತೊಂಬಲತಿಂಬ ಹೇಸಿ ಮೂಳರು ಪೋತರಾಜ, ಜೋಗಿ, ಕ್ಷಪಣರಂತೆ ಜಟಾ, ತುರುಬು, ಬೋಳುಮುಂಡೆಗೊಂಡು ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ ವಿರಕ್ತ ಷಟ್‍ಸ್ಥಲಬ್ರಹ್ಮಿಗಳೆನಬಹುದೇನಯ್ಯ ? ಅಂತಪ್ಪ ಅನಾದಿ ಷಟ್‍ಸ್ಥಲಬ್ರಹ್ಮದ ಷಡ್ವಿಧಶಕ್ತಿಯನರಿದು ವಿರಕ್ತ ಜಂಗಮ ಷಟ್‍ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಜಗದಗಲ ಮುಗಿಲಗಲ ಪಾದ ಪಾತಾಳದಿಂದತ್ತತ್ತ ಪಾದ. ಬ್ರಹ್ಮಾಂಡದಿಂದತ್ತತ್ತ ಮಕುಟ ವಿಶ್ವ ಬ್ರಹ್ಮಾಂಡವನು, ತನ್ನ ಕುಕ್ಷಿಯೊಳು ನಿಕ್ಷೇಪವ ಮಾಡಿಕೊಂಡಿಪ್ಪ ದೇವನೀಗ ಎನ್ನದೇವ. ಆ ದೇವನೊಳಗೆ ನಾನಡಕ, ನನ್ನೊಳಗೆ ಆ ದೇವನಡಕ. ಇಂತಪ್ಪ ದೇವನ ನಂಬಿ, ನಾ ಕೆಟ್ಟು ಬಟ್ಟಬಯಲಾದೆ. ಈ ದೇವನರಿಯದೆ ಜಗವೆಲ್ಲ ಕಲ್ಲದೇವರು, ಮಣ್ಣದೇವರು, ಮರದೇವರು ಎಂದು ಇವನಾರಾದ್ಥಿಸಿ, ಕೆಟ್ಟರಲ್ಲಿ. ಸ್ವರ್ಗ ಮರ್ತ್ಯ ಪಾತಾಳದವರೆಲ್ಲರು ಎನ್ನ ದೇವನನರದು ಅರ್ಚಿಸಲಿಲ್ಲ, ಪೂಜಿಸಲಿಲ್ಲ, ಭಾವಿಸಲಿಲ್ಲ. ಇದು ಕಾರಣ, ಆವ ಲೋಕದವರಾದರೂ ಆಗಲಿ, ಎನ್ನ ದೇವನನರಿದರೆ, ಭವವಿಲ್ಲ ಬಂಧನವಿಲ್ಲ. ನೆರೆ ನಂಬಿರೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ.
--------------
ಹಡಪದ ಅಪ್ಪಣ್ಣ
ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ. ಅದೇನು ಕಾರಣವೆಂದಡೆ, ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು; ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು; ಅಂಗಸುಖವ ಬಯಸಿತ್ತು; ಕಂಗಳ ಕಾಮವನೆ ಮುಂದುಮಾಡಿತ್ತು ಇದರಿಂದ ಲಿಂಗವ ಮರೆಯಿತ್ತು; ಜಂಗಮವ ತೊರೆಯಿತ್ತು. ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು. ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು. ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬ್ರಹ್ಮನ ಕಲ್ಪಿತವ ಕಳೆಯನಾಗಿ, ಗುರು ಲಿಂಗವ ಕೊಟ್ಟುದು ಹುಸಿ. ಆ ಲಿಂಗ ಬಂದು ತನುವನಿಂಬುಗೊಳ್ಳದಾಗಿ, ವಿಷ್ಣುವಿನ ಸ್ಥಿತಿ ಬಿಟ್ಟುದು ಹುಸಿ. ಆ ವಿಷ್ಣುವಿನ ಹಂಗಿನಲ್ಲಿ ಉಂಡುಹೋಹ ಕಾರಣ, ಜಂಗಮದ ಮಾಟ ಹುಸಿ. ಇದು ಕಾರಣ, ರುದ್ರನ ಹಂಗಿನಲ್ಲಿ ಜಗವೆಲ್ಲ ಲಯವಾಗುತ್ತಿರ್ಪ ಕಾರಣ, ಪ್ರಾಣಲಿಂಗಿಗಳೆಂಬುದು ಹುಸಿ. ಇಂತಿವು ನಿರ್ಲೇಪವಾಗಿಯಲ್ಲದೆ ಸಹಜಭರಿತನಲ್ಲ, ಇಹ ಪರಕ್ಕೆ ಸಲ್ಲ. ಸೊಲ್ಲಿಗಭೇದ್ಯ ನಿಃಕಳಂಕ ಮಲ್ಲಿಕಾರ್ಜನ ಬಲ್ಲರ ಬಲ್ಲಹ.
--------------
ಮೋಳಿಗೆ ಮಾರಯ್ಯ
ಹಸೆಯಿಲ್ಲದ ಹಂದರದಲ್ಲಿ ನಿಬ್ಬಣವಿಲ್ಲದ ಮದುವೆಯ ಮಾಡಿ ಮದುವಣಿಗನಿಲ್ಲದೆ ಸೇಸೆಯ ತುಂಬಿ ಕಳವಳಗೊಂಡಿತು ಜಗವೆಲ್ಲ ನಿಬ್ಬಣಿಗರು ಮದವಣಿಗನನರಿಯದೆ ಅಬ್ಬರದೊಳಗಿದ್ದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಮೆಳೆಯ ಮೇಲೆ ಕಲ್ಲನಿಕ್ಕಿದಡೆ, ಮೆಳೆ ಭಕ್ತನಾಗಬಲ್ಲುದೆ ? ಮೇಹನಿಕ್ಕಿ ಮೆಯ್ಯನೊರಸಿದಡೆ, ಪಶುಗಳೆಲ್ಲ ಮೆಚ್ಚುವವು. ಅನ್ನವನಿಕ್ಕೆ ಹಿರಣ್ಯವ ಕೊಟ್ಟಡೆ, ಜಗವೆಲ್ಲ ಹೊಗಳುವುದು. ಒಳಗನರಿದು, ಹೊರಗೆ ಮರೆದವರ ಎನಗೆ ತೋರಿಸಾ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಅಯ್ಯಾ, ಗುರುಶಿಷ್ಯರಿಬ್ಬರು ಪುಣ್ಯಪಾಪ, ಇಹಪರಂಗಳಿಗೆ ಒಳಗಾದ ವಿಚಾರವೆಂತೆಂದಡೆ ಸತ್ಯಸದಾಚಾರಸಂಪತ್ತೆಂಬ ಶಿವಭಕ್ತರ ಹೃದಯದಲ್ಲಿ ಜನಿತನಾಗಿ ಸತ್ಯನಡೆ ನಡೆಯದೆ, ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ ವರ್ತಿಸುವುದ ಕಂಡು ಅದ ಪರಿಹರಿಸದೆ, ದ್ರವ್ಯದಭಿಲಾಷೆಯಿಂದ ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು ಹುಟ್ಟಂಧಕನೆಂಬೆನಯ್ಯಾ. ಅಂತಪ್ಪ ಪರಮಪಾತಕಂಗೆ ಜಪವ ಹೇಳಿ, ಪಾದೋದಕದಲ್ಲೇಕಭಾಜನವ ಮಾಡಿ, ಪ್ರಸಾದವ ಕೊಟ್ಟು, ಷಟ್‍ಸ್ಥಲವ ಹೇಳುವನೊಬ್ಬ ಜಂಗಮ ಕೆಟ್ಟಗಣ್ಣವನೆಂಬೆನಯ್ಯಾ. ಇಂತೀ ಅಧಮ ಗುರುಶಿಷ್ಯಜಂಗಮಕ್ಕೆ ಭವಬಂಧನ ತಪ್ಪದು ನೋಡಾ, ಶಂಭುಕೇಶ್ವರದೇವಾ, ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ.
--------------
ಸತ್ಯಕ್ಕ
ನಾಣಮರೆಯ ನೂಲು ಸಡಿಲಲು ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು. ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು ದೇವರ ಮುಂದೆ ನಾಚಲೆಡೆಯುಂಟೆ ? ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು ಮುಚ್ಚಿ ಮರಸುವ ಠಾವಾವುದು ಹೇಳಯ್ಯಾ ?
--------------
ಅಕ್ಕಮಹಾದೇವಿ
ಉದಕವಿಲ್ಲದಿರೆ ಅಂಬುದ್ಥಿ ತಟಾಕಂಗಳೆಂಬ ನಾಮವುಂಟೆ? ಬಣ್ಣ ನಾಸ್ತಿಯಾಗಿರೆ ಬಂಗಾರವೆಂಬ ವಿಶೇಷವುಂಟೆ? ಗಂಧವಿಲ್ಲದಿರೆ ಚಂದನವೆಂಬ ಅಂಗವುಂಟೆ? ನೀನಿಲ್ಲದಿರೆ ನಾನೆಂಬ ಭಾವವುಂಟೆ? ಜಗವೆಲ್ಲ ನಿನ್ನ ಹಾಹೆ, ಉತ್ಪತ್ಯ ಸ್ಥಿತಿ ಲಯವೆಲ್ಲ ನಿನ್ನ ಹಾಯೆ. ಕ್ರೀ, ನಿಃಕ್ರೀಯೆಂಬುದೆಲ್ಲ ನಿನ್ನ ಹಾಹೆ. ಜಗಹಿತಾರ್ಥವಾಗಿ ಭಕ್ತನಾದೆ. ಭಕ್ತಿ ತದರ್ಥವಾಗಿ ಮಾಹೇಶ್ವರನಾದೆ. ಮಾಹೇಶ್ವರ ತದರ್ಥವಾಗಿ ಪ್ರಸಾದಿಯಾದೆ. ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ. ಪ್ರಾಣಲಿಂಗಿ ತದರ್ಥನಾಗಿ ಶರಣನಾದೆ. ಶರಣ ತದರ್ಥನಾಗಿ ಐಕ್ಯನಾದೆ. ಇಂತೀ ಷಡುಸ್ಥಲಮೂರ್ತಿಯಾಗಿ ಬಂದೆಯಲ್ಲಾ ಸಂಗನಬಸವಣ್ಣ, ಚೆನ್ನಬಸವಣ್ಣ, ನಿಮ್ಮ ಸುಖದುಃಖದ ಪ್ರಮಥರು ಸಹಿತಾಗಿ ಏಳುನೂರೆಪ್ಪತ್ತು ಅಮರಗಣಂಗಳು, ಗಂಗೆವಾಳುಕ ಸಮಾರುದ್ರರು ಮತ್ತೆ ಅವದ್ಥಿಗೊಳಗಲ್ಲದ ಸಕಲ ಪ್ರಮಥರು ಬಂದರಲ್ಲಾ. ಬಂದುದು ಕಂಡು ಎನ್ನ ಸಿರಿ ಉರಿಯೊಳಗಾಯಿತ್ತು. ಎನ್ನ [ಭ]ವದ ಉರಿಯ ಬಿಡಿಸು, [ಭ]ವವಿರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದೊಳಗಣ ಮನಸ್ಸು ಕಂಗೆಟ್ಟು ಹೊರಬಿದ್ದು ಕರಣೇಂದ್ರಿಯಂಗಳನೆ ಕೂಡಿ, ಆಯಾಸಂಗೊಂಡು ಧಾವತಿಯಿಂದೆ ಸಾಯುತಿರ್ಪುದು ನೋಡಾ ಜಗವೆಲ್ಲ. ಆ ಕಾಯದ ಕಳವಳ ಹಿಂಗಿ ಮನವು ಮಹಾಘನದಲ್ಲಿ ಅಡಗಲು, ಸಾವು ತಪ್ಪಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭವಿ ಮಾಡಲಿಕೆ ಪೃಥ್ವಿಯಾಯಿತ್ತು, [ಭ ಮಾಡಲಿಕೆ ಅಪ್ಪುವಾಯಿತ್ತು ಭವಿ ಮಾಡಲಿಕೆ ತೇಜವಾಯಿತ್ತು, ಭವಿ ಮಾಡಲಿಕೆ ವಾಯುವಾಯಿತ್ತು] ಭವಿ ಮಾಡಲಿಕೆ ಆಕಾಶವಾಯಿತ್ತು, ಭವಿ ಮಾಡಲಿಕೆ ಸೂರ್ಯಚಂದ್ರರಾದರು. [ಭವಿ ಮಾಡಲಿಕೆ] ವಿಷ್ಣುವಾದ ರುದ್ರನಾದ ದೇವರ್ಕಳಾದರು. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಭವಿಯಿಂದಾಯಿತ್ತು ಸಕಲ ಜಗವೆಲ್ಲ.
--------------
ಚನ್ನಬಸವಣ್ಣ
ನೀನೊಲಿದಡೆ ಜಗವೆಲ್ಲ ಕೊಂಡಾಡುತಿರ್ಪುದು ನೋಡಾ ; ನೀನೊಲಿಯದಿರ್ದಡೆ ಜಗವೆಲ್ಲ ಹೊತ್ತುಗಲ್ಲ ಹೊತ್ತಿರ್ಪುದು ನೋಡಾ. ನೀನೊಲಿದಡೆ ವೈರಿಗಳೆಲ್ಲ ಸಖರಪ್ಪರು ನೋಡಾ ; ನೀನೊಲಿಯದಿರ್ದಡೆ ಸಖರೆಲ್ಲ ವೈರಿಗಳಾಹರು ನೋಡಾ. ನೀನೊಲಿದಡೆ ಬಾರದ ಪದಾರ್ಥ ಬಪ್ಪುದು ನೋಡಾ; ನೀನೋಲಿಯದಿರ್ದಡೆ ಬರ್ಪುದು ಬಾರದೆ ಹೋಹುದು ನೋಡಾ. ಇದು ಕಾರಣ, ನಿಮ್ಮ ಒಲುಮೆಯಿಂದ ಘನವು ಆವುದು ಇಲ್ಲ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಗದಗಲದ ಮಾಯಾಜಾಲವ ಹಿಡಿದು ಕಾಲನೆಂಬ ಜಾಲಗಾರ ಜಾಲವ ಬೀಸಿದ ನೋಡಯ್ಯ. ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ. ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ. ಆ ಕಾಲನ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನವರಿಗೆ ತಾ ಮೇಲಾರೈಕೆಯಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ನಡುವಳ ಮಂಟಪದಲ್ಲಿ ಮೃಡಮೂರ್ತಿಯ ಕಂಡೆನಯ್ಯ. ಮೃಡನ ಗಡಣೆಯಲ್ಲಿ ಜಗವೆಲ್ಲ ಅಡಗಿ ಉಡುಗಿದೆ ನೋಡಾ. ಈ ಒಡೆಯನ ಮಹಿಮೆಯನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->