ಅಥವಾ

ಒಟ್ಟು 53 ಕಡೆಗಳಲ್ಲಿ , 23 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗವನಾಡಿಸುವನು, ಜಗವನೇಡಿಸುವನು. ಜಗದ ನಟನಾಟಕನ ಪರಿಯ ನೋಡಯ್ಯಾ! ಜಗವ ರಂಜಿಸುವನು, ಜಗವ ಭುಜಿಸುವನು. ಜಗದೊಳಗಿಪ್ಪನು, ಜಗದ ಹೊರಗಿಪ್ಪನು. ಜಗಕೆ ತೋರಿಯೂ ತೋರದಂತಿಪ್ಪನು. ದರ್ಪಣದೊಳಗಣ ಪ್ರತಿಬಿಂಬದಂತಿಪ್ಪನು. ಉದಕ-ಪದ್ಮಪತ್ರದಂತಿಪ್ಪನು. ನಿಜಗುರುವೆ, ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರನೆ, ನೋಟ ತೀರಲೊಡನೆ ಜಗದಾಟ ತೀರಿತು.
--------------
ಸಿದ್ಧರಾಮೇಶ್ವರ
ದೇವನೊಬ್ಬನೆ ಜಗವ ಕಾವಾತ, ಕೊಲುವಾತ. ದೇವರು ಮುನಿದಡೆ ಮರಳಿ ಕಾವವರುಂಟೆ? ಈ ಸಾವಿಗೊಳಗಾಗಿ ಹೋಹ ಸಮಸ್ತದೈವಂಗಳು, ಮಹಾದೇವನ ಸರಿಯೆಂದು ಆರಾದ್ಥಿಸಿ, ಅಚಲಿತಪದವಿಯ ಬೇಡುವ ಈರೇಳುಜಾತಿಗಳಿಗೆ, ಆವಾವ ಕಾಲದಲ್ಲಿ ನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಜಲದಲ್ಲಿ ಉದಯಿಸಿ ಮತ್ತೆ ಜಲವು ತಾನಲ್ಲ; ಜಲವೆಂದಿಪ್ಪುದೀ ಲೋಕವೆಲ್ಲಾ. ಪರಮಗುರು ಬಸವಣ್ಣ ಜಗವ ಪಾಲಿಸ ಬರಲು ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ. ಆ ಸುದ್ದಿಯನರಿಯದೆ ಅನೇಕ ಜಡರುಗಳೆಲ್ಲ ಬೇಕಾದ ಪರಿಯಲ್ಲಿ ನುಡಿವುತ್ತಿಹರು. ಸತ್ತಪ್ರಾಣಿಯನ್ನೆತ್ತಿ ಒಪ್ಪಿಪ್ಪ ನಿಶ್ಚಯವು ಮತ್ರ್ಯದವರಿಗುಂಟೆ ಶಿವಗಲ್ಲದೆ? ಶಿವಗುರು ಬಸವಣ್ಣ, ಬಸವಗುರು ಶಿವನಾಗಿ, ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿಯಾದನು. ಬಸವಣ್ಣನ ನೆನಹು ಸುಖಸಮುದ್ರವಯ್ಯಾ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ತೋರಿರಾಗಿ ಬದುಕಿದೆನಯ್ಯಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಈಶ್ವರನು ಅಲಂಕೃತರೂಪಾಗಿ ಜಗವ ತಾಳಿ ಬಂದಲ್ಲಿ ಮಾಯೆಯೆಂಬ ಶಕ್ತಿ ಜ್ಯೋತಿ ಕಾಣದ ಮರೆಯಲ್ಲಿ ತಮವಡಗಿಪ್ಪ ಭೇದದಂತೆ. ಚಿತ್ತಶುದ್ಧವಿಲ್ಲದವರ ಕರ್ತೃ ಭೃತ್ಯ ಸಂಬಂಧ ಉಭಯಕ್ಕೂಸರಿ. ಅರಿದು ಮಾಡುವಲ್ಲಿ ಅವನ ಅನುವನರಿದು ಮಾಡಿಸಿಕೊಂಬಲ್ಲಿ ಲಾಗಿನ ಪಶುವಿನಂತೆ ಉಭಯಗುಣ ಭೇದ. ಉಭಯಸ್ಥಲ ನಿರತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆ ಇಲ್ಲ, ನೂತವರಾರೋ ತನ್ನೊಡಲ ನೂಲ ತೆಗೆದು ಪಸರಿಸಿ, ಅದರೊಳು ಪ್ರೀತಿಯಿಂದೊಲಿದಾಡಿ, ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ, ತನ್ನಿಂದಾದ ಜಗವ ತನ್ನೊಳಗೈದಿಸಿಕೊಳಬಲ್ಲ ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ತನುವಿಕಾರ, ಮನವಿಕಾರ, ಜನನಮರಣಸ್ಥಿತಿ ಕಾರಣ, ಹೊನ್ನ ತೋರಿದೆ, ಜಗದ ಕಣ್ಣ ಮೊದಲಿಗೆ. ಹೆಣ್ಣ ಸುಳಿಸಿದೆ, ಜಗದ ಕಣ್ಣ ಮೊದಲಿಗೆ. ಮಣ್ಣ ಹರಹಿದೆ, ಜಗದ ಕಣ್ಣ ಮೊದಲಿಗೆ. ತನುವ ತಪ್ಪಿಸಿ, ಜಗವ ಸಂಸಾರಕ್ಕೊಪ್ಪಿಸಿ, ನುಣ್ಣನೆ ಹೋದನುಪಾಯದಿ ದೇವರಾಯಸೊಡ್ಡಳ.
--------------
ಸೊಡ್ಡಳ ಬಾಚರಸ
`ಲಿಂಗಮಧ್ಯೇ ಜಗತ್‍ಸರ್ವಂ' ಎಂದುದಾಗಿ- ಜಗವ ಹೊರಗಿರಿಸಿ, ಲಿಂಗವನೊಳಗಿರಿಸಿಕೊಂಡು ಲಿಂಗ ಪ್ರೇಮಿಯಾದ ನಿರುತನು ಜಗ ತೋರುವಲ್ಲಿಯೂ ಅಡಗುವಲ್ಲಿಯೂ ತೋರಿಯಡದಗದೆ ಅನುಪಮಮಹಿಮನಯ್ಯ, ಮಹೇಶ್ವರನು. ಜಗದ ಒಳಹೊರಗೆ ಸರ್ವ ವ್ಯಾಪಕನಾದ ಪರಿಪೂರ್ಣ ಸರ್ವಗತನಯ್ಯ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಗಭರಿತನೆನ್ನ ದೇವ, ಜಗವ ಹೊದ್ದನೆನ್ನ ದೇವ. ಭಕ್ತನ ಕರಸ್ಥಲಕ್ಕೆ ಬಂದನೆನ್ನ ದೇವ, ಭಕ್ತನನವಗ್ರಹಿಸಿಕೊಂಡನಾಗಿ ಎನ್ನ ದೇವ. ``ಓಂ ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ ಆಸೀನೇಭ್ಯಃ ಯಜಾಮ ದೇವಾನ್ಯದಿಶಕ್ನವಾಮ ಮಮಾಜ್ಯಾಯಸಃ ತಂ ಸಮಾವೃಕ್ಷಿ ದೇವಾ ಎಂದುದಾಗಿ ಎನ್ನ ದೇವ. ಇದು ಕಾರಣ, ಕೂಡಲಚೆನ್ನಸಂಗಮದೇವರು ಅಕ್ಷರಾಕ್ಷರವ ಮೀರಿದ ಘನವು.
--------------
ಚನ್ನಬಸವಣ್ಣ
ಎರಡೆಂಟನತಿಗಳೆದು ಮುನ್ನೂರ ಮೂವತ್ತು ಕರದರ್ಪಣೆಯ ಭೇದವೊಂದು ಮಾಡಿ, ಜಗವ ಸುತ್ತಿದ ಸೀಮೆ ಹದುಳವಿಡಬಲ್ಲರೆ ಪರಬ್ರಹ್ಮ ಗುರು ತಾನು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಪ್ಪು ಉತ್ಪತ್ಯವಾಗಿ ಜಗವ ಕದಡುವಾಗ, ಇರುಹಿನ ಮೊಟ್ಟೆ ಹೆಪ್ಪಳಿದುದಿಲ್ಲ. ಇರುಹಿನ ಗೂಡಿನ ಗುಹೆಗೆ ಅಪ್ಪು ಮುಟ್ಟಿದುದಿಲ್ಲ. ಇದೇನು ಚೋದ್ಯ ? ಬಂಕೇಶ್ವರಲಿಂಗದಲ್ಲಿ ಆರಡಿಗೊಂದು ಬನ್ನಿ.
--------------
ಸುಂಕದ ಬಂಕಣ್ಣ
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ, ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ. ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ. ಕರಿಯು ಕನ್ನಡಿಯೊಳಗಡಗಿದಂತಯ್ಯಾ, ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.
--------------
ಬಸವಣ್ಣ
ತೋರುವ ತೋರಿಕೆ ಸಬರೆ ಮುಟ್ಟಾಗಿ, ಭಾವಭ್ರಮೆ ಸರ್ವತ್ರವ್ಯಾಪಾರ ವಿದಳ ಧಾನ್ಯವಾಗಿ, ಚಿತ್ತವನರಿಯದ ಭಾವ ಎತ್ತಾಗಿ, ಜಗವ ಸಿಕ್ಕಿಸುವ ವೇಷ ಲಾಂಛನಧಾರಿ ಸೆಟ್ಟಿಯಾಗಿ, ಸರ್ವಪ್ರಕೃತಿ ದೇಶದಲ್ಲಿ ಬೆವಹಾರವ ಮಾಡುತ್ತಿರಲು, ನಿರಾಸಕ ಕೋಲುಕಾರ ತನುವಿನ ಸೆಟ್ಟಿಯ ತಡೆ ಬಿಟ್ಟಿತ್ತು. ಗತವಾಗಿ, ಕಾಲದ ಮಂದಿರಕ್ಕೆ ಒಪ್ಪದ ಚೀಟಲ್ಲದೆ, ಬಂಕೇಶ್ವರಲಿಂಗಕ್ಕೆ ಸುಂಕಲಾಭವಾಯಿತ್ತು.
--------------
ಸುಂಕದ ಬಂಕಣ್ಣ
ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು, ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು, ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ ? ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು, ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ ? ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು. ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ತಾವು ಸತ್ಯರೆಂದು ನುಡಿಯದಿಪ್ಪುದೆ ಶೀಲ. ತಾವು ವ್ರತಿಗಳೆಂದು ಇದಿರಿಂಗೆ ಹೇಳದಿಹುದೆ ವ್ರತ. ಗುರುಲಿಂಗಜಂಗಮವ ದೂಷಿಸದಿಹುದೆ ವ್ರತ. ಸಹಪಂಙÂ್ತಯಲ್ಲಿ ವಿಶೇಷವ ಕೊಳದಿಪ್ಪುದೆ ವ್ರತ. ಇಂತಪ್ಪ ವ್ರತಕ್ಕೆ ನಮೋ ನಮೋ ಎಂಬೆ. ಇಂತಲ್ಲದೆ ಜಗವ ಸಿಕ್ಕಿಸುವ ಬಹುಮುಖಿಗಳಿಗೆಲ್ಲಿಯದೊ ಮುಕ್ತಿ ? ಮಾತಿನಲ್ಲಿ ಭಕ್ತಿ, ಮನದಲ್ಲಿ ಕತ್ತರಿ, ಭಕ್ತಿಯಲ್ಲಿ ಬಲೆ, ಚಿತ್ತದಲ್ಲಿ ಕತ್ತಲೆಯಿಪ್ಪವರಿಗೆಲ್ಲಿಯದೊ ಭಕ್ತಿಶೀಲ ? ಇಂತಿವ ಬಲ್ಲೆನಾಗಿ ಭಕ್ತಿ ನನಗಿಲ್ಲ. ಇನ್ನೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ ಮೀರಿ ನಿಂದುದು ಗಗನ ಮಂಡಲದಲ್ಲಿ. ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು ಬೇರೆ ಮತ್ತೊಂದು ದಿಕ್ಕ ತೋರುತ್ತದೆ. ಮೂರುಕೋಣೆಯೊಳಗೆ ಈರೈದು ತಲೆಯುಂಟು. ನೋಡಿ ಬಂದಾ ಶಿಶು ಬೆಸಗೊಂಬುದು. ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು ಎಂಟುಜಾವದೊಳಗೆ. ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು. ಜಗವ ಬೆಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ. ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ
--------------
ಬಳ್ಳೇಶ ಮಲ್ಲಯ್ಯ
ಇನ್ನಷ್ಟು ... -->